Advertisement

Bidar; ಫೆ. 20ಕ್ಕೆ ಮಲ್ಲಿಕಾರ್ಜುನ ಖರ್ಗೆಗೆ ನಾಗರಿಕ ಸಮ್ಮಾನ: ಸಚಿವ ಖಂಡ್ರೆ

04:41 PM Feb 18, 2024 | Team Udayavani |

ಬೀದರ್: ಕಲ್ಯಾಣ ಕರ್ನಾಟಕ ಭಾಗದಲ್ಲಿ ವಿಶೇಷ ಸ್ಥಾನಮಾನ ಜಾರಿಗೊಳಿಸಿ ಹತ್ತು ವರ್ಷಗಳು ತುಂಬಿರುವ ಹಿನ್ನೆಲೆ ಫೆ. 20ರಂದು ನಗರದಲ್ಲಿ ದಶಮಾನೋತ್ಸವ ಹಾಗೂ ಕಲಂ 371 (ಜೆ) ರೂವಾರಿ, ಎಐಸಿಸಿ ಅಧ್ಯಕ್ಷ ಡಾ. ಮಲ್ಲಿಕಾರ್ಜುನ ಖರ್ಗೆ ಅವರಿಗೆ ನಾಗರಿಕ ಸಮ್ಮಾನ ಹಮ್ಮಿಕೊಳ್ಳಲಾಗಿದೆ ಎಂದು ಕೆಪಿಸಿಸಿ ಕಾರ್ಯಾಧ್ಯಕ್ಷರಾದ ಜಿಲ್ಲಾ ಉಸ್ತುವಾರಿ ಸಚಿವ ಈಶ್ವರ ಖಂಡ್ರೆ ಹೇಳಿದರು.

Advertisement

ಜಿಲ್ಲಾ ಕಾಂಗ್ರೆಸ್, ಪ್ರಗತಿಪರ, ದಲಿತ ಮತ್ತು ಕನ್ನಡಪರ ಸಂಘಟನೆಗಳ ಸಹಯೋಗದಲ್ಲಿ ಅಂದು ಬೆಳಿಗ್ಗೆ 10 ಗಂಟೆಗೆ ನಗರದ ನೆಹರು ಕ್ರೀಡಾಂಗಣದಲ್ಲಿ ಈ ಕಾರ್ಯಕ್ರಮ ಆಯೋಜಿಸಲಾಗಿದ್ದು, ಅಂದಾಜು ಒಂದು ಲಕ್ಷ ಜನರು ಭಾಗವಹಿಸುವ ನಿರೀಕ್ಷೆ ಇದೆ. ಉಪ ಮುಖ್ಯಮಂತ್ರಿ ಡಿ.ಕೆ ಶಿವಕುಮಾರ ಅವರು ಚಾಲನೆ ನೀಡಲಿದ್ದಾರೆ. ಸಮಾರಂಭದ ಯಶಸ್ವಿಗಾಗಿ ಸಿದ್ಧತೆಗಳು ಭರದಿಂದ ನಡೆಯುತ್ತಿವೆ ಎಂದು ನಗರದಲ್ಲಿ ರವಿವಾರ ಸುದ್ದಿಗೋಷ್ಠಿಯಲ್ಲಿ ಮಾಹಿತಿ ನೀಡಿದರು.

ಪ್ರಾದೇಶಿಕ ಅಸಮತೋಲನ ನಿವಾರಣೆಗಾಗಿ ಕಲಂ 371(ಜೆ) ತಿದ್ದುಪಡಿ ತಂದು, ಈಗಿನ ಕಲ್ಯಾಣ ಕರ್ನಾಟಕ ಪ್ರದೇಶಕ್ಕೆ ವಿಶೇಷ ಸ್ಥಾನಮಾನ ನೀಡಬೇಕೆಂಬುದು ಹಲವು ದಶಕಗಳ ಬೇಡಿಕೆಯಾಗಿತ್ತು. ಮುಖ್ಯಮಂತ್ರಿ ಎಸ್.ಎಂ ಕೃಷ್ಣ ಅವರ ಸರ್ಕಾರದ ಅವಧಿಯಲ್ಲಿ ರಾಜ್ಯದಿಂದ ಕೇಂದ್ರ ಸರ್ಕಾರಕ್ಕೆ ಪ್ರಸ್ತಾವನೆ ಸಲ್ಲಿಸಲಾಗಿತ್ತು. ಆದರೆ, ಅಂದಿನ ಎನ್‌ಡಿಎ ಸರ್ಕಾರದಲ್ಲಿ ಗೃಹ ಸಚಿವರಾಗಿದ್ದ ಎಲ್.ಕೆ ಅಡ್ವಾಣಿ ಅವರು ಮಹತ್ವದ ಬೇಡಿಕೆಗೆ ತಿರಸ್ಕರಿಸಿದ್ದರು ಎಂದು ಹೇಳಿದರು.

ನಂತರ ಕೇಂದ್ರದಲ್ಲಿ ಅಧಿಕಾರಕ್ಕೆ ಬಂದ ಯುಪಿಎ ಸರ್ಕಾರದಲ್ಲಿ ಸಚಿವರಾಗಿದ್ದ ಡಾ. ಮಲ್ಲಿಕಾರ್ಜುನ ಖರ್ಗೆ ಮತ್ತು ಸಂಸದರಾಗಿದ್ದ ದಿ. ಧರಂಸಿಂಗ್ ಅವರು ಪ್ರಧಾನಿಯಾಗಿದ್ದ ಡಾ. ಮನಮೋಹನ್ ಸಿಂಗ್ ಅವರಿಗೆ ಕಲಂ ತಿದ್ದುಪಡಿಯ ಅಗತ್ಯತೆ ಕುರಿತು ಮನವರಿಕೆ ಮಾಡಿಕೊಟ್ಟಿದ್ದರು. ಜತೆಗೆ ಎಐಸಿಸಿ ಅಧ್ಯಕ್ಷರಾಗಿದ್ದ ಸೋನಿಯಾ ಗಾಂಧಿ ಅವರು ಚುನಾವಣೆ ಪೂರ್ವದಲ್ಲಿ ವಾಗ್ದಾನ ಮಾಡಿದ್ದರು. ಡಾ. ಖರ್ಗೆ ಅವರು ಪಟ್ಟು ಹಿಡಿದ ಫಲವಾಗಿ ವಿಶೇಷ ಸ್ಥಾನಮಾನ ಸೌಲಭ್ಯ ಜಾರಿಗೆ ತಂದು ಯುಪಿಎ ಸರ್ಕಾರ ದೊಡ್ಡ ಕೊಡುಗೆ ನೀಡಿತು ಎಂದು ತಿಳಿಸಿದರು.

ರಾಜ್ಯದಲ್ಲಿ ಆಡಳಿತಕ್ಕೆ ಬಂದ ಸಿದ್ಧರಾಮಯ್ಯ ಸರ್ಕಾರ ಹಿರಿಯ ಸಚಿವ ಎಚ್.ಕೆ ಪಾಟೀಲ ಅವರ ಅಧ್ಯಕ್ಷತೆಯಲ್ಲಿ ಉಪ ಸಮಿತಿ ರಚಿಸಿ ಈ ಭಾಗಕ್ಕೆ ಸಾಮಾಜಿಕ ನ್ಯಾಯ ಕಲ್ಪಿಸುವ ಕೆಲಸ ಮಾಡಿದೆ. ಕಳೆದ 10 ವರ್ಷಗಳಲ್ಲಿ ಕ.ಕ ಭಾಗದಲ್ಲಿ ಸಾಕಷ್ಟು ಬದಲಾವಣೆಗಳು ಆಗಿವೆ. ಪ್ರತಿ ವರ್ಷ ಈ ಭಾಗಕ್ಕೆ ಬಜೆಟ್‌ನಲ್ಲಿ ಮೂರು ಸಾವಿರ ಕೋಟಿ ರೂ. ಅನುದಾನ, ಉನ್ನತ ಶಿಕ್ಷಣ, ಸರ್ಕಾರಿ ಹುದ್ದೆಗಳಲ್ಲಿ ಮೀಸಲಾತಿ ಸೌಲತ್ತುಗಳು ಸಿಕ್ಕಿವೆ. ಪ್ರಸಕ್ತ ಬಜೆಟ್‌ನಲ್ಲಿ ನಮ್ಮ ಸರ್ಕಾರ ಕೊಟ್ಟ ಮಾತಿನಂತೆ 5 ಸಾವಿರ ಕೋಟಿ ರೂ. ಅನುದಾನ ಮೀಸಲಿಟ್ಟಿದೆ ಎಂದರು.

Advertisement

ಬೀದರ ಜಿಲ್ಲೆಯ ಡಾ. ಖರ್ಗೆ ಅವರು ಐವತ್ತು ವರ್ಷಗಳಿಂದ ರಾಜಕೀಯ ಸೇವೆಯಲ್ಲಿ ಗುರುತಿಸಿಕೊಂಡಿದ್ದು, ಶಿಕ್ಷಣ, ನೀರಾವರಿ ಮತ್ತು ಗೃಹ ಸಚಿವರಾಗಿ ತಮ್ಮದೇಯಾದ ಛಾಪು ಮೂಡಿಸಿದ್ದಾರೆ. ಪ್ರತಿ ಪಕ್ಷದ ನಾಯಕರಾಗಿ, ಕೇಂದ್ರದಲ್ಲಿ ರೈಲ್ವೆ ಸಚಿವರಾಗಿ ಕೆಲಸ ಮಾಡಿದ್ದು, ಈಗ ಎಐಸಿಸಿ ಅಧ್ಯಕ್ಷರಾಗಿ ದೇಶದಲ್ಲಿ ಪಕ್ಷವನ್ನು ತಳಮಟ್ಟದಿಂದ ಸಂಘಟಿಸುವ ಕಾರ್ಯ ಮಾಡುತ್ತಿದ್ದಾರೆ ಎಂದು ಹೇಳಿದರು.

ಸುದ್ದಿಗೋಷ್ಠಿಯಲ್ಲಿ ಪೌರಾಡಳಿತ ಸಚಿವ ರಹೀಮ್ ಖಾನ್, ಎಂಎಲ್‌ಸಿ ಅರವಿಂದಕುಮಾರ ಅರಳಿ, ಮಾಜಿ ಸಚಿವ ರಾಜಶೇಖರ ಪಾಟೀಲ, ಪ್ರಮುಖರಾದ ಪುಂಡಲೀಕರಾವ್, ಲಕ್ಷ್ಮಣ ಬುಳ್ಳಾ, ಮನ್ನಾನ್ ಸೇಠ್, ಅನೀಲಕುಮಾರ ಬೆಲ್ದಾರ್ ಮತ್ತು ದತ್ತು ಮೂಲಗೆ ಮತ್ತಿತರರಿದ್ದರು.

ಕರ್ನಾಟಕ ಸಾಂಸ್ಕೃತಿಕ ನಾಯಕ ಬಸವಣ್ಣ ಘೋಷಣೆ ಹಿನ್ನಲೆ ಜಿಲ್ಲೆಯ ಮಠಾಧೀಶರು ಮತ್ತು ಬಸವಪರ ಸಂಘಟನೆಗಳ ವತಿಯಿಂದ ಫೆ. 26ರಂದು ಬಸವಕಲ್ಯಾಣದಲ್ಲಿ ಮುಖ್ಯಮಂತ್ರಿ ಸಿದ್ಧರಾಮಯ್ಯ ಅವರಿಗೆ ಅಭಿನಂದನಾ ಸಮಾರಂಭ ಹಮ್ಮಿಕೊಳ್ಳಲಾಗಿದೆ ಎಂದು ಉಸ್ತುವಾರಿ ಸಚಿವ ಈಶ್ವರ ಖಂಡ್ರೆ ಹೇಳಿದರು.

ಬಸವಣ್ಣನನ್ನು ಸಾಂಸ್ಕೃತಿಕ ನಾಯಕರನ್ನಾಗಿ ಘೋಷಿಸಬೇಕೆಂಬುದು ನಾಡಿನ ಮಠಾಧೀಶರ ಮತ್ತು ಬಸವ ಅನುಯಾಯಿಗಳ ಬೇಡಿಕೆಯಾಗಿತ್ತು. ಭಾಲ್ಕಿಯ ಡಾ. ಬಸವಲಿಂಗ ಪಟ್ಟದ್ದೇವರ ನೇತೃತ್ವದಲ್ಲಿ ಸಿಎಂ ನಿಯೋಗದ ಮೂಲಕ ಒತ್ತಾಯಿಸಲಾಗಿತ್ತು. ನಮ್ಮ ಸರ್ಕಾರ ಬಸವ ಭಕ್ತರ ಆಶಯ ಈಡೇರಿಸಿ ಐತಿಹಾಸಿಕ ನಿರ್ಣಯ ಕೈಗೊಂಡಿದೆ ಎಂದು ತಿಳಿಸಿದರು.

Advertisement

Udayavani is now on Telegram. Click here to join our channel and stay updated with the latest news.

Next