ರಾಮನಗರ: ರಾಜಧಾನಿ ಬೆಂಗಳೂರಿನ ಮೇಲಿನ ಒತ್ತಡ ತಪ್ಪಿಸುವ ಉದ್ದೇಶದಿಂದ ಬಿಡದಿ ಸಮೀಪ ರಾಜ್ಯ ಸರ್ಕಾರ ನಿರ್ಮಾಣ ಮಾಡಲು ಉದ್ದೇಶಿಸಿದ್ದ ಸ್ಮಾರ್ಟ್‌ಸಿಟಿ(ಉಪನಗರ ನಿರ್ಮಾಣ) ಕೇವಲ ದಾಖಲೆಗಳ ಮೇಲೆ ಸೀಮಿತವಾಗಿದ್ದು, 17 ವರ್ಷಗಳಿಂದ ಯೋಜ ನೆಗೆ ಸ್ಪಷ್ಟ ರೂಪುರೇಷೆ ಇಲ್ಲದೆ ಶೈಶಾವಸ್ಥೆಯಲ್ಲೇ ನರಳುತ್ತಿದೆ.
2007 ರಲ್ಲಿ ಬಿಜೆಪಿ-ಜೆಡಿಎಸ್ ಮೈತ್ರಿ ಸರ್ಕಾರದಲ್ಲಿ ಮುಖ್ಯಮಂತ್ರಿಯಾಗಿದ್ದ ಎಚ್.ಡಿ.ಕುಮಾರಸ್ವಾಮಿ ಬೆಂಗಳೂರು ನಗರದ ಸುತ್ತಾ 5 ನವನಗರಗಳನ್ನು ನಿರ್ಮಾಣ ಮಾಡುವುದಾಗಿ ಘೋಷಣೆ ಮಾಡಿದ್ದರು. ಈ ಐದು ಸ್ಯಾಟಲೈಟ್ ಸಿಟಿಗಳಲ್ಲಿ ಬಿಡದಿ ಸಹ ಸೇರಿತ್ತು. ಅಂದಿನಿಂದ ಇಂದಿನ ವರಗೆ ಭೂಮಿ ಗುರುತಿಸಿದ್ದು ಹೊರತು ಪಡಿಸಿದರೆ ಯಾವುದೇ ಪ್ರಯೋಜನವಾಗಿಲ್ಲ.
ಏನಿದು ಸ್ಮಾರ್ಟ್‌ಸಿಟಿ ಯೋಜನೆ: ಬೆಂಗಳೂರು ನಗರ ದಿನೇ ದಿನೆ ಬೆಳೆಯುತ್ತಿರುವ ಹಿನ್ನೆಲೆಯಲ್ಲಿ 2007ರಲ್ಲಿ ಬಿಜೆಪಿ- ಜೆಡಿಎಸ್ ಮೈತ್ರಿ ಸರ್ಕಾರ ಬಿಡದಿ, ರಾಮ ನಗರ, ಮಾಗಡಿ ತಾಲೂಕಿನ ಸೋಲೂರು, ಕನಕಪುರ ತಾಲೂಕಿನ ಸಾತನೂರು ಮತ್ತು ದೊಡ್ಡಬಳ್ಳಾಪುರ ತಾಲೂಕಿನ ನಂದಗುಡಿಬಳಿ ಐದು ಸ್ಯಾಟಲೈಟ್ ಸಿಟಿ ನಿರ್ಮಿಸುವ ಯೋಜನೆಯನ್ನು ರೂಪಿಸಿತು.ಹೀಗೆ ರೂಪುಗೊಂಡ ಯೋಜನೆಯಲ್ಲಿ ಮೊದಲಿಗೆ ಚಾಲನೆ ನೀಡಿದ್ದು ಬಿಡದಿ ಸ್ಮಾರ್ಟ್‌ಸಿಟಿ ಯೋಜನೆ. ಭೈರಮಂಗಲ ಗ್ರಾಪಂನ 5 ಹಾಗೂ ಕಂಚುಗಾರನಹಳ್ಳಿ ಗ್ರಾಪಂ ವ್ಯಾಪ್ತಿಯ 7 ಸೇರಿ ಒಟ್ಟು 12 ಕಂದಾಯ ಗ್ರಾಮಗಳ ಜೊತೆಗೆ ಇತರೆ 11 ಸಣ್ಣ ಗ್ರಾಮಗಳನ್ನು ಒಳಗೊಂಡಂತೆ 9600 ಎಕರೆ ಭೂಮಿಯನ್ನು ಗುರುತಿಸಿ ಸ್ಮಾರ್ಟ್‌ಸಿಟಿ ನಿರ್ಮಾಣಕ್ಕೆ ಚಾಲನೆ ನೀಡಲಾಯಿತು. ಯೋಜನೆಯ ನೀಲನಕ್ಷೆ ಸಿದ್ದಪಡಿಸಿ, ವಿಸ್ತೃತ ಯೋಜನಾ ವರದಿ ತಯಾರಿಸಲು ವ್ಯಾಪ್‌ಕೋಸ್‌ಲಿ ಎಂಬ ಖಾಸಗಿ ಸಂಸ್ಥೆಗೆ ಗುತ್ತಿಗೆಯನ್ನು ನೀಡಲಾಯಿತು. ಇನ್ನು 2016 ರಲ್ಲಿ ಗ್ರೇಟರ್ ಬೆಂಗಳೂರು ಬಿಡದಿ ಸ್ಮಾರ್ಟ್‌ಸಿಟಿ ಯೋಜನಾ ಪ್ರಾಧಿಕಾರವನ್ನು ಸಹ ರಚನೆ ಮಾಡಲಾಯಿತು. ಈ ಮಹಾತ್ವಾಕಾಂಕ್ಷಿ ಯೋಜನೆ ಸದ್ಯಕ್ಕೆ ನಿಂತಲ್ಲೇ ನಿಂತಿದೆ.
ಅಮರಾವತಿ ಮಾದರಿ ನಿರ್ಮಾಣಕ್ಕೆ ಚಿಂತನೆ: ಬಿಡದಿ ಬಳಿ 9600 ಎಕರೆ ವಿಸ್ತೀರ್ಣದಲ್ಲಿ ನಿರ್ಮಾಣ ಮಾಡಲು ಉದ್ದೇಶಿಸಿದ್ದ ಸ್ಮಾರ್ಟ್ ಸಿಟಿಯನ್ನು ಸುಮಾರು 25 ಸಾವಿರ ಕೋಟಿ ರೂ. ವೆಚ್ಚದಲ್ಲಿ ಆಂಧ್ರ ಪ್ರದೇಶದ ಅಮರಾವತಿ ನಗರದ ಮಾದರಿಯಲ್ಲಿ ಅಭಿವೃದ್ಧಿ ಪಡಿಸಲು ಯೋಜನೆ ರೂಪಿಸಲಾಗಿತ್ತು. ಬಿಎಂಆರ್‌ಡಿಎ ಮೇಲುಸ್ತುವಾರಿಯಲ್ಲಿ ಯೋಜನೆ ರೂಪಿ ಸಲಾಗಿತ್ತು. ಇದರೊಂದಿಗೆ ಸರ್ಕಾರ ನಿರ್ಮಾಣ ಮಾಡಲು ಉದ್ದೇಶಿಸಿದ್ದ ಐದು ಸ್ಮಾರ್ಟ್‌ಸಿಟಿಗಳನ್ನು ಸಂಪರ್ಕಿಸುವಂತೆ ಪೆರಿಪಲ್ ರಿಂಗ್ ರಸ್ತೆಯನ್ನು ನಿರ್ಮಾಣ ಮಾಡಲು ಯೋಜನೆ ಸಿದ್ಧಪಡಿಸಲಾಗಿತ್ತು. ಎಚ್‌ಡಿಕೆ-ಯಡಿಯೂರಪ್ಪ ನೇತೃತ್ವದ ದೋಸ್ತಿ ಸರ್ಕಾರ ಪಥನದ ಬಳಿಕ ಯೋಜನೆ ಹಳ್ಳ ಹಿಡಿಯಿತು. 2013ರಲ್ಲಿ ಮತ್ತೆ ಸಿದ್ದರಾಮಯ್ಯ ನೇತೃತ್ವದ ಸರ್ಕಾರ ರಚನೆಯಾದಾಗ ಈ ಯೋಜನೆ ಚರ್ಚೆಗೆ ಬಂದಿತಾ ದರೂ ಪ್ರಾಧಿಕಾರ ರಚನೆ ಮಾಡಿದ್ದನ್ನು ಹೊರತು ಪಡಿಸಿದರೆ ಇನ್ಯಾವುದೇ ಪ್ರಗತಿಯಾಗಲಿಲ್ಲ. ಸದ್ಯಕ್ಕೆ ಯೋಜನೆಗೆ ಗ್ರಹಣ ಹಿಡಿದಿದ್ದು ಯೋಜನೆಯ ಬಗ್ಗೆ ಯಾರೂ ಮಾತನಾಡುತ್ತಿಲ್ಲ.
ಯಾವುದೇ ಅಡ್ಡಿ ಇಲ್ಲ: ಬಿಡದಿ ಸ್ಮಾರ್ಟ್‌ಸಿಟಿ ಯೋಜನೆಯನ್ನು ರೂಪಿಸಿ ಯೋಜನಗೆ ಭೂಸ್ವಾಧೀನ ಪಡಿಸಿಕೊಳ್ಳಲು ಜಮೀನನ್ನು ಗುರುತಿಸಿ ಎಲ್ಲಾ ರೀತಿಯ ಸಿದ್ಧತೆ ಮಾಡಿಕೊಂಡಿದ್ದರೂ ಸರ್ಕಾರ ಯೋಜನೆಯನ್ನು ಪ್ರಾರಂಭಿಸಲು ಮೀನ ಮೇಷ ಏಣಿಸುತ್ತಿದೆ. ಇನ್ನು ಈ ಯೋಜನೆಯನ್ನು ವಿರೋಧಿಸಿ ಯಾರೂ ಆಕ್ಷೇಪ ವ್ಯಕ್ತಪಡಿಸಿಲ್ಲ. ನ್ಯಾಯಾಲಯದಲ್ಲಿ ದಾವೆ ಹೂಡಿಲ್ಲ. ಯಾವುದೇ ಅಡ್ಡಿ ಆತಂಕ ಸರ್ಕಾರಕ್ಕೆ ಇಲ್ಲವಾಗಿದ್ದರೂ ಯೋಜನೆ ಮಾತ್ರ ಆರಂಭವಾಗದಿರುವುದು ಯಾಕೆ ಎಂಬುದು ಎಲ್ಲರನ್ನು ಕಾಡುತ್ತಿರುವ ಯಕ್ಷಪ್ರಶ್ನೆಯಾಗಿದೆ. ರೆಡ್‌ಜೋನ್‌ನಲ್ಲಿ ಸಾವಿರಾರು ರೈತರು: ಬಿಡದಿ ಸ್ಮಾರ್ಟ್‌ಸಿಟಿ ಯೋಜನೆಗೆ 9600 ಎಕರೆ ಭೂಮಿಯನ್ನು ಬಿಎಂಆರ್‌ಡಿಎ ಗುರುತಿಸಿದ್ದು, ಈ ಭೂಮಿಯನ್ನು ವಿಶೇಷ ಆರ್ಥಿಕವಲಯಕ್ಕೆ ಸೇರಿದ ಪ್ರದೇಶ(ರೆಡ್‌ಜೋನ್) ಎಂದು ಘೋಷಿಸಲಾಗಿದೆ.
12 ಕಂದಾಯ ಗ್ರಾಮಗಳಿಗೆ ಸೇರಿದ ಸಾವಿರಾರು ರೈತರ ಭೂಮಿ ಈಯೋಜನೆಗೆ ಒಳಪಟ್ಟಿದ್ದು, 17 ವರ್ಷಗಳಿಂದ ರೈತರ ಭೂಮಿಯನ್ನು ಇತ್ತ ಸ್ವಾಧೀನ ಪಡಿಸಿಕೊಳ್ಳಲೂ ಇಲ್ಲ, ಅತ್ತ ರೈತರು ಕೃಷಿ ಭೂಮಿಯ ಮೇಲೆ ಬೇರೆ ಚಟುವಟಿಕೆ ಮಾಡಲು ಅವಕಾಶವನ್ನೂ ಮಾಡಿಕೊಟ್ಟಿಲ್ಲ. ಇದರಿಂದಾಗಿ ರೆಡ್‌ಜೋನ್‌ನಲ್ಲಿರುವ ರೈತರ ಬದುಕು ಅತಂತ್ರ ಸ್ಥಿತಿಯಲ್ಲಿದೆ. ಯೋಜನೆಗೆ ಗುರುತಿಸಿ ರೆಡ್‌ಜೋನ್ ಎಂದು ಘೋಷಿಸಿರುವ ಭೂಮಿಯನ್ನು ರೈತರು ಮಾರಾಟ ಮಾಡುವುದಕ್ಕೆ, ವಾಣಿಜ್ಯ, ಕೈಗಾರಿಕೆ, ವಸತಿ ಇನ್ನಿತರ ಉದ್ದೇಶಕ್ಕೆ ಅನ್ಯಕ್ರಾಂತ ಮಾಡಿಸುವುದಕ್ಕೆ ಬಿಎಂಆರ್‌ಡಿಎ ನಿರ್ಬಂಧ ವಿಧಿಸಿ ಸ್ಥಳೀಯ ಸಂಸ್ಥೆಗಳು ಮತ್ತು ಪ್ರಾಧಿಕಾರಕ್ಕೆ ಆದೇಶ ಹೊರಡಿಸಿದೆ. ಇದರಿಂದಾಗಿ ರೈತರು ಈ ಭೂಮಿಯನ್ನು ಮಾರಾಟ ಮಾಡಲು ಸಾಧ್ಯವಾಗುತ್ತಿಲ್ಲ. ಅಡಮಾನವಿರಿಸಿ ಸಾಲ ಸೌಲಭ್ಯ ಪಡೆಯಲೂ ಸಾಧ್ಯವಿಲ್ಲದೆ ಸಂಕಷ್ಟಕ್ಕೆ ಸಿಲುಕಿದ್ದಾರೆ. ಸರ್ಕಾರ ಇನ್ನಾದರೂ ಗಮನ ಹರಿಸಿ ತ್ರಿಶಂಕು ಸ್ಥಿತಿಯಲ್ಲಿರುವ ಯೋಜನೆಗೆ ಮುಕ್ತಿ ಕಾಣಿಸಬೇಕಿದೆ.
ಟೌನ್‌ಶಿಪ್‌ಗೆ ಸೇರಿರುವ ಗ್ರಾಮಗಳು: ಭೈರಮಂಗಲ ಗ್ರಾಪಂ ಸಹರದ್ದಿನ ಕಂದಾಯ ಗ್ರಾಮಗಳಾದ ಭೈರಮಂಗಲ, ಕೋಡಿಹಳ್ಳಿ, ಬನ್ನಿಗಿರಿ, ಅಂಚೀಪುರ, ಮಂಡಲಹಳ್ಳಿ. ಕಂಚುಗಾರನಹಳ್ಳಿ ಗ್ರಾಪಂನ ಕಂಚುಗಾರನಹಳ್ಳಿ, ಕಾವಲ್, ಹೊಸೂರು, ಅರಳಾಳುಸಂದ್ರ, ಕೆಂಪಯ್ಯನ ಪಾಳ್ಯ, ಕೆ.ಜಿ.ಹೊಸಹಳ್ಳಿ ಹಾಗೂ ತಾಯಪ್ಪನದೊಡ್ಡಿ ಜೊತೆಗೆ 11 ಸಣ್ಣ ಗ್ರಾಮ ಗಳು ಒಳಪಡಲಿವೆ.
ಬಿಡದಿ ಮತ್ತು ಹಾರೋಹಳ್ಳಿ ಕೈಗಾರಿಕಾ ಪ್ರದೇಶದ ನಡುವೆ ಕೇವಲ 1 ಕಿ.ಮೀ ಅಂತರ ಹಾಗೂ ಬೆಂಗಳೂರು ದಕ್ಷಿಣ ತಾಲೂಕಿಗೆ ಹೊಂದಿಕೊಂಡಂತೆ 9600 ಎಕರೆ ಭೂಪ್ರದೇಶವನ್ನು ಉಪನಗರ ನಿರ್ಮಾಣಕ್ಕೆ ಗುರುತಿಸಲಾಗಿದೆ.
ಇಷ್ಟು ವರ್ಷಗಳಿಂದ ಈ ಯೋಜನೆ ಯಾಕೆ ಅನುಷ್ಠಾನವಾಗಿಲ್ಲ ಎಂಬ ಬಗ್ಗೆ ಅಧಿಕಾರಿಗಳಿಂದ ಮಾಹಿತಿ ಪಡೆಯುತ್ತೇನೆ. ಮುಂದಿನ ಕೆಡಿಪಿ ಸಭೆಯಲ್ಲಿ ಈ ಸಂಬಂಧ ಚರ್ಚೆ ನಡೆಸಿ ಪರಿಹಾರ ಕಲ್ಪಿಸಲು ಪ್ರಯತ್ನಿಸಲಾಗುವುದು.
● ರಾಮಲಿಂಗಾರೆಡ್ಡಿ, ಜಿಲ್ಲಾ ಉಸ್ತುವಾರಿ ಸಚಿವರು.
ರಾಮನಗರ ಜಿಲ್ಲೆ. ಚುನಾವಣೆ ಸಮಯದಲ್ಲಿ ಈ ಭಾಗದ ಜನತೆಗೆ ನಾನು ಮಾತು ಕೊಟ್ಟಿದ್ದೇನೆ. ಟೌನ್‌ಶಿಫ್ ವ್ಯಾಪ್ತಿಯ ಭೂಪ್ರದೇಶವನ್ನು ಸರ್ವೆ ಮಾಡಿ ವರದಿ ನೀಡುವಂತೆ ಬಿಎಂಆರ್‌ಡಿಎ ಅಧಿಕಾರಿಗಳಿಗೆ ಸೂಚಿಸಿದ್ದು, ಕೆಲ ದಿನಗಳಲ್ಲಿ ಈ ಸಂಬಂಧ ಸ್ಪಷ್ಟ ಚಿತ್ರಣ ದೊರೆಯಲಿದೆ.
● ಎಚ್.ಸಿ.ಬಾಲಕೃಷ್ಣ, ಶಾಸಕ.
-ಸು.ನಾ.ನಂದಕುಮಾರ್