ಭೋಪಾಲ್ : ಕೋವಿಡ್ 2ನೇ ಅಲೆ ದೇಶದಲ್ಲಿ ತಾಂಡವವಾಡುತ್ತಿದೆ. ಈ ತುರ್ತು ಸಂದರ್ಭದಲ್ಲಿ ಜನರಿಗೆ ಸಹಾಯ ಮಾಡಲು ನೂರಾರು ಮಂದಿ ಮುಂದೆ ಬರುತ್ತಿದ್ದಾರೆ. ಎಷ್ಟೋ ಜನ ಲಾಕ್ ಡೌನ್ ಸಂದರ್ಭದಲ್ಲಿ ಹಸಿದವರಿಗೆ ಅನ್ನ ಹಾಕುವ ಕೆಲಸ ಮಾಡಿದ್ದರು. ಆದ್ರೆ ಇಲ್ಲೊಬ್ಬ ಆಟೋ ಚಾಲಕ ತನ್ನ ಆಟೋವನ್ನು ಆಂಬುಲೆನ್ಸ್ ಆಗಿ ಬದಲಾಯಿಸಿದ್ದಾರೆ. ಅಲ್ಲದೆ ಆಂಬುಲೆನ್ಸ್ ನಲ್ಲಿ ಯಾವ ರೀತಿ ಆಕ್ಸಿಜನ್ ಮತ್ತು ಮೆಡಿಸಿನ್ ವ್ಯವಸ್ಥೆ ಮಾಡಲಾಗಿದೆಯೋ ಅದೇ ರೀತಿ ಆಟೋದಲ್ಲೂ ಕೂಡ ವ್ಯವಸ್ಥೆ ಮಾಡಲಾಗಿದೆ.
ಹೌದು ಮಧ್ಯಪ್ರದೇಶದ ಭೋಪಾಲ್ ನ ಜವೇದ್ ಖಾನ್ ಎಂಬುವವರು ಈ ರೀತಿ ಜನರಿಗೆ ಸೇವೆ ಮಾಡುತ್ತಿದ್ದಾರೆ. ಕೋವಿಡ್ ಸೋಂಕಿತರನ್ನು ಉಚಿತವಾಗಿ ಆಸ್ಪತ್ರೆಗೆ ಕರೆದೊಯ್ಯುವಂತಹ ಕೆಲಸವನ್ನು ಜಾವೇದ್ ಮಾಡುತ್ತಿದ್ದಾರೆ.
ಈ ಬಗ್ಗೆ ಮಾತನಾಡಿದ ಜಾವೇದ್, ಕೋವಿಡ್ 2ನೇ ಅಲೆ ಜನರನ್ನು ತುಂಬಾ ಹಿಂಸೆ ಮಾಡುತ್ತಿದೆ. ಇಂತಹ ಸಂದರ್ಭದಲ್ಲಿ ನಾನು ಸುಮ್ಮನೆ ಮನೆಯಲ್ಲಿ ಕುಳಿತುಕೊಳ್ಳಲು ಮನಸ್ಸು ಒಪ್ಪಲಿಲ್ಲ. ಮನೆಯವರ ಸಲಹೆ ಮೇರೆಗೆ ಆಟೋವನ್ನು ಆಂಬುಲೆನ್ಸ್ ಮಾಡಿ ಸೇವೆ ಮಾಡುತ್ತಿದ್ದೇನೆ ಎಂದಿದ್ದಾರೆ.
ನಾನು ಕಳೆದ 18 ವರ್ಷಗಳಿಂದ ಆಟೋ ಚಾಲಕನಾಗಿ ಕೆಲಸ ಮಾಡುತ್ತಿದ್ದೇನೆ. ನನ್ನ ಕುಟುಂಬದ ಯಾರಿಗೂ ಕೋವಿಡ್ ಸೋಂಕು ತಗುಲಿಲ್ಲ. ಆದರೆ ದೇಶದಲ್ಲಿ ನಡೆಯುತ್ತಿರುವ ಸಾವು ನೋವುಗಳನ್ನು ನೋಡಿ ಈ ನಿರ್ಧಾರಕ್ಕೆ ಬಂದಿದ್ದೇನೆ ಎಂದು ಜಾವೇದ್ ತಿಳಿಸಿದ್ದಾರೆ.
ಕಳೆದ ಮೂರು ದಿನಗಳಲ್ಲಿ 10 ಜನರನ್ನು ಆಸ್ಪತ್ರೆಗೆ ದಾಖಲಿಸಿದ್ದೇನೆ. ನನ್ನ ಆಟೋದಲ್ಲಿ ಸ್ಯಾನಿಟೈಸರ್, ಆಕ್ಸಿಜನ್, ಕೆಲವೊಂದು ಮೆಡಿಸಿನ್ ಗಳನ್ನು ಇಟ್ಟಿದ್ದೇನೆ ಎಂದು ತಿಳಿಸಿದ್ದಾರೆ.
ಮತ್ತೊಂದು ಮೆಚ್ಚಬೇಕಾದ ವಿಷಯ ಏನಂದ್ರೆ ಜಾವೇದ್ ಪತ್ನಿ ಕೂಡ ಈ ಸೇವೆಯಲ್ಲಿ ಭಾಗಿಯಾಗಿದ್ದಾರೆ. ತನ್ನ ಚಿನ್ನದ ಸರವನ್ನು ಮಾರಾಟ ಮಾಡಿದ್ದಾರೆ ಎಂದು ಟೈಮ್ಸ್ ಆಫ್ ಇಂಡಿಯಾ ವರದಿ ಮಾಡಿದೆ. ಜಾವೇದ್ ಪ್ರತಿ ದಿನ ಆಕ್ಸಿಜನ್ ಕೊಳ್ಳಲು 600 ರೂಪಾಯಿಗಳನ್ನು ಖರ್ಚು ಮಾಡುತ್ತಾರಂತೆ. ಭೋಪಾಲ್ ನಗರದ ಯಾವ ಭಾಗದಲ್ಲಿ ಸೋಂಕಿತರಿದ್ದರೂ ಅದೇ ಜಾಗಕ್ಕೆ ಹೋಗಿ ಅವರನ್ನು ಕರೆದೊಯ್ಯುವ ಕೆಲಸವನ್ನು ಇವರು ಮಾಡುತ್ತಿದ್ದಾರೆ.