ಭೋಪಾಲ್: ಮಾರಣಾಂತಿಕ ಕೋವಿಡ್ 19 ವೈರಸ್ ನಿಂದ ಸಾವನ್ನಪ್ಪಿದ್ದ ತಂದೆಯ ಅಂತ್ಯಕ್ರಿಯೆ ನಡೆಸಲು ಮಗ ನಿರಾಕರಿಸಿದ್ದರಿಂದ ಕೊನೆಗೆ ತಹಶೀಲ್ದಾರ್ ಸೋಂಕಿತನ ಅಂತ್ಯ ಸಂಸ್ಕಾರ ನೆರವೇರಿಸಿರುವ ಘಟನೆ ಮಧ್ಯಪ್ರದೇಶದ ಭೋಪಾಲ್ ನಲ್ಲಿ ನಡೆದಿದೆ.
ಮಾನವೀಯ ಸಂಬಂಧ ಹಾಗೂ ಸಂಬಂಧ ಹೇಗೆ ಕಡಿದುಹೋಗುತ್ತಿದೆ ಎಂಬುದಕ್ಕೆ ಈ ಘಟನೆ ಸಾಕ್ಷಿಯಾಗಿದೆ. ಕೋವಿಡ್ 19 ಸೋಂಕಿನಿಂದ ಸಾವನ್ನಪ್ಪಿದ್ದ ವ್ಯಕ್ತಿಯ ಶವವನ್ನು ಪಡೆಯಲು ಮಗ ಸೇರಿದಂತೆ ಇಡೀ ಕುಟುಂಬ ಸದಸ್ಯರು ನಿರಾಕರಿಸಿದ್ದರು ಎಂದು ವರದಿ ತಿಳಿಸಿದೆ.
ಏಪ್ರಿಲ್ ತಿಂಗಳಿನಲ್ಲಿ ಪಾರ್ಶ್ವವಾಯುಗೆ ತುತ್ತಾಗಿದ್ದ ಶುಜಾಲ್ ಪುರ್ ನಿವಾಸಿಯನ್ನು ಭೋಪಾಲ್ ನ ಖಾಸಗಿ ಆಸ್ಪತ್ರೆಗೆ ದಾಖಲಿಸಿದ್ದರು. ಏಪ್ರಿಲ್ 14ರಂದು ಈ ವ್ಯಕ್ತಿಗೆ ಕೋವಿಡ್ 19 ಸೋಂಕು ತಗುಲಿರುವುದು ವರದಿಯಲ್ಲಿ ಕಂಡುಬಂದಿತ್ತು. ನಂತರ ಅವರನ್ನು ಚಿರಾಯು ಆಸ್ಪತ್ರೆಗೆ ಸ್ಥಳಾಂತರಿಸಿದ್ದರು. ಐಸೋಲೇಶನ್ ನಲ್ಲಿದ್ದ ಈ ವ್ಯಕ್ತಿ ಏಪ್ರಿಲ್ 20ರಂದು ಸಾವನ್ನಪ್ಪಿದ್ದರು.
ಭೋಪಾಲ್ ಕ್ಕೆ ಆಗಮಿಸಿದ್ದ ಮೃತನ ಪತ್ನಿ, ಪುತ್ರ ಹಾಗೂ ಅಳಿಯ ಮುನ್ನೆಚ್ಚರಿಕೆ ತೆಗೆದುಕೊಂಡು ಅಂತ್ಯಸಂಸ್ಕಾರ ನಡೆಸುವುದಾಗಿ ಹೇಳಿದ್ದರು ಎಂದು ಅಧಿಕಾರಿಗಳು ತಿಳಿಸಿದ್ದಾರೆ. ಆದರೆ ಕೊನೆಗೆ ಶವವನ್ನು ಪಡೆಯಲು ನಿರಾಕರಿಸಿದ್ದಾರೆ ಎಂದು ವರದಿ ವಿವರಿಸಿದೆ.
ಮಗ ಹಾಗೂ ಕುಟುಂಬದ ಸದಸ್ಯರು ಅಂತ್ಯಸಂಸ್ಕಾರ ನೆರವೇರಿಸಲು ನಿರಾಕರಿಸಿದ್ದರಿಂದ ಕೊನೆಗೆ ತಹಶೀಲ್ದಾರ್ ಗುಲಾಬ್ ಸಿಂಗ್ ಭಾಘೇಲ್ ಅವರು ಸ್ವಯಂ ಆಗಿ ಮೃತವ್ಯಕ್ತಿಯ ಅಂತ್ಯ ಸಂಸ್ಕಾರ ನೆರವೇರಿಸಿದ್ದರು. ಮೃತ ಸೋಂಕಿತನ ಕುಟುಂಬದ ಸದಸ್ಯರು ದೂರದಲ್ಲಿಯೇ ನಿಂತು ಅಂತ್ಯ ಸಂಸ್ಕಾರ ವೀಕ್ಷಿಸಿದ್ದರು. ಭಾಘೇಲ್ ಅವರ ಕೆಲಸಕ್ಕೆ ಭೋಪಾಲ್ ಜಿಲ್ಲಾಧಿಕಾರಿ ಶ್ಲಾಘನೆ ವ್ಯಕ್ತಪಡಿಸಿದ್ದಾರೆ.