Advertisement

Bidar; ಬಾನಂಗಳದಲ್ಲಿ ಲೋಹದ ಹಕ್ಕಿಗಳ ಚಿತ್ತಾರ: ಪುಳಕಿತರಾದ ಜನರು

06:07 PM Aug 30, 2024 | Team Udayavani |

ಬೀದರ್ : ಜಿಲ್ಲಾಡಳಿತದ ಸಹಯೋಗದಲ್ಲಿ ನಗರದ ಐತಿಹಾಸಿಕ ಬಹುಮನಿ ಕೋಟೆ ಪರಿಸರದಲ್ಲಿ ಶುಕ್ರವಾರ(ಆ30) ಭಾರತೀಯ ವಾಯು ಪಡೆ ತರಬೇತಿ ಕೇಂದ್ರ ನಡೆಸಿದ ವೈಮಾನಿಕ ಪ್ರದರ್ಶನ (Airshow) ಗಮನ ಸೆಳೆಯಿತು. ಬಾನಂಗಳದಲ್ಲಿ ಲೋಹದ ಹಕ್ಕಿಗಳ ಚಿತ್ತಾರ, ನರ್ತನದ ದೃಶ್ಯವನ್ನು ಸಾವಿರಾರು ಜನರು ಕಣ್ತುಂಬಿಕೊಂಡರು.

Advertisement

ಸ್ವದೇಶಿ ನಿರ್ಮಿತ ಸೂರ್ಯಕಿರಣ ಯುದ್ಧ ವಿಮಾನಗಳು ಆಗಸದಲ್ಲಿ ಬಗೆ ಬಗೆಯ ಸ್ಟಂಟ್‌ಗಳನ್ನು ಮಾಡಿ ಮೈ ರೋಮಾಂಚನಗೊಳಿಸಿತು. ಸೂರ್ಯಕಿರಣದ 9 ಏರ್ ಕ್ರಾಫ್ಟ್‌ಗಳು ಕೋಟೆ ಮೇಲೆ ಪ್ರವೇಶಿಸುತ್ತಿದ್ದಂತೆ ವೀಕ್ಷಕರು ನಭದತ್ತಲೇ ದೃಷ್ಟಿ ನೆಟ್ಟಿದ್ದರು. ಸುಮಾರು ಅರ್ಧ ಗಂಟೆಗಳ ಕಾಲ ಚೇತೋಹಾರಿ ಪ್ರದರ್ಶನ ನೀಡಿದ ವಿಮಾನಗಳು ಕೈಗಟ್ಟುವಂತೆ ಭಾಸವಾಗಿ ಒಂದಾಂದ ಮೇಲೋಂದು ತಂಡದೊಂದಿಗೆ ಪ್ರದರ್ಶನ ನೀಡಿ ರಂಜಿಸಿದವು. ಬಗೆ ಬಗೆಯ ಸಾಹಸ ಪ್ರದರ್ಶಿಸಿ ಚಿತ್ತಾರ ಮೂಡಿಸಿದ್ದಲ್ಲದೇ ಮೂಲಕ ನೆರೆದಿದ್ದವರ ಎದೆ ಝಲ್ ಎನಿಸುವಂತೆ ಮಾಡಿದವು.

ಐಎಎಫ್‌ನ ವಿಶೇಷತೆಯನ್ನು ಧ್ವನಿವರ್ಧಕ ಮೂಲಕ ತಿಳಿಸುತ್ತಿದ್ದಂತೆ ಮಕ್ಕಳ ಹಷೋದ್ಘಾರ, ಶಿಳ್ಳೆ ಮುಗಿಲು ಮುಟ್ಟಿತ್ತು. ಸೂರ್ಯಕಿರಣ ಏರೋಬ್ಯಾಟಿಕ್ ಟೀಮ್‌ನ ಗ್ರೂಪ್ ಕ್ಯಾಪ್ಟನ್ ಗುರಪ್ರೀತಸಿಂಗ್ ದಿಲ್ಲೊನ್ (ಕಮಾಂಡಿಂಗ್ ಆಫಿಸರ್) ನಾಯಕ್ವತದಲ್ಲಿ ಆಕರ್ಷಕ ಏರ್ ಶೋ ಪ್ರದರ್ಶನಗೊಂಡಿತು. ಜಿಲ್ಲಾಡಳಿತದ ಮನವಿ ಮೇರೆಗೆ ನಗರ ಸೇರಿದಂತೆ ಜಿಲ್ಲೆಯ ವಿವಿಧೆಡೆಯಿಂದ ಸಾರ್ವಜನಿಕರು ಕೋಟೆಯಲ್ಲಿ ಜಮಾಯಿಸಿದ್ದರು. ಸೂರ್ಯಕಿರಣದ ಸ್ಟಂಟ್‌ಗಳ ಸೊಬಗು ಹಿಡಿಯಲು ಪ್ರೇಕ್ಷಕರು ಛಾಯಾಚಿತ್ರ ತೆಗೆಯಲು ಮುಗಿಬಿದ್ದರು.

ಸೂರ್ಯಕಿರಣ ಯುದ್ಧ ವಿಮಾನಗಳು ಬೀದರ್ ವಾಯು ಪಡೆ ಕೇಂದ್ರದ ಹೆಮ್ಮೆ ಎನಿಸಿಕೊಂಡಿದ್ದವು. ಪ್ರತಿ ದಿನ ಕೇಂದ್ರದ ಸುತ್ತ ಮುತ್ತಲೂ ತರಬೇತಿ ಪಡೆಯುತ್ತಿದ್ದ ಪೈಲಟ್‌ಗಳು ಬಾನಂಗಳದಲ್ಲಿ ಸಾಹಸ ಪ್ರದರ್ಶನಗಳು ನೋಡುಗರನ್ನು ಮಂತ್ರ ಮುಗ್ಧರನ್ನಾಗಿ ಮಾಡುತ್ತಿದ್ದವು. ಆದರೆ, ನಗರದ ಹೊರವಲಯದಲ್ಲಿ2006 ಮತ್ತು 2015ರಲ್ಲಿ ಸೂರ್ಯಕಿರಣ ವಿಮಾನಗಳ ಪತನಗೊಂಡು ಪೈಲಟ್‌ಗಳ ಸಾವು ಸಂಭವಿಸಿತ್ತು. ಇದಾದ ಬಳಿಕ ಬೀದರ ವಾಯು ಪಡೆಯಲ್ಲಿ ಸೂರ್ಯಕಿರಣ ತರಬೇತಿ ನಿಲ್ಲಿಸಿ, ಹಾಕ್ ಯುದ್ಧ ವಿಮಾನಗಳು ಸೇರ್ಪಡೆ ಮಾಡಿಕೊಳ್ಳಲಾಯಿತು.

Advertisement

ಆದರೆ, 2022ರಲ್ಲಿ ಜಿಲ್ಲಾಡಳಿತದ ಮನವಿ ಮೇರೆಗೆ ವಾಯು ಪಡೆಯಿಂದ ಏರ್ ಶೋ ನಡೆಸಿ ಸಾರ್ವಜನಿಕರ ಮನ ರಂಜಿಸಿತ್ತು. ನಂತರ 2023 ರಲ್ಲಿ ವೈಮಾನಿಕ ಪ್ರದರ್ಶನ ಆಯೋಜಿಸಲಾಗಿತ್ತು. ಆದರೆ, ಹವಾಮಾನ ವೈಪ್ಯರಿತ್ಯದಿಂದಾಗಿ ಕೊನೆಗಳಿಗೆಯಲ್ಲಿ ರದ್ದುಗೊಳಿಸಿದ್ದರಿಂದ ಜನರಿಗೆ ನಿರಾಶೆಯಾಗಿತ್ತು.

ಜಿಲ್ಲಾಧಿಕಾರಿ ಶಿಲ್ಪಾ ಶರ್ಮಾ, ಜಿ.ಪಂ ಸಿಇಒ ಡಾ. ಗಿರೀಶ್ ಬದೋಲೆ, ಜಿಲ್ಲಾ ಎಸ್‌ಪಿ ಪ್ರದೀಪ್ ಗುಂಟಿ ಮತ್ತು ಅಪರ ಜಿಲ್ಲಾಧಿಕಾರಿ ಶಿವಕುಮಾರ ಶೀಲವಂತ, ವಾಯು ಪಡೆಯ ಎಒಸಿ ಸೇರಿದಂತೆ ಹಿರಿಯ ಅಧಿಕಾರಿಗಳು ಮತ್ತು ಸಾರ್ವಜನಿಕರು ಏರ್ ಶೋಗೆ ಸಾಕ್ಷಿಯಾದರು.

ವಾಯು ಪಡೆ ನೆಲದಲ್ಲಿ ಸೂರ್ಯಕಿರಣ ಯುದ್ದ ವಿಮಾನಗಳ ವೈಮಾನಿಕ ಪ್ರದರ್ಶನ ವೀಕ್ಷಣೆಗೆ ಶುಕ್ರವಾರ ಕೇವಲ ಸಾರ್ವಜನಿಕರಿಗೆ ಮಾತ್ರ ಅವಕಾಶ ನೀಡಲಾಗಿತ್ತು. ಶನಿವಾರವೂ (ಆ31) ಜಿಲ್ಲೆಯ ಶಾಲಾ- ಕಾಲೇಜು ವಿದ್ಯಾರ್ಥಿಗಳು ಮತ್ತು ಸರ್ಕಾರಿ ನೌಕರರ ವೀಕ್ಷಣೆಗಾಗಿ ಏರ್ ಶೋ ನಡೆಯಲಿದೆ.

ಶಶಿಕಾಂತ ಬಂಬುಳಗೆ

Advertisement

Udayavani is now on Telegram. Click here to join our channel and stay updated with the latest news.

Next