Advertisement
ಗದಗ ಪಶು ವೈದ್ಯಕೀಯ ಮಹಾವಿದ್ಯಾಲಯದ ವಿದ್ಯಾರ್ಥಿ ರಾಘವೇಶ್ ಎ.ಎನ್ ತಮ್ಮ ಸಾಧನೆಯ ಹೊಂಬೆಳಕಿನಲ್ಲಿ ಚಿನ್ನಕ್ಕೆ ಮುತ್ತಿಟ್ಟವರು. ಮೂಲತಃ ಮಂಡ್ಯ ಜಿಲ್ಲೆಯ ಮದ್ದೂರು ತಾಲೂಕಿನ ಅವಸರದಹಳ್ಳಿ ಗ್ರಾಮದ ರಾಘವೇಶ್, 2021-22ನೇ ಸಾಲಿನ ಬ್ಯಾಚುಲರ್ ಆಫ್ ವೆಟರ್ನರಿ ಸೈನ್ಸ್ ಆ್ಯಂಡ್ ಆ್ಯನಿಮಲ್ ಹಸ್ಬೆಂ ಡರಿ (ಬಿವಿಎಸ್‌ಸಿ ಮತ್ತು ಎಎಚ್) ಸ್ನಾತಕ ಪದವಿಯ ವಿಭಾಗದಲ್ಲಿ ಬರೋಬ್ಬರಿ 16 ಚಿನ್ನದ ಪದಕಗಳಿಗೆ ಕೊರಳೊಡ್ಡಿದ್ದಾರೆ.
ವೈರಾಣುಶಾಸ್ತ್ರ ಕೋರ್ಸ್ ಪದವಿ ಅಧ್ಯಯನ ಮಾಡುತ್ತಿದ್ದು, ಮುಂದೆ ಎಂಎಸ್ (ಕೃಷಿ ಸಂಶೋಧನಾ ವಿಜ್ಞಾನ) ಆಗುವ ಕನಸು ಕಟ್ಟಿಕೊಂಡಿದ್ದಾರೆ. ಸೋಮವಾರ ನಡೆದ 13ನೇ ಘಟಿಕೋತ್ಸದಲ್ಲಿ ವಿವಿ ಕುಲಪತಿಗಳಾದ ರಾಜ್ಯಪಾಲ ಥಾವರ್ ಚಂದ್ ಗೆಹ್ಲೋತ್ ಮತ್ತು ಪಶು ಸಂಗೋಪನಾ ಸಚಿವ ವೆಂಕಟೇಶ್ ಅವರಿಂದ ಚಿನ್ನದ ಪದಕ ಮತ್ತು ಪದವಿ ಸ್ವೀಕರಿಸಿ ಯುವಜನತೆಗೆ ಪ್ರೇರಣೆಯಾಗಿ ಗಮನ ಸೆಳೆದರು.
Related Articles
ವೈದ್ಯಕೀಯ ಸೀಟು ಸಿಗದೇ ಇರುವುದಕ್ಕೆ ಪಶು ವೈದ್ಯಕೀಯದತ್ತ ಮುಖ ಮಾಡಿ, ಇಂದು ಉತ್ತಮ ಫಸಲು ತೆಗೆದಿದ್ದಾರೆ.
Advertisement
ಆ ಮೂಲಕ ತಂದೆಯ ಆಸೆಯನ್ನು ಈಡೇರಿಸುವತ್ತ ಹೆಜ್ಜೆಯನ್ನಿಟ್ಟಿದ್ದಾರೆ. ಐವಿಆರ್‌ಐನಲ್ಲಿ ಪಿಜಿ ಕೋರ್ಸ್ ಮುಗಿಸಿ ಮುಂದೆ ಸಂಶೋಧನಾ ಕ್ಷೇತ್ರದಲ್ಲಿ ಹೊಸತನ ಸಾಧಿಸುವ ಕನಸು ಹೊತ್ತಿದ್ದೇನೆ. ಬಡತನದ ಮಧ್ಯೆಯೂ ಉನ್ನತ ಶಿಕ್ಷಣ ಕೊಡಿಸಿರುವ ಅಪ್ಪನಂಥ ರೈತ ವರ್ಗದವರ ಕಲ್ಯಾಣಕ್ಕೆ ಜೀವನ ಮುಡುಪಾಗಿಡುತ್ತೇನೆ. ನನ್ನೆಲ್ಲ ಆಶಯಗಳಿಗೆ ತಂದೆ-ತಾಯಿ ಬೆನ್ನಲು ಬಾಗಿ ನಿಂತಿದ್ದಾರೆ. ಗುರುಗಳು ನನ್ನ ಕಲಿಕೆಗೆ ಮಾರ್ಗದರ್ಶನ ಮಾಡಿದ್ದಾರೆ. ಇದರಿಂದ ಈ ಸಾಧನೆ ಸಾಧ್ಯವಾಯಿತು ಎನ್ನುತ್ತಾರೆ ರಾಘವೇಶ್.
ಸಚಿನ್ ಮುಡಿಗೇರಿದ ಐದು ಚಿನ್ನ
ಕೃಷಿ ಕುಟುಂಬದ ಬೆಳಗಾವಿ ಜಿಲ್ಲೆ ಕುನ್ನಾಳ ಗ್ರಾಮದ ಸಚಿನ್ ಹುದ್ದಾರ್ ಸಹ ಬಿವಿಎಸ್‌ಸಿ ಮತ್ತು ಎಎಚ್ ಸ್ನಾತಕ ಪದವಿಯಲ್ಲಿ 5 ಚಿನ್ನದ ಪದಕಗಳನ್ನು ಮುಡಿಗೇರಿಸಿಕೊಂಡಿದ್ದಾರೆ. ಬೀದರ ಪಶು ವೈದ್ಯಕೀಯ ಮಹಾವಿದ್ಯಾಲಯದ ಸಚಿನ್ ಸ್ನಾತಕೋತ್ತರ ಪದವಿಗಾಗಿ ತಯಾರಿ ನಡೆಸುತ್ತಿದ್ದಾರೆ.
ವೆಟರ್ನರಿ ಸರ್ಜರಿ ಮತ್ತು ರೆಡಿಯಾಲಜಿಯಲ್ಲಿ ಪದವಿ ಪಡೆದು ಭವಿಷ್ಯದಲ್ಲಿ ವಿಜ್ಞಾನಿಯಾಗುವುದು ಅಥವಾ ಭಾರತೀಯ ಆಡಳಿತ ಸೇವೆ ಮೂಲಕ ಜನರ ಸೇವೆ ಮಾಡುವ ಆಶಯ ಹೊಂದಿದ್ದಾರೆ. ಧಾರವಾಡದಲ್ಲಿ ಎಸ್‌ಎಸ್‌ಎಲ್‌ಸಿಯಲ್ಲಿ ಶೇ.92 ಮತ್ತು ಪಿಯುಸಿಯಲ್ಲಿ ಶೇ.96 ಅಂಕ ಗಳಿಸಿದ್ದ ಸಚಿನ್ ತಮ್ಮ ಹೆತ್ತವರ ಬಯಕೆಯಂತೆ ಪಶು ವಿಜ್ಞಾನ ಶಿಕ್ಷಣ ಪಡೆದಿದ್ದಾರೆ. ಈಗ ಸ್ನಾತಕ ಪದವಿಯಲ್ಲಿ 8.319 ಅಂಕ ಪಡೆದು ಚಿನ್ನದ ಪದಕಗಳನ್ನು ತನ್ನದಾಗಿಸಿಕೊಂಡಿದ್ದಾರೆ.
ಚಿನ್ನದ ಪದಕ ಬರುವ ನಿರೀಕ್ಷೆ ಇತ್ತು. ಆದರೆ, 16 ಪದಕ ಸಿಗುತ್ತವೆ ಎಂದುಕೊಂಡಿರಲಿಲ್ಲ. ನನ್ನ ಪರಿಶ್ರಮಕ್ಕೆ ಫಲ ಸಿಕ್ಕಿದ್ದು, ಬಹಳ ಖುಷಿ ತಂದಿದೆ. ಗದಗ ಪಶು ವೈದ್ಯಕೀಯ ಮಹಾವಿದ್ಯಾಲಯದಲ್ಲಿ ಓದಿಗೆ ಪೂರಕವಾದ ವಾತಾವರಣ ಇತ್ತು. ನನ್ನ ಪರಿಶ್ರಮದ ಹಿಂದೆ ಪಾಲಕರು, ಗುರುವೃಂದದ ಪಾತ್ರ ಇದೆ. ಅಂಕಗಳಿಕೆಗಾಗಿ ಎಂದೂ ಓದದೇ ಆತ್ಮತೃಪ್ತಿಗಾಗಿ ಓದಿದರೆ ಪದಕಗಳು ಹುಡುಕಿಕೊಂಡು ಬರುತ್ತವೆ ಎಂಬುದಕ್ಕೆ ನಾನೇ ಸಾಕ್ಷಿ.ರಾಘವೇಶ್, ಎ.ಎನ್., 16 ಚಿನ್ನದ ಪದಕ ಪಡೆದ ವಿದ್ಯಾರ್ಥಿ