ಬೀದರ: ಕೋವಿಡ್ ಎರಡನೇ ಅಲೆ ನಿಯಂತ್ರಣಕ್ಕಾಗಿ ಸರ್ಕಾರ ಜಾರಿಗೊಳಿಸಿದ್ದ ಲಾಕ್‌ಡೌನ್ ನಿರ್ಬಂಧಗಳಿಂದ ಗಡಿ ಜಿಲ್ಲೆ ಬೀದರ ಸೋಮವಾರದಿಂದ ಮುಕ್ತವಾಗಲಿದೆ. ಶೇ.5ಕ್ಕಿಂತ ಕಡಿಮೆ ಕೋವಿಡ್ ಪಾಸಿಟಿವಿಟಿ ದಾಖಲಾಗುತ್ತಿರುವ ಹಿನ್ನೆಲೆ ಕೆಲವು ಷರತ್ತುಗಳನ್ನು ಅನ್ವಯಿಸಿ ನಿರ್ಬಂಧ ಸಡಿಲಿಕೆ ಮಾಡಲಾಗಿದ್ದು, ಸಾರಿಗೆ ಸೇರಿ ಎಲ್ಲ ಚಟುವಟಿಕೆಗಳು ಆರಂಭಗೊಳ್ಳಲಿವೆ. ಅನ್‌ಲಾಕ್‌ಗಾಗಿ ಜಿಲ್ಲಾಡಳಿತ ಅಗತ್ಯ ಸಿದ್ಧತೆಗಳನ್ನು ಮಾಡಿಕೊಂಡಿದೆ.
ಶೇ.5ಕ್ಕಿಂತ ಕಡಿಮೆ ಕೊರೊನಾ ಪಾಸಿಟಿವಿಟಿ ದರ ಇರುವ ರಾಜ್ಯದ 16 ಜಿಲ್ಲೆಗಳಲ್ಲಿ ಲಾಕ್‌ಡೌನ್‌ನಿಂದ ಮುಕ್ತಗೊಳಿಸಲಾಗಿದ್ದು, ಅದರಲ್ಲಿ ಬೀದರ ಜಿಲ್ಲೆ ಸಹ
ಸೇರಿದೆ. ಸಾರ್ವಜನಿಕ ಸಾರಿಗೆ, ವಾಣಿಜ್ಯ ಮತ್ತು ಕೈಗಾರಿಕೆ ಒಳಗೊಂಡಂತೆ ಎಲ್ಲ ಬಗೆಯ ಚಟುವಟಿಕೆಗಳನ್ನು ಪುನರಾರಂಭಿಸಲು ಅನುಮತಿ ನೀಡಲಾಗಿದೆ. ಹೆಚ್ಚು ಕಡಿಮೆ ಎರಡು ತಿಂಗಳ ನಂತರ ಜಿಲ್ಲೆಯಲ್ಲಿ ಸೋಮವಾರದಿಂದ ಜನ ಜೀವನ ಸಹಜ ಸ್ಥಿತಿಗೆ ಮರಳುವ ಸಾಧ್ಯತೆ ಇದೆ.
ಅವಕಾಶ ಯಾವುದಕ್ಕಿದೆ, ಯಾವುದಕ್ಕಿಲ್ಲ: ಲಾಕ್‌ಡೌನ್‌ನ ಆರಂಭದ ದಿನಗಳಲ್ಲಿ ಬೆಳಿಗ್ಗೆ 6ರಿಂದ 10ರವರೆಗೆ ಅಗತ್ಯ ವಸ್ತುಗಳ ವ್ಯಾಪಾರ ವಹಿವಾಟಿಗೆ ಅವಕಾಶ ನೀಡಲಾಗಿತ್ತು. ನಂತರ ವಾರದ ಹಿಂದೆ ಸಮಯದ ಅವಧಿಯನ್ನು ಮಧ್ಯಾಹ್ನ 2ರವರೆಗೆ ವಿಸ್ತರಿಸಲಾಗಿತ್ತು. ಈಗ ಬೆಳಿಗ್ಗೆ 5ರಿಂದ ಸಂಜೆ 5ರವರೆಗೆ ಎಲ್ಲಾ ಅಂಗಡಿ-ಮುಂಗಟ್ಟುಗಳಿಗೆ ಅವಕಾಶ ಕಲ್ಪಿಸಲಾಗಿದೆ. ಸಂಜೆ 5ರವರೆಗೆ ಹೊಟೇಲ್, ರೆಸ್ಟೋರೆಂಟ್, ಕ್ಲಬ್ ಹಾಗೂ ಜಿಮ್‌ಗಳಲ್ಲಿ ಶೇ.50ರಷ್ಟು ಸಾಮರ್ಥ್ಯದೊಂದಿಗೆ ಅವಕಾಶ ನೀಡಲಾಗಿದೆ. ಇನ್ನೂ ಸಭೆ-ಸಮಾರಂಭಗಳು, ಪೂಜಾ ಕಾರ್ಯಕ್ರಮ, ರಾಜಕೀಯ ಸಮಾವೇಶ, ಮಾಲ್ ಮತ್ತು ಈಜು ಕೊಳಗಳಿಗೆ ಅವಕಾಶ ಇರುವುದಿಲ್ಲ. ನೈಟ್ ಕರ್ಫ್ಯೂ ಮತ್ತು ವಿಕೇಂಡ್ ಕಕರ್ಫ್ಯೂ ಈ ಹಿಂದಿನಂತೆ ಮುಂದುವರೆಯಲಿದೆ ಎಂದು ಸರ್ಕಾರದ ಮಾರ್ಗಸೂಚಿಯಲ್ಲಿ ತಿಳಿಸಲಾಗಿದೆ.
ಭಾಗಶಃ ಲಾಕ್‌ಡೌನ್ ತೆರವು ಬಳಿಕ ಜನರು ಮೈಮರೆಯದೇ ಕೋವಿಡ್ ನಿಯಮಗಳನ್ನು ಪಾಲಿಸಬೇಕು. ಸಾರ್ವಜನಿಕರು ಕಡ್ಡಾಯವಾಗಿ ಮಾಸ್ಕ್
ಧರಿಸುವುದು, ಸಾಮಾಜಿಕ ಅಂತರವನ್ನು ಕಾಪಾಡಿಕೊಂಡು ನಿತ್ಯದ ವ್ಯಾಪಾರ ವಹಿವಾಟು ಮತ್ತು ಕೆಲಸ ಕಾರ್ಯಗಳನ್ನು ಮಾಡಿಕೊಳ್ಳಬೇಕು ಎಂದು ಮನವಿ ಮಾಡಿರುವ ಜಿಲ್ಲಾಡಳಿತ ಹಾಗೂ ಜಿಲ್ಲಾ ಪೊಲೀಸ್, ನಿಯಮಗಳನ್ನು ಉಲ್ಲಂಘಿಸುವವರ ವಿರುದ್ಧ ಕ್ರಮ ವಹಿಸುವ ಎಚ್ಚರಿಕೆ ನೀಡಿದೆ.
ಕೋವಿಡ್ ಅನ್‌ಲಾಕ್ ಹಿನ್ನೆಲೆ ಬೀದರ ಜಿಲ್ಲೆಯಲ್ಲಿ ಸೋಮವಾರದಿಂದ ಸಾರಿಗೆ ಸಂಚಾರ ಆರಂಭಗೊಳ್ಳಲಿದ್ದು, ಇದಕ್ಕಾಗಿ ಈಶಾನ್ಯ ಕರ್ನಾಟಕ ಸಾರಿಗೆ ಸಂಸ್ಥೆ ಅಗತ್ಯ ಸಿದ್ಧತೆಗಳನ್ನು ಮಾಡಿಕೊಂಡಿದೆ. ಜಿಲ್ಲೆಯಲ್ಲಿ 520 ಬಸ್‌ಗಳ ಪೈಕಿ 200ಕ್ಕಿಂತ ಹೆಚ್ಚು ಬಸ್‌ಗಳು ರಸ್ತೆಗಿಳಿಯಲಿವೆ. ಸರ್ಕಾರದ ಮಾರ್ಗಸೂಚಿಯಂತೆ ಶೇ.50ರಷ್ಟು ಸಾಮರ್ಥ್ಯದೊಂದಿಗೆ ಬಸ್‌ಗಳ ಕಾರ್ಯಾಚರಣೆ ನಡೆಸಲಾಗುವುದು. ಬೀದರನಿಂದ ಕಲುºರ್ಗಿ ಮತ್ತು ಜಿಲ್ಲೆಯ ಪ್ರತಿ ತಾಲೂಕುಗಳ ನಡುವೆ ಬಸ್ ಓಡಾಡಲಿವೆ. ಪ್ರಯಾಣಿಕರ ಆರೋಗ್ಯ ದೃಷ್ಟಿಯಿಂದ ಬಸ್‌ಗಳಲ್ಲಿ ಸ್ಯಾನಿಟೈಜರ್‌ನಿಂದ ಸ್ವಚ್ಛತೆ ಕಾರ್ಯ ಆಗಿದ್ದು, ಸಿಬ್ಬಂದಿಗಳಿಗೆ ಮಾಸ್ಕ್ ಧರಿಸುವುದು ಕಡ್ಡಾಯ ಮಾಡಲಾಗಿದೆ. ಬೀದರ ವಿಭಾಗದ ಶೇ. 95ರಷ್ಟು ಸಿಬ್ಬಂದಿಗಳು ಈಗಾಗಲೇ ಕೊರೊನಾ ವ್ಯಾಕ್ಸಿನ್ ಪಡೆದುಕೊಂಡಿದ್ದಾರೆ.
ಸಿ.ಎಸ್ ಫುಲೇಕರ್, ವಿಭಾಗೀಯ ನಿಯಂತ್ರಣಾಧಿಕಾರಿ,
ಎನ್‌ಈಕೆಎಸ್‌ಆರ್‌ಟಿಸಿ, ಬೀದರ.