ಕಷ್ಟಗಳನ್ನೆಲ್ಲ ನಾವು ಕಷ್ಟಗಳೆಂದು ಭಾವಿಸುವುದಾದರೆ, ನಮಗೇ ಯಾಕೆ ಹೀಗಾಗುತ್ತದೆ ಎಂದು ಹಳಿದುಕೊಳ್ಳುವುದಾದರೆ, ಭೀಷ್ಮನ ಬದುಕನ್ನು ಒಮ್ಮೆ ನೋಡಬೇಕು. ಗಂಗೆ ಹೇಳುವ ಕಥೆಯ ಪ್ರಕಾರ, ಆತ ಅಷ್ಟವಸುಗಳಲ್ಲಿ ಕೊನೆಯವನು, ಶಾಪಗ್ರಸ್ತನಾಗಿ ಭೂಮಿಯಲ್ಲಿ ಹುಟ್ಟಬೇಕಾಗುತ್ತದೆ. ಆದರೆ ಉಳಿದ ವಸುಗಳಂತೆ ತಕ್ಷಣವೇ ಹಿಂತಿರುಗುವ ಅವಕಾಶವಿರುವುದಿಲ್ಲ. ದೀರ್ಘವಾಗಿ ಭೂಮಿಯಲ್ಲಿ ಬದುಕಬೇಕಾಗುವುದೇ ಅವನಿಗಿರುವ ಶಾಪ. ಹಾಗೆ ಶಾಪ ಹೊಂದಿ ಭೂಮಿಯಲ್ಲಿ ಬದುಕುವ ಆತ, ಆದರ್ಶದ ಪರಮೋಚ್ಚ ಆದರ್ಶದಂತೆ ಬದುಕುತ್ತಾನೆ. ತನ್ನ ನಂಬಿಕೆ, ಪ್ರತಿಜ್ಞೆಗಳೊಂದಿಗೆ ಎಲ್ಲೂ ರಾಜಿಯೇ ಆಗುವುದಿಲ್ಲ. ಅವನ ಬದುಕಿನಲ್ಲಿ ಮಾಡಿದ ಬಹುದೊಡ್ಡ ತಪ್ಪೆಂದರೆ, ದುರ್ಯೋಧನನನ್ನು ವಿರೋಧಿಸದೇ ಹೋಗಿದ್ದು. ಅವನು ಸಾಮ್ರಾಟ, ಅವನಿಗೆ ನಿಷ್ಠನಾಗಿರಬೇಕು, ಎದುರಾಡಬಾರದು ಎಂಬ ಅವಾಸ್ತವಿಕ ಆದರ್ಶವೊಂದೇ, ಅವನನ್ನು ಪ್ರಶ್ನಾರ್ಹನನ್ನಾಗಿ ಮಾಡಿದ್ದು!
ಅವನ ಬದುಕನ್ನು ನೋಡಿ, ಹುಟ್ಟಿದ್ದೇ ಶಾಪಗ್ರಸ್ತನಾಗಿ. ಅತಿಕಿರಿಯ ವಯಸ್ಸಿನಲ್ಲೇ ತಂದೆಗಾಗಿ ಸಿಂಹಾಸನವನ್ನು ತ್ಯಜಿಸುವ ಅನಿವಾರ್ಯತೆ. ಅಷ್ಟೂ ಸಾಲದೆಂಬಂತೆ ಜೀವನಪರ್ಯಂತ ಮದುವೆಯೇ ಆಗುವುದಿಲ್ಲ, ಅದೂ ತಂದೆಗಾಗಿ ಎಂಬ ಪ್ರತಿಜ್ಞೆ. ಒಬ್ಬ ತಮ್ಮ ಯುದ್ಧದಲ್ಲಿ ಸತ್ತರೆ, ಇನ್ನೊಬ್ಬ ಕಾಯಿಲೆಯಿಂದ ಸತ್ತ. ಕಾಯಿಲೆಯಿಂದ ಸತ್ತ ತಮ್ಮ ವಿಚಿತ್ರವೀರ್ಯನಿಗೆ ಮದುವೆ ಮಾಡಲು ಹೊರಟು ಶತೃವನ್ನು ಸೃಷ್ಟಿಸಿಕೊಳ್ಳುತ್ತಾನೆ. ಕಾಶೀರಾಜನ ಪುತ್ರಿ ಅಂಬೆ, ಭೀಷ್ಮನಿಂದಾಗಿ ತನ್ನ ಜೀವನವೇ ಹಾಳಾಗಿ ಹೋಯಿತು. ಅವನ ನಾಶವೇ ತನ್ನ ಗುರಿ ಎಂದು ತಪಸ್ಸು ಮಾಡುತ್ತಾಳೆ. ಅದರಲ್ಲಿ ಯಶಸ್ಸನ್ನೂ ಸಾಧಿಸುತ್ತಾಳೆ. ಆದರೆ ಇಲ್ಲಿ ಭೀಷ್ಮನ ಸ್ವಾರ್ಥವೇನಿರುವುದಿಲ್ಲ. ಅವನು ಮಾನವೀಯತೆಯನ್ನು ಮರೆತು ಕ್ಷತ್ರಿಯಧರ್ಮವನ್ನು ಪಾಲಿಸಿದ್ದು, ಅದೂ ತಮ್ಮನಿಗಾಗಿ…ಅದೊಂದೇ ತಪ್ಪಾಗಿದ್ದು. ಅಂಬೆಯೂ ಪರಿಸ್ಥಿತಿಗೆ ಸಿಲುಕಿ ಹತಭಾಗ್ಯಳಾಗುತ್ತಾಳೆ!
ಜೀವನಪರ್ಯಂತ ತನ್ನದಲ್ಲದ ತಪ್ಪಿಗೆ ಬೆಲೆ ತೆರುತ್ತ, ಹೋಗುತ್ತಾನೆ. ಅದು ಹೇಗಾಗುತ್ತದೆ ಎಂದರೆ, ಏನೋ ಮಾಡಲು ಹೋಗಿ, ಇನ್ನೇನೋ ಮಾಡಲೇಬೇಕಾದ ಸಂದಿಗ್ಧ. ತಮ್ಮ ವಿಚಿತ್ರವೀರ್ಯ ಸತ್ತ ನಂತರ, ಭೀಷ್ಮನೆ ಮದುವೆ ಮಾಡಿಸಿದ ಅಂಬೆಯ ಸಹೋದರಿಯರಾದ ಅಂಬಿಕೆ, ಅಂಬಾಲಿಕೆಯರೂ ಚಿಕ್ಕ ವಯಸ್ಸಿನಲ್ಲೇ ವಿಧವೆಯರಾಗುತ್ತಾರೆ. ಅಲ್ಲಿಗೆ ಮೂವರು ಸಹೋದರಿಯರ ಪಾಲಿಗೆ ಭೀಷ್ಮ ಪರೋಕ್ಷವಾಗಿ ಶತೃ. ಅಂಬೆ ನೇರವಾಗಿ ವಿರೋಧಿಸಿದರೆ, ಉಳಿದಿಬ್ಬರು ಮೌನವಾಗಿ ಹಿಡಿಶಾಪ ಹಾಕಿದ್ದರೆ, ಸುಳ್ಳೆನ್ನಲಾದೀತೇ?
ಈ ಶಾಪ ಹಾಕುವುದನ್ನು ಅಸಂಭವ ಎನ್ನಲಾಗುವುದಿಲ್ಲ. ಕಾರಣವಿಷ್ಟೇ: ಈ ಮೂವರು ಸಹೋದರಿಯರು ಕುರುವಂಶದ ಕುಡಿಗಳನ್ನು ವಿವಾಹವಾಗಲು ತೀರ್ಮಾನಿಸಿರುವುದಿಲ್ಲ. ಅವರ ತಂದೆ, ಕುರುಕುಲಕ್ಕೆ ಮದುವೆ ಮಾಡಿಕೊಡುವ ಪದ್ಧತಿ ಮುರಿದು ಸ್ವಯಂವರ ಏರ್ಪಡಿಸಿರುತ್ತಾನೆ. ತಾವು ಇಷ್ಟಪಟ್ಟವರನ್ನು ಆಯ್ದುಕೊಳ್ಳುವುದು ಅವರಿಗಿದ್ದ ಸ್ವಾತಂತ್ರ್ಯ. ಆದರೆ ಅವಮಾನಿತನಾಗುವ ಭೀಷ್ಮ, ಇದು ನೇರವಾಗಿ ತನಗೇ ಮಾಡಿದ ಅಪಮಾನ ಎಂದು ಆ ಸ್ವಾತಂತ್ರ್ಯವನ್ನು ಹರಣ ಮಾಡುತ್ತಾನೆ. ಅಂದರೆ ಆ ಮೂವರು ಸಹೋದರಿಯನ್ನು ಹೊತ್ತುಕೊಂಡು ಬರುತ್ತಾನೆ. ಹಾಗೆ ಹೊತ್ತುತಂದ ಯುವತಿಯರಿಗೆ ವಿಧಿಯಿಂದ ಸಿಕ್ಕಿದ ಕೊಡುಗೆ ವಿಧವೆಯರ ಪಟ್ಟ! ಅದೂ ಮದುವೆಯಾದ ಕೆಲವೇ ವರ್ಷಗಳಲ್ಲಿ, ಅತಿ ಚಿಕ್ಕ ವಯಸ್ಸಿನಲ್ಲಿ. ಯಾರಿಗೆ ಸಿಟ್ಟು ಬರುವುದಿಲ್ಲ ಹೇಳಿ?
ತಾವು ಬಯಸದೇ ಇದ್ದ ಭಾಗ್ಯವನ್ನೇನೋ ಭೀಷ್ಮ ನೀಡಿದ, ಅದರಿಂದಾದ ಸಾರ್ಥಕ್ಯವೇನು? ಹೀಗೆ ನೋಡಿದರೆ, ಮೂವರ ಸಹೋದರಿಯರ ಬದುಕು ಭೀಷ್ಮನ ಈ ಕೃತ್ಯದಿಂದ ಬರ್ಭರವಾಗುತ್ತದೆ. ಈಗ ಹೇಳಿ, ಇದರಿಂದ ಭೀಷ್ಮನಿಗೆ ವ್ಯಸನವಾಗಿರುವುದಿಲ್ಲವೇ? ತನ್ನಿಂದ ಆ ಹೆಣ್ಣುಮಕ್ಕಳು ನೊಂದು ಬೇಯುತ್ತಿರುತ್ತಾರೆ ಅನ್ನುವುದು ಗೊತ್ತಿರುವುದಿಲ್ಲವೇ? ಅಷ್ಟಲ್ಲದೇ ತಮ್ಮಕ್ಕ ಭೀಷ್ಮನಿಂದಲೇ ಘೋರಸ್ಥಿತಿಗೆ ತಳ್ಳಲ್ಪಟ್ಟಿದ್ದು ಎಂಬ ಸಂಗತಿ ಅವರನ್ನು ಕಾಡುತ್ತಿರುವುದಿಲ್ಲವೇ? ಇದು ಒಳಗೊಳಗೆ ಒಂದು ಜ್ವಾಲಾಮುಖೀಯನ್ನು ಸೃಷ್ಟಿ ಮಾಡಿರುವುದಿಲ್ಲವೇ? ಇಂತಹದೊಂದು ಕುದಿ, ಬೇಗುದಿ ಬಲಿ ತೆಗೆದುಕೊಂಡರೆ, ಅದು ಭೀಷ್ಮನನ್ನೇ ತಾನೇ?
-ನಿರೂಪ