ಮಹಾಭಾರತದಲ್ಲಿ ಒಂದು ಪ್ರಸಂಗ ಬರುತ್ತದೆ. ಇಡೀ ಮಹಾಭಾರತದ ದಿಕ್ಕನ್ನು ನಿರ್ಧರಿಸಿದ್ದೇ ಆ ಕಥೆ ಎಂದರೂ ಸರಿಯೇ. ಒಮ್ಮೆ ಬ್ರಹ್ಮಲೋಕದಲ್ಲಿ ಒಂದು ಸಭೆ ಸೇರಿರುತ್ತದೆ. ಅಲ್ಲಿ ದೇವತೆಗಳು ಇರುತ್ತಾರೆ. ಗಂಗೆಯೂ ಇರುತ್ತಾಳೆ. ಇಕ್ಷ್ವಾಕು ವಂಶದ ಮಹಾದೊರೆಯೆನಿಸಿಕೊಂಡಿದ್ದ ಮಹಾಭಿಷ ತನ್ನ ಮರಣದ ನಂತರ ಬ್ರಹ್ಮಲೋಕ ಸೇರಿಕೊಂಡಿರುತ್ತಾನೆ. ರಾಜನಾಗಿದ್ದಾಗ ಮಾಡಿದ್ದ ಯಾಗಗಳ ಕಾರಣ ಅವನೂ ಮನುಷ್ಯಜಗತ್ತಿನಿಂದ ಮುಕ್ತಿಪಡೆದು ದೇವಜಗತ್ತನ್ನು ಸೇರಿರುತ್ತಾನೆ. ಸಭೆ ನಡೆಯುತ್ತಿದ್ದಾಗ ಇದ್ದಕ್ಕಿದ್ದಂತೆ ಗಾಳಿ ಜೋರಾಗಿ ಬೀಸಿ, ಅತ್ಯಂತ ಸುಂದರಿಯಾಗಿದ್ದ ಗಂಗೆಯ ಮೇಲುಡುಗೆ ಹಾರಿಹೋಗುತ್ತದೆ. ಅಲ್ಲಿದ್ದ ದೇವತೆಗಳು ಕೂಡಲೇ ತಲೆಬಗ್ಗಿಸುತ್ತಾರೆ. ಮಹಾಭಿಷ ಮಾತ್ರ ಕಣ್ಣುಮುಚ್ಚದೆ ಗಂಗೆಯ ಸೌಂದರ್ಯವನ್ನು ನೋಡುತ್ತಿರುತ್ತಾನೆ. ಆ ನೋಟಕ್ಕೆ ಗಂಗೆಯೂ ಮನಸೋಲುತ್ತಾಳೆ. ಇದರಿಂದ ಸಿಟ್ಟಾದ ಬ್ರಹ್ಮ ಮತ್ತೆ ಮನುಷ್ಯ ಜಗತ್ತಿನಲ್ಲಿ ಹುಟ್ಟು ಎಂದು ಮಹಾಭಿಷನಿಗೆ ಶಾಪ ನೀಡುತ್ತಾನೆ. ಅವನ ಪತ್ನಿಯಾಗಿ ಜನಿಸಿ ತನ್ನ ತಪ್ಪಿಗೆ ಪ್ರಾಯಶ್ಚಿತ್ತ ಮಾಡಿಕೊಳ್ಳುವಂತೆ ಗಂಗೆಗೂ ಶಾಪ ಸಿಗುತ್ತದೆ.
ಇಕ್ಷ್ವಾಕು ವಂಶದ (ಸೂರ್ಯವಂಶ) ರಾಜ ಚಂದ್ರವಂಶದಲ್ಲಿ ಹುಟ್ಟಬೇಕಾಗಿ ಬರುತ್ತದೆ. ರಾಜ ಪ್ರತೀಪನ ಪುತ್ರನಾಗಿ ಮಹಾಭಿಷ ಜನಿಸುತ್ತಾನೆ. ಅವನೇ ಶಂತನು. ಈತನಿಗೆ ಬೇಟೆಯಾಡುವ ಹುಚ್ಚು. ಸದಾ ಗಂಗಾನದಿಯ ಆಸುಪಾಸುಗಳಲ್ಲಿ ಸುತ್ತುತ್ತಿರುತ್ತಾನೆ. ಹಾಗೆಯೇ ಒಂದುದಿನ ಗಂಗಾತಟಾಕಕ್ಕೆ ಬಂದಾಗ ಅಲ್ಲಿ ಹುಚ್ಚು ಹಿಡಿಸುವಂತೆ ಸೌಂದರ್ಯವನ್ನು ಬೀರುತ್ತ ನಿಂತ ಗಂಗೆ ಕಾಣುತ್ತಾಳೆ. ಅವಳನ್ನು ತನ್ನ ಪತ್ನಿಯಾಗುವಂತೆ ಶಂತನು ಪ್ರಾರ್ಥಿಸುತ್ತಾನೆ. ಆಕೆ ಒಪ್ಪುತ್ತಾಳೆ. ಒಂದು ಷರತ್ತೆಂದರೆ ಮದುವೆಯ ನಂತರ ತಾನು ಏನು ಮಾಡಿದರೂ ಪ್ರಶ್ನಿಸುವಂತಿಲ್ಲ ಎನ್ನುವುದು. ಇಬ್ಬರ ನಡುವೆ ಅನುರಾಗ ಬೆಳೆದು, ಹಬ್ಬಿ ಇಡೀ ಅರಮನೆ ಅದರಿಂದ ಬೆಳಗುತ್ತಿರುತ್ತದೆ. ಈ ಆನಂದದಲ್ಲಿ ಗಂಗೆ ಏನು ಮಾಡಿದರೆ ತನಗೇನು ಎಂದು ಶಂತನು ಅದನ್ನು ಕೇಳುವ ಉಸಾಬರಿಗೆ ಹೋಗುವುದಿಲ್ಲ. ಆದರೆ ಮೊದಲಬಾರಿಗೆ ಅವನಿಗೆ ಆಘಾತವಾಗುವ ಸನ್ನಿವೇಶ ಬರುತ್ತದೆ. ಇಬ್ಬರಿಗೂ ಮೊದಲ ಮಗು ಜನಿಸುತ್ತದೆ. ಗಂಗೆ ನಿರ್ದಾಕ್ಷಿಣ್ಯವಾಗಿ ಅದನ್ನು ಎತ್ತಿಕೊಂಡು ಹೋಗಿ ಹೊಳೆಗೆ ಎಸೆದುಬಿಡುತ್ತಾಳೆ. ಹೀಗೆಯೇ ಏಳು ಮಕ್ಕಳಿಗೆ ಮಾಡುತ್ತಾಳೆ. ಪ್ರತೀಬಾರಿ ಅವಳನ್ನು ಹಿಂಬಾಲಿಸಿಕೊಂಡು ಹೋಗುವ ಶಂತನು, ಗಂಗೆ ಅಷ್ಟು ನಿರ್ಲಿಪ್ತಿಯಿಂದ ಆ ಹಸುಗೂಸುಗಳನ್ನು ಅದು ಹೇಗೆ ನದಿಗೆಸೆದುಬಿಡುತ್ತಿದ್ದಾಳೆ ಎಂದು ಚಿಂತಿಸಿ ಕಂಗಾಲಾಗುತ್ತಾನೆ.
ಹೀಗೆಯೇ ಆದರೆ ಕುರುವಂಶವನ್ನು ಬೆಳೆಸಲು ಒಂದಾದರೂ ಕುಡಿ ಉಳಿಯಲು ಸಾಧ್ಯವೇ? ಇಂತಹ ಪ್ರಶ್ನೆ ಹುಟ್ಟಿದ್ದಾಗಲೇ ಅವರಿಬ್ಬರಿಗೆ ಎಂಟನೆಯ ಮಗು ಹುಟ್ಟುತ್ತದೆ, ಗಂಗೆ ಅದನ್ನೂ ಹೊತ್ತುಕೊಂಡು ನದಿ ತಟಾಕಕ್ಕೆ ಹೋಗುತ್ತಾಳೆ. ಇನ್ನೇನು ಎಸೆಯಬೇಕೆನ್ನುವಾಗ ಶಂತನು, ಏನು ಮಾಡುತ್ತಿದ್ದೀಯ? ನಿನಗೆ ಯಾಕಿಷ್ಟು ಕ್ರೌರ್ಯ? ಹೀಗೆಯೇ ಆದರೆ ನಮ್ಮ ವಂಶ ಬೆಳೆಯುವುದು ಹೇಗೆಂದು ಪ್ರಶ್ನಿಸುತ್ತಾನೆ. ಆ ಮಗುವನ್ನು ಗಂಗೆ ಶಂತನುವಿಗೆ ಒಪ್ಪಿಸುತ್ತಾಳೆ. ನೀನು ನನ್ನನ್ನು ಪ್ರಶ್ನಿಸಿದ್ದರಿಂದ ನಿನ್ನೊಂದಿಗೆ ಇರಲು ಸಾಧ್ಯವಿಲ್ಲ ಎಂದು ಹೊರಟು ನಿಲ್ಲುತ್ತಾಳೆ. ಶಂತನು ಇಕ್ಕಟ್ಟಿಗೆ ಸಿಲುಕಿ ಗೋಳಾಡುತ್ತಾನೆ. ಆದರೆ ಗಂಗೆ ಒಪ್ಪುವುದಿಲ್ಲ. ತಮ್ಮ ದಾಂಪತ್ಯದ ಅಂತ್ಯ ಹೀಗೆಯೇ ಆಗಬೇಕೆನ್ನುವುದು ದೈವೇಚ್ಛೆ ಎಂದು ಹಳೆಯ ಕಥೆಯನ್ನು ಹೇಳುತ್ತಾಳೆ. ಶಾಪಗ್ರಸ್ತಳಾಗಿ ಭೂಮಿಗೆ ಬರುವ ಗಂಗೆ, ಅಷ್ಟವಸುಗಳ ಮೇಲಿರುವ ಶಾಪವನ್ನು ಕಳೆಯುವ ಜವಾಬ್ದಾರಿಯನ್ನೂ ಹೊತ್ತುಕೊಂಡಿರುತ್ತಾಳೆ. ಅಷ್ಟವಸುಗಳಿಗೂ ಭೂಮಿಯ ಮೇಲೆ ಜನಿಸಬೇಕಾದ ಅನಿವಾರ್ಯತೆಯಿರುತ್ತದೆ. ಅದನ್ನು ಹೀಗೆ ಗಂಗೆ ಈಡೇರಿಸುತ್ತಾಳೆ. ಆದರೆ ಎಂಟನೆಯ ವಸುವಿಗೆ ದೀರ್ಘಕಾಲ ಭೂಮಿಯಲ್ಲಿ ಬಾಳಬೇಕೆಂಬ ಶಾಪವಿರುತ್ತದೆ. ಆದ್ದರಿಂದಲೇ ಎಂಟನೆಯ ಮಗುವನ್ನು ಗಂಗೆ ಕೊಲ್ಲುವುದಿಲ್ಲ. ಬದಲಿಗೆ ತನ್ನ ಬಳಿ ಐದು ವರ್ಷ ಇಟ್ಟುಕೊಂಡು ಸಕಲರೀತಿಯ ತರಬೇತಿ ನೀಡಿ ಒಪ್ಪಿಸುತ್ತೇನೆಂದು ಹೇಳಿ ಮಾಯವಾಗುತ್ತಾಳೆ. ಹಾಗೆ ಹುಟ್ಟಿದವನೇ ದೇವವ್ರತ. ಅದೇ ವ್ಯಕ್ತಿ ಮುಂದೆ ಭೀಷಣ ಪ್ರತಿಜ್ಞೆ ಮಾಡಿ ಭೀಷ್ಮನಾಗುವುದು. ಅವನಿಂದಲೇ ಕುರುವಂಶ ವೃದ್ಧಿಯಾಗುವುದು, ಹೀಗೆ ವೃದ್ಧಿಯಾದ ನಂತರವೇ ದಾಯಾದಿ ಕಲಹ ಶುರುವಾಗುವುದು, ಆ ದಾಯಾದಿ ಕಲಹದಿಂದಲೇ ಇಡೀ ಭಾರತದಲ್ಲಿ ಎಲ್ಲರಿಗೂ ಗೊತ್ತಿರುವ ಮಹಾಭಾರತ ಕಥನ ಹುಟ್ಟಿಕೊಳ್ಳುವುದು.
-ನಿರೂಪ