Advertisement

ಕನ್ನಡಾಭಿಮಾನವನ್ನು ಬಿಂಬಿಸಿದ ಭುವನೇಶ್ವರಿಯ ಮೆರವಣಿಗೆ

10:33 PM Feb 28, 2020 | mahesh |

ಕಡಬ: ನೂತನ ಕಡಬ ತಾಲೂಕಿನ ಪ್ರಥಮ ಕನ್ನಡ ಸಾಹಿತ್ಯ ಸಮ್ಮೇಳನದ ಅಂಗವಾಗಿ ಶಾರದಾ ನಗರ (ಗೋಳಿತ್ತಡಿ) ಶ್ರೀ ಶಾರದಾ ಭಜನ ಮಂದಿರದ ಬಳಿಯಿಂದ ವಿಶ್ವೇಶ ನಗರದ ಶ್ರೀ ರಾಮಕುಂಜೇಶ್ವರ ಪದವಿ ಕಾಲೇಜಿನ ಅರ್ಬಿ ರಾಜಮ್ಮ ಮತ್ತು ಶ್ರೀನಿವಾಸ ಭಟ್ಟ ಸಮ್ಮೇಳನಾಂಗಣಕ್ಕೆ ಸಾಗಿ ಬಂದ ಕನ್ನಡ ಭುವನೇಶ್ವರಿಯ ಭವ್ಯ ಮೆರವಣಿಗೆ ನಾಡು, ನುಡಿ, ಸಂಸ್ಕೃತಿಯನ್ನು ಅನಾವರಣಗೊಳಿಸಿತು.

Advertisement

ತಾ.ಪಂ. ಸದಸ್ಯೆ ಜಯಂತಿ ಆರ್‌. ಗೌಡ ಮೆರವಣಿಗೆಗೆ ಚಾಲನೆ ನೀಡಿದರು. ಪುತ್ತೂರು ಮಾಸ್ಟರ್‌ ಪ್ಲಾನರಿಯ ಎಸ್‌.ಕೆ. ಆನಂದ್‌ ಅವರು ಕನ್ನಡ ಭುವನೇಶ್ವರಿಗೆ ಪುಷ್ಪಾರ್ಚನೆಗೈದರು. ಶ್ರೀ ರಾಮಕುಂಜೇಶ್ವರ ವಿದ್ಯಾವರ್ಧಕ ಸಭಾದ ಕಾರ್ಯದರ್ಶಿ ರಾಧಾಕೃಷ್ಣ ಕೆ.ಎಸ್‌. ಅವರು ದೀಪ ಪ್ರಜ್ವಲನೆ ಮಾಡಿದರು.

ಯಕ್ಷಗಾನದ ವೇಷಭೂಷಣಗಳು, ವಿವಿಧ ಶಾಲೆಗಳ ಸ್ಕೌಟ್‌, ಗೈಡ್‌ ತಂಡಗಳು, ಬಾಳಿಲ ಮುಪ್ಪೇರ್ಯದ ಶ್ರೀ ಮಹಾವಿಷ್ಣು ಸಿಂಗಾರಿ ಮೇಳದ ಆಕರ್ಷಕ ಚೆಂಡೆ ವಾದನ, ಬೊಂಬೆಗಳು ಮೆರವಣಿಗೆಗೆ ಮೆರುಗನ್ನು ನೀಡಿತ್ತು. ಪಂಜೆ, ಶಾಲು ಧರಿಸಿದ ವಿದ್ಯಾರ್ಥಿಗಳು ಹಾಗೂ ಸೀರೆ ಉಟ್ಟ ವಿದ್ಯಾರ್ಥಿನಿಯರು ತಮ್ಮ ಸಾಂಪ್ರದಾಯಿಕ ದಿರಸಿನಲ್ಲಿ ಮೆರವಣಿಗೆಯಲ್ಲಿ ಭಾಗವಹಿಸುವ ಮೂಲಕ ಗಮನ ಸೆಳೆದರು. ಸಮ್ಮೇಳನಾಧ್ಯಕ್ಷ ಟಿ. ನಾರಾಯಣ ಭಟ್‌ ಅವರನ್ನು ಅಲಂಕೃತ ತೆರೆದ ವಾಹನದಲ್ಲಿ ಮೆರವಣಿಗೆಯಲ್ಲಿ ಕರೆ ತರಲಾಯಿತು. ಮೆರವಣಿಗೆ ಸಾಗಿ ಬರುವ ಮಾರ್ಗವನ್ನು ಕನ್ನಡ ಬಾವುಟಗಳಿಂದ ಆಲಂಕರಿಸಲಾಗಿತ್ತು.

ಕಸಾಪ ದ.ಕ. ಜಿಲ್ಲಾಧ್ಯಕ್ಷ ಎಸ್‌. ಪ್ರದೀಪ್‌ಕುಮಾರ್‌ ಕಲ್ಕೂರ, ಕಡಬ ತಾಲೂಕು ಘಟಕದ ಅಧ್ಯಕ್ಷ ಜನಾರ್ದನ ಗೌಡ ಪಣೆಮಜಲು, ಪುತ್ತೂರು ತಾಲೂಕು ಘಟಕದ ಅಧ್ಯಕ್ಷ ಐತ್ತಪ್ಪ ನಾಯ್ಕ, ಸಮ್ಮೇಳನದ ಸ್ವಾಗತ ಸಮಿತಿಯ ಅಧ್ಯಕ್ಷ ಇ. ಕೃಷ್ಣಮೂರ್ತಿ ಕಲ್ಲೇರಿ,

ಸಂಚಾಲಕ ಪ್ರೊ| ವೇದವ್ಯಾಸ ರಾಮಕುಂಜ, ಕಾರ್ಯಾಧ್ಯಕ್ಷ ಎಂ. ಸತೀಶ್‌ ಭಟ್‌, ಕೋಶಾಧಿಕಾರಿ ಕೆ. ಸೇಸಪ್ಪ ರೈ, ಕಾರ್ಯದರ್ಶಿ ಗಣರಾಜ ಕುಂಬ್ಳೆ, ಸಹ ಸಂಚಾಲಕ ಡಾ| ಸಂಕೀರ್ತ್‌ ಹೆಬ್ಟಾರ್‌, ಡಾ| ಎಚ್‌.ಜಿ. ಶ್ರೀಧರ್‌, ಬಿ.ವಿ. ಅರ್ತಿಕಜೆ, ಪಿ.ಪಿ. ವರ್ಗೀಸ್‌, ಸರ್ವೋತ್ತಮ ಗೌಡ ಮತ್ತಿತರರು ಮೆರವಣಿಗೆಯಲ್ಲಿದ್ದರು.

Advertisement

ಧ್ವಜಾರೋಹಣ
ಸಮ್ಮೇಳನಾಂಗಣಕ್ಕೆ ಮೆರವಣಿಗೆ ತಲುಪಿದ ಬಳಿಕ ಕಸಾಪ ದ.ಕ. ಜಿಲ್ಲಾಧ್ಯಕ್ಷ ಎಸ್‌. ಪ್ರದೀಪ್‌ ಕುಮಾರ್‌ ಕಲ್ಕೂರ ಅವರು ಪರಿಷತ್‌ ಧ್ವಜಾರೋಹಣ ನೆರವೇರಿಸಿದರು. ಕಡಬ ತಾಲೂಕು ಘಟಕದ ಅಧ್ಯಕ್ಷ ಜನಾರ್ದನ ಗೌಡ ಪಣೆಮಜಲು ಅವರು ಸಮ್ಮೇಳನ ಧ್ವಜಾರೋಹಣ ನಡೆಸಿದರು. ಬೆಳಗ್ಗೆ ರಾಮಕುಂಜ ಗ್ರಾ.ಪಂ. ಅಧ್ಯಕ್ಷ ಪ್ರಶಾಂತ್‌ ಆರ್‌.ಕೆ. ರಾಷ್ಟ್ರ ಧ್ವಜಾರೋಹಣ ನೆರವೇರಿಸಿದ್ದರು.

ಜನರನ್ನಾಕರ್ಷಿಸಿದ ಪ್ರದರ್ಶನ ಮಳಿಗೆ
ಪುಸ್ತಕ ಮಳಿಗೆ ಹಾಗೂ ಮಾರಾಟ ಕೇಂದ್ರ, ಮಂಗಳೂರಿನ ಹೋಮ್‌ ಪ್ರಾಡಕ್ಟ್ ಮಳಿಗೆ, ಸಾವಯವ ತರಕಾರಿ ಬೀಜ ಹಾಗೂ ಕೃಷಿ ಮಳಿಗೆ, ವಿವೇಕ ಸಂಪದ ಮಳಿಗೆ, ಕೃಷಿ ಬಳಕೆಯ ಎಸ್‌ರ್‌ಕೆ ಲ್ಯಾಡರ್, ಕ್ಯಾಂಪ್ಕೋ ಸಂಸ್ಥೆಯ ಮಳಿಗೆಗಳು ಹೀಗೆ ಹತ್ತಾರು ಮಳಿಗೆಗಳು ಸಾಹಿತ್ಯಾಸಕ್ತರನ್ನು ಆಕರ್ಷಿಸಿತು. ಒಟ್ಟು 26 ಮಳಿಗೆ ಕೊಠಡಿಗಳಿದ್ದು, ಎಲ್ಲ ಕೊಠಡಿಗಳಿಗೆ ನಾಡಿನ ಪ್ರಸಿದ್ಧ ಕವಿ ಪುಂಗವರ ಹೆಸರಿಡಲಾಗಿತ್ತು.

ಕಲಾಪ್ರದರ್ಶನ, ವಿಜ್ಞಾನ ಪ್ರದರ್ಶನ, ಪ್ರಾಚ್ಯ ವಸ್ತು ಪ್ರದರ್ಶನಕ್ಕೆ ವ್ಯವಸ್ಥೆ ಮಾಡಲಾಗಿತ್ತು. ಶ್ರೀ ರಾಮಕುಂಜೇಶ್ವರ ವಿದ್ಯಾಸಂಸ್ಥೆಗಳ ಶಿಕ್ಷಕರು, ಉಪನ್ಯಾಸಕರ ನೇತೃತ್ವದಲ್ಲಿ ವಿದ್ಯಾರ್ಥಿಗಳು ವಿವಿಧ ವಿಭಾಗಗಳಲ್ಲಿ ಸ್ವಯಂಸೇವಕರಾಗಿ ಕಾರ್ಯನಿರ್ವಹಿಸಿದರು. ಕುಕ್ಕೆ ಶ್ರೀ ಸುಬ್ರಹ್ಮಣ್ಯ ದೇವಸ್ಥಾನದ ಸಹಕಾರದೊಂದಿಗೆ ಊಟ, ತಿಂಡಿ ವ್ಯವಸ್ಥೆಯನ್ನು ಅಚ್ಚುಕಟ್ಟಾಗಿ ವ್ಯವಸ್ಥೆಗೊಳಿಸಲಾಗಿತ್ತು. ಉದ್ಘಾಟನ ಸಮಾರಂಭದ ಬಳಿಕ ಶ್ರೀ ರಾಮಕುಂಜೇಶ್ವರ ಮಹಾವಿದ್ಯಾಲಯದ ವಿದ್ಯಾರ್ಥಿಗಳು “ದಾಶರಥಿ ದರ್ಶನ’ ಯಕ್ಷಗಾನ ಬಯಲಾಟವನ್ನು ಪ್ರದರ್ಶಿಸಿದರು.

ಇಂದು ವಿವಿಧ ಗೋಷ್ಠಿಗಳು
ಸಮ್ಮೇಳನದ 2ನೇ ಮತ್ತು ಕೊನೆಯ ದಿನವಾದ ಫೆ. 29 ರಂದು ಬೆಳಗ್ಗಿನಿಂದ ಸಂಜೆಯ ತನಕ ವಿವಿಧ ಗೋಷ್ಠಿಗಳು ಹಾಗೂ ಸಾಂಸ್ಕೃತಿಕ ಕಾರ್ಯಕ್ರಮಗಳು ಜರಗಲಿವೆ. ಸಮ್ಮೇನಾಧ್ಯಕ್ಷರೊಂದಿಗೆ ಸಂವಾದ, ಸಾಧಕರಿಗೆ ಸಮ್ಮಾನದ ಬಳಿಕ ಸಂಜೆ ನಡೆಯುವ ಸಮಾರೋಪ ಸಮಾರಂಭದಲ್ಲಿ ಅಂಕಣಕಾರ ಡಾ| ಚಂದ್ರಶೇಖರ ದಾಮ್ಲೆ ಸಮಾರೋಪ ಭಾಷಣ ಮಾಡಲಿದ್ದಾರೆ. ಸಮ್ಮೇಳನಾಧ್ಯಕ್ಷ ನಾರಾಯಣ ಭಟ್‌ ಅವರಿಂದ ನುಡಿ, ಉದ್ಯಮಿ ಬಲರಾಮ ಆಚಾರ್ಯರಿಂದ ದಾನಿಗಳಿಗೆ ಗೌರವಾರ್ಪಣೆ ನಡೆಯಲಿದೆ. ಸಮಾರೋಪ ಸಮಾರಂಭದ ಮುಗಿದ ಬಳಿಕ ಶ್ರೀ ರಾಮಕುಂಜೇಶ್ವರ ಮಹಾವಿದ್ಯಾಲಯದ ವಿದ್ಯಾರ್ಥಿಗಳಿಂದ ಸಾಂಸ್ಕೃತಿಕ ಕಾರ್ಯಕ್ರಮಗಳು ನಡೆದು ಸಮ್ಮೇಳನ ಸಮಾಪನಗೊಳ್ಳಲಿದೆ.

Advertisement

Udayavani is now on Telegram. Click here to join our channel and stay updated with the latest news.

Next