ಬೆಂಗಳೂರು: ಕೇಂದ್ರ ಸರ್ಕಾರ ನಿರಂತರ ಪೆಟ್ರೋಲ್ ಹಾಗೂ ಡೀಸೆಲ್ ಬೆಲೆ ಏರಿಕೆ ಖಂಡಿಸಿ ಜೂ.29 ರಂದು ರಾಜ್ಯ ಕಾಂಗ್ರೆಸ್ ವತಿಯಿಂದ ಸೈಕಲ್ ಸವಾರಿ ಮಾಡುವ ಮೂಲಕ ಪ್ರತಿಭಟನೆ ಮಾಡಲು ನಿರ್ಧರಿಸಲಾಗಿದೆ. ಕೆಪಿಸಿಸಿ ಅಧ್ಯಕ್ಷ ಡಿ.ಕೆ.ಶಿವಕುಮಾರ್ ನೇತೃತ್ವದಲ್ಲಿ ಶನಿವಾರ ನಡೆದ ಹಿರಿಯ ನಾಯಕರ ಸಭೆಯಲ್ಲಿ ಪ್ರಧಾನಿ ನರೇಂದ್ರ ಮೋದಿ ವಿರುದ್ಧ ಮುಂದಿನ ದಿನಗಳಲ್ಲಿ ತೀವ್ರತರ ಪ್ರತಿಭಟನೆ ಹಮ್ಮಿಕೊಳ್ಳಲು ಸಭೆಯಲ್ಲಿ ತೀರ್ಮಾನಿಸಲಾಯಿತು.
ರಾಜ್ಯ ಸರ್ಕಾರ ಜಾರಿಗೆ ತಂದಿರುವ ಭೂ ಸುಧಾರಣೆ ಕಾಯ್ದೆ, ಕೇಂದ್ರ ಸರ್ಕಾರ ಜಾರಿಗೆ ಮುಂದಾಗಿರುವ ಎಪಿಎಂಸಿ ತಿದ್ದುಪಡಿ ಕಾಯ್ದೆ ಹಾಗೂ ಕಾರ್ಮಿಕ ತಿದ್ದು ಪಡಿ ಕಾಯ್ದೆಗಳ ವಿರುದ್ಧ ಪ್ರಬಲ ವಿರೋಧ ವ್ಯಕ್ತಪಡಿಸಿ ಈ ಕಾಯ್ದೆಗಳು ಜಾರಿಯಾಗದಂತೆ ನೋಡಿಕೊಳ್ಳಲು ಸಭೆಯಲ್ಲಿ ನಿರ್ಧರಿಸಲಾಗಿದೆ ಎಂದು ತಿಳಿದು ಬಂದಿದೆ. ಪಕ್ಷದ ಹಿರಿಯ ನಾಯಕ ಮಲ್ಲಿಕಾರ್ಜುನ ಖರ್ಗೆ ಪಕ್ಷದ ರಾಷ್ಟ್ರೀಯ ನಾಯಕರ ವಿರುದ್ಧ ಬಿಜೆಪಿಯವರು ಆರೋಪ ಮಾಡಿದಾಗ ರಾಷ್ಟ್ರೀಯ ನಾಯಕರ ಸಮರ್ಥನೆಗೆ ಯಾರೂ ಮುಂದಾಗುವುದಿಲ್ಲ.
ಪ್ರಧಾನಿ ನರೇಂದ್ರ ಮೋದಿ ವಿರುದ್ಧ ಯಾರೂ ಮಾತನಾಡುವು ದಿಲ್ಲ. ಹೊಂದಾಣಿಕೆ ರಾಜಕಾರಣದಿಂದ ಕಾಂಗ್ರೆಸ್‌ಗೆ ಹಿನ್ನಡೆಯಾಗುತ್ತಿದೆ ಎಂದು ಅಸಮಾಧಾನ ವ್ಯಕ್ತಪಡಿಸಿದ್ದಾರೆಂದು ತಿಳಿದು ಬಂದಿದೆ. ಅವರ ಮಾತಿಗೆ ಧ್ವನಿಗೂಡಿಸಿದ ಕೆಪಿಸಿಸಿ ಅಧ್ಯಕ್ಷ ಡಿ.ಕೆ. ಶಿವಕುಮಾರ್, ರಾಜ್ಯದಲ್ಲಿ ಕೇಂದ್ರ-ರಾಜ್ಯ ಸರ್ಕಾರದ ವೈಫಲ್ಯಗಳ ವಿರುದ್ಧ ಉಗ್ರ ಹೋರಾಟ ಮಾಡಲಾಗುವುದು.ಯಾವುದೇ ರೀತಿಯ ಹೊಂದಾಣಿಕೆ ರಾಜಕಾರಣ ಮಾಡುವ ಪ್ರಶ್ನೆಯೇ ಇಲ್ಲ ಎಂದು ಸಭೆಯಲ್ಲಿ ಭರವಸೆ ನೀಡಿದ್ದಾರೆ ಎಂದು ತಿಳಿದು ಬಂದಿದೆ.
ಅಲ್ಲದೆ ಪ್ರತಿ ಜಿಲ್ಲೆಯಲ್ಲಿಯೂ ಮಾಜಿ ಸಚಿವರು ಪ್ರಧಾನಿ ಮೋದಿ ವಿರುದ್ಧ ಹೋರಾಟ ನಡೆಸುವ ಜವಾಬ್ದಾರಿ ವಹಿಸಿಕೊಳ್ಳಲು ಸೂಚಿಸುವುದಾಗಿ ಸಭೆಯಲ್ಲಿ ತಿಳಿಸಿದ್ದಾರೆಂದು ತಿಳಿದು ಬಂದಿದೆ. ಭೂ ಸುಧಾರಣೆ ಕಾಯ್ದೆ ತಿದ್ದುಪಡಿಗೆ ಅವಕಾಶ ನೀಡಬಾರದು ಎಂದು ಪ್ರತಿ ಪಕ್ಷದ ನಾಯಕ ಸಿದ್ದರಾಮಯ್ಯ ಹೇಳಿದ್ದಾರೆ ಎಂದು ತಿಳಿದು ಬಂದಿದೆ. ಈ ಕಾಯ್ದೆಯ ಮೂಲಕ ರಾಜ್ಯ ಸರ್ಕಾರ ಉದ್ಯಮಿಗಳ ಕೈಗೆ ಜಮೀನು ದೊರೆಯುವಂತೆ ಮಾಡಿ ರೈತರನ್ನು ಬೀದಿಗೆ ತಳ್ಳಿ ಅವರನ್ನೇ ಕಾರ್ಮಿಕರನ್ನಾಗಿ ಮಾಡುವ ಹುನ್ನಾರ ಅಡಗಿದೆ. ಹೀಗಾಗಿ ಈ ಕಾಯ್ದೆ ತಿದ್ದುಪಡಿಗೆ ಅವಕಾಶ ಕಲ್ಪಿಸಬಾರದು ಎಂದು ಸಭೆಯಲ್ಲಿ ಹೇಳಿದ್ದಾರೆ ಎಂದು ತಿಳಿದು ಬಂದಿದೆ.
ಪ್ರಯಾಣಿಕರಿಗೆ ಕಾಂಗ್ರೆಸ್ ಪೆಟ್ರೊಲ್: ಕೇಂದ್ರ ಸರ್ಕಾರ ಪೆಟ್ರೋಲ್ ಹಾಗೂ ಡೀಸೆಲ್ ಬೆಲೆ ಏರಿಕೆಯನ್ನು ಸಾರ್ವಜನಿಕರ ಗಮನಕ್ಕೆ ತರಲು ಪ್ರತಿಭಟನೆ ದಿನ ಸಾರ್ವಜನಿಕರು ಪೆಟ್ರೋಲ್ ಹಾಗೂ ಡೀಸೆಲ್ ಹಾಕಿಸುವಾಗ ಪ್ರತಿ ಲೀಟರ್‌ಗೆ ಕಾಂಗ್ರೆಸ್ ನಿಂದ ಪರಿಹಾರ ರೂಪದಲ್ಲಿ ನೀಡಬೇಕು ಎಂದು ರಾಜ್ಯಸಭಾ ಸದಸ್ಯ ಜಿ.ಸಿ.ಚಂದ್ರಶೇಖರ್ ಸಲಹೆ ನೀಡಿದ್ದಾರೆ ಎಂದು ತಿಳಿದು ಬಂದಿದೆ. ಕೋವಿಡ್ 19, ಚೀನಾ ಗಡಿ ಗಲಾಟೆಯಲ್ಲಿ ಕೇಂದ್ರ ಸರ್ಕಾರ ಪೆಟ್ರೋಲ್ ಹಾಗೂ ಡೀಸೆಲ್ ಬೆಲೆ ಏರಿಕೆ ಮಾಡಿರುವ ಬಗ್ಗೆ ಸಾರ್ವಜನಿಕರಿಗೆ ಮನವರಿಕೆ ಮಾಡಿಕೊಡಬೇಕು ಎಂದು ಸಲಹೆ ನೀಡಿದ್ದಾರೆ ಎಂದು ತಿಳಿದು ಬಂದಿದೆ.
ಪೆಟ್ರೋಲ್ ದರ ಏರಿಕೆ ವಿರೋಧಿಸಿ ಕಾಂಗ್ರೆಸ್ ನಿಂದ ಸೋಮವಾರ ಸೈಕಲ್ ಚಳುವಳಿಗೆ ನಿರ್ಧಾರಿಸಿದ್ದೇವೆ. ನಾನು ಮತ್ತು ಸಿದ್ದರಾಮಯ್ಯ ಮನೆಯಿಂದ ಸೈಕಲ್ ನಲ್ಲಿ ಬರುತ್ತೇವೆ. ಸಾಕಷ್ಟು ಕಾರ್ಯಕರ್ತರು ಸೈಕಲ್ ನಲ್ಲಿ ಬಂದು ಪ್ರತಿಭಟನೆಯಲ್ಲಿ ಪಾಲ್ಗೊಳ್ಳಲಿದ್ದಾರೆ. ಎಲ್ಲ ಜಿಲ್ಲಾ ಕೇಂದ್ರಗಳಲ್ಲೂ ಪ್ರತಿಭಟನೆ ಮಾಡುತ್ತೇವೆ. ಕೋವಿಡ್ 19 ನಿರ್ವಹಣೆ ವೈಫಲ್ಯ, ಎಪಿಎಂಸಿ ಹಾಗೂ ಭೂ ಕಾಯ್ದೆ ತಿದ್ದುಪಡಿ ವಿರುದ್ಧವೂ ಹೋರಾಟ ರೂಪಿಸುತ್ತೇವೆ.
-ಡಿ.ಕೆ.ಶಿವಕುಮಾರ್, ಕೆಪಿಸಿಸಿ ಅಧ್ಯಕ್ಷ