ಪ್ರಜ್ಞಾ ಸಿಂಗ್‌ರ ಪ್ರವೇಶದ ನಂತರ ಸಹಜವಾಗಿಯೇ ಈ ಬಾರಿ ಭೋಪಾಲದಲ್ಲಿ ಹಿಂದುತ್ವವೇ ಪ್ರಮುಖ ವಿಷಯವಾಗಿ ಬದಲಾಗಿದ್ದು. ಅಚ್ಚರಿದಾಯಕ ಸಂಗತಿಯೆಂದರೆ, ಕಾಂಗ್ರೆಸ್ ನಾಯಕ ದಿಗ್ವಿಜಯ್ ಸಿಂಗ್ ಅವರಂತೂ ತಮ್ಮ “ಅಲ್ಪಸಂಖ್ಯಾತ ಪರ’ ಇಮೇಜ್ ತಗ್ಗಿಸಿಕೊಳ್ಳುವುದಕ್ಕಾಗಿ ಹಿಂದುತ್ವದ ಧ್ವನಿ ಜಪಿಸಿದ್ದಾರೆ. ಚುನಾವಣಾ ಪ್ರಚಾರದ ವೇಳೆ ಅವರು ಭರ್ಜರಿಯಾಗಿಯೇ ಹೋಮ ಹವನಗಳಲ್ಲಿ ಪಾಲ್ಗೊಂಡಿದ್ದಾರೆ, ಅಲ್ಲದೇ ಸಾಧು-ಸಂತರನ್ನು ತಮ್ಮ ಪರ ಪ್ರಚಾರಕ್ಕೆ ಬಳಸಿಕೊಂಡಿದ್ದಾರೆ. ಅದರಲ್ಲೂ ಕಂಪ್ಯೂಟರ್ ಬಾಬಾ ಎಂದೇ ಖ್ಯಾತರಾದ ನಾಮದೇವ್ ದಾಸ್ ತ್ಯಾಗಿ ಬಾಬಾ ಈಗ ದಿಗ್ವಿಜಯ್ ಪರ ನಿಂತಿದ್ದಾರೆ. ದಿಗ್ವಿಜಯ್ ಸಿಂಗ್ ಅವರ ರ್ಯಾಲಿಗಳೆಲ್ಲವೂ ಕೇಸರಿ ಧ್ವಜಗಳಿಂದ ಕಂಗೊಳಿಸಿವೆ!
Advertisement
ಇನ್ನೊಂದೆಡೆ ಸಾಧ್ವಿ ಪ್ರಜ್ಞಾ ಠಾಕೂರ್ ಬಂಧನದಲ್ಲಿ ತಾವು ಅನುಭವಿಸಿದ ಯಾತನೆಗಳನ್ನು ಜನರಿಗೆ ಹೇಳುತ್ತಿದ್ದಾರೆ. 2008ರ ಮಾಲೇಗಾಂವ್ ಸ್ಫೋಟದ ಆರೋಪಿ ಆಗಿರುವ ಪ್ರಜ್ಞಾ ಅವರು, ಮೊದಲಿನಿಂದಲೂ ಕೃತ್ಯದಲ್ಲಿ ತಮ್ಮ ಪಾತ್ರವಿಲ್ಲ ಎಂದೇ ಹೇಳುತ್ತಾ ಬಂದಿದ್ದಾರೆ. ಇತ್ತೀಚೆಗಷ್ಟೇ ಅವರು ದಿವಂಗತ ಹೇಮಂತ್ ಕರ್ಕರೆ ಅವರ ಬಗ್ಗೆ ವಿವಾದಾತ್ಮಕ ಹೇಳಿಕೆ ನೀಡಿ, ನಂತರ ಕ್ಷಮಾ ಪಣೆ ಕೋರಿದ್ದರು. ಬಾಬ್ರಿ ಮಸೀದಿಯ ಧ್ವಂಸ ವಿಚಾರದಲ್ಲಿ ಅವರು ಆಡಿದ ಮಾತುಗಳಿಂದಾಗಿ ಚುನಾವಣಾ ಆಯೋಗದಿಂದ 72 ಗಂಟೆಗಳಕಾಲ ಪ್ರಚಾರದಿಂದ ನಿಷೇಧಕ್ಕೆ ಒಳಗಾಗಿದ್ದರು. ಪ್ರಜ್ಞಾ ಸಿಂಗ್ ಅವರಿಗೆ ಉಮಾ ಭಾರತಿ, ನರೇಂದ್ರ ಮೋದಿ, ಅಮಿತ್ ಶಾರಂಥ ಹಿರಿಯ ನಾಯಕರ ಬೆಂಬಲ ಸಿಕ್ಕಿದೆ.