ಹುಮನಾಬಾದ: ಯುಜಿಡಿ ಕಾಮಗಾರಿಯಲ್ಲಿ ಅಕ್ರಮ ಕುರಿತು “ಉದಯವಾಣಿ’ಯಲ್ಲಿ ವಿಶೇಷ ವರದಿ ಪ್ರಕಟಗೊಂಡ ಹಿನ್ನೆಲೆಯಲ್ಲಿ ಎಚ್ಚೆತ್ತುಕೊಂಡ ಅಧಿಕಾರಿಗಳು ಹಾಗೂ ಪುರಸಭೆ ಸದಸ್ಯರು, ಶನಿವಾರ ವಿಶೇಷ ಸಭೆ ಕರೆದು ಯುಜಿಡಿ ಕಾಮಗಾರಿ ಕುರಿತು ಸುದೀರ್ಘ ಚರ್ಚೆ ನಡೆಸಿದರು.
28 ಕೋಟಿ ರೂ. ವೆಚ್ಚದ ಯುಜಿಡಿ ಕಾಮಗಾರಿಯಲ್ಲಿ ಅಕ್ರಮ ನಡೆದಿದ್ದು, ಈ ಕುರಿತು ಸಿಒಡಿ ಹಾಗೂ ಲೋಕಾಯುಕ್ತ ಸಂಸ್ಥೆಗಳಿಂದ ಉನ್ನತ ಮಟ್ಟದ ತನಿಖೆ ನಡೆಸಬೇಕು. ಸಂಬಂಧಪಟ್ಟವರ ವಿರುದ್ಧ ಯಾವುದೇ ಮುಲಾಜಿಲ್ಲದೆ ಕ್ರಿಮಿನಲ್ ಪ್ರಕರಣ ದಾಖಲಿಸಬೇಕು ಎಂದು ಪುರಸಭೆ ಆಡಳಿತ ಮಂಡಳಿ ನಿರ್ಧಾರ ತೆಗೆದುಕೊಂಡಿತು. ಕರ್ನಾಟಕ ನಗರ ಮೂಲ ಸೌಕರ್ಯ ಅಭಿವೃದ್ಧಿ ಮತ್ತು ಹಣಕಾಸು ನಿಗಮ ಬೆಂಗಳೂರು ಎಂ.ಡಿ ಹಾಗೂ ವ್ಯವಸ್ಥಾಪಕ ನಿರ್ದೇಶಕರು ಮತ್ತು ಪೌರಾಡಳಿತ ನಿರ್ದೇಶನಾಲಯದ ನಿರ್ದೇಶಕರ ಬಗ್ಗೆ ಸೂಕ್ತ ಕ್ರಮ ಕೈಗೊಳ್ಳಬೇಕು ಎಂದು ಸಭೆಯಲ್ಲಿ ಸರ್ವಾನುಮತದಿಂದ ಒಪ್ಪಿಗೆ ಸೂಚಿಸಲಾಯಿತು.
ಪುರಸಭೆ ಮುಖ್ಯಾಧಿಕಾರಿ ಶಂಭುಲಿಂಗ ದೇಸಾಯಿ ಮಾತನಾಡಿ, ಈವರೆಗೂ ಯುಜಿಡಿ ಕಾಮಗಾರಿ ನಾನು ಹಸ್ತಾಂತರ ಮಾಡಿಕೊಂಡಿಲ್ಲ. ಸೌಜನ್ಯದ ಭೇಟಿ ಸಂದರ್ಭದಲ್ಲಿ ತೆಗೆದ ಚಿತ್ರಗಳು ದುರ್ಬಳಕೆ ಮಾಡಿಕೊಂಡು ದಾಖಲೆಗಳಿಗೆ ಲಗತ್ತಿಸಲಾಗಿದೆ. ಅಲ್ಲದೆ ಕಾಮಗಾರಿ ಪೂರ್ಣಗೊಂಡಿರುವ ಕುರಿತು ಯಾವುದೇ ದಾಖಲೆ ಕಚೇರಿಯಿಂದ ನೀಡಿಲ್ಲ ಎಂದು ಸ್ಪಷ್ಟಪಡಿಸಿದ ಅವರು, ಪ್ರಾಯೋಗಿಕ ಪರೀಕ್ಷೆ ನಂತರ ಹಸ್ತಾಂತರ ಮಾಡಿಕೊಳ್ಳುವುದಾಗಿ ತಿಳಿಸಿದೆ. ಆದರೆ ಸಂಬಂಧಪಟ್ಟವರು ಎಲ್ಲ ದಾಖಲೆಗಳು ಮೇಲಧಿಕಾರಿಗಳಿಗೆ ಸಲ್ಲಿಸಿದ್ದಾರೆ ಎಂದರು.
ಪುರಸಭೆ ಸದಸ್ಯರಾದ ರಮೇಶ ಕಲ್ಲೂರ್, ಎಸ್.ಎ ಬಾಸಿದ್, ಅನಿಲ ಪಲ್ಲರಿ, ವೀರೇಶ ಸೀಗಿ, ಮುಕರಮ್ ಜಾ ಮಾತನಾಡಿ, 2019ರಲ್ಲಿ ಕಾಮಗಾರಿ ಪೂರ್ಣಗೊಂಡಿದೆ ಎಂದು ಮುಖ್ಯಾಧಿಕಾರಿ ದಾಖಲೆಗೆ ಸಹಿ ಹಾಕಿದ ಕಾರಣಕ್ಕೆ ಕೊನೆಯ ಕಂತಿನ ಹಣ ಪಾವತಿಯಾಗಿದೆ. ಸಹಿ ಮಾಡುವಾಗ ಅರ್ಜಿಯ ತಲೆಬರಹದಲ್ಲಿ ಬರೆದಿರುವುದು ನೋಡಿಲ್ವಾ ಎಂದು ಪ್ರಶ್ನಿಸಿದರು. ನಿಮ್ಮ ಚಿತ್ರಗಳು ದುರ್ಬಳಕೆ ಮಾಡಿಕೊಂಡಿದ್ದಾರೆ ಎಂದು ಹೇಳುತ್ತಿರುವ ನೀವು ಸಂಬಂಧಪಟ್ಟವರ ವಿರುದ್ಧ ಯಾವ ಕ್ರಮ ತೆಗೆದುಕೊಂಡಿದ್ದೀರಿ. ತಪ್ಪು ಮಾಹಿತಿ ನೀಡಿ ಸಹಿ ಪಡೆದುಕೊಂಡಿದ್ದಾರೆ ಎಂದಾದರೆ ಕಳೆದ 16 ತಿಂಗಳಿಂದ ಏನು ಮಾಡುತ್ತಿದ್ದೀರಿ? ಯಾವ ಕಾರಣಕ್ಕೆ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಿಸಿಲ್ಲ ಎಂದು ಪ್ರಶ್ನಿಸಿದರು. 2020ರಲ್ಲಿ ಕಾಮಗಾರಿ ನಿರ್ವಹಣೆಯ ಅವಧಿ ಪೂರ್ಣಗೊಂಡಿದೆ. ಸದ್ಯ ಯುಜಿಡಿ ಕಾಮಗಾರಿಗೂ ಗುತ್ತಿಗೆದಾರನಿಗೂ ಯಾವುದೇ ಸಂಬಂಧವಿಲ್ಲ ಎಂದು ಈಗಾಗಲೇ ಪುರಸಭೆಗೆ ಗುತ್ತಿಗೆದಾರ ಪತ್ರ ಬರೆದು ತಿಳಿಸಿದ್ದಾರೆ. ಹಾಗಾದರೆ 28 ಕೋಟಿ ಮುಖ್ಯಾಧಿಕಾರಿಯಿಂದ ವಸೂಲಿ ಮಾಡಬೇಕಾ? ಎಂದು ಪ್ರಶ್ನಿಸಿದರು.
ಯುಜಿಡಿ ಕಾಮಗಾರಿಯ ಜೆಇ ಪ್ರಕಾಶ ಮಾತನಾಡಿ, ಕಳೆದ 2019ರಲ್ಲಿ ಕಾಮಗಾರಿ ಪೂರ್ಣಗೊಂಡಿದೆ. ಅಲ್ಲದೆ, 2020ಕ್ಕೆ ನಿರ್ವಹಣೆ ಅವಧಿಯು ಅಗತ್ಯವಾಗಿದೆ. ಪುರಸಭೆಯವರು ಮನೆಗಳಿಗೆ ಸಂಪರ್ಕ ಕಲ್ಪಿಸಿ ಬಳಸಬೇಕಿತ್ತು. ಕಾಮಗಾರಿ ಮಾಡದಿದ್ದರೆ ಹೇಗೆ ಗುತ್ತೆದಾರನಿಗೆ ಹಣ ಪಾವತಿ ಆಯ್ತು ಎಂದು ಮರು ಪ್ರಶ್ನಿಸಿದರು. ಕಾಮಗಾರಿ ಪೂರ್ಣಗೊಂಡ ಸಂದರ್ಭದಲ್ಲಿ ಪುರಸಭೆಯವರು ಎಲ್ಲವನ್ನೂ ಮಾಹಿತಿ ಪಡೆದು ಪರಿಶೀಲನೆ ನಡೆಸಬೇಕಿತ್ತು ಎಂದು ವಾದಿಸಿದರು. ಇದಕ್ಕೆ ಆಕ್ರೋಶಗೊಂಡ ಸದಸ್ಯರು ಮುಖ್ಯಾಧಿಕಾರಿ ಹಾಗೂ ತಾವುಗಳು ಸೇರಿ ಅಕ್ರಮ ನಡೆಸಿದ್ದೀರಿ. ತಪ್ಪು ಮುಚ್ಚಿಹಾಕಿಕೊಳ್ಳಲು
ಸುಳ್ಳು ಮಾಹಿತಿ ನೀಡುತ್ತಿದ್ದೀರಿ ಎಂದು ಆಕ್ರೋಶ ವ್ಯಕ್ತಪಡಿಸಿದರು. ಕಾಮಗಾರಿಗೆ ಸಂಬಂಧಿಸಿದಂತೆ ಕರ್ತವ್ಯ ನಿರ್ವಹಿಸಿದ ಎಲ್ಲ ಅಧಿಕಾರಿಗಳು ವಿರುದ್ಧ ಪ್ರಕರಣ ದಾಖಲಾಗಬೇಕು. ಅಧಿಕಾರಿಗಳಿಂದ ಹಾಗೂ ಗುತ್ತಿಗೆದಾರನಿಂದ 28 ಕೋಟಿ ರೂ. ಹಣ ವಸೂಲಿ ಮಾಡಬೇಕು ಎಂದು ಒತ್ತಾಯಿಸಿದರು.
ಸಭೆಯಲ್ಲಿ ನಡೆದ ಚರ್ಚೆಗಳ ನಡಾವಳಿ ತಯಾರಿಸಿ ಜಿಲ್ಲಾಧಿಕಾರಿಗೆ ಸಲ್ಲಿಸುವ ಮೂಲಕ ಮುಂದಿನ ಕಾನೂನು ಕ್ರಮ ಕೈಗೊಳ್ಳಲಾಗುವುದು. ಅಧಿಕಾರಿಗಳು ಪರವಾನಗಿ ನೀಡಿದರೆ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಿಸುವುದಾಗಿ ಮುಖ್ಯಾಧಿಕಾರಿ ಶಂಭುಲಿಂಗ ದೇಸಾಯಿ ತಿಳಿಸಿದರು.