Advertisement

ಬೀದರಿನ ನೆಲದಲ್ಲಿ ನಾಗರಿಕ ವಿಮಾನಯಾನದ ಹೊಸ ಅಧ್ಯಾಯ ಪ್ರಾರಂಭ

10:07 AM Feb 08, 2020 | Hari Prasad |

ಬೀದರ್: ಬಿಸಿಲೂರಿನ ನೆಲದಲ್ಲಿ ನಾಗರಿಕ ವಿಮಾನವೊಂದು ಇಳಿಯುವುದರೊಂದಿಗೆ ಇದಕ್ಕಾಗಿ ಕಾತುರದಿಂದ ಕಾಯುತ್ತಿದ್ದ ಈ ಭಾಗದ ಜನರ ಒಂದು ದಶಕದ ಕಾತರ ಶುಕ್ರವಾರಕ್ಕೆ ಸಾಕಾರಗೊಂಡಿದೆ. ಆ ಮೂಲಕ ಗಡಿ ಜಿಲ್ಲೆ ಅಭಿವೃದ್ಧಿ, ಬದಲಾವಣೆಗೆ ಹೊಸ ಅಧ್ಯಾಯ ಆರಂಭವಾಯಿತು. ಇನ್ನೂ ಜಿಲ್ಲೆಯಿಂದ ಜನ ಪ್ರಥಮ ಬಾರಿ ಲೋಹದ ಹಕ್ಕಿಯಲ್ಲಿ ಪ್ರಯಾಣಿಸಿ ಹೊಸ ಹೆಜ್ಜೆ ಗುರುತು ಮೂಡಿಸಿದರು.

Advertisement

ವಾಯುಪಡೆ ನೆಲೆಯಾಗಿರುವ ಬೀದರನ ಚಿದ್ರಿ ಬಳಿ ಮುಖ್ಯಮಂತ್ರಿ ಬಿ.ಎಸ್ ಯಡಿಯೂರಪ್ಪ ವಿಮಾನ ನಿಲ್ದಾಣ ಲೋಕಾರ್ಪಣೆ ಮಾಡುವ ಮೂಲಕ ಬಹು ದಿನಗಳ ಕನಸನ್ನು ನನಸಾಗಿದರು. ದಶಕದ ಹಿಂದೆ ಟರ್ಮಿನಲ್ ನಿರ್ಮಾಣಕ್ಕೆ ಚಾಲನೆ ನೀಡಿದ್ದ ಯಡಿಯೂರಪ್ಪ ಅವರೇ ಇಂದು ಸುಸಜ್ಜಿತ ವಿಮಾನ ನಿಲ್ದಾಣವನ್ನು ಉದ್ಘಾಟಿಸಿದ್ದು ವಿಶೇಷವಾಗಿತ್ತು. ಇದರೊಂದಿಗೆ ವಿಮಾನ ನಿಲ್ದಾಣ ಹೊಂದಿರುವ ರಾಜ್ಯದ ಎಂಟನೇ ಜಿಲ್ಲೆ ಎಂಬ ಹೆಗ್ಗಳಿಕೆಗೆ ಗಡಿನಾಡು ಬೀದರ್ ಪಾತ್ರವಾಯಿತು.

ಮುಖ್ಯಮಂತ್ರಿ ಯಡಿಯೂರಪ್ಪ ಅವರು ಬೆಂಗಳೂರಿನ ಕೆಂಪೇಗೌಡ ಅಂತರಾಷ್ಟ್ರೀಯ ನಿಲ್ದಾಣದಿಂದ ಬೀದರ್ ಗೆ ಬೆಳಿಗ್ಗೆ 11.45ಕ್ಕೆ ಟ್ರೂಜೆಟ್ ಸಂಸ್ಥೆಯ ವಿಮಾನದಲ್ಲಿ ಆಗಮಿಸಿದರು. ಸಂಸದ ಭಗವಂತ ಖೂಬಾ ಸೇರಿ ಜಿಲ್ಲೆಯ ಶಾಸಕರುಗಳು ಸಿಎಂಗೆ ಸಾಥ್ ನೀಡಿದರು.

ಸಿಎಂ ನಿಲ್ದಾಣಕ್ಕೆ ಬರುತ್ತಿದ್ದಂತೆ ಉಸ್ತುವಾರಿ ಸಚಿವ ಪ್ರಭು ಚವ್ಹಾಣ ನೇತೃತ್ವದಲ್ಲಿ ಅವರನ್ನು ಆತ್ಮೀಯವಾಗಿ ಬರಮಾಡಿಕೊಳ್ಳಲಾಯಿತು. ಬಳಿಕ ಪೊಲೀಸರಿಂದ ಗೌರವ ವಂದನೆ ಸ್ವೀಕರಿಸಿದ ಬಿಎಸ್‌ವೈ, ರಿಬ್ಬನ್ ಕಟ್ ಮಾಡುವ ಮೂಲಕ ಏರ್ ಟರ್ಮಿನಲ್‌ನ್ನು ಉದ್ಘಾಟನೆ ಮಾಡಿದರು.

ನಂತರ ಯಡಿಯೂರಪ್ಪ ವೇದಿಕೆಗೆ ಬರುತ್ತಿದ್ದಂತೆ ಕಾದು ಕುಳಿತ್ತಿದ್ದ ಜನರ ಹರ್ಷೋದ್ಗಾರ ಮುಗಿಲುಮುಟ್ಟಿತು. ಕೇಂದ್ರದ ಮಹತ್ವಾಕಾಂಕ್ಷಿ ಉಡಾನ್ ಯೋಜನೆಯ ಜಾರಿಯಿಂದಾಗಿ ಸಾಮಾನ್ಯ ಜನರು ವಿಮಾನದಲ್ಲಿ ಪ್ರಯಾಣಿಸುವ ಅವಕಾಶ ಸಿಕ್ಕಂತಾಗಿದೆ. ಬೀದರ್ – ಬೆಂಗಳೂರು ನಡುವೆ ವಿಮಾನ ಸಂಚರಿಸಲು ಅನುಕೂಲಕರ ಸಮಯದ ಜತೆಗೆ ಮುಂದೆ ನಿಲ್ದಾಣದ ಅಗತ್ಯ ಅಭಿವೃದ್ಧಿಗೆ ಸರ್ಕಾರ ಬದ್ದ ಎಂದು ಮುಖ್ಯಮಂತ್ರಿಯವರು ತಮ್ಮ ಭಾಷಣದಲ್ಲಿ ಭರವಸೆ ನೀಡಿದರು.

Advertisement

ಚುಟುಕಾಗಿ ನಡೆದ ಕಾರ್ಯಕ್ರಮದಲ್ಲಿ ಜಿಲ್ಲೆಯ ಎಲ್ಲ ಶಾಸಕರುಗಳು ಪಕ್ಷ ಬೇಧ ಮರೆತು ಭಾಗವಹಿಸಿದ್ದರು. ಆದರೆ, ಆಹ್ವಾನ ಪತ್ರಿಕೆಯಲ್ಲಿ ಹೆಸರಿದ್ದ ನಾಗರಿಕ ವಿಮಾನಯಾನ ರಾಜ್ಯ ಸಚಿವ ಹರ್ದೀಪ್ ಸಿಂಗ್ ಪೂರಿ ಜತೆಗೆ ಕೇಂದ್ರದ ಸಚಿವರಾದ ಸದಾನಂದಗೌಡ, ನಿರ್ಮಲಾ ಸೀತಾರಾಮನ್, ಪ್ರಹ್ಲಾದ್ ಜೋಶಿ, ಸಚಿವ ಸುರೇಶ ಅಂಗಡಿ, ಉಪ ಮುಖ್ಯಮಂತ್ರಿಗಳಾದ ಗೋವಿಂದ ಕಾರಜೋಳ, ಲಕ್ಷ್ಮಣ ಸವದಿ, ಡಾ.ಅಶ್ವಥ್ ನಾರಾಯಣ, ಕೈಗಾರಿಕಾ ಸಚಿವ ಜಗದೀಶ ಶೆಟ್ಟರ್ ಅನುಪಸ್ಥಿತಿ ಎದ್ದು ಕಾಣುತ್ತಿತ್ತು.

ನಿಲ್ದಾಣ ಎದುರು ಸೆಲ್ಪೀ
ವಿಮಾನ ನಿಲ್ದಾಣ ಉದ್ಘಾಟನೆ ಹಿನ್ನಲೆಯಲ್ಲಿ ಹೂವು, ವಿದ್ಯುತ್ ಅಲಂಕಾರದಿಂದ ಟರ್ಮಿನಲ್ ಕಂಗೊಳಿಸುತ್ತಿತ್ತು. ಜನಸ್ತೋಮದಿಂದ ಹಬ್ಬದ ವಾತಾವರಣದಂತಾಗಿತ್ತು. ಗುರುವಾರ ಸಂಜೆಯಿಂದಲೇ ಜನತೆ ತಂಡೋಪತಂಡವಾಗಿ ನಿಲ್ದಾಣಕ್ಕೆ ಆಗಮಿಸಿ ಟರ್ಮಿನಲ್ ಎದುರು ಸೆಲ್ಫೀ ಕ್ಲಿಕ್ಕಿಸಿಕೊಂಡು ಖುಷಿಯನ್ನು ಹಂಚಿಕೊಂಡರು. ಈ ಪ್ರದೇಶ ವಾಯುಪಡೆಯ ವ್ಯಾಪ್ತಿಗೆ ಸೇರಿದ್ದರಿಂದ ಭದ್ರತೆಯ ಹಿನ್ನೆಲೆಯಲ್ಲಿ ವಿಮಾನವನ್ನು ನೋಡಿ ಕಣ್ತುಂಬಿಕೊಳ್ಳುವ ಅವಕಾಶ ಸಿಗದಿರುವುದು ಜನರಲ್ಲಿ ನಿರಾಶೆ ಮೂಡಿಸಿತು.

‘ಟ್ರೂಜೆಟ್ ವಿಮಾನ ಹಾರಾಟ’
ಕೇಂದ್ರದ ಪ್ರಾದೇಶಿಕ ಸಂಪರ್ಕ ಯೋಜನೆಯ ‘ಉಡಾನ್’ನಡಿ ಮೊದಲ ಹಂತದಲ್ಲೇ ಆಯ್ಕೆಯಾಗಿರುವ ಬೀದರ್ ವಿಮಾನ ನಿಲ್ದಾಣವನ್ನು ಹೈದ್ರಾಬಾದ್ ನಿಲ್ದಾಣದ ಉಸ್ತುವಾರಿ ಹೊತ್ತಿರುವ ಜಿಎಂಆರ್ ಸಂಸ್ಥೆಯೇ ಕಾರ್ಯಾಚರಣೆ ಮತ್ತು ನಿರ್ವಹಣೆ ಮಾಡಲಿದ್ದು, ವಿಮಾನಯಾನಕ್ಕಾಗಿ ವಾಯು ಪಡೆಯ ಲಭ್ಯವಿರುವ ರನ್‌ವೇ ಮತ್ತು ವಿಮಾನಯಾನ ದಿಕ್ಸೂಚಿ (ವೈಮಾನಿಕ ಸಂಚಾರ) ಕೇಂದ್ರವನ್ನೇ ಬಳಸಿಕೊಳ್ಳಲಾಗಿದೆ. 70 ಆಸನದ ವ್ಯವಸ್ಥೆಯುಳ್ಳ ಟ್ರೂಜೆಟ್ ಸಂಸ್ಥೆ ವಿಮಾನ (ಸಂ. 625) ಹಾರಾಟ ಶುರು ಮಾಡಿದೆ.

Advertisement

Udayavani is now on Telegram. Click here to join our channel and stay updated with the latest news.

Next