ಥಿಂಪು: ಭೂತಾನ್ ವಿದ್ಯಾರ್ಥಿಗಳು ಅದ್ಭುತ ಸಾಧನೆಗೈಯುವ ಸಾಮರ್ಥ್ಯ ಹೊಂದಿದ್ದಾರೆ. ಇದಕ್ಕೆ ಭಾರತ ಎಲ್ಲ ಬೆಂಬಲ ಹಾಗೂ ನೆರವನ್ನೂ ನೀಡುತ್ತದೆ ಎಂದು ಪ್ರಧಾನಿ ನರೇಂದ್ರ ಮೋದಿ ಭೂತಾನ್‌ನ ರಾಯಲ್ ವಿಶ್ವವಿದ್ಯಾಲಯದಲ್ಲಿ ಹೇಳಿದ್ದಾರೆ.
ಭೂತಾನ್ ಭೇಟಿಯ ಕೊನೆಯ ದಿನವಾದ ರವಿವಾರ ವಿದ್ಯಾರ್ಥಿಗಳನ್ನು ಉದ್ದೇಶಿಸಿ ಮಾತ ನಾಡಿದ ಅವರು, ಭೂತಾನ್‌ನ ಪ್ರತಿ ಭಾವಂತ ವಿದ್ಯಾರ್ಥಿಗಳು ಪರಿಶ್ರಮ ವಹಿಸಿ ಸಾಧನೆ ಮಾಡುವ ಸಾಧ್ಯತೆ ಹೊಂದಿದ್ದಾರೆ.
ಯುವಕರಿಗೆ ಈಗ ಹೆಚ್ಚಿನ ಅವಕಾಶಗಳಿವೆ. ನಿಮ್ಮ ಅಂತಹಸ್ಥೈರ್ಯದಿಂದ ಶ್ರಮಿಸಿ. ನಿಮ್ಮ ಜತೆಗೆ ಭಾರತದ 130 ಕೋಟಿ ಸ್ನೇಹಿತರಿದ್ದಾರೆ. ಇವರು ನಿಮ್ಮನ್ನು ಪ್ರೋತ್ಸಾಹಿಸುತ್ತಾರೆ ಎಂದು ಹೇಳಿದ್ದಾರೆ. ಭೂತಾನ್ ವಿಶ್ವವಿದ್ಯಾಲಯಗಳೊಂದಿಗೆ ನಮ್ಮ ವಿವಿಗಳು, ಸಂಶೋಧನೆ ವಿವಿಗಳು, ಲೈಬ್ರರಿಗಳು ಸುರಕ್ಷಿತ ಮತ್ತು ತ್ವರಿತ ಸಂಪರ್ಕ ಒದಗಿಸುತ್ತವೆ. ಈ ಮೂಲಕ ಜ್ಞಾನವರ್ಧನೆ ಇನ್ನಷ್ಟು ತ್ವರಿತವಾ ಗಲಿದೆ ಎಂದೂ ಹೇಳಿದರು. ಭೂತಾನ್ ಇಡೀ ಮನುಕುಲಕ್ಕೆ ಖುಷಿಯ ಸಂದೇಶವನ್ನು ನೀಡುತ್ತಿದೆ. ಜಗತ್ತಿನ ಯಾವುದೇ ದೇಶಕ್ಕೆ ತೆರಳಿ ಭೂತಾನ್ ಎಂದರೆ ನಿಮಗೆ ಯಾವುದು ನೆನಪಾಗುತ್ತದೆ ಎಂದು ಕೇಳಿದರೆ, ಅವರು ಭೂತಾನ್‌ನ ಒಟ್ಟು ರಾಷ್ಟ್ರೀಯ ಸಂತೃಪ್ತಿಯ ಸೂಚ್ಯಂಕ ಎಂದು ಹೇಳುತ್ತಾರೆ ಎಂದು ಮೋದಿ ಹೇಳಿದ್ದಾರೆ. ಭೂತಾನ್ ಮತ್ತು ಭಾರತದ ಮಧ್ಯೆ ನೈಸರ್ಗಿಕ ಸಂಬಂಧವಿದೆ. ಎರಡೂ ದೇಶಗಳ ಜನರ ಇತಿಹಾಸ, ಸಂಸ್ಕೃತಿ ಮತ್ತು ಧಾರ್ಮಿಕ ಸಂಪ್ರದಾಯಗಳು ಒಂದಕ್ಕೊಂದು ಬೆಸೆದು ಕೊಂಡಿವೆ. ಗೌತಮ ಬುದ್ಧನಾಗಿ ಸಿದ್ದಾರ್ಥ ಪರಿವರ್ತನೆಯಾಗಿ ಇಡೀ ಜಗತ್ತಿಗೆ ಬೌದ್ಧ ಧರ್ಮವನ್ನು ಸಾರಿದ ನೆಲ ನಮ್ಮದು. ಆ ಬುದ್ಧ ಹೊತ್ತಿಸಿದ ಕಿಡಿಯನ್ನು ಭೂತಾನ್‌ನಲ್ಲಿ ತಲೆ ತಲೆಮಾರುಗಳ ಗುರುಗಳು ಹಾಗೂ ಧಾರ್ಮಿಕ ನಾಯಕರು ಕಾಯ್ದುಕೊಂಡಿದ್ದಾರೆ ಎಂದು ಮೋದಿ ಹೇಳಿದ್ದಾರೆ.
ಹೃದಯಗಳ ಬೆಸುಗೆ: ಮೋದಿ ಭೇಟಿ ಅತ್ಯಂತ ಯಶಸ್ವಿಯಾಗಿದ್ದು, ಇದು ಕೇವಲ ಔಪಚಾರಿಕ ಭೇಟಿಯಷ್ಟೇ ಅಲ್ಲ, ಹೃದಯಗಳ ಮಿಲನವಾ ಗಿತ್ತು ಎಂದು ಭೂತಾನ್ ಪ್ರಧಾನಿ ಶೆರಿಂಗ್ ಹೇಳಿ ದ್ದಾರೆ. ಶಿಕ್ಷಕರು, ವಿದ್ಯಾರ್ಥಿಗಳಂತೂ ಪ್ರಧಾನಿ ಯನ್ನು ಸ್ವಾಗತಿಸಲು ಭಾರೀ ಸಂಖ್ಯೆಯಲ್ಲಿ ಆಗಮಿಸಿದ್ದರು. ಇಲ್ಲಿನ ದೇವರುಗಳಂತೂ 2 ದಿನ ಮಳೆ ತಡೆದು ಸಹಕರಿಸಿದ್ದಾರೆ ಎಂದಿದ್ದಾರೆ.
23ರಿಂದ ಯುಎಇ ಪ್ರವಾಸ: ಇದೇ 23ರಿಂದ ಪ್ರಧಾನಿ ಮೋದಿ 3 ದಿನಗಳ ಕಾಲ ಯುಎಇ ಮತ್ತು ಬಹರೈನ್ ಪ್ರವಾಸ ಕೈಗೊಳ್ಳಲಿದ್ದಾರೆ. ದ್ವಿಪಕ್ಷೀಯ, ಪ್ರಾದೇಶಿಕ ಮತ್ತು ಜಾಗತಿಕ ವಿಚಾರಗಳ ಕುರಿತು ಈ ವೇಳೆ ಚರ್ಚಿಸಲಿದ್ದಾರೆ.