ನವದೆಹಲಿ: ಭಾರತೀಯ ರಿಸರ್ವ್ ಬ್ಯಾಂಕ್ ಮತ್ತೆ ರೆಪೋ ದರವನ್ನು ಹೆಚ್ಚಳ ಮಾಡಿರುವುದಾಗಿ ಆರ್ ಬಿಐ ಗವರ್ನರ್ ಶಕ್ತಿಕಾಂತ್ ದಾಸ್ ನೇತೃತ್ವದ ಹಣಕಾಸು ನೀತಿ ಸಮಿತಿ ಬುಧವಾರ (ಡಿಸೆಂಬರ್ 07) ತಿಳಿಸಿದ್ದು, ಈ ಬಾರಿ ಶೇ.0.35 ಬೇಸಿಸ್ ಪಾಯಿಂಟ್ಸ್ ಹೆಚ್ಚಳ ಮಾಡಿದೆ. ಇದರೊಂದಿಗೆ ವಾಹನ, ಗೃಹ ಸಾಲದ ಮೇಲಿನ ಬಡ್ಡಿದರ ಇನ್ನಷ್ಟು ಹೆಚ್ಚಳವಾದಂತಾಗಿದೆ.
ಇದನ್ನೂ ಓದಿ:ನನಗೆ ಯಾವುದೇ ಚಟವಿಲ್ಲ,ಚಟವಿರುವುದು ಗಂಡನಿಗೆ: ಲುಡೋ ಆಟದಲ್ಲಿ ತನ್ನನು ತಾನೇ ಪಣಕ್ಕಿಟ್ಟ ಮಹಿಳೆ ಯೂಟರ್ನ್
ಹಣದುಬ್ಬರವನ್ನು ನಿಯಂತ್ರಿಸುವ ನಿಟ್ಟಿನಲ್ಲಿ ರಿಸರ್ವ್ ಬ್ಯಾಂಕ್ ರೆಪೋ ದರ ಹೆಚ್ಚಳಕ್ಕೆ ಮುಂದಾಗಿದ್ದು, ಪ್ರಸಕ್ತ ಸಾಲಿನಲ್ಲಿ ಮೂರನೇ ಬಾರಿ ರೆಪೋ ದರ ಹೆಚ್ಚಳ ಮಾಡಿದಂತಾಗಿದೆ.
ಭಾರತೀಯ ರಿಸರ್ವ್ ಬ್ಯಾಂಕ್ ನ ಗವರ್ನರ್ ಶಕ್ತಿಕಾಂತ್ ದಾಸ್ ನೇತೃತ್ವದ ಆರು ಸದಸ್ಯರನ್ನೊಳಗೊಂಡ ಹಣಕಾಸು ನೀತಿ ಸಮಿತಿ ಮಂಗಳವಾರ ಸಭೆ ನಡೆಸಿ ದೈಮಾಸಿಕ ನೀತಿಯ ಕುರಿತು ಚರ್ಚೆ ನಡೆಸಿತ್ತು.
ದೇಶೀಯ ಚಿಲ್ಲರೆ ಹಣದುಬ್ಬರವನ್ನು ತಡೆಯುವ ನಿಟ್ಟಿನಲ್ಲಿ ಭಾರತೀಯ ರಿಸರ್ವ್ ಬ್ಯಾಂಕ್ ಮೇ ತಿಂಗಳಿನಿಂದ ಈವರೆಗೆ ಶೇ.1.90 ಬೇಸಿಸ್ ಪಾಯಿಂಟ್ಸ್ ಗಳಷ್ಟು ರೆಪೋ ದರವನ್ನು ಹೆಚ್ಚಳ ಮಾಡಿತ್ತು. ಇದರ ಪರಿಣಾಮ ಅಕ್ಟೋಬರ್ ನಲ್ಲಿ ಚಿಲ್ಲರೆ ಹಣದುಬ್ಬರ ಶೇ.6.77ಕ್ಕೆ ಇಳಿಕೆಯಾಗಿದ್ದು, ಸೆಪ್ಟೆಂಬರ್ ತಿಂಗಳಿನಲ್ಲಿ ಚಿಲ್ಲರೆ ಹಣದುಬ್ಬರ ಶೇ.7.41ರಷ್ಟಿತ್ತು.
ಡಿಸೆಂಬರ್ ನಲ್ಲಿ ಭಾರತೀಯ ರಿಸರ್ವ್ ಬ್ಯಾಂಕ್ ಶೇ.0.35 ಬೇಸಿಸ್ ಪಾಯಿಂಟ್ಸ್ ಗಳಷ್ಟು ರೆಪೋ ದರವನ್ನು ಹೆಚ್ಚಳ ಮಾಡುವ ಮೂಲಕ ಕಳೆದ 11 ತಿಂಗಳಲ್ಲಿಯೇ ಶೇ.2.25ರಷ್ಟು ಬಡ್ಡಿದರ ಹೆಚ್ಚಳ ಮಾಡಿದಂತಾಗಿದೆ.