Advertisement

ಕೋಟೆ ನಾಡಲ್ಲಿ ಝಳಪಿಸಿದ “ಬಿಚ್ಚುಗತ್ತಿ’

09:07 AM Mar 01, 2020 | Lakshmi GovindaRaj |

“ಈ ದುರ್ಗದ ಜನರ ಮುಂದೆ ಎಚ್ಚರಿಸುತ್ತಿದ್ದೇನೆ… ಕೊನೆಯ ಕ್ಷಣದವರೆಗೂ ನಿನ್ನ ವಿರುದ್ಧ, ಈ ಚಿತ್ರದುರ್ಗ ಜನರ ಪರ ಹೋರಾಡುತ್ತೇನೆ…’ ತೆರೆಯ ಮೇಲೆ ಭರಮಣ್ಣ ನಾಯಕ ತನ್ನ ಎದುರಾಳಿ ದಳವಾಯಿ ಮುದ್ದಣ್ಣನ ಮುಂದೆ ರೋಷಾವೇಶದಲ್ಲಿ ಈ ಡೈಲಾಗ್‌ ಹೇಳುತ್ತಿದ್ದರೆ, ಅತ್ತ ಕೇಕೆ, ಶಿಳ್ಳೆ, ಚಪ್ಪಾಳೆಗಳದ್ದೇ ಸದ್ದು. ಚಿತ್ರದುರ್ಗದ ಮಣ್ಣಲ್ಲಿ ಹೂತು ಹೋದ ಇತಿಹಾಸವನ್ನು ರೋಚಕವಾಗಿ ಕಟ್ಟಿಕೊಟ್ಟಿರುವ “ಬಿಚ್ಚುಗತ್ತಿ’, ಕೋಟೆ ನಾಡಿನ ಪರಂಪರೆಯ ಘಮಲನ್ನು ಅಕ್ಷರಶಃ ಉಣಬಡಿಸಿದೆ. ಕಲ್ಲಿನ ಕೋಟೆ ಆಳಿದ ಪಾಳೇಗಾರರ ಅಬ್ಬರ, ಹೋರಾಟದ ಕಿಚ್ಚನ್ನು ಮೈನವಿರೇಳಿಸುವಂತೆ ತೆರೆದಿಡುವಲ್ಲಿ ಯಶಸ್ವಿ ಎನ್ನಬಹುದು.

Advertisement

ಐತಿಹಾಸಿಕ ಸಿನಿಮಾ ಕಟ್ಟಿಕೊಡುವುದು ಸುಲಭವಲ್ಲ. ಆದರೂ, ಶತಮಾನಗಳ ಹಿಂದಿನ ರೋಚಕ ಇತಿಹಾಸದ ಪ್ರತಿಯೊಂದು ಸಂಗತಿಯನ್ನೂ ಪರಿಣಾಮಕಾರಿಯಾಗಿ ಬಿಂಬಿಸಿರುವುದನ್ನು ಮೆಚ್ಚಲೇಬೇಕು. ಇಂತಹ ಐತಿಹಾಸಿಕ ಚಿತ್ರಗಳಿಗೆ ಚಿತ್ರಕಥೆಯೇ ಬೆನ್ನೆಲುಬು. ಸಂಭಾಷಣೆಯೇ ಜೀವಾಳ. ಅದಕ್ಕಿಲ್ಲಿ ಯಾವ ಕೊರತೆಯೂ ಇಲ್ಲ. ಹಾಗಾಗಿ ಭರಮಣ್ಣನ ಝಳಪಳಿಸುವ ಕತ್ತಿಯ ಹೊಳಪಿನ ಬಗ್ಗೆ ದುರ್ಗದ ಪ್ರತಿ ಕಲ್ಲು ಬಂಡೆಯೂ ಮಾತಾಡುವಂತೆ ಕಟ್ಟಿಕೊಟ್ಟಿರುವುದು ನಿರ್ದೇಶಕರ ಶ್ರಮ ಎದ್ದು ಕಾಣುತ್ತೆ. ಚಿತ್ರ ಇಷ್ಟವಾಗೋದೇ, ಪ್ರತಿ ಪಾತ್ರಗಳ ಗತ್ತಿನ ಮಾತುಗಳಿಂದ. ಆ ಕಾಲದ ವೈಭವದಿಂದ.

ದುರ್ಗದ ಪ್ರತಿ ಕಲ್ಲಿನ ಮೇಲೂ ಪಾಳೇಗಾರರ ಹೋರಾಟದ ಹೆಜ್ಜೆ ಗುರುತನ್ನು ಅಷ್ಟೇ ಅದ್ಭುತವಾಗಿ ಕಟ್ಟಿಕೊಟ್ಟಿರುವ ಚಿತ್ರತಂಡದ ಶ್ರಮ ಎದ್ದು ಕಾಣುತ್ತದೆ. ಇತಿಹಾಸವುಳ್ಳ ಚಿತ್ರದುರ್ಗದ “ರಾಜ ಬಿಚ್ಚುಗತ್ತಿ ಭರಮಣ್ಣ ನಾಯಕ’ ಡಾ.ಬಿ.ಎಲ್‌.ವೇಣು ಅವರ ಕಾದಂಬರಿ. ಅದನ್ನು ದೃಶ್ಯರೂಪಕ್ಕಿಳಿಸಿರುವ ಪರಿ ಬಗ್ಗೆ ಹೇಳುವುದಕ್ಕಿಂತ, ಒಮ್ಮೆ “ಬಿಚ್ಚುಗತ್ತಿ’ಯ ಆ ವೈಭವ ಮತ್ತು ಗತ್ತನ್ನು ನೋಡಿಬರುವುದೇ ಒಳಿತು. ಇಡೀ ಚಿತ್ರ ನೋಡುವಾಗ, ಶತಮಾನಗಳ ಹಿಂದಕ್ಕೆ ಹೋದಂತೆ ಭಾಸವಾಗುತ್ತೆ. ಕಲ್ಲಿನ ಕೋಟೆ, ಕೊತ್ತಲು, ಸೈನಿಕರು, ಕುದುರೆಗಳು, ಆಗಿನ ದಿರಿಸು, ಆಚಾರ-ವಿಚಾರ, ದೇಸಿ ಕಲೆ ಎಲ್ಲವೂ ಇತಿಹಾಸದ ಪುಟ ತೆರೆದಂತಿವೆ.

ಆದರೆ, ಕೆಲವು ದೃಶ್ಯಗಳಲ್ಲಿ ಒಂದೆರೆಡು ಪಾತ್ರಗಳ ಭಾಷೆಯ ಹಿಡಿತ ಸಡಿಲವಾಗಿದೆ. ಒಮ್ಮೊಮ್ಮೆ ಉತ್ತರ ಕರ್ನಾಟಕ ಭಾಷೆ ಕೇಳಿದರೆ, ಮಗದ್ದೊಮ್ಮೆ ಮಂಡ್ಯ ಭಾಷೆಯೂ ಕಿವಿಗಪ್ಪಳಿಸುತ್ತದೆ. ಆ ಕಡೆ ಕೊಂಚ ಗಮನಹರಿಸಬೇಕಿತ್ತೇನೋ ಎಂಬ ಪ್ರಶ್ನೆ ಮೂಡುತ್ತದೆ. ಮೊದಲರ್ಧ ದಳವಾಯಿ ಮುದ್ದಣ್ಣನ ಆರ್ಭಟವೇ ಹೆಚ್ಚಿದೆ. ಅದು ದ್ವಿತಿಯಾರ್ಧಕ್ಕೂ ಮುಂದುವರೆದಿದೆ ಅಂದರೆ ತಪ್ಪಿಲ್ಲ. ಸರಾಗವಾಗಿ ಸಾಗುವ ಕಥೆಯಲ್ಲಿ ಸಾಕಷ್ಟು ಕುತೂಹಲ ಅಂಶಗಳಿವೆಯಾದರೂ, ಇನ್ನಷ್ಟು ಪರಿಣಾಮಕಾರಿಯಾಗಿ ತೋರಿಸಲು ಸಾಧ್ಯವಿತ್ತು. ಚಿತ್ರದುರ್ಗದ ಕೋಟೆ ನೋಡದವರು ಅಲ್ಲಿನ ಪಾಳೇಗಾರರ ಇತಿಹಾಸ ಗೊತ್ತಿಲ್ಲದವರು “ಬಿಚ್ಚುಗತ್ತಿ’ ಮೂಲಕ ಎಲ್ಲವನ್ನೂ ಅರಿಯಬಹುದು.

ಇಂತಹ ಚಿತ್ರಗಳಿಗೆ ಕಲಾನಿರ್ದೇಶನ ಮುಖ್ಯವಾಗುತ್ತೆ. ಅರಮನೆ, ಮುದ್ದಣ್ಣನ ಮನೆ, ಸೆರೆವಾಸದ ಸೆಟ್ಟು, ಕೋಟೆ ನಾಡಿನ ಹಳ್ಳಿಗಳು ಹೀಗೆ ಎಲ್ಲವೂ ಕಣ್ಣರಳಿಸುವಂತಿವೆ. ಸಣ್ಣಪುಟ್ಟ ಎಡವಟ್ಟುಗಳಿದ್ದರೂ, ಅಂದಿನ ಕಾಲವನ್ನು ನೆನಪಿಸುವಂತಹ ಕೆಲಸವಾಗಿದೆ. ಇನ್ನು, ಗ್ರಾಫಿಕ್ಸ್‌ ಬಗ್ಗೆ ಹೇಳಲೇಬೇಕು. ಪರಭಾಷೆಯ ಚಿತ್ರಗಳ ಗ್ರಾಫಿಕ್ಸ್‌ ಬಗ್ಗೆ ಮಾತಾಡುವ ಜನರಿಗೆ “ಬಿಚ್ಚುಗತ್ತಿ’ ಉತ್ತರವಾಗಿದೆ. ಪಾಳೇಗಾರರು ತುಳಿದ ಮಣ್ಣಿನ ಕಥೆಯಲ್ಲೂ ಸೈ ಎನಿಸುವಂತಹ ಗ್ರಾಫಿಕ್ಸ್‌ ಕೆಲಸ ಆಕರ್ಷಿಸುತ್ತದೆ. ಮುಖ್ಯವಾಗಿ ಇಲ್ಲಿ ಭರಮಣ್ಣ ಮತ್ತು ಹುಲಿ ನಡುವಿನ ಕಾಳಗ ನಿಜವೇನೋ ಎಂಬಷ್ಟರ ಮಟ್ಟಿಗೆ ಮೂಡಿಬಂದಿದೆ.

Advertisement

ಕೋಟೆಯೊಳಗೆ ಕಾಣುವ ಅರಮನೆ ಕೂಡ ಆಕರ್ಷಿಸುತ್ತದೆ. ಇಲ್ಲಿ ಯುದ್ಧಗಳಿಲ್ಲ. ಆದರೆ, ಹೊಡೆದಾಟಗಳಿವೆ. ಕತ್ತಿ ವರಸೆಯ ಕಾದಾಟವಿದೆ. ಅವೆಲ್ಲವನ್ನೂ ಅಷ್ಟೇ ನೈಜಕ್ಕೆ ಹತ್ತಿರವಾಗಿ ರೂಪಿಸಲಾಗಿದೆ. ಕೆಲವು ಕಡೆ ಹೊಂದಾಣಿಕೆ ಮಾಡಿಕೊಂಡು ಕೆಲಸ ಮಾಡಿದಂತಿದೆ. ಕಂಟಿನ್ಯುಟಿ ಬಗ್ಗೆ ತಕ್ಕಮಟ್ಟಿಗೆ ಗಮನಹರಿಸಿಲ್ಲ ಎಂಬ ಸಣ್ಣ ದೂರು ಕೇಳುತ್ತದೆ. ಅದು ಬಿಟ್ಟರೆ ಚಿತ್ರದಲ್ಲಿ ಹೇಳಿಕೊಳ್ಳುವ ತಪ್ಪುಗಳಿಲ್ಲ. ಒಂದು ಐತಿಹಾಸಿಕ ಸಿನಿಮಾದಲ್ಲಿ ಏನೆಲ್ಲಾ ಇರಬೇಕು, ಹೇಗೆಲ್ಲಾ ತೋರಿಸಬೇಕೋ ಅದೆಲ್ಲವೂ “ಬಿಚ್ಚುಗತ್ತಿ’ಯಲ್ಲಿದೆ. ಇಲ್ಲಿ ಭರಮಣ್ಣ ನಾಯಕನ ಕಥೆ ಇದ್ದರೂ, ದಳವಾಯಿ ಮುದ್ದಣ್ಣನ ಕಾರುಬಾರು ಹೆಚ್ಚೆನಿಸುತ್ತದೆ.

ಚಿತ್ರವೇನೋ ಪರಿಣಾಮಕಾರಿ ಯಾಗಿದೆ. ಆದರೆ, ಹಿನ್ನೆಲೆ ಸಂಗೀತ ಇನ್ನಷ್ಟು ಪರಿಣಾಮ ಬೀರಬೇಕಿತ್ತು. ಇದು ಬಿಟ್ಟರೆ, ತೆರೆಮೇಲೆ ಭರಮಣ್ಣ ಮತ್ತು ದಳವಾಯಿ ಮುದ್ದಣನ ಕಾದಾಟ ರೋಚಕವಾಗಿದೆ. ಭರಮಣ್ಣ ನಾಯಕರಾಗಿ ನಟಿಸಿರುವ ರಾಜವರ್ಧನ್‌, ಒಳ್ಳೆಯ ಸ್ಕೋರ್‌ ಮಾಡಿದ್ದಾರೆ. ಪಾತ್ರಕ್ಕೆ ತಕ್ಕಂತಿರುವ ಬಾಡಿಲಾಂಗ್ವೇಜ್‌, ಹರಿಬಿಡುವ ಡೈಲಾಗ್‌, ಕತ್ತಿ ಹಿಡಿದು ಹೋರಾಡುವ ಗತ್ತು ಎಲ್ಲದರಲ್ಲೂ ಇಷ್ಟವಾಗುತ್ತಾರೆ. ಆ ಪಾತ್ರಕ್ಕಾಗಿ ಅವರು ಹಾಕಿದ ಶ್ರಮ ಎದ್ದು ಕಾಣುತ್ತದೆ. ಇನ್ನು, ದಳವಾಯಿ ಮುದ್ದಣ್ಣರಾಗಿ ಅಬ್ಬರಿಸಿರುವ “ಬಾಹುಬಲಿ’ ಪ್ರಭಾಕರ್‌ ಗಮನಸೆಳೆ ಯುತ್ತಾರೆ. ಆದರೆ ಡೈಲಾಗ್‌ ಡಿಲವರಿಯಲ್ಲಿ ಇಷ್ಟವಾಗಲ್ಲ.

ಅವರ ಪಾತ್ರಕ್ಕೆ ಅವರೇ ಡಬ್ಬಿಂಗ್‌ ಮಾಡಿದ್ದು ಮೈನಸ್‌. ಉಳಿದಂತೆ ಆ ಪಾತ್ರ ಕಟ್ಟಿಕೊಟ್ಟ ರೀತಿ ಮೆಚ್ಚಬೇಕು. ಸಿದ್ಧಾಂಬೆಯಾಗಿ ಹರಿಪ್ರಿಯಾ, ಇಷ್ಟವಾದರೆ, ಶ್ರೀನಿವಾಸ ಮೂರ್ತಿ, ರೇಖಾ, ಡಿಂಗ್ರಿನಾಗರಾಜ್‌ ಇತರರು ತಮ್ಮ ಪಾತ್ರಗಳ ಮೂಲಕ ಗಮನಸೆಳೆಯುತ್ತಾರೆ. ನಕುಲ್‌ ಅಭ್ಯಂಕರ್‌ ಸಂಗೀತದ ಹಾಡುಗಳು ಇನ್ನಷ್ಟು ರುಚಿಸಬೇಕಿತ್ತು. ಐತಿಹಾಸಿಕ ಚಿತ್ರವಾದ್ದರಿಂದ ಸೂರಜ್‌ ಹಿನ್ನೆಲೆ ಸಂಗೀತಕ್ಕಿನ್ನೂ ತಾಕತ್ತು ಬೇಕಿತ್ತು. ಬಿ.ಎಲ್‌.ವೇಣು ಅವರ ಸಂಭಾಷಣೆ ಕಿಚ್ಚೆಬ್ಬಿಸುವುದರ ಜೊತೆಗೆ ಚಿತ್ರದ ವೇಗ ಹೆಚ್ಚಿಸಿದೆ. ಗುರುಪ್ರಶಾಂತ್‌ ರೈ ಛಾಯಾಗ್ರಹಣದಲ್ಲಿ ಚಿತ್ರದುರ್ಗ ಕೋಟೆಯ ವೈಭವ ತುಂಬಿದೆ.

ದಳವಾಯಿ ದಂಗೆ ಬಗ್ಗೆ ತಿಳಿಯದವರು, ಭರಮಣ್ಣನ ತಾಕತ್ತು ಅರಿಯದವರು “ಬಿಚ್ಚುಗತ್ತಿ’ಯೊಳಗಿನ ಹೊಳಪನ್ನು ಸವಿಯಬಹುದು.

ಚಿತ್ರ: ಬಿಚ್ಚುಗತ್ತಿ
ನಿರ್ಮಾಣ: ಓಂ ಸಾಯಿಕೃಷ್ಣ ಪ್ರೊಡಕ್ಷನ್ಸ್‌
ನಿರ್ದೇಶನ: ಹರಿ ಸಂತೋಷ್‌
ತಾರಾಗಣ: ರಾಜವರ್ಧನ್‌, ಹರಿಪ್ರಿಯಾ, ಪ್ರಭಾಕರ್‌, ಶ್ರೀನಿವಾಸಮೂರ್ತಿ, ಶರತ್‌ ಲೋಹಿತಾಶ್ವ, ರೇಖಾ, ಡಿಂಗ್ರಿ ನಾಗರಾಜ್‌ ಇತರರು.

* ವಿಜಯ್‌ ಭರಮಸಾಗರ

Advertisement

Udayavani is now on Telegram. Click here to join our channel and stay updated with the latest news.

Next