Advertisement

ಭೀಮ್‌ಸೇನ್‌ ಜೋಶಿ ಹಿಮಾಲಯಕ್ಕೆ ಸಮಾನರು: ಪಂ. ಉಪೇಂದ್ರ ಭಟ್‌

03:42 PM Feb 15, 2017 | |

ಡೊಂಬಿವಲಿ: ಗಾನ ಭಾಸ್ಕರ, ಭಾರತ ರತ್ನ ಪಂಡಿತ್‌ ಭೀಮಸೇನ್‌ ಜೋಶಿ ಅವರು ಸಂಗೀತ ಕ್ಷೇತ್ರದಲ್ಲಿ ಹಿಮಾಲಯಕ್ಕೆ ಸಮಾನರಾಗಿದ್ದು, ಅವರ ಸಂಗೀತ ಗರಡಿಯಲ್ಲಿ ಪಳಗಿದ ನಾನು ಒಂದು ಮುಷ್ಟಿ ಹಿಮಮಾತ್ರ. ಅಂತಹ ಮಹಾನ್‌ ಗುರುಗಳನ್ನು ಪಡೆದ ನಾನೇ ಭಾಗ್ಯವಂತ ಎಂದು ಪ್ರಸಿದ್ಧ ಹಿಂದೂಸ್ತಾನಿ ಗಾಯಕ ಪಂಡಿತ್‌ ಉಪೇಂದ್ರ ಭಟ್‌ ಅವರು ಅಭಿಪ್ರಾಯಿಸಿದರು.

Advertisement

ಫೆ. 12ರಂದು ಸಂಜೆ ಡೊಂಬಿವಲಿ ಪೂರ್ವದ ಸಾವಿತ್ರಿಭಾಯಿ ಫುಲೆ ಸಭಾಗೃಹದಲ್ಲಿ ಜಿಎಸ್‌ಬಿ ಮಂಡಳ ಡೊಂಬಿವಲಿ ಆಯೋಜಿಸಿದ್ದ ವಾರ್ಷಿಕ ಪಂಡಿತ್‌ ಭೀಮಸೇನ್‌ ಜೋಶಿ ಸಂಸ್ಮರಣ ಪ್ರಶಸ್ತಿ ಪ್ರದಾನ ಹಾಗೂ ಸಂಗೀತ ಸಂಭ್ರಮ ಸಮಾರಂಭದಲ್ಲಿ ಪ್ರಶಸ್ತಿ ಸ್ವೀಕರಿಸಿ ಮಾತನಾಡಿದ ಅವರು, ಭೀಮಸೇನ್‌ ಜೋಶಿ ಅವರು ಹಾಡಿದ್ದೆ ಹಾಡಾಗುತ್ತಿತ್ತು.  ಆದರೆ ನಾವು ಮಾತ್ರ ಅವರು ಹಾಡಿದ ಹಾಡುಗಳನ್ನು ಕಲಿತು ಹಾಡಬೇಕಿತ್ತು. ಮತ್ತೆ ಪುನರ್ಜನ್ಮ ಎಂಬುದಿದ್ದರೆ ಅವರ ಶಿಷ್ಯನಾಗಿ ಮತ್ತೆ ಹುಟ್ಟಲು ಬಯಸುತ್ತೇನೆ. ಇಂದು ಪಂಡಿತ್‌ ಭೀಮಸೇನ ಜೋಶಿ ಅವರ ಸಂಸ್ಮರಣೆಯ ಪ್ರಶಸ್ತಿಯು ಅವರ ಶಿಷ್ಯರಾದ ಪಂಡಿತ್‌ ಓಂಕಾರ್‌ ಗುಲ್ವಾಡಿ ಮತ್ತು ಪಂಡಿತ್‌ ವಸಂತ ರಾವ್‌ ಅಜಗಾಂವ್ಕರ್‌ ಅವರ ಹಸ್ತದಿಂದ ಪ್ರದಾನಿಸಿರುವುದು ಹೃದಯ ತುಂಬಿ ಬಂದಿದೆ. ವಿದೇಶಗಳಲ್ಲಿ ದೊರೆತ ಸಮ್ಮಾನಕ್ಕಿಂತಲೂ ಇಂದು ತಾಯ್ನಾಡಿನ ಸಮಾಜ ಬಾಂಧವರು ಪ್ರಶಸ್ತಿಯನ್ನು ನೀಡಿದ್ದು, ಜೀವನದ ಬಹು ಸಂತೋಷದ ಕ್ಷಣವಾಗಿದೆ. ಇದನ್ನು ಜೀವಮಾನ ಶ್ರೇಷ್ಠ ಪ್ರಶಸ್ತಿ ಎಂದು ಭಾವಿಸುತ್ತೇನೆ. ನನ್ನನ್ನು ಗುರುತಿಸಿ ಪ್ರಶಸ್ತಿ ಪ್ರದಾನಿಸಿ ಜಿಎಸ್‌ಬಿ ಮಂಡಳ ಡೊಂಬಿವಲಿ ಸಂಸ್ಥೆಗೆ ಋಣಿಯಾಗಿದ್ದೇನೆ ಎಂದರು.

ಸಮಾರಂಭದಲ್ಲಿ ಪಂಡಿತ್‌ ಉಪೇಂದ್ರ ಭಟ್‌ ಅವರನ್ನು ಸಂಸ್ಥೆಯ 2017 ನೇ ಸಾಲಿನ ಪಂಡಿತ್‌ ಭೀಮಸೇನ್‌ ಜೋಶಿ ಸಂಸ್ಮರಣ ಪ್ರಶಸ್ತಿಯನ್ನು ಪ್ರದಾನಿಸಿ, ಶಾಲು ಹೊದೆಸಿ, ಫಲಪುಷ್ಪ, ಸ್ಮರಣಿಕೆ, ಸಮ್ಮಾನ ಪತ್ರ ಹಾಗೂ ಗೌರವ ನಿಧಿಯನ್ನಿತ್ತು ಗೌರವಿಸಲಾಯಿತು.

ಸಮಾರಂಭದಲ್ಲಿ ಮುಖ್ಯ ಅತಿಥಿಯಾಗಿ ಪಾಲ್ಗೊಂಡ ಹಿರಿಯ ಗಾಯಕ ಪಂಡಿತ್‌ ವಸಂತರಾವ್‌ ಅಜಗಾಂವ್ಕರ, ಗೌರವ ಅತಿಥಿ ಗಳಾಗಿ ಉದ್ಯಮಿ ಹೇಮಂತ್‌ ಬಾಂದೋಡ್ಕರ್‌, ಜಿ. ಎಸ್‌. ಬಿ. ಸೇವಾ ಮಂಡಳ ಸಾಯನ್‌ ಮುಂಬಯಿ ಕೋಶಾಧಿಕಾರಿ ವಿಜಯ ಭಟ್‌, ಜಿಎಸ್‌ಬಿ ಶಿಕ್ಷಣ ಟ್ರಸ್ಟ್‌ನ ಕಾರ್ಯಾಧ್ಯಕ್ಷ ಡಾ| ಯೋಗೇಶ್‌ ಆಚಾರ್ಯ, ವೈದ್ಯ ಡಾ| ಘನಶ್ಯಾಮ್‌ ಶಿರಾಲಿ, ತಬಲಾ ವಾದಕ ಪಂಡಿತ್‌ ಓಂಕಾರನಾಥ ಗುಲ್ವಾಡಿ, ಜಿಎಸ್‌ಬಿ ಟೆಂಪಲ್‌ ಟ್ರಸ್ಟ್‌ನ ಕಾರ್ಯಾಧ್ಯಕ್ಷ ಅವಧೂತ ದಾಬೋಳ್ಕರ, ಜಿಎಸ್‌ಬಿ ಟೆಂಪಲ್‌ ಟ್ರಸ್ಟ್‌ನ ಪ್ರವೀಣ್‌ ಕಾನವಿಂದೆ ಮೊದಲಾದವರು ಉಪಸ್ಥಿತರಿದ್ದರು.

ಸಂಸ್ಥೆಯ ಅಧ್ಯಕ್ಷ ಮನೋಹರ ಪೈ ಹಾಗೂ ಕಾರ್ಯದರ್ಶಿ ನಿತ್ಯಾನಂದ ಶೆಣೈ ಅವರು ಅತಿಥಿಗಳನ್ನು ಗೌರವಿಸಿದರು. ಸಂಗೀತ ಕಾರ್ಯಕ್ರಮ ನೀಡಿದ ಗಾಯಕ ರುತುಜಾ ಲಾಡ್‌, ರವೀಂದ್ರ ಪೈ, ವರ್ಷಾ ಪ್ರಭು, ಹಾರ್ಮೋನಿಯಂನಲ್ಲಿ ಸಹಕರಿಸಿದ ವಿನೋದ್‌ ಪದಗೆ, ತಬಲಾ ವಾದಕ ರಾಜೇಶ್‌ ಭಾಗವತ್‌, ಪಕ್ವಾಜ್‌ನಲ್ಲಿ ಸಹಕರಿಸಿದ ಮಂಗಲ್‌ದಾಸ್‌ ಗುಲ್ವಾಡಿ, ನಿರ್ವಹಣೆಗೈದ ಮೋಹನ್‌ ಕಾನ್ಹರೆ ಅವರನ್ನು ಹಿರಿಯ ಕಲಾವಿದ ಪಂಡಿತ್‌ ಉಪೇಂದ್ರ ಭಟ್‌ ಹಾಗೂ ಪಂಡಿತ್‌ ಓಂಕಾರ್‌ನಾಥ್‌ ಗುಲ್ವಾಡಿ ಅವರು ಗೌರವಿಸಿದರು.

Advertisement

ಅತಿಥಿ-ಗಣ್ಯರು ಜ್ಯೋತಿ ಪ್ರಜ್ವಲಿಸಿ ಸಮಾರಂಭವನ್ನು ಉದ್ಘಾಟಿಸಿದರು. ಕಾರ್ಯಕ್ರಮದ ಸಂಯೋಜಕ ವಿ. ಎನ್‌. ಭಟ್‌ ಕಾರ್ಯಕ್ರಮ ನಿರ್ವಹಿಸಿದರು. ಸಂಸ್ಥೆಯ ಅಧ್ಯಕ್ಷ ಮನೋಹರ್‌ ಪೈ ಸ್ವಾಗತಿಸಿದರು. ಕೊನೆಯಲ್ಲಿ ಪಂಡಿತ್‌ ಉಪೇಂದ್ರ ಭಟ್‌ ಅವರಿಂದ ಸಂಗೀತ ಕಾರ್ಯಕ್ರಮ ನಡೆಯಿತು. ಬ್ಲೀನ್‌ ಜಿ. ವ್ಹಿ. ಎಸ್‌. ಫಾರ್ಮ ಲಿಮಿಟೆಡ್‌, ಸಾರಸ್ವತ ಕೋ ಆಪರೇಟಿವ್‌ ಬ್ಯಾಂಕ್‌, ಎನ್‌ಕೆಜಿಎಸ್‌ಬಿ ಬ್ಯಾಂಕ್‌ ಹಾಗೂ ಜಿಎಸ್‌ಬಿ ಟೆಂಪಲ್‌ ಟ್ರಸ್ಟ್‌ ಸಂಸ್ಥೆಗಳು ಪ್ರಾಯೋಜಕರಾಗಿ ಸಹಕರಿಸಿದವು. ಕಲಾಭಿಮಾನಿಗಳು ಅಧಿಕ ಸಂಖ್ಯೆಯಲ್ಲಿ ಪಾಲ್ಗೊಂಡಿದ್ದರು. 

Advertisement

Udayavani is now on Telegram. Click here to join our channel and stay updated with the latest news.

Next