ಚಿಂತಾಮಣಿ: ರಾಷ್ಟ್ರೀಯ, ನಾಡಹಬ್ಬಗಳು ಹಾಗೂ ದಲಿತರ ಕುಂದುಕೊರತೆಗಳ ಸಭೆಗಳಿಗೆ ಅಧಿಕಾರಿಗಳು ಬೋವಿ ಸಮುದಾಯದವರ ಕಡೆಗಣನೆ, ಹಲ್ಲೆ, ದೌರ್ಜನ್ಯ, ದಬ್ಟಾಳಿಕೆ ಹಾಗೂ ಕೊಲೆ ಪ್ರಕರಣಗಳು ಹೆಚ್ಚಾಗುತ್ತಿದ್ದು, ಸಮುದಾಯದ ಜನರಿಗೆ ಸೂಕ್ತ ರಕ್ಷಣೆ ನೀಡಬೇಕು ಎಂದು ಬೋವಿ ಮಹಾಸಭಾದ ಜಿಲ್ಲಾಧ್ಯಕ್ಷ ಎಂ.ಗುರ್ರಪ್ಪ ನೇತೃತ್ವದಲ್ಲಿ ಚಿಕ್ಕಬಳ್ಳಾಪುರ ಅಪರ ಜಿಲ್ಲಾಧಿಕಾರಿ ಆರತಿ ಅವರಿಗೆ ಮನವಿ ಪತ್ರ ಸಲ್ಲಿಸಿದರು.
ಜಿಲ್ಲಾಧ್ಯಕ್ಷ ಎಂ.ಗುರ್ರಪ್ಪ ಮಾತನಾಡಿ, ಕಳೆದ ಎರಡು ವರ್ಷಗಳಿಂದ ಜಿಲ್ಲಾ ಹಾಗೂ ತಾಲೂಕು ಮಟ್ಟದಲ್ಲಿ ನಡೆಯುವ ರಾಷ್ಟ್ರೀಯ ಹಾಗೂ ನಾಡಹಬ್ಬಗಳು ಮತ್ತು ದಲಿತರ ಕುಂದು ಕೊರತೆಗಳ ಸಭೆಗೆ ಬೋವಿ ಸಮುದಾಯವನ್ನು ಆಹ್ವಾನಿಸದೇ ಕಡಗಣನೆ ಮಾಡಲಾಗುತ್ತಿದೆ.
ತಾಲೂಕಿನಲ್ಲಿ ಸಮುದಾಯದವರ ಮೇಲೆ ಹಲ್ಲೆ, ದೌರ್ಜನ್ಯ, ಕೊಲೆ ಪ್ರಕರಣಗಳು ಹೆಚ್ಚಾಗುತ್ತಿದ್ದು, ಇತ್ತೀಚಿಗೆ ಹುಲುಗುಮ್ಮನಹಳ್ಳಿಯಲ್ಲಿ ಸಮುದಾಯದ ವ್ಯಕ್ತಿಯ ಕೊಲೆ, ಕೋಲಾರ ಜಿಲ್ಲೆಯ ಬೇತಮಂಗಲದಲ್ಲಿ ಜಾತಿ ನಿಂದನೆ, ಚಿಂತಾಮಣಿ ತಾಲೂಕು ನಾಗದೇನಹಳ್ಳಿಯ ಪ್ರಕರಣ, ಧನಮಿಟ್ಟೆನಹಳ್ಳಿ, ಅಕ್ಕಿಮಂಗಲ ಪ್ರಕರಣ ಸೇರಿದಂತೆ ಹಲವೆಡೆ ದೌರ್ಜನ್ಯ ನಡೆಸಲಾಗಿದೆ.
ಪರಿಶೀಲನೆ ಮಾಡಿ ಸೂಕ್ತ ನ್ಯಾಯ, ರಕ್ಷಣೆ ನೀಡಿ, ತಪ್ಪಿತಸ್ಥರ ವಿರುದ್ಧ ಕಾನೂನು ಕ್ರಮ ಕೈಗೊಳ್ಳುವಂತೆ ಮನವಿ ಸಲ್ಲಿಸಿದರು. ಅಲ್ಲದೇ ದಲಿತರ ಕುಂದು ಕೊರತೆಗಳ ಸಭೆಗೆ ಹಾಗೂ ರಾಷ್ಟ್ರೀಯ ಹಾಗೂ ನಾಡಹಬ್ಬಗಳಿಗೆ ಬೋವಿ ಸಮುದಾಯಕ್ಕೆ ಆಹ್ವಾನ ನೀಡುವಂತೆ ಮನವಿ ಮಾಡಿದರು.
ಮಾರ್ಚ್ 26 ರಂದು ಬೋವಿ ಸಮುದಾಯದ ಕುಲಗುರುಗಳಾದ ಚಿತ್ರದುರ್ಗದ ಇಮ್ಮಂಡಿ ಸಿದ್ದರಾಮೇಶ್ವರ ನಿರಂಜನ್ ಸ್ವಾಮೀಜಿ ರವರು ನೋಟಾ ಬಗ್ಗೆ ನೀಡಿರುವ ವರದಿಯ ಆಧಾರದ ಮೇಲೆ ಚುನಾವಣಾಧಿಕಾರಿಗಳು ಸ್ವಾಮೀಜಿರವರ ಮೇಲೆ ಹಾಕಿರುವ ಎಫ್ಐಆರ್ ರದ್ದುಪಡಿಸಬೇಕೆಂದು ಆಗ್ರಹಿಸಿದರು.
ಇಲ್ಲವಾದಲ್ಲಿ ಸಾಮಾಜಿಕ ನ್ಯಾಯಕ್ಕಾಗಿ ಬೀದಿಗಿಳಿದು ಹೋರಾಟ ಮಾಡುವುದಾಗಿ ಎಚ್ಚರಿಕೆ ನೀಡಿದರು. ಶಿಡ್ಲಘಟ್ಟ ಬೋವಿ ಮಹಾಸಭಾದ ತಾಲೂಕು ಅಧ್ಯಕ್ಷ ಶ್ರೀನಿವಾಸ್, ಗಂಗುಲಪ್ಪ, ನಾರಾಯಣಸ್ವಾಮಿ, ಚಂದ್ರಶೇಖರ್, ರಮೇಶ್, ಮಹೇಂದ್ರ, ಶ್ರೀರಾಮಪ್ಪ ಇದ್ದರು.