ಕುಷ್ಟಗಿ: ಸ್ವಾಭಾವಿಕ ಕಲ್ಲು ಬಂಡೆ ಒಡೆದು ಜೀವನ ಸಾಗಿಸುವ ಭೋವಿ (ವಡ್ಡರ) ಕುಲ ಕಸುಬಾಗಿದೆ. ಸರ್ಕಾರ ಕಲ್ಲು ಒಡೆಯುವವರಿಗೆ ವಿನಾಕಾರಣ ತೊಂದರೆ ನೀಡುತ್ತಿದೆ ಎಂದು ಭೋವಿ ವಡ್ಡರ ಸಮಾಜದ ರಾಜ್ಯ ಉಪಾಧ್ಯಕ್ಷ ಸೂಚಪ್ಪ ಭೋವಿ ಹೇಳಿದರು.
ಕುಷ್ಟಗಿಯಲ್ಲಿ ಸುದ್ದಗೋಷ್ಠಿಯಲ್ಲಿ ಮಾತನಾಡಿದ ಅವರು, ಕಲ್ಲು ಒಡೆಯುವುದು ಭೋವಿ ಸಮಾಜದ ಮೂಲ ವೃತ್ತಿಯಾಗಿದ್ದು, ಮನೆ, ದೇವಸ್ಥಾನಗಳಿಗೆ ಸೈಜು ಕಲ್ಲು ಬಂಡೆ ಒಡೆದು ಜೀವನ ಕಂಡುಕೊಳ್ಳುತ್ತಿದ್ದ ಜನಾಂಗಕ್ಕೆ ಸರ್ಕಾರ ಅವೈಜ್ಞಾನಿಕ ಕಾನೂನು ಬಾಹಿರ ನಿಯಮ ನಿರ್ಬಂಧಗಳಿಂದ ತೊಂದರೆ ನೀಡುತ್ತಿದ್ದು, ಕುಲ ಕಸುಬು ಬಂದ್ ಮಾಡಿಸಲು ಮುಂದಾಗಿದೆ ಎಂದರು.
ಸರ್ಕಾರ ದೊಡ್ಡ ಕ್ರಶರ್ ಮಾಲೀಕರಿಗೆ ಮಣೆ ಹಾಕಿದ್ದು ಹೀಗಾಗಿ ಭೋವಿ ಕುಲಕಸುಬು ನಿರ್ಬಂಧಿಸುತ್ತಿದೆ. ಕಲ್ಲು ಬಂಡೆಗಳನ್ನು ಹಿಟಾಚಿ ಯಂತ್ರಗಳಿಂದ ಮಾಡದೇ ಕೈಯಿಂದ ಒಡೆದು ಜೀವನ ಸಾಗಿಸುವ ಈ ಜನಾಂಗಕ್ಕೆ ಬಿಜೆಪಿ ಸರ್ಕಾರದಿಂದ ಅನ್ಯಾಯವಾಗಿದೆ. ನಮ್ಮ ಜನಾಂಗದವರಿಗೆ ಮಂತ್ರಿ ಸ್ಥಾನ ನೀಡಿಲ್ಲ. ನಮ್ಮ ಸಮಾಜದ ನಿಗಮ ಮಂಡಳಿಗೆ ಅಧ್ಯಕ್ಷರನ್ನು ನೇಮಿಸಿಲ್ಲ. ಯಾವುದೇ ಅನುದಾನ ನೀಡುವುದಾಗಲಿ ಮಾಡಿಲ್ಲ. ಭೋವಿ ದೊಡ್ಡ ಜನಾಂಗವಾಗಿದ್ದು 2 ಸಾವಿರ ಕೋಟಿ ರೂ. ಅನುದಾನ ಬಿಡುಗಡೆ ಮಾಡಬೇಕು. ನ್ಯಾಯಮೂರ್ತಿ ಎ.ಜೆ.ಸದಾಶಿವ ಆಯೋಗ ವರದಿ ಜಾರಿಯಾಗದೇ ನಮ್ಮ ಸಮುದಾಯದ ಮೀಸಲಾತಿಗೆ ಅನುಗುಣವಾಗಿ ಹೆಚ್ಚಿಸಬೇಕು. ಭೋವಿ ಸಮಾಜದ ಮೇಲೆ ಹಾಕಿರುವ ಕೇಸುಗಳನ್ನು ಬೇಷರತ್ತಾಗಿ ವಾಪಸ್ಸು ಪಡೆಯಬೇಕು ಎಂದರು.ಇದೇ ಡಿ.27ರಂದು ಬೆಂಗಳೂರು ಚಲೋ ಹಮ್ಮಿಕೊಂಡಿದ್ದು ಸಿಎಂ ಬಸವರಾಜ ಬೊಮ್ಮಾಯಿ ಅವರ ಮನೆಯ ಮುಂದೆ ಧರಣಿ ನಡೆಸಲಿರುವುದಾಗಿ ತಿಳಿಸಿದರು.
ಗೌರವಾಧ್ಯಕ್ಷ ಯಂಕಪ್ಪ ಹಿರೇಮನಿ, ಬಸವರಾಜ ಮಹಾಸ್ವಾಮಿ, ನಾಗರಾಜ ಭೋವಿ, ಬಸವರಾಜ ಹೊಸಮನಿ ರಾಘವೇಂದ್ರ ಹಿರೇಮನಿ, ಗೋವಿಂದ ವಡ್ಡರ, ಮಂಜುನಾಥ , ಲಕ್ಣ್ಮಣ, ಮಾರುತಿ, ಮುಸಲೆಪ್ಪ, ರಮೇಶ ಶಿರಗುಪ್ಪಿ, ವಿಜಯ ಭೋವಿ, ಹನಮೇಶ ಭೋವಿ, ಸಂಗಪ್ಪ ಮಡಿಕೇರಿ ಇದ್ದರು.