ಕೋಲಾರ: ರಾಜ್ಯದಲ್ಲಿ ಪ್ರಸ್ತುತ 4 ಮಂದಿ ಶಾಸಕರಿದ್ದರೂ ನೂತನ ಸಂಪುಟ ವಿಸ್ತರಣೆ ವೇಳೆ ಬೋವಿ ಸಮುದಾಯವನ್ನು ಕಡೆಗಣಿಸಿರುವುದಕ್ಕೆ ಮುಂದಿನ ದಿನಗಳಲ್ಲಿ ವಿಧಾನಸೌಧ ಮುತ್ತಿಗೆ ಹಾಕಿ ಪ್ರತಿಭಟಿಸಲಾಗುವುದು ಎಂದು ಸಮುದಾಯದ ಪರಿಷತ್‌ನ ರಾಷ್ಟ್ರೀಯ ಅಧ್ಯಕ್ಷ ರವಿಮಾಕಳಿ ಎಚ್ಚರಿಕೆ ನೀಡಿದರು.
ನಗರದ ಪತ್ರಕರ್ತರ ಭವನದಲ್ಲಿ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಬೋವಿ ಸಮುದಾಯದ ನಾಯಕರಾದ ಅರವಿಂದ ಲಿಂಬಾವಳಿ ಅವರನ್ನು ಉಪ ಮುಖ್ಯ ಮಂತ್ರಿ ಮಾಡುತ್ತೇನೆ ಎಂದು ಹೇಳಿ ಕೊನೆಗಳಿಗೆಯಲ್ಲಿ ಕೈಕೊಟ್ಟ ಬಿಜೆಪಿ ನಾಯಕರು ಬೋವಿ ಸಮುದಾಯಕ್ಕೆ ಅನ್ಯಾಯವೆಸಗಿದ್ದಾರೆ. ಆದ್ದರಿಂದ 2ಲಕ್ಷಕ್ಕೂ ಹೆಚ್ಚು ಸಮುದಾಯದ ಮುಖಂಡರು ಸೇರಿ ಬೃಹತ್ ಮಟ್ಟದಲ್ಲಿ ಹೋರಾಟ ನಡೆಸಲು ದಿನಾಂಕವನ್ನು ನಿಗದಿ ಪಡಿಸಲಾಗುತ್ತಿದೆ ಎಂದು ತಿಳಿಸಿದರು.
ಸಂಸದರ ವಿರುದ್ಧ ಕಿಡಿ: ಮಾಜಿ ಸಚಿವ ಅರವಿಂದ ಲಿಂಬಾವಳಿ ಮಾರ್ಗದರ್ಶನ ನೀಡಿದ ಸಲುವಾಗಿ ಕೋಲಾರ ಲೋಕಸಭಾ ಚುನಾವಣೆಯಲ್ಲಿ ಎಸ್.ಮುನಿಸ್ವಾಮಿ ಗೆಲ್ಲಿಸಲು ಜಿಲ್ಲೆಯ ಬೋವಿ ಸಮುದಾಯದವರು ಮತ ನೀಡಿದ್ದೇವೆ. ಸಂಸದರಾಗಿ ಆಯ್ಕೆಯಾದ ಮೇಲೆ ಸಮುದಾಯದವರ ಕುಂದು ಕೊರತೆ ನೀಗಿಸಲು ಸ್ಪಂದಿಸುತ್ತಿಲ್ಲ, ಸೌಜನ್ಯಕ್ಕಾದರೂ ನಮ್ಮ ಹಿರಿಯರು ಹಾಗೂ ಯುವಕರನ್ನು ಮಾತನಾಡಿಸುತ್ತಿಲ್ಲ ಎಂದು ದೂರಿದರು.
ಇದನ್ನೂ ಓದಿ:ಅಭಿಮಾನಿಗಳಿಂದ ನಾನು;ಅಭಿಮಾನಿಗಳಿಗಾಗಿ ನಾನು : ಸೆಲೆಬ್ರಿಟಿಗಳಿಗೆ ‘ಡಿ ಬಾಸ್’ ಧನ್ಯವಾದ
ಸಮುದಾಯಕ್ಕೆ ಬಿಜೆಪಿ ಮೋಸ: ಭಾರತೀಯ ಬೋವಿ ಸಮುದಾಯದ ಪರಿಷತ್‌ನ ರಾಜ್ಯಾಧ್ಯಕ್ಷ ಆನಂದಪ್ಪ ಮಾತನಾಡಿ, ಅಧಿಕಾರಕ್ಕಾಗಿ ಸಮುದಾಯವನ್ನು ಬಳಸಿಕೊಂಡ ಬಿಜೆಪಿ ನಾಯಕರು,ಮಂತ್ರಿ ಸ್ಥಾನ ಕೊಡುವ ವಿಚಾರದಲ್ಲಿ ಅನ್ಯಾಯ ಮಾಡಿದ್ದಾರೆ. ದೇಶದಲ್ಲಿ 9 ಕೋಟಿ ಬೋವಿ ಸಮುದಾಯ ಇದೆ. ಕಾಂಗ್ರೆಸ್ ಪಕ್ಷಕ್ಕೆ ಮತ ಬ್ಯಾಂಕ್ ಆಗಿದ್ದ ನಾವು, ರಾಷ್ಟ್ರ ಮತ್ತು ರಾಜ್ಯ ಮಟ್ಟದಲ್ಲಿ ತೀರ್ಮಾನಿಸಿ ಸಂಪೂರ್ಣ ಬಿಜೆಪಿಗೆ ಬೆಂಬಲ ನೀಡಿದ್ದರಿಂದ ಅಧಿಕಾರ ಪಡೆದಿದೆ. ಆದರೆ, ಬಿಜೆಪಿ ವರಿಷ್ಠರು ಬೋವಿ ಸಮುದಾಯಕ್ಕೆ ದ್ರೋಹ ಬಗೆದಿದ್ದಾರೆಂದು ಆರೋಪಿಸಿದರು.
ನಿಗಮಕ್ಕೆ ಅಧ್ಯಕ್ಷರ ನೇಮಿಸಿಲ್ಲ: ಮುಖಂಡ ಶ್ರೀಕೃಷ್ಣ ಮಾತನಾಡಿ, ಬೋವಿ ಅಭಿವೃದ್ಧಿ ನಿಗಮ ಸ್ಥಾಪಿಸಿ 4 ವರ್ಷವಾದರೂ ಅಧ್ಯಕ್ಷರನ್ನು ನೇಮಕ ಮಾಡಿಲ್ಲ, ನಯಾ ಪೈಸೆ ಅನುದಾನ ನೀಡಿಲ್ಲ. ಅಂಬೇಡ್ಕರ್ ನಿಗಮದಲ್ಲಿಯೇ ಇದ್ದಿದ್ದರೆ ನಮಗೆ ಅಲ್ಪ ಸ್ವಲ್ಪ ಪ್ರಮಾಣದಲ್ಲಿ ಯಾದರೂ ಅನುಕೂಲವಾ ಗುತ್ತಿತ್ತು. ಆ ನಿಗಮದಿಂದಲೂ ಕಿತ್ತು ನಮ್ಮನು ನಿರ್ಲಕ್ಷಿಸಿದ್ದಾರೆ ಎಂದು ದೂರಿದರು. ಈ ಸಂದರ್ಭದಲ್ಲಿ ಜಿಲ್ಲಾ ಪಂಚಾಯಿತಿ ಮಾಜಿ ಅಧ್ಯಕ್ಷೆ ಮಂಗಮ್ಮ ಮುನಿಸ್ವಾಮಿ, ಭಾರತೀಯ ಬೋವಿ ಸಮುದಾಯ ಪರಿಷತ್‌ನ ಉಪಾಧ್ಯಕ್ಷ ಮೋಹನ್‌ಕೃಷ್ಣ, ಸಂಘಟನಾ ಕಾರ್ಯದರ್ಶಿ ಚಲಪತಿ, ರಾಜ್ಯ ಕಾರ್ಯದರ್ಶಿ ಶ್ರೀಧರ್, ಸಮುದಾಯದ ಮುಖಂಡರಾದ ದಿಲೀಪ್, ಲೋಕೇಶ್ ಮತ್ತಿತರರು ಉಪಸ್ಥಿತರಿದ್ದರು.