Advertisement

ಲಾಸ್ಟ್‌ ಬೆಂಚಲ್ಲಿ ಬೀChi ಕುಂತವ್ರೆ…ಬುದ್ಧನ ಕೊನೆಯ ದಿನದ ರಹಸ್ಯ!

09:55 AM Jun 13, 2017 | Harsha Rao |

ಡಿವಿಜಿಯವರ, “ನಗುವುದು ಸಹಜ ಧರ್ಮ, ನಗಿಸುವುದು ಪರಧರ್ಮ’ ಎನ್ನುವ ಉಕ್ತಿಯಂತೆ ಲಾಸ್ಟ್‌ಬೆಂಚ್‌ ಹುಡುಗರದ್ದು ಎಲ್ಲರೂ ಮೆಚ್ಚುವ ಧರ್ಮ…

Advertisement

ಲಾಸ್ಟ್‌ ಬೆಂಚ್‌ ಹುಡುಗರು ಅಂದರೆ ಸಾಕು, ಅವರ ಬಗ್ಗೆ ಗುರುಗಳಿಗೆ ಒಂದು ರೀತಿಯ ಮೃದು ಧೋರಣೆ ಮನೆ ಮಾಡಿರುತ್ತೆ. ಕೆಲವು ಅಧ್ಯಾಪಕರಿಗೆ ಅಸಹನೆ ಮತ್ತು ಸಿಟ್ಟೂ ಇರುತ್ತದೆ. ತರಗತಿಯಲ್ಲಿ ನಗು ಎಂಬ ಔಷಧಿ ಲಾಸ್ಟ್‌ಬೆಂಚ್‌ ಹುಡುಗರ ಮಾತಿನ ಶೈಲಿಯಲ್ಲಿರುತ್ತೆ. ಇಂದು ಫ‌ಸ್ಟ್‌ ರ್‍ಯಾಂಕ್‌ ರಾಜುಗಳನ್ನೇ ಎಲ್ಲರೂ ಸನ್ಮಾನಿಸುವಂಥ ಸಂದರ್ಭದಲ್ಲಿ ನಾವು ಸ್ವಲ್ಪ ಸಾಹಿತಿ ಬೀಚಿಯವರ ನೆಚ್ಚಿನ ಶಿಷ್ಯ ಕೊನೆಯ ಬೆಂಚಿನ ಸಿದ್ಲಿಂಗನಂಥ ವಿದ್ಯಾರ್ಥಿಗಳನ್ನು ನೆನೆಯೋಣ.

ಪ್ರತಿ ತರಗತಿಯಲ್ಲೂ ಇಂಥ ಗುಂಡಂದಿರು ಇರುತ್ತಾರೆ. ಕೊನೆಯ ಬೆಂಚಿನಲ್ಲಿ ತಮ್ಮ ಪಾಡಿಗೆ ತಾವು ತಲೆ ತಗ್ಗಿಸಿಕೊಂಡು ವಸ್ತು ಸ್ಥಿತಿ ಯೋಚಿಸುವ ಈ ವಿದ್ಯಾರ್ಥಿಗಳೆಂದರೆ ಎಲ್ಲ ಗುರುಗಳಿಗೂ ಅಸಡ್ಡೆ. ಈ ಲಾಸ್ಟ್‌ಬೆಂಚ್‌ ಹುಡುಗರು ಕೂಡಾ ಅಷ್ಟೇ… “ನೀ ಯಾಕೋ ನಿನ ಹಂಗು ಯಾಕೋ? ಗದಗ ಗೈಡ್‌ ಒಂದೋದಿದರೆ ಸಾಕೋ!’ ಎನ್ನುವ ತಿರುಚಿದ ದಾಸವಾಣಿಯಂತೆ ಅತಿ ಆತ್ಮವಿಶ್ವಾಸದಲ್ಲಿ ಬೀಗುವ ವಿದೂಷಕರು. ಕೆಲವು ಸಂದರ್ಭದಲ್ಲಿ ಶಿಕ್ಷಕರ ಪ್ರಶ್ನೆಗಳಿಗೆ ಪೆದ್ದು ಉತ್ತರಗಳನ್ನು ಹೇಳಿ ಎಲ್ಲರನ್ನೂ ನಗೆಗಡಲಲ್ಲಿ ತೇಲುವಂತೆ ಮಾಡುವ ಈ ಜಾಣರು ಕೆಲವು ಉಪನ್ಯಾಸಕರ ಪಾಲಿಗೆ ವಿಲನ್‌ಗಳು.

ಒಂದಿನ ಹೀಗಾಯಿತು: ಇತಿಹಾಸ ತರಗತಿಯ ಉಪನ್ಯಾಸಕರು ಪಾಠ ಮುಗಿಸಿ ವಿದ್ಯಾರ್ಥಿಗಳತ್ತ ಪ್ರಶ್ನೆ ಎಸೆದರು- “ಬುದ್ಧ ತನ್ನ ಕೊನೆಯ ದಿನವನ್ನು ಎಲ್ಲಿ ಕಳೆದನು?’. ಕೊನೆಯ ಬೆಂಚಿನಿಂದ ಬಂದ ಅಶರೀರವಾಣಿ- “ಶಿವದೀಪ ಲಾಡ್ಜ್ನಲ್ಲಿ’ ಅಂದಿತು! ಈ ಉತ್ತರ ಕೇಳಿ ಉಪನ್ಯಾಸಕರು ಕಕ್ಕಾಬಿಕ್ಕಿಯಾದರು! ಆದರೆ, ಉಳಿದವರೆಲ್ಲಾ ಗೊಳ್ಳೆಂದು ನಕ್ಕರು. 
ಮತ್ತೂಂದು ದಿನ- ಕನ್ನಡ ತರಗತಿಯಲ್ಲಿ ಉಪನ್ಯಾಸಕರು ಕಾವ್ಯ ಬೋಧಿಸುತ್ತಾ ಹೇಳಿದರು- “ಹುಡುಗಿಯರನ್ನು ಸಾಕಷ್ಟು ರೀತಿಯಲ್ಲಿ ವರ್ಣಿಸಬಹುದು. ಆದರೆ, ಹುಡುಗರನ್ನು ಕುರಿತ ವರ್ಣನೆ ಕೇವಲ ಕೆಲವೊಂದು ಪದಗಳಿಗೆ ಮಾತ್ರ ಸೀಮಿತ. ಉದಾಹರಣೆಗೆ, ಇವನೇನು ಇಂದ್ರನೋ, ಚಂದ್ರನೋ, ಮನ್ಮಥನೋ?’ ಎಂದರು. ಮರುಕ್ಷಣವೇ ಹಿಂದಿನಿಂದ “ಯಾರೋ- ಇವನ್ಯಾರು ಉಪೇಂದ್ರನೋ? ಇಲ್ಲಾ ಸಾಧು ಕೋಕಿಲನೋ?’ ಅಂದೇಬಿಟ್ಟ! ಈ ಮಾತಿಗೆ ವಿದ್ಯಾರ್ಥಿಗಳು ಮಾತ್ರವಲ್ಲ, ಉಪನ್ಯಾಸಕರೂ ನಕ್ಕರು! 

ಒಂದು ಮಾತನ್ನು ಹೇಳಲೇಬೇಕು. ಡಿವಿಜಿಯವರ, “ನಗುವುದು ಸಹಜ ಧರ್ಮ, ನಗಿಸುವುದು ಪರಧರ್ಮ’ ಎನ್ನುವ ಉಕ್ತಿಯಂತೆ ಲಾಸ್ಟ್‌ಬೆಂಚ್‌ ಹುಡುಗರದ್ದು ಎಲ್ಲರೂ ಮೆಚ್ಚುವ ಧರ್ಮ. ಫ‌ಲಿತಾಂಶದಲ್ಲಿ ರ್‍ಯಾಂಕ್‌ ಗಳಿಸಿದವರು ಮುಂದಿನ ಬೆಂಚಿನವರೇ ಇರಬಹುದು. ಮುಂದೊಂದು ದಿನ ಅವರು ನೆನಪಿನಿಂದ ಮರೆಯಾಗುತ್ತಾರೆ. ಆದರೆ ಹಿಂದಿನ ಬೆಂಚ್‌ನವರು ಯಾವ ಕಾಲಕ್ಕೂ ನೆನಪಲ್ಲುಳಿಯುತ್ತಾರೆ. ಸದಾ ನಗುಮುಖದಿಂದಲೇ ಜನರನ್ನು ಗೆಲ್ಲುತ್ತಾರೆ.. ಬದುಕು ಎಂಬ ಪರೀಕ್ಷೆಯಲ್ಲಿ ಅವರು ಯಶಸ್ವಿಯಾಗುತ್ತಾರೆ. 

Advertisement

 -ಪ್ರದೀಪ ಎಂ. ಬಿ., ಕೂಡ್ಲಿಗಿ

Advertisement

Udayavani is now on Telegram. Click here to join our channel and stay updated with the latest news.

Next