ಬೆಂಗಳೂರು: ಇಂದಿನಿಂದ(ಫೆ.24) ಬೀದರ್- ಬೆಂಗಳೂರು ನಡುವೆ ವಿಮಾನಯಾನ ಸೇವೆ ಪುನರಾರಂಭ ವಾಗಿರುವುದು ಬೀದರ್ ಜಿಲ್ಲೆಯ ಅಭಿವೃದ್ಧಿಗೆ ಪೂರಕವಾಗಲಿದೆ ಎಂದು ಪಶುಸಂಗೋಪನಾ ಸಚಿವ ಪ್ರಭು ಚವ್ಹಾಣ್ ಹರ್ಷ ವ್ಯಕ್ತಪಡಿಸಿದ್ದಾರೆ.
ಈ ಕುರಿತು ಪತ್ರಿಕಾ ಪ್ರಕಟಣೆ ಹೊರಡಿಸಿರುವ ಅವರು, ಈ ಭಾಗದ ಜನರ ಹಿತದೃಷ್ಟಿಯಿಂದ ವಿಮಾನಯಾನ ಸೇವೆಯನ್ನು ಮತ್ತೆ ಆರಂಭಿಸಿರುವುದು ವಾಣಿಜ್ಯೋದ್ಯಮಕ್ಕೆ ಪೂರಕವಾಗಲಿದೆ ಎಂದು ತಿಳಿಸಿದ್ದಾರೆ.
ಕೇಂದ್ರ ಸಚಿವರು, ಬೀದರ್ ಲೋಕಸಭಾ ಸದಸ್ಯರಾದ ಭಗವಂತ ಖೂಬಾ ಅವರು ಬೀದರನಿಂದ ನಾಗರೀಕ ವಿಮಾನಯಾನ ಸ್ಥಗಿತಕೊಂಡಿರುವುದನ್ನು ನಾಗರೀಕ ವಿಮಾನಯಾನ ಸಚಿವಾಲಯದ ಗಮನಕ್ಕೆ ತಂದು ಮತ್ತೆ ವಿಮಾನಯಾನ ಸೇವೆ ಆರಂಭವಾಗುವಂತೆ ಮಾಡಿರುವುದಕ್ಕೆ ಭಗವಂತ ಖೂಬಾ ಅವರಿಗೆ ಕೃತಜ್ಞತೆ ಸಲ್ಲಿಸಿದರು.
ಸಾಮಾನ್ಯ ಜನರಿಗೂ ಕೈಗೆಟಕುವ ದರದಲ್ಲಿ ವಿಮಾನಯಾನ ಸೇವೆ ಲಭ್ಯವಾಗುವಂತೆ ಮಾಡುವ ಆಶಯದ ‘ಉಡಾನ್ -ಉಡೇ ದೇಶ್ ಕಾ ಆಮ್ ನಾಗರಿಕ್’ ಘೋಷಣೆಯಂತೆ ಪ್ರಾದೇಶಿಕ ಸಂಪರ್ಕ ಯೋಜನೆಯಡಿ ಪ್ರಾದೇಶಿಕ ವಿಮಾನ ನಿಲ್ದಾಣ ಬೀದರ್ ಜಿಲ್ಲೆಗೆ ಮತ್ತೆ ವಿಮಾನ ಹಾರಾಟ ಮಾಡಿರುವ ಕೇಂದ್ರ ವಿಮಾನಯಾನ ಸಚಿವಾಲಯದ ಕಾರ್ಯಕ್ಕೆ ಅಭಿನಂದನೆ ಸಲ್ಲಿಸಿದರು.
ಫೆ.24ರಿಂದ ಗುರುವಾರ, ಭಾನುವಾರ ಮತ್ತು ಮಂಗಳವಾರ ವಿಮಾಯಾನಸೇವೆಯು ಬೀದರ್ ಜಿಲ್ಲೆಗೆ ಮರಳಿ ಲಭಿಸಿದೆ. ಈ ಮೂರು ದಿನ ಟ್ರೂಜೆಟ್ ವಿಮಾನ ಸಂಖ್ಯೆ 2 ಯು 625 ಬೆಳಿಗ್ಗೆ 11.25ಕ್ಕೆ ಬೆಂಗಳೂರಿನಿಂದ ಹೊರಟು ಮಧ್ಯಾಹ್ನ 1.10ಕ್ಕೆ ಬೀದರ್ ವಿಮಾನ ನಿಲ್ದಾಣಕ್ಕೆ ತಲುಪಲಿದೆ. ಅದೇ ದಿನ ವಿಮಾನ ಸಂಖ್ಯೆ 2 ಯು 626 ಮಧ್ಯಾಹ್ನ 1.40ಕ್ಕೆ ಬೀದರನಿಂದ ಹೊರಟು ಮಧ್ಯಾಹ್ನ 3.25ಕ್ಕೆ ಬೆಂಗಳೂರು ವಿಮಾನ ನಿಲ್ದಾಣಕ್ಕೆ ತಲುಪಲಿದೆ