ನವದೆಹಲಿ: 1984ರ ಭೋಪಾಲ್ ಅನಿಲ ದುರಂತ ಪ್ರಕರಣಕ್ಕೆ ಸಂಬಂಧಿಸಿದಂತೆ ಸಂತ್ರಸ್ತರಿಗೆ ಹೆಚ್ಚಿನ ಪರಿಹಾರ ನೀಡಬೇಕೆಂದು ಕೋರಿ ಕೇಂದ್ರ ಸರ್ಕಾರ ಸಲ್ಲಿಸಿದ್ದ ಅರ್ಜಿಯನ್ನು ಸುಪ್ರೀಂಕೋರ್ಟ್ ಮಂಗಳವಾರ (ಮಾರ್ಚ್ 14) ವಜಾಗೊಳಿಸಿದೆ. ಭೋಪಾಲ್ ಗ್ಯಾಸ್ ಟ್ರ್ಯಾಜಿಡಿ ಜಗತ್ತಿನ ಅತೀ ದೊಡ್ಡ ಕೈಗಾರಿಕಾ ದುರಂತಗಳಲ್ಲಿ ಒಂದಾಗಿದ್ದು, ಸುಮಾರು 3,000ಕ್ಕೂ ಅಧಿಕ ಮಂದಿ ಅಂದು ಕೊನೆಯುಸಿರೆಳೆದಿದ್ದರು.
ಇದನ್ನೂ ಓದಿ:ಭರತ್ Vs ಬಾವಾ; ಧರ್ಮಸ್ಥಳ ಅಥವಾ ದರ್ಗಾಕ್ಕೆ ಬಂದು ಆಣೆ ಮಾಡಲಿ: ಸವಾಲೆಸೆದ ಮೊಯ್ದೀನ್ ಬಾವಾ
ಭೋಪಾಲ್ ಅನಿಲ ದುರಂತ ಪ್ರಕರಣವನ್ನು ಮರು ತನಿಖೆಗೆ ಒಳಪಡಿಸಿ, ಅನಿಲ ಸೋರಿಕೆ ಪ್ರಕರಣದ ಸಂತ್ರಸ್ತರಿಗೆ ಹೆಚ್ಚುವರಿಯಾಗಿ 7,844 ಕೋಟಿ ರೂಪಾಯಿ ಪರಿಹಾರವನ್ನು ನೀಡುವಂತೆ ಯೂನಿಯನ್ ಕಾರ್ಬೈಡ್ ಕಂಪನಿಗೆ ನಿರ್ದೇಶನ ನೀಡಬೇಕೆಂದು ಕೇಂದ್ರ ಸರ್ಕಾರ ಸುಪ್ರೀಂಕೋರ್ಟ್ ಗೆ ಮನವಿ ಸಲ್ಲಿಸಿತ್ತು.
ಘಟನೆ ನಡೆದ ಸಮಯದಲ್ಲಿ ಜೀವ ಕಳೆದುಕೊಂಡ ಕುಟುಂಬಕ್ಕೆ ಸೂಕ್ತವಾದ ಪರಿಹಾರವನ್ನು ನೀಡುವ ಬಗ್ಗೆ ನಿರ್ಣಯಿಸಲು ಸಾಧ್ಯವಾಗಿರಲಿಲ್ಲವಾಗಿತ್ತು ಎಂದು ಕೇಂದ್ರ ಸರ್ಕಾರ ಸುಪ್ರೀಂನಲ್ಲಿ ವಾದ ಮಂಡಿಸಿತ್ತು.
ಅರ್ಜಿಯ ವಿಚಾರಣೆ ನಡೆಸಿದ ಸುಪ್ರೀಂಕೋರ್ಟ್ ನ ಜಸ್ಟೀಸ್ ಸಂಜಯ್ ಕಿಶನ್ ಕೌಲ್ ನೇತೃತ್ವದ ಐವರು ನ್ಯಾಯಾಧೀಶರ ಸಾಂವಿಧಾನಿಕ ಪೀಠ, ದುರಂತಕ್ಕೆ ಸಂಬಂಧಿಸಿದಂತೆ ಸಂತ್ರಸ್ತರಿಗೆ ಪರಿಹಾರ ನೀಡಿದ ಎರಡು ದಶಕಗಳ ನಂತರ ಪ್ರಕರಣದ Re open ಕುರಿತು ವಾದಿಸುವುದು ಮತ್ತು ಪರಿಹಾರ ನೀಡುವಂತೆ ನಿರ್ದೇಶನ ನೀಡಲು ಸಾಧ್ಯವಿಲ್ಲ ಎಂದು ತಿಳಿಸಿದೆ.
ಒಂದು ವೇಳೆ ಪರಿಹಾರ ನೀಡುವಲ್ಲಿ ವಂಚನೆ ನಡೆದಿದ್ದರೆ ಪರಿಶೀಲಿಸಬಹುದಾಗಿದ್ದು, ಈ ಬಗ್ಗೆ ಕೇಂದ್ರ ಸರ್ಕಾರ ಯಾವುದೇ ವಾದ ಮಂಡಿಸಿಲ್ಲ ಎಂದು ಸುಪ್ರೀಂ ಪೀಠ ಹೇಳಿದೆ.
ಸಂತ್ರಸ್ತ ಕುಟುಂಬಗಳಿಗೆ ಆರ್ ಬಿಐ ಬಳಿ ಇರುವ 50ಕೋಟಿ ರೂ.ಗಳನ್ನು ಪರಿಹಾರವಾಗಿ ನೀಡಲು ಕೇಂದ್ರ ಸರ್ಕಾರ ಬಳಸಿಕೊಳ್ಳಬಹುದಾಗಿದೆ ಎಂದು ಸುಪ್ರೀಂಕೋರ್ಟ್ ತಿಳಿಸಿದೆ. ಭೋಪಾಲ್ ಘಟನೆಗೆ ಸಂಬಂಧಿಸಿದಂತೆ ಯಾವುದೇ ಸಕಾರಣವನ್ನು ಒದಗಿಸದೇ ಇರುವ ಬಗ್ಗೆ ಅಸಮಾಧಾನವ್ಯಕ್ತಪಡಿಸಿರುವ ಸುಪ್ರೀಂಕೋರ್ಟ್ ಈ ಕ್ಯುರೇಟಿವ್ ಅರ್ಜಿಯನ್ನು ಪುರಸ್ಕರಿಸಲು ಸಾಧ್ಯವಿಲ್ಲ ಎಂದು ಅಭಿಪ್ರಾಯವ್ಯಕ್ತಪಡಿಸಿದೆ.