Advertisement

ಬಳ್ಕೂರು: ಉಪಯೋಗಕ್ಕಿಲ್ಲದೆ ನೆನಪಿನಂಚಿಗೆ ಸರಿದ ಗೋಮಾಳ

01:14 AM May 07, 2019 | sudhir |

ಬಸ್ರೂರು: ಕುಂದಾಪುರ ತಾಲೂಕಿನ ಬಳ್ಕೂರಿನ ಸ. ನಂ.66/2 ರಲ್ಲಿ ವಿಸ್ತಾರವಾಗಿ ಹಚ್ಚ ಹಸಿರಿನಿಂದ ಹರಡಿಕೊಂಡಿದ್ದ ಗೋಮಾಳ ಈಗ ಒಣಗಿ, ಹುಲ್ಲು ಸಹ ಇಲ್ಲದೆ ಕೇವಲ ನೆನಪಿನಲ್ಲಿ ಮಾತ್ರ ಉಳಿಯುವ ಸ್ಥಿತಿಗೆ ಬಂದು ತಲುಪಿದೆ. ಈ ಪ್ರದೇಶ ಮತ್ತೆ ಮರುಜೀವ ಪಡೆಯುವುದೇ ಎಂಬ ಕಾತರ ಗ್ರಾಮಸ್ಥರದ್ದು.

Advertisement

ಸಾಕ್ಷಿಗಲ್ಲು
ಸುಮಾರು 90 ವರ್ಷಗಳ ಹಿಂದೆ 30 ಎಕರೆಗಳಿಗೂ ಹೆಚ್ಚು ವಿಸ್ತಾರವಾಗಿದ್ದ ಈ ಗೋಮಾಳದಲ್ಲಿ ಸ್ವಾತಂತ್ರ್ಯ ಹೋರಾಟಗಾರ ಗಾಂಧಿ ರಾಮಣ್ಣ ಶೆಟ್ಟಿ ಅವರು ದನ ಕರುಗಳ‌ ಮೈಯುಜ್ಜಲು ಹಾಕಿದ್ದ ಒಂದು ಎತ್ತರದ ಶಿಲೆಗಲ್ಲು ಮಾತ್ರ ಇಲ್ಲಿ ಉಳಿದಿದೆ.

ಉಳಿದದ್ದು 3 ಎಕರೆ
ಗೋಮಾಳ ಜಾಗದ ಬಹುತೇಕ ಕಡೆಗಳಲ್ಲಿ ಮನೆ ನಿರ್ಮಾಣವಾಗಿ ಅವರಿಗೆ ವಾಸಸ್ಥಳದ ಹಕ್ಕು ಪತ್ರವೂ ಸಿಕ್ಕಿದೆ. ಪ್ರಸ್ತುತ ಈ ಗೋಮಾಳದಲ್ಲಿ ಉಳಿದುಕೊಂಡಿರುವುದು ಕೇವಲ ಮೂರು ಎಕರೆ ಜಾಗ! ಈ ಜಾಗ ಕಂದಾಯ ಇಲಾಖೆಗೆ ಒಳಪಟ್ಟಿದೆ.

ಆಟದ ಮೈದಾನ
ಇಲ್ಲೊಂದು ವಾಲಿಬಾಲ್‌ ಕ್ರೀಡಾಂಗಣವಿದೆ. ಹುಡುಗರು ಸಂಜೆ ವೇಳೆ ವಾಲಿಬಾಲ್‌ ಆಡುತ್ತಾರೆ. ಈ ಮೈದಾನವನ್ನು ಒಂದು ಉತ್ತಮ ಕ್ರೀಡಾಂಗಣವನ್ನಾಗಿಸಬಹುದು. ಈ ಬಗೆಗೆ ಪಿಡಿಒ ಅವರಲ್ಲಿ ಮಾತನಾಡಿದರೆ ಅವರು ಈಗಾಗಲೇ ಬೇರೊಂದು ಮೈದಾನಕ್ಕೆ ಕ್ರೀಡಾಂಗಣದ ಪ್ರಸ್ತಾವನೆಯನ್ನು ಕಳುಹಿಸಲಾಗಿದೆ. ಇದನ್ನು ಕ್ರೀಡಾಂಗಣ ಮಾಡಲು ಅನುದಾನ ಸಾಲದು ಎನ್ನುತ್ತಾರೆ.

ಮರುಜೀವ ಸಾಧ್ಯ
ಇಲಾಖೆ ಮನಸ್ಸು ಮಾಡಿದರೆ ಈ ಜಾಗವನ್ನು ಪುನ: ಗೋಮಾಳವನ್ನಾಗಿ ಮಾಡಲು ಸಾಧ್ಯ.ಇಲ್ಲಿನ ಒಣಗಿದ ನೆಲದ ಮೇಲೆ ಉತ್ತಮವಾದ ಹುಲ್ಲಿನ ಬೀಜವನ್ನು ಹಾಕಿ ನೀರು ಬಿಟ್ಟರೆ ಅಲ್ಲಿ ಹುಲ್ಲು ಹುಟ್ಟಿ ಅವನ್ನು ಮೇಯಲು ದನ ಕರುಗಳು ಬರುತ್ತವೆ. ಸ್ಥಳೀಯಾಡಳಿತ ಈ ಬಗ್ಗೆ ಮನಸ್ಸು ಮಾಡಬೇಕು ಅಷ್ಟೆ
-ನಾಗರಾಜ ಪೂಜಾರಿ, ಸ್ಥಳೀಯ ನಿವಾಸಿ

Advertisement

ಕ್ರೀಡಾಂಗಣ ನಿರ್ಮಿಸಿ
ಬಳ್ಕೂರಿನಲ್ಲಿ ಈಗಾಗಲೇ 90 ದನಕರುಗಳಿವೆ. ಪ್ರತಿದಿನ 600 ಲೀಟರ್‌ ಹಾಲನ್ನು ಡೇರಿಯಲ್ಲಿ ತೆಗೆದುಕೊಳ್ಳುತ್ತಿದ್ದೇವೆ. ಉಳಿದಂತೆ ನೋಡಿದರೆ ಈ ಗೋಮಾಳ ಹಳೆ ಕುರುಹಿನ ನೆನಪು ಮಾತ್ರವಾಗಿ ಉಳಿದುಕೊಳ್ಳುತ್ತದೆ. ಒಂದು ಉತ್ತಮ ವಾಲಿಬಾಲ್‌ ಕ್ರೀಡಾಂಗಣ ನಿರ್ಮಿಸಿದರೆ ಗ್ರಾಮೀಣ ಪ್ರದೇಶದ ಉತ್ತಮ ಕ್ರೀಡಾ ಪ್ರತಿಭೆಗಳು ಬೆಳಕಿಗೆ ಬರಬಹುದು
-ನಾಗೇಶ್‌ ಎಸ್‌., ಅಧ್ಯಕ್ಷರು, ಬಳ್ಕೂರು ಹಾ.ಉ. ಸಂಘ, ಬಳ್ಕೂರು

Advertisement

Udayavani is now on Telegram. Click here to join our channel and stay updated with the latest news.

Next