ಮಣಿಪಾಲ:ಮಧ್ಯಪ್ರದೇಶದ ಭೋಪಾಲ್ ಅನಿಲ ದುರಂತ 20ನೇ ಶತಮಾನದ ವಿಶ್ವದ ಅತೀ ಭೀಕರ ಘಟನೆಗಳಲ್ಲಿ ಒಂದು. ಭೋಪಾಲ್ ನ ಯೂನಿಯನ್ ಕಾರ್ಬೈಡ್ ಪೆಸ್ಟಿಸೈಡ್(ಅಮೆರಿಕನ್ ಕಂಪನಿ) ಘಟಕದಲ್ಲಿ 1984ರ ಡಿಸೆಂಬರ್ 2ರ ಮಧ್ಯರಾತ್ರಿ 30 ಟನ್ನುಗಳಿಗೂ ಅಧಿಕ ಪ್ರಮಾಣದ ಮಿಥೈಲ್ ಐಸೋಸೈನೇಟ್ ಅನಿಲ ಸೋರಿಕೆಯಾಗಿತ್ತು. ಎಲ್ಲರೂ ನಿದ್ದೆಗೆ ಶರಣಾಗಿದ್ದ ವೇಳೆ ನಡೆದಿದ್ದ ಈ ದುರಂತ ಪ್ರಕರಣದಲ್ಲಿ 15 ಸಾವಿರಕ್ಕೂ ಹೆಚ್ಚು ಮಂದಿ ಬಲಿಯಾಗಿದ್ದರು. ಆರು ಲಕ್ಷಕ್ಕೂ ಅಧಿಕ ಜನರು ಅದರ ದುಷ್ಪರಿಣಾಮಕ್ಕೆ ಒಳಗಾಗಿದ್ದರು!
ಜಗತ್ತಿನಲ್ಲಿ ನಡೆದಿರುವ ಭೀಕರ ಕೈಗಾರಿಕಾ ದುರಂತಗಳಲ್ಲಿ ಒಂದಾಗಿರುವ ಭೋಪಾಲ್ ಅನಿಲ ದುರಂತ ಸಂಭವಿಸಿ ಸಹಸ್ರಾರು ಜನರನ್ನು ಆಪೋಶನ ತೆಗೆದುಕೊಂಡ ಬಳಿಕವೂ ಇಂದಿಗೂ ಅದರ ಅಡ್ಡಪರಿಣಾಮಗಳನ್ನು ಎದುರಿಸುತ್ತಿದ್ದಾರೆ ಎಂಬುದನ್ನು ನೆನಪಿಸಿಕೊಳ್ಳಬಹುದಾಗಿದೆ ಎಂದು ವರದಿ ತಿಳಿಸಿದೆ.
ಅಧಿಕೃತ ಮೂಲಗಳ ಪ್ರಕಾರ ಡಿಸೆಂಬರ್ 2-3ರ ಮಧ್ಯರಾತ್ರಿ ಯೂನಿಯನ್ ಕಾರ್ಬೈಡ್ ನ ಸಿ ಘಟಕದಲ್ಲಿ ಅನಿಲ ಸೋರಿಕೆಯಾಗಿತ್ತು. ಅನಿಲ ಘಟಕವನ್ನು ತಣಿಸುವ ನೀರಿನೊಂದಿಗೆ ಬೆರೆತು ಸೋರಿಕೆಯಾಗಿದ್ದು, ಈ ಸೋರಿಕೆಯು ಅನಿಲವನ್ನು ಶೇಖರಿಸುವ ಟ್ಯಾಂಕಿನ ಮೇಲೆ ಅತಿಯಾದ ಒತ್ತಡ ಹೇರಿದ್ದರಿಂದ ಟ್ಯಾಂಕ್ ಮುಚ್ಚಳ ಹಾರಿಹೋಗಿ ಇದರಿಂದ ವಿಷಾನಿಲ ಗಾಳಿಯೊಂದಿಗೆ ಸೇರಿಬಿಟ್ಟಿತ್ತು!
ಅಂದು ಭೋಪಾಲ್ ನ ಜನಸಂಖ್ಯೆ ಸುಮಾರು 8,5ಲಕ್ಷ ಅದರಲ್ಲಿ ಅರ್ಧಕ್ಕೂ ಹೆಚ್ಚು ಮಂದಿ ಬೆಳಗಾಗುವುದರೊಳಗೆ ಆಸ್ಪತ್ರೆಗೆ ಕಣ್ಣು ಉರಿ, ಉಸಿರಾಟದ ತೊಂದರೆ ಎಂದು ದಾಖಲಾಗತೊಡಗಿದ್ದರು, ಜನರಿಗೆ ತಮಗೆ ಏನಾಗುತ್ತಿದೆ ಎಂದು ತಿಳಿಯುವಷ್ಟರಲ್ಲಿ ಸುಮಾರು ಜನರು ಆಂತರಿಕ ರಕ್ತಸ್ರಾವದಿಂದ ಸಾವಿಗೀಡಾಗಿದ್ದರು. ಇವರಲ್ಲಿ ತಯಾರಿಕಾ ಘಟಕದ ಸುತ್ತಮುತ್ತಲಿನ ಕೊಳಗೇರಿ ಮತ್ತು ಹಳ್ಳಿಯ ಜನರೇ ಹೆಚ್ಚು.
ಯೂನಿಯನ್ ಕಾರ್ಬೈಡ್ ನ ಮುಖ್ಯ ಕಾರ್ಯನಿರ್ವಹಣಾಧಿಕಾರಿ ವಾರೆನ್ ಅಂಡರ್ಸನ್ ನನ್ನು ದುರಂತ ನಡೆದ 4ನೇ ದಿನ ಭೋಪಾಲಕ್ಕೆ ಬಂದ ತಕ್ಷಣ ಬಂಧಿಸಿ ಕೆಲವು ಗಂಟೆಗಳ ಕಾಲ ಗೃಹಬಂಧನದಲ್ಲಿ ಇಡಲಾಗಿತ್ತು. ನ್ಯಾಯಾಲಯ ಜಾಮೀನು ನೀಡಿದ ಕೆಲವೇ ಹೊತ್ತಿನಲ್ಲಿ ಆ್ಯಂಡರ್ಸನ್ ಇಲ್ಲಿನ ಕಾನೂನುನಿನ ಕಣ್ಣಿಗೆ ಮಣ್ಣೆರಚಿ ಅಮೆರಿಕಕ್ಕೆ ಪರಾರಿಯಾಗಿದ್ದ. ಕೊನೆಗೆ ಅಮೆರಿಕ, ಭಾರತ ಸೇರಿದಂತೆ ಎರಡೂ ಕಡೆ ನ್ಯಾಯಾಂಗ ಪ್ರಕರಣ ದಾಖಲಾಗಿತ್ತು. ನ್ಯಾಯಾಯಲದ ಹೊರಗೆ ಭಾರತ ಸರ್ಕಾರ ಮತ್ತು ಯೂನಿಯನ್ ಕಾರ್ಬೈಡ್ ನಡುವೆ ಒಪ್ಪಂದವಾಗಿ ಸುಮಾರು 470 ಮಿಲಿಯನ್ ಅಮೆರಿಕನ್ ಡಾಲರ್ ಮೊತ್ತವನ್ನು ಯೂನಿಯನ್ ಕಾರ್ಬೈಡ್ ಸಂಸ್ಥೆ ಭಾರತಕ್ಕೆ ನೀಡಿತ್ತು.