ಲೋಕಾಪುರ: ಬಾಡಿಗೆ ಎತ್ತುಗಳನ್ನು ಪಡೆದು ಹಾಗೂ ಕೃಷಿ ಕೂಲಿ ಕಾರ್ಮಿಕರಿಗೆ ದಿನಗೂಲಿ ನೀಡಿ ಎಡೆ ಕುಂಟೆ ಹೊಡೆಯುವುದು ಬಡ ಹಾಗೂ ಸಣ್ಣ ರೈತರಿಗೆ ಕಷ್ಟಕರವಾಗಿತ್ತು, ಇಂತಹ ರೈತರ ಕಷ್ಟಗಳಿಗೆ ಸೈಕಲ್ ಎಡೆಕುಂಟಿ ಪರಿಹಾರವಾಗಿದೆ ಎಂದು ಲೋಕಾಪುರ ರೈತ ಸಂಪರ್ಕ ಅಧಿಕಾರಿ ಲಕ್ಷ್ಮೀ ತೇಲಿ ಹೇಳಿದರು.
ಕಿಲ್ಲಾ ಹೊಸಕೊಟಿ ಗ್ರಾಮದ ರೈತ ಇಸ್ಮಾಯಿಲ್ ಮುಜಾವರ ಹೊಲಕ್ಕೆ ಕ್ಷೇತ್ರ ಭೇಟಿ ನೀಡಿ ತೊಗರಿ ಬಿತ್ತನೆ ಹಾಗೂ ಹೆಸರು ಬೆಳೆಯಲ್ಲಿ ಸೈಕಲ್ ಎಡೆಕುಂಟಿ ಮೂಲಕ ಕಸ ತೆಗೆಯುವ ಯಂತ್ರ ವೀಕ್ಷಿಸಿ ಮಾತನಾಡಿದ ಅವರು, ಮುಂಗಾರು ಹಂಗಾಮಿನ ಕಳೆ ಮತ್ತು ಕಸ ತೆಗೆಯಲು ಕೂಲಿ ಕಾರ್ಮಿಕರಕೊರತೆ ಹಿನ್ನಲೆಯಲ್ಲಿ ರೈತರು ಸೈಕಲ್ ಗಾಲಿ ಎಡೆಕುಂಟಿಗೆ ಮೊರೆ ಹೋಗುತ್ತಿದ್ದಾರೆ. ಇದು ಸರಳ ಮತ್ತು ಸುಲಭ ವಿಧಾನವಾಗಿದೆ ಎಂದರು.
ಸರಿಯಾದ ಸಮಯಕ್ಕೆ ಹೊಲ ಗದ್ದೆಗಳಲ್ಲಿ ಕೂಲಿ ಆಳುಗಳು ಸಿಗುವುದಿಲ್ಲ. ಈ ಹಿನ್ನೆಲೆಯಲ್ಲಿ ಸರಕಾರ ನೂತನ ತಂತ್ರಜ್ಞಾನ ಬಳಸಿ ಸೈಕಲ್ ಎಡೆಕುಂಟಿಯನ್ನು ಹೊರತಂದಿದ್ದು, ಈ ಸೈಕಲ್ ಎಡೆಕುಂಟೆಗಳಿಗೆ ಹೆಚ್ಚಿನ ಬೇಡಿಕೆಗಳು ಬರುತ್ತಿವೆ. ಇದನ್ನು ಬಳಸಿ ಹೊಲದಲ್ಲಿ ಬೆಳಗಳ ನಡುವೆ ಇರುವ ಕಳೆಯನ್ನು ಕಸವನ್ನು ತೆಗೆಯಬಹುದು. ಈ ಸೈಕಲ್ ಕುಂಟೆ ಹಗುರವಾಗಿದ್ದು ಒಬ್ಬರೇ ಇದನ್ನು ನಿರ್ವಹಿಸಲು ಸಾಧ್ಯವಿದೆ. ಸರಳವಾಗಿ ಮತ್ತು ಸುಲಭವಾಗಿ ಕಳೆ ತೆಗೆಬಹುದಾಗಿದೆ ಎಂದರು.
ರೈತ ಮಾತನಾಡಿ ಇಸ್ಮಾಯಲ್ ಮುಜವಾರ ಮಾತನಾಡಿ, ಎತ್ತುಗಳನ್ನುಬಳಸಿ ಎಡೆಕುಂಟೆ ಹೊಡೆಯಲುಮೂರ್‍ನಾಲ್ಕು ಕೃಷಿ ಕೂಲಿಕಾರ್ಮಿಕರು ಬೇಕಾಗುತ್ತಿತ್ತು. ದುಬಾರಿ ವೆಚ್ಚ ಭರಿಸುವುದು ಅನಿವಾರ್ಯವಾಗಿತ್ತು. ಕೂಲಿ ದರ ಗಗನಕ್ಕೇರಿದೆ. ಮತ್ತೂಂದೆಡೆ ಕೃಷಿ ಚಟುವಟಿಕೆಗಳಿಗೆ ಕೂಲಿ ಕಾರ್ಮಿಕರನ್ನು ಹುಡುಕುವುದು ಹರಸಾಹಸವಾಗಿದೆ. ಬಾಡಿಗೆ ಎತ್ತುಗಳನ್ನು ಪಡೆದು ಕೃಷಿ ಕೂಲಿಕಾರ್ಮಿಕರಿಗೆ ದಿನಗೂಲಿ ನೀಡಿ ಎಡಕುಂಟೆ ಹೊಡೆಯುವುದು ಬಡ ಮತ್ತು ಸಣ್ಣ ರೈತರಿಗೆ ಕಷ್ಟಕರವಾಗಿತ್ತು. ಇಂತಹ ರೈತರ ಕಷ್ಟಗಳಿಗೆ ಸೈಕಲ್ ಎಡಕುಂಟೆ ಪರಿಹಾರವಾಗಿದೆ. ಕೃಷಿ ಇಲಾಖೆಯಲ್ಲಿ ಸರಕಾರದಿಂದ ಹೆಚ್ಚಿನ ಸಂಖ್ಯೆಯಲ್ಲಿ ಎಡೆಕುಂಟೆ ಸೈಕಲ್ ವಿತರಿಸಬೇಕೆಂದು ಒತ್ತಾಯಿಸಿದರು.
ಕೃಷಿ ಇಲಾಖೆ ಸಿಬ್ಬಂದಿ ಪವಿತ್ರಾ ಹಂಪನ್ನವರ, ತೊಯಿದ್ ಮುಜಾವರ ಇತರರು ಇದ್ದರು.