ವಾರಾಣಸಿ/ಲಕ್ನೋ: ಬನಾರಸ್ ಹಿಂದೂ ವಿವಿ ಕ್ಯಾಂಪಸ್ ವಿದ್ಯಾರ್ಥಿನಿಗೆ ಲೈಂಗಿಕ ಕಿರುಕುಳ ನೀಡಿದ್ದನ್ನು ಖಂಡಿಸಿ ವಿದ್ಯಾರ್ಥಿಗಳು ಶನಿವಾರ ರಾತ್ರಿ ಪ್ರತಿಭಟನೆ ನಡೆಸುತ್ತಿದ್ದ ವೇಳೆ ಪೊಲೀಸರು ಲಾಠಿ ಪ್ರಹಾರ ನಡೆಸಿದ್ದಾರೆ.
ಇದರಿಂದಾಗಿ ಇಬ್ಬರು ಪತ್ರಕರ್ತರು, ಹಲವಾರು ಮಂದಿ ವಿದ್ಯಾರ್ಥಿ, ವಿದ್ಯಾರ್ಥಿನಿಯರಿಗೆ ಗಾಯಗಳಾಗಿವೆ. ಈ ಘಟನೆಯಿಂದಾಗಿ ವಿವಿ ಮತ್ತು ಜಿಲ್ಲಾಡಳಿತ ಅ.2ರ ವರೆಗೆ ವಿವಿ ವ್ಯಾಪ್ತಿಯ ಎಲ್ಲಾ ಕಾಲೇಜುಗಳಿಗೆ ರಜೆ ನೀಡಿದ್ದಾರೆ. ಒಟ್ಟಾರೆ ಬೆಳವಣಿಗೆಯ ಬಗ್ಗೆ ಸಮಗ್ರ ವರದಿ ನೀಡುವಂತೆ ಮುಖ್ಯಮಂತ್ರಿ ಯೋಗಿ ಆದಿತ್ಯನಾಥ್ ಸೂಚಿಸಿದ್ದಾರೆ. ಇದೇ ವೇಳೆ ಲಾಠಿ ಪ್ರಹಾರದ ವೇಳೆ ಕೆಲ ಪೊಲೀಸ್ ಅಧಿಕಾರಿ, ಸಿಬ್ಬಂದಿ ಫೋಟೋ, ವಿಡಿಯೋ ತೆಗೆದಿದ್ದಾರೆ ಎಂಬ ವಿಚಾರ ವಿವಾದಕ್ಕೆ ಕಾರಣವಾಗಿದೆ.
ಗುರುವಾರ ರಾತ್ರಿ ವಿದ್ಯಾರ್ಥಿನಿಗೆ ಲೈಂಗಿಕ ಕಿರುಕುಳ ನೀಡಲಾಗಿತ್ತು ಎಂದು ಆರೋಪಿಸಲಾಗಿದೆ. ಅದನ್ನು ಖಂಡಿಸಿ ಕೆಲ ವಿದ್ಯಾರ್ಥಿನಿಯರು ಶನಿವಾರ ರಾತ್ರಿ ಪ್ರತಿಭಟನೆ ನಡೆಸುತ್ತಿದ್ದರು. ಕುಲಪತಿಗಳ ನಿವಾಸಕ್ಕೆ ತೆರಳಿ ಅವರನ್ನು ಭೇಟಿಯಾಗಲು ಮುಂದಾದ ವೇಳೆ ಅವರನ್ನು ಕ್ಯಾಂಪಸ್‌ನ ಭದ್ರತಾ ಸಿಬ್ಬಂದಿ ತಡೆದರು.
ಈ ಹಂತದಲ್ಲಿ ಗುಂಪಿನಲ್ಲಿದ್ದ ಕೆಲವರು ಬಲವಂತವಾಗಿ ನಿವಾಸಕ್ಕೆ ಪ್ರವೇಶಿಸಲು ಯತ್ನಿಸಿದರು. ಇದೇ ಸಂದರ್ಭದಲ್ಲಿ ಗುಂಪಿನ ಜತೆ ಹೊರಗಿನಿಂದ ಬಂದ ಕಿಡಿಗೇಡಿಗಳು ಕಲ್ಲು ತೂರಾಟ ನಡೆಸಿದ್ದು ಪರಿಸ್ಥಿತಿ ಕೈಮೀರಲು ಕಾರಣವಾಯಿತು. ಈ ವೇಳೆ ಆಗಮಿಸಿದ್ದ ಪೊಲೀಸರು ಲಾಠಿ ಪ್ರಹಾರ ನಡೆಸಿದರು. ವಿದ್ಯಾರ್ಥಿಗಳ ಜತೆಗಿನ ಗುದ್ದಾಟದಲ್ಲಿ ಪೊಲೀಸರಿಗೂ ಗಾಯಗಳಾಗಿವೆ.
ಖಂಡನೆ: ವಿದ್ಯಾರ್ಥಿಗಳ ಮೇಲೆ ಪೊಲೀಸರು ಲಾಠಿ ಪ್ರಹಾರ ಮಾಡಿದ್ದಕ್ಕೆ ಕಾಂಗ್ರೆಸ್ ಉಪಾಧ್ಯಕ್ಷ ರಾಹುಲ್ ಗಾಂಧಿ, ಮಾಜಿ ಸಚಿವ ಶರದ್ ಯಾದವ್, ಎಸ್‌ಪಿ, ಬಿಎಸ್ಪಿ ಸೇರಿದಂತೆ ಹಲವರು ಖಂಡಿಸಿದ್ದಾರೆ.