ಮಹಾನಗರ: ಪರಿಸರ ಮತ್ತು ನೀರನ್ನು ಮುಂದಿನ ಪೀಳಿಗೆಗೆ ಉಳಿಸುವ ನಿಟ್ಟಿನಲ್ಲಿ ಜಾಗೃತಿ ಮೂಡಿಸುವ ದೃಷ್ಟಿಯಿಂದ ರಾಜಸ್ಥಾನದ ಯುವಕನೊಬ್ಬ ಸೈಕಲ್ ಯಾತ್ರೆ ಮುಖೇನ ದೇಶದುದ್ದ ಪರ್ಯಟನೆ ಮಾಡುತ್ತಿದ್ದಾರೆ. ಬುಧವಾರ ತಮಿಳುನಾಡು ಮುಖೇನ ಕರ್ನಾಟದ ಮಂಗಳೂರಿಗೆ ಆಗಮಿಸಿದ ಅವರ ಹೆಸರು ನರ್ಪತ್ ಸಿಂಗ್.
ನರ್ಪತ್ ಸಿಂಗ್ ಅವರು 2019ರ ಜ. 27ರಂದು ಜಮ್ಮು ವಿಮಾನ ನಿಲ್ದಾಣದಿಂದ ತನ್ನ ಸೈಕಲ್ ಅಭಿಯಾನ ಆರಂಭಿಸಿದರು. ದೇಶದುದ್ದ ಸುಮಾರು 24 ಸಾವಿರ ಕಿ.ಮೀ. ಸೈಕಲ್ ಯಾತ್ರೆ ಮಾಡುವ ಗುರಿಯನ್ನು ಇವರು ಹೊಂದಿದ್ದಾರೆ. ಹಿಮಾಚಲ ಪ್ರದೇಶ, ಉತ್ತರಾಖಂಡ, ಪಂಜಾಬ್, ಹರಿಯಾಣ, ಉತ್ತರ ಪ್ರದೇಶ, ರಾಜಸ್ಥಾನ, ಮಧ್ಯಪ್ರದೇಶ, ಗುಜರಾತ್, ಮಹಾರಾಷ್ಟ್ರ, ಗೋವಾ, ತಮಿಳುನಾಡುಗಳಲ್ಲಿ ಸಂಚರಿಸಿದ್ದು, ಇದೀಗ ಕರ್ನಾಟಕದ ಮಂಗಳೂರಿಗೆ ಆಗಮಿಸಿದ್ದಾರೆ. ಗುರುವಾರ ಕೇರಳ ರಾಜ್ಯಕ್ಕೆ ತೆರಳಲಿದ್ದಾರೆ.
ಸೈಕಲ್ ಮೂಲಕ ನಡೆಸುವ ಅಭಿಯಾನದ ಮೂಲಕ ದೇಶದ ಆಯಾ ಪ್ರದೇಶದ ಮಂದಿಗೆ ನೀರು, ಪರಿಸರ ಮತ್ತು ಆರೋಗ್ಯದ ಬಗ್ಗೆ ಅರಿವು ಮೂಡಿಸುತ್ತಾರೆ. ಅಲ್ಲದೆ, ಇವರು ಪ್ರತಿದಿನ ಅವರು ಹೋದ ಪ್ರದೇಶದಲ್ಲಿ ಎರಡು ಅಥವಾ ಮೂರು ಗಿಡಗಳು ಅಥವಾ ಗಿಡಗಳ ಬೀಜಗಳನ್ನು ನೆಡುತ್ತಾರೆ.
ನೀರಿನ ಸಂರಕ್ಷಣೆಯ ಬಗ್ಗೆ ಇವರಿಗೆ ಆಸಕ್ತಿ ಮೂಡಲು ಕಾರಣವಿದೆ. ಬಾಲ್ಯದಲ್ಲಿ ರಾಜಸ್ಥಾನದ ಬಾಲ್ಮರ್ ಜೈಸಲ್ಮೇರ್ ಜೋಧು³ರ ಪ್ರದೇಶದಲ್ಲಿ ಸಾಕಷ್ಟು ನೀರು ಇದ್ದುದನು ಇವರು ನೋಡಿದ್ದಾರಂತೆ. ಆದರೆ ಇತ್ತೀಚಿನ ದಿನಗಳಲ್ಲಿ ಆ ಪ್ರದೇಶ ಬರಗಾಲಕ್ಕೆ ತುತ್ತಾಗಿದ್ದು, ನೀರಿಗೋಸ್ಕರ ಕಿಲೋಮೀಟರ್‌ನಷ್ಟು ಅಲೆಯಬೇಕಾಗಿದೆ. ಇದನ್ನು ಅರಿತು, ಮುಂದಿನ ತಲೆಮಾರಿಗೆ ನೀರಿನ ಸಮಸ್ಯೆ ತಲೆದೋರಬಾರದು ಎಂದು ಅರಿವು ಮೂಡಿಸುವ ಪ್ರಯತ್ನ ಮಾಡುತ್ತಿದ್ದಾರೆ.