ಭೋಪಾಲ: ವಿವಾಹಕ್ಕೆ ಆಮಂತ್ರಣ ನೀಡುವುದು ಸಾಮಾನ್ಯ. ಆದರೆ ಮಧ್ಯ ಪ್ರದೇಶದ ಭೋಪಾಲದಲ್ಲಿ ವಿಚ್ಛೇದನಕ್ಕೆ ಆಮಂತ್ರಣ ಪತ್ರ ಮಾಡಿಸಿರುವ ವಿಚಿತ್ರ ಘಟನೆ ನಡೆದಿದೆ.
“ಭಾಯಿ ವೆಲ್ಫೆರ್ ಸೊಸೈಟಿ’ ಹೆಸರಿನ ಎನ್‌ಜಿಒ ಸೆ.19ರಂದು ಇಂಥದ್ದೊಂದು ಕಾರ್ಯಕ್ರಮ ನಡೆಸಲು ನಿರ್ಧರಿಸಿತ್ತು. ಭೋಪಾಲದ ಹೊರವಲಯದಲ್ಲಿರುವ ರೆಸಾರ್ಟ್‌ನಲ್ಲಿ ಈ ಕಾರ್ಯಕ್ರಮವನ್ನು ಆಯೋಜಿಸಲಾಗಿತ್ತು.
ಕಾರ್ಯಕ್ರಮದಲ್ಲಿ ವರಮಾಲೆ ವಿಸರ್ಜಿಸುವುದು, ಪುರುಷರ ಸಂಗೀತ ಕಾರ್ಯಕ್ರಮ, ಮನುಷ್ಯನ ಘನತೆಗಾಗಿ ಸಪ್ತಪದಿ, ಸದ್ಬುದ್ಧಿ ಶುದ್ಧೀಕರಣ ಯಜ್ಞ ಮುಂತಾದ ವಿಶೇಷ ಕಾರ್ಯಕ್ರಮ ಆಚರಿಸಲು ನಿರ್ಧರಿಸಲಾಗಿತ್ತು.
ಈ ಮಧ್ಯೆ ಇದರ ಆಮಂತ್ರಣ ಪತ್ರ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿದೆ. ಇದು ದಾಂಪತ್ಯ ಮುರಿಯುವುದನ್ನು ಉತ್ತೇಜಿಸುವ ಕಾರ್ಯಕ್ರಮ ಎಂದು ಅನೇಕರು ವಿರೋಧಿಸಿ, ಪ್ರತಿಭಟನೆ ನಡೆಸಿದ್ದಾರೆ.
ಹೀಗಾಗಿ ಕಾರ್ಯಕ್ರಮವನ್ನು ರದ್ದು ಮಾಡಲಾಗಿದೆ. “ಬಾಯ್ಕಟ್ ಮ್ಯಾರೇಜ್’ನಿಂದ ಬಚಾವಾಗದ ಪುರುಷರು ವಿಚ್ಛೇದನದ ಮೂಲಕ ಸ್ವಾತಂತ್ರ್ಯ ಪಡೆಯುತ್ತಾರೆ. ಅದನ್ನು ಸಂಭ್ರಮಿಸುವ ನಿಟ್ಟಿನಲ್ಲಿ ನಾವು ಈ ಕಾರ್ಯಕ್ರಮ ಹಮ್ಮಿಕೊಂಡಿದ್ದೆವು ಎಂದಿದ್ದಾರೆ ಎನ್‌ಜಿಒ ಸದಸ್ಯರು.
ಈ ಎನ್‌ಜಿಒ ಪುರುಷರಿಗೆ ವಿಚ್ಛೇದನ ಪಡೆಯುವುದಕ್ಕೆ ಸಹಾಯವನ್ನೂ ಮಾಡುತ್ತಿದೆ.