ಅಂಬಿಕಾ ಲಾಂಛನದಲ್ಲಿ ತಯಾರಾಗುತ್ತಿರುವ ತುಳು ಹಾಗೂ ಕನ್ನಡ ಭಾಷೆಯಲ್ಲಿ ತಯಾರಾಗುತ್ತಿರುವ ‘ಭೂಮಿಕಾ’ ಸಿನೆಮಾ ರಿಲೀಸ್‌ನ ತವಕದಲ್ಲಿದೆ. ಸಿನೆಮಾ ಬಿಡುಗಡೆಗೆ ಬಹುತೇಕ ಸಿದ್ಧತೆ ಮಾಡಿರುವ ಚಿತ್ರತಂಡ ಕೊನೆಯ ಹಂತದ ತಯಾರಿಯಲ್ಲಿದೆ. ಖ್ಯಾತ ಛಾಯಾಗ್ರಹಕ ಪಿ.ಎಚ್. ದಾಸ್ ನಿರ್ದೇಶಿಸಿರುವ ಈ ಸಿನೆಮಾವನ್ನು ನರೇಂದ್ರ ಪಿ. ನಾಯಕ್ ಮತ್ತು ಗಾಯತ್ರಿ ಅವರು ನಿರ್ಮಿಸಿದ್ದಾರೆ. ಕರಾವಳಿಯ ಮೀನುಗಾರಿಕಾ ಕುಟುಂಬದ ಯುವತಿಯೊಬ್ಬಳಿಗಾಗುವ ಶೋಷಣೆಯನ್ನು ಈ ಸಿನೆಮಾದಲ್ಲಿ ಸೂಕ್ಷ್ಮವಾಗಿ ಪ್ರಸ್ತುತಪಡಿಸಲಾಗಿದೆ. ಮುಖ್ಯವಾಗಿ ಸಮಾಜಕ್ಕೆ ಸಂದೇಶವನ್ನೂ ಈ ಸಿನೆಮಾದ ಮೂಲಕ ನೀಡುತ್ತಿದ್ದೇವೆ ಎನ್ನುತ್ತಾರೆ ನಿರ್ದೇಶಕರು.
ಚಿತ್ರದ ನಾಯಕಿ ಆಲಿಶಾ ಕದ್ರಿ ಮೂಲತಃ ಮಂಗಳೂರಿನವರಾಗಿದ್ದು, ಈಗಾಗಲೇ ಬೇರೆ ಭಾಷಾ ಸಿನೆಮಾಗಳಲ್ಲೂ ಅವರು ಅಭಿನಯಿಸಿದ್ದಾರೆ. ‘ತುಳು
ಭಾಷೆಯ ಸಿನೆಮಾದಲ್ಲಿ ನಟಿಸಬೇಕೆಂಬ ಹಂಬಲ ಇತ್ತು. ಅದು ಭೂಮಿಕಾ ಚಿತ್ರದ ಮೂಲಕ ಈಡೇರಿದೆ. ಈ ಸಿನೆಮಾದ ಗಟ್ಟಿ ಕಥಾ ವಸ್ತು, ನಿರೂಪಣಾ ಶೈಲಿಯಿಂದ ತುಳು ಚಿತ್ರರಂಗದಲ್ಲೂ ಭೂಮಿಕಾ ದೊಡ್ಡ ಸದ್ದು ಮಾಡಲಿದೆ’ ಎನ್ನುತ್ತಾರೆ ಅವರು.
ಅಂದಹಾಗೆ, ನವೀನ್ ಡಿ. ಪಡೀಲ್, ಪ್ರಜ್ವಲ್ ಪ್ರಕಾಶ್, ರವಿ, ಶೋಭಾ ರೈ, ಕವಿತಾ, ನಂದಿನಿ, ಭೂಮಿಕ, ಸುಪ್ರಿಯಾ, ಪ್ರಸಾದ್ ಶೆಟ್ಟಿ ಶಕ್ತಿನಗರ, ದೀಪಕ್ ರೈ ಪಾಣಾಜೆ, ಸತ್ಯಪಾಲ್, ಪ್ರಕಾಶ್ ಹೆಗ್ಡೆ, ರಾಘವೇಂದ್ರ ರೈ ಮೊದಲಾದವರು ಬಣ್ಣ ಹಚ್ಚಿದ್ದಾರೆ.