Advertisement

Olympics; 2036ರ ಒಲಿಂಪಿಕ್ಸ್‌ಗೆ ಬಿಡ್‌: ಭಾರತದಿಂದ ಐಒಸಿಗೆ ಅಧಿಕೃತ ಅರ್ಜಿ

09:58 PM Nov 05, 2024 | Team Udayavani |

ಹೊಸದಿಲ್ಲಿ: 2036ರ ಒಲಿಂ ಪಿಕ್ಸ್‌ ಕ್ರೀಡಾಕೂಟವನ್ನು ಭಾರತದಲ್ಲಿ ಆಯೋಜಿ ಸಲಾಗುವುದು ಎಂದು ಪ್ರಧಾನಿ ನರೇಂದ್ರ ಮೋದಿ ಹಲವು ಬಾರಿ ಹೇಳಿದ್ದರು. ಇದೀಗ ಭಾರತೀಯ ಒಲಿಂಪಿಕ್ಸ್‌ ಸಂಸ್ಥೆ (ಐಒಎ) ತನಗೆ ಕೂಟ ನಡೆಸಲು ಆಸಕ್ತಿಯಿದೆ ಎಂದು ಐಒಸಿಗೆ (ಅಂತಾರಾಷ್ಟ್ರೀಯ ಒಲಿಂಪಿಕ್ಸ್‌ ಸಂಸ್ಥೆ) ಅಧಿಕೃತ ಅರ್ಜಿ (ಲೆಟರ್‌ ಆಫ್ ಇಂಟೆಂಟ್‌) ಸಲ್ಲಿಸುವ ಮೂಲಕ ಮಹತ್ವದ ಹೆಜ್ಜೆಯಿಟ್ಟಿದೆ. ಅ. ಒಂದರಂದೇ ಅರ್ಜಿ ಸಲ್ಲಿಕೆಯಾಗಿದೆ ಎಂದು ಕೇಂದ್ರ ಕ್ರೀಡಾ ಸಚಿವಾಲಯದ ಮೂಲಗಳು ತಿಳಿಸಿವೆ. ಒಂದು ವೇಳೆ ಭಾರತಕ್ಕೆ ಆಯೋಜನೆಗೆ ಅನುಮತಿ ಸಿಕ್ಕಿದರೆ, ದೇಶದ ಕ್ರೀಡಾ ಇತಿಹಾಸದಲ್ಲೇ ದೊಡ್ಡ ಹೆಜ್ಜೆಯಿಟ್ಟಂತಾಗಲಿದೆ.

Advertisement

ಮುಂದಿನ ಹಂತವಾಗಿ ಐಒಸಿ ಭಾರತಕ್ಕೆ ಒಲಿಂಪಿಕ್ಸ್‌ ಆಯೋಜನೆಗೆ ಸೂಕ್ತ ಸೌಲಭ್ಯಗಳಿವೆಯೇ ಎಂದು ಪರಿಶೀಲಿಸಲಿದೆ. ಮುಂದಿನ ವರ್ಷ ಮಾರ್ಚ್‌ನಲ್ಲಿ ನಡೆಯುವ ಐಎಸಿ ಪದಾಧಿಕಾರಿಗಳ ಚುನಾವಣೆಯಲ್ಲಿ ಮತದಾನ ನಡೆದು, ಆತಿಥೇಯ ರಾಷ್ಟ್ರದ ಘೋಷಣೆಯಾಗುವ ಸಾಧ್ಯತೆಯಿದೆ.

ಸೌದಿ, ಕತಾರ್‌ಗಳಿಂದ ಸ್ಪರ್ಧೆ

ಭಾರತದ ಒಲಿಂಪಿಕ್ಸ್‌ ಆಯೋಜನೆಯ ಹಾದಿ ಸುಗಮವಿಲ್ಲ. ಶ್ರೀಮಂತ ತೈಲ ರಾಷ್ಟ್ರಗಳಾದ ಸೌದಿ ಅರೇಬಿಯ, ಕತಾರ್‌, ಟರ್ಕಿ ಕೂಡ ಈ ಕೂಟದ ಆತಿಥ್ಯಕ್ಕೆ ಉತ್ಸಾಹ ತೋರಿವೆ. ಇವುಗಳ ಸ್ಪರ್ಧೆಯನ್ನು ಮೀರಲು ಸಾಧ್ಯವಾದರೆ ಮಾತ್ರ ಭಾರತಕ್ಕೆ ಆತಿಥ್ಯ ಸಿಗಲಿದೆ. ಸೌದಿ ಅರೇಬಿಯ ಶ್ರೀಮಂತ ರಾಷ್ಟ್ರವಾಗಿದ್ದರೂ ಬೃಹತ್‌ ಕೂಟಗಳನ್ನು ಆಯೋಜಿಸಿದ ಅನುಭವವಿಲ್ಲ. ಅದು 2034ರಲ್ಲಿ ಏಷ್ಯನ್‌ ಗೇಮ್ಸ್‌ ಹಾಗೂ ಫ‌ುಟ್‌ಬಾಲ್‌ ವಿಶ್ವಕಪ್‌ ಆಯೋಜಿಸಲಿದೆ. ಕತಾರ್‌ 2022ರಲ್ಲಿ ಫ‌ುಟ್‌ಬಾಲ್‌ ವಿಶ್ವಕಪ್‌, 2006ರಲ್ಲಿ ಏಷ್ಯಾಡ್‌ ಆಯೋಜಿಸಿದೆ. ಟರ್ಕಿಗೂ ಮಹತ್ವದ ಕೂಟ ಆಯೋಜಿಸಿದ ಅನುಭವವಿಲ್ಲ.

ಭಾರತಕ್ಕೆ ಲಾಭಗಳೇನು?

Advertisement

ಒಲಿಂಪಿಕ್ಸ್‌ ಆಯೋಜನೆ ದೇಶಕ್ಕೆ ಒಲಿಯುವ ಒಂದು ಅದ್ಭುತ ಅವಕಾಶ. ಇದರಿಂದ ಬಹಳ ಲಾಭಗಳು ಸಿಗಲಿವೆ. ಆರ್ಥಿಕ ಪ್ರಗತಿ, ಸಾಮಾಜಿಕ ಪ್ರಗತಿ, ಯುವ ಕಲ್ಯಾಣಕ್ಕೆ ನೆರವಾಗಲಿದೆ ಎಂದು ಕ್ರೀಡಾ ಸಚಿವಾಲಯದ ಮೂಲಗಳು ಹೇಳಿವೆ.

ಅಹ್ಮದಾಬಾದ್‌ನಲ್ಲಿ ಕೂಟ?

ಗುಜರಾತ್‌ನ ಅಹ್ಮದಾಬಾದ್‌ನಲ್ಲಿ ಈಗಾಗಲೇ ವಿಶ್ವದ ಬೃಹತ್‌ ಕ್ರಿಕೆಟ್‌ ಮೈದಾನ ನಿರ್ಮಾಣವಾಗಿದೆ. ಒಂದು ಲಕ್ಷಕ್ಕೂ ಅಧಿಕ ಮಂದಿ ಇಲ್ಲಿ ಸೇರಬಹುದು. ಈ ಜಾಗದಲ್ಲೇ ಒಲಿಂಪಿಕ್ಸ್‌ ಆಯೋಜಿಸಲು ಕೇಂದ್ರ ಸರಕಾರ ಸಿದ್ಧತೆ ಮಾಡಿಕೊಳ್ಳಲಿದೆ ಎನ್ನಲಾಗಿದೆ.

ಏನೇನು ಅರ್ಹತೆ ಬೇಕು?

  1. ದೇಶದ ರಾಜಕೀಯ, ಸಾಮಾಜಿಕ-ಆರ್ಥಿಕ, ಮಾನವಾಭಿವೃದ್ಧಿಯಲ್ಲಿ ಸ್ಥಿರತೆ ಇರಬೇಕು. ಒಲಿಂಪಿಕ್ಸ್‌ ಆಯೋಜನೆಗೆ ಮಾಡುವ ಯೋಜನೆಗಳು ಪರಿಸರಕ್ಕೆ ಪೂರಕವಾಗಿರಬೇಕು.
  2. ದೂರದೃಷ್ಟಿಯಿರಬೇಕು, ಕೂಟದ ಆಯೋಜನೆ ಸ್ಥಳದ ಬಗ್ಗೆ ಪಕ್ಕಾ ಯೋಜನೆಯಿರಬೇಕು.
  3. ಒಲಿಂಪಿಕ್ಸ್‌ ಆಯೋಜನೆಗೆ ಜಾರಿ ಮಾಡುವ ಯೋಜನೆಗಳು, ಈಗಾಗಲೇ ಚಾಲ್ತಿಯಲ್ಲಿರುವ ದೀರ್ಘ‌ಕಾಲೀನ ಯೋಜನೆಗೆ ಪೂರಕವಾಗಿರಬೇಕು.
  4. ದೇಶದ ಸ್ಥಿರತೆ ಮತ್ತು ಪರಂಪರೆಗೆ ಸಂಬಂಧಿಸಿದ ಅಂಶಗಳನ್ನು ಪರಿಗಣಿಸಿರಬೇಕು.
  5. ರಾಜಕೀಯ ಮತ್ತು ಸಾರ್ವಜನಿಕರ ಬೆಂಬಲವಿರಬೇಕು.
  6. ಕೂಟದ ಆಯೋಜನೆಗೆ ಬೇಕಾಗುವ ಭಾರೀ ಮೊತ್ತ ಸಂಗ್ರಹಕ್ಕೆ ಸೂಕ್ತ ಮಾರ್ಗಗಳಿರಬೇಕು.
  7. ಬೃಹತ್‌ ಕೂಟಗಳನ್ನು ನಡೆಸಿರುವ ಅನುಭವವಿರಬೇಕು. ವಸತಿ, ಸಾರಿಗೆ ವ್ಯವಸ್ಥೆಗಳಿರಬೇಕು. ಸುರಕ್ಷತೆ, ಭದ್ರತೆಯಿರಬೇಕು.
Advertisement

Udayavani is now on Telegram. Click here to join our channel and stay updated with the latest news.

Next