ಬೀದರ: ಲಾಕ್‌ಡೌನ್ ಪರಿಣಾಮ ಇಬ್ಬರು ಬುದ್ದಿಮಾಂದ್ಯ ಹೆಣ್ಣು ಮಕ್ಕಳೊಂದಿಗೆ ಮನೆಯಲ್ಲೇ ಬಂಧಿಯಾಗಿ ಆಹಾರ ಮತ್ತು ಔಷಧ ಸಿಗದೇ ಸಂಕಷ್ಟ ಎದುರಿಸುತ್ತಿದ್ದ ಅನಾರೋಗ್ಯ ಪೀಡಿತ ತಂದೆ ವಿಜಯಕುಮಾರ ರಂಗದಾಳೆ ನೆರವಿಗೆ ಜಿಲ್ಲಾಡಳಿತ ಮತ್ತು ಸಂಘ ಸಂಸ್ಥೆಗಳು ನೆರವಿಗೆ ಧಾವಿಸಿವೆ. ಬುಧವಾರ ಆಹಾರ ಸಾಮಗ್ರಿ- ಔಷಧ ಕಿಟ್‌ಗಳನ್ನು ವಿತರಿಸಿ ಕಣ್ಣೀರು ಒರೆಸುವ ಪ್ರಯತ್ನ ಮಾಡಲಾಗಿದೆ.
ನಗರದ ಓಲ್ಡ್ ಸಿಟಿ ಚೊಂಡಿಗಲ್ಲಿಯ ವಿಜಯಕುಮಾರ ರಂಗದಾಳೆ ಕುಟುಂಬದ ಕಣ್ಣೀರಿನ ಕಥೆ ಕುರಿತು ಉದಯವಾಣಿಯಲ್ಲಿ ನೊಂದ ಅಸಹಾಯಕ ಕುಟುಂಬಕ್ಕೆ ಲಾಕ್‌ಡೌನ್ ಬರೆ ತಲೆಬರಹದಡಿ ಪ್ರಕಟಗೊಂಡಿದ್ದ ವಿಸ್ತ್ರತ ವರದಿಗೆ ಜಿಲ್ಲಾಡಳಿತ ಸೇರಿ ಸಂಘಟನೆ ಸದಸ್ಯರು ನೆರವು ನೀಡಿ ಮಾನವೀಯತೆ ಮೆರೆದಿದ್ದಾರೆ.
ಜಿಲ್ಲಾಧಿಕಾರಿ ಮಹಾದೇವ ಅಭಯ: ಸೋಂಕಿತರು ವಾಸಿಸುವ ಕಂಟೈನ್ಮೆಂಟ್ ಝೋನ್‌ನಲ್ಲಿ ನೆಲೆಸಿರುವ ವಿಜಯಕುಮಾರಗೆ ಟೇಲರಿಂಗ್ ಕೆಲಸ ಇಲ್ಲದೇ ಆದಾಯ ಸಿಗದೇ ಸಂಕಷ್ಟದಲ್ಲಿದ್ದರು. ಇತ್ತೀಚೆಗೆ ಪತ್ನಿಯನ್ನೂ ಕಳೆದುಕೊಂಡಿರುವ ಅವರು ಇಬ್ಬರು ಬುದ್ದಿಮಾಂದ್ಯ ಮಕ್ಕಳಿಗೆ ತುತ್ತು ಅನ್ನ ಮತ್ತು ಔಷಧ ಖರೀದಿಸಲು ಸಾಧ್ಯವಾಗದೇ ತೀವ್ರ ಅಸಹಾಯಕ ಸ್ಥಿತಿಯಲ್ಲಿದ್ದರು. ಪತ್ರಿಕಾ ವರದಿ ಗಮನಿಸುತ್ತಿದ್ದಂತೆ ಜಿಲ್ಲಾಧಿಕಾರಿ ಡಾ| ಎಚ್.ಆರ್. ಮಹಾದೇವ ತಿಂಗಳಿಗೆ ಸಾಕಾಗುವಷ್ಟು ಔಷಧ ಪೂರೈಸಿದ್ದಾರೆ. ಅಷ್ಟೇ ಅಲ್ಲ ವಿಜಯಕುಮಾರ ಅವರನ್ನು ಮೊಬೈಲ್ ಮೂಲಕ ಮಾತನಾಡಿ, ಮನೆಯಲ್ಲೇ ಸುರಕ್ಷಿತವಾಗಿ ಇರುವಂತೆ ಮತ್ತು ಅಗತ್ಯ ಔಷಧ- ಆಹಾರ ಸಾಮಗ್ರಿಗಳನ್ನು ವಿತರಿಸುವ ಭರವಸೆ ನೀಡಿದ್ದಾರೆ. ರಾಜ್ಯ ಬಿಜೆಪಿ ಕಾರ್ಯಕಾರಣಿ ಸದಸ್ಯ ಸೂರ್ಯಕಾಂತ ನಾಗಮಾರಪಳ್ಳಿ ಅವರ ನಾಗಮಾರಪಳ್ಳಿ ಫೌಂಡೇಶನ್ ಮೂಲಕ ಅಕ್ಕಿ, ಎಣ್ಣೆ, ಬೆಳೆ ಒಳಗೊಂಡ ಐದು ಕಿಟ್ ಗಳನ್ನು ಪೂರೈಸಿದರೆ, ವಿನಯ ಮಾಳಗೆ ಮತ್ತು ಮಹೇಶ ಗೋರನಾಳಕರ್ ನೇತೃತ್ವದ ಟೀಮ್ ಯುವಾ ತಂಡ ಸಹ ಆಹಾರದ ಕಿಟ್, ಮಾಸ್ಕ್ ಮತ್ತು ಸಾನಿಟೈಸರ್‌ಗಳನ್ನು ವಿತರಿಸಿದೆ. ನಾಟ್ಯ ಕಲಾವಿದೆ ಉಷಾ ಪ್ರಭಾಕರ ದಂಪತಿ ಆರ್ಥಿಕ ಸಹಾಯ ಮಾಡಲು ಮುಂದಾಗಿದ್ದಾರೆ.
ಧೈರ್ಯ ತುಂಬಿದ ದಂಪತಿ: ಕಿರಿಯ ಆರೋಗ್ಯ ಸಹಾಯಕಿ ಪಾರ್ವತಿ ಸೋನಾರೆ ಮತ್ತು ಕಲಾವಿದರ ಬಳಗದ ಅಧ್ಯಕ್ಷ ವಿಜಯಕುಮಾರ ದಂಪತಿ ರಂಗದಾಳೆ ಅವರ ಮನೆಗೆ ಭೇಟಿ ನೀಡಿ ಔಷಧಗಳನ್ನು ಖರೀದಿ ವಿತರಿಸಿದ್ದಾರೆ. ಹಾಸಿಗೆ ಹಿಡಿದಿರುವ ಮಕ್ಕಳು, ತಂದೆಗೆ ನಿಮ್ಮೊಂದಿಗೆ ನಾವಿದ್ದೇವೆ ಎಂಬ ಧೈರ್ಯ ತುಂಬಿದ್ದಾರೆ. ಇನ್ನೂ ಅನೇಕರು ವಿಜಯಕುಮಾರ ಅವರನ್ನು ಮೊಬೈಲ್‌ನಲ್ಲಿ ಸಂಪರ್ಕಿಸಿ ನೆರವು ನೀಡುವ ಭರವಸೆ ಕೊಟ್ಟಿದ್ದಾರೆ.