ಥಿಂಪು: ಸಹಜ ಪ್ರಕೃತಿ ಸೌಂದರ್ಯ ದೇಶವಾಗಿರುವ ಭೂತಾನ್ ಭಾರತೀಯರ ನೆಚ್ಚಿನ ಪ್ರವಾಸಿ ತಾಣವಾಗಿದ್ದು, ದೇಶಕ್ಕೆ ಭೇಟಿ ನೀಡಲು ಭಾರತೀಯರು ಯಾವುದೇ ಶುಲ್ಕ ಪಾವತಿಸಬೇಕಾಗಿಲ್ಲವಾಗಿತ್ತು. ಆದರೆ ಇನ್ಮುಂದೆ ಭಾರತೀಯರಿಗೆ ಭೂತಾನ್ ಭೇಟಿಗೆ ಅಧಿಕ ಶುಲ್ಕ ಕೊಡಬೇಕಾಗಲಿದೆ!
ಭೂತಾನ್ ಸರ್ಕಾರ ಇದೀಗ ಪ್ರವಾಸಿಗರಿಗೆ ಹೊಸ ಯೋಜನೆಯನ್ನು ಜಾರಿಗೆ ತಂದಿದೆ. ಇದರೊಂದಿಗೆ ಭಾರತದ ಪ್ರವಾಸಿಗರಿಗೆ ಉಚಿತ ಪ್ರವೇಶ ಕೊನೆಗೊಂಡಂತಾಗಿದೆ. 2020ರ ಜುಲೈ ತಿಂಗಳಿನಿಂದ ಭೂತಾನ್ ಪ್ರವಾಸ ಕೈಗೊಳ್ಳಲು ಭಾರತೀಯ ಪ್ರವಾಸಿಗರು ದಿನಕ್ಕೆ 1,200 (ಒಬ್ಬರು) ರೂಪಾಯಿ ಪಾವತಿಸಬೇಕು ಎಂದು ಭೂತಾನ್ ಸರ್ಕಾರ ಘೋಷಿಸಿದೆ.
6ರಿಂದ 12 ವರ್ಷದೊಳಗಿನ ಮಕ್ಕಳಿಗೆ ದಿನಕ್ಕೆ 600 ರೂಪಾಯಿ ಪಾವತಿಸಬೇಕಾಗಲಿದೆ. ಇತ್ತೀಚೆಗೆ ಭೂತಾನ್ ಗೆ ಅತ್ಯಧಿಕ ಸಂಖ್ಯೆಯಲ್ಲಿ ಪ್ರವಾಸಿಗರು ಭೇಟಿ ನೀಡುತ್ತಿದ್ದ ಹಿನ್ನೆಲೆಯಲ್ಲಿ ಪ್ರವಾಸೋದ್ಯಮ ನೆರವಿಗಾಗಿ ಎಸ್ ಡಿಎಫ್ ಶುಲ್ಕವನ್ನು ಜಾರಿಗೆ ತಂದಿತ್ತು ಎಂದು ವರದಿ ತಿಳಿಸಿದೆ.
ಭೂತಾನ್ ಸರ್ಕಾರ ಜಾರಿಗೊಳಿಸಿರುವ ಎಸ್ ಡಿಎಫ್ ಶುಲ್ಕ ಯೋಜನೆ ಪ್ರಕಾರ ಭಾರತೀಯ ಪಾಸ್ ಪೋರ್ಟ್ ಹೊಂದಿರುವ ಪ್ರವಾಸಿಗರು ಇತರ ದೇಶದ ಪ್ರಜೆಗಳಿಗಿಂತ ಕಡಿಮೆ ಶುಲ್ಕ ಪಾವತಿಗೆ ಅನುಕೂಲ ಕಲ್ಪಿಸಿದೆ. ಬೇರೆ ದೇಶದ ಪ್ರವಾಸಿಗರು 65 ಅಮೆರಿಕನ್ ಡಾಲರ್ (ದಿನಕ್ಕೆ 4,631 ರೂ.) ಹಾಗೂ ವಾಸ್ತವ್ಯ (ಫ್ಲ್ಯಾಟ್ ಶುಲ್ಕ) ಶುಲ್ಕ 250 ಡಾಲರ್ (17,811 ರೂ.) ಪಾವತಿಸಬೇಕಾಗಲಿದೆ ಎಂದು ಹೇಳಿದೆ.
ಭೂತಾನ್ ಸರ್ಕಾರ ರಾಷ್ಟ್ರೀಯ ಅಸೆಂಬ್ಲಿಯಲ್ಲಿ ಭೂತಾನ್ ಪ್ರವಾಸೋದ್ಯಮ ತೆರಿಗೆ ಮತ್ತು ವಿನಾಯ್ತಿ ಮಸೂದೆ 2020 ಅನ್ನು ಅಂಗೀಕರಿಸಿತ್ತು ಎಂದು ವರದಿ ತಿಳಿಸಿದೆ.