Advertisement

ಭೀಮ ಬದುಕಿನ ಅವಲೋಕನ

06:45 PM May 18, 2019 | mahesh |

ಕಲೆ-ಸಂಸ್ಕೃತಿಗೆ ಸಂಬಂಧಿಸಿದ ಯಾವುದೇ ಕ್ಷೇತ್ರದಲ್ಲಿ “ಲೆಜೆಂಡ್‌’ ಅನ್ನಿಸಿಕೊಂಡವರ ವ್ಯಕ್ತಿತ್ವದ ಸುತ್ತ ತೀವ್ರ ಅಭಿಮಾನದ ಹಾಗೂ ವಿಸ್ಮಯದ ಮಾಯಾ ಪರಿವೇಶವೊಂದು ನಿರ್ಮಿತವಾಗಿರುತ್ತದೆ. ಸಮಾಜದ ವಿವಿಧ ಸ್ತರಗಳಲ್ಲಿ ಅವರು ಮೂಡಿಸಿದ ಪ್ರಭಾವದಿಂದ ಸಾಕಷ್ಟು ಗುಣಾತ್ಮಕ ಪ್ರಯೋಜನಗಳು ಲಭಿಸುವವೇನೋ ನಿಜ. ಆದರೆ ಇದೇ ವೇಳೆ, ಅಂಥ ಸಾಧನಶೀಲರ ಬಗ್ಗೆ ಸಾಕಷ್ಟು ಇತ್ಯಾತ್ಮಕ-ನೇತ್ಯಾತ್ಮಕ ಅಂತೆಕಂತೆಗಳೂ ಸೃಷ್ಟಿಯಾಗಿರುತ್ತವೆ. ಸಾಹಿತ್ಯ, ಸಂಗೀತ, ರಂಗಕಲೆಗಳಲ್ಲಿ ದುಡಿದು ಹೆಸರುಮಾಡಿದ ಸಾಧಕರು ತಮ್ಮ ಖಾಸಗಿ ಬದುಕಿನಲ್ಲಿ ಹೇಗೆ ನಡೆದುಕೊಂಡಿದ್ದಾರೆಂಬ ಕುತೂಹಲವೂ ಸಾಮಾನ್ಯ ಜನಮಾನಸದಲ್ಲಿ ಇದ್ದೇ ಇರುತ್ತದೆ. ಹಿಂದೂಸ್ಥಾನಿ ಗಾಯಕರಾಗಿ ಕರ್ನಾಟಕ-ಮಹಾರಾಷ್ಟ್ರಗಳನ್ನು ತಮ್ಮ ಕರ್ಮಕ್ಷೇತ್ರಗಳನ್ನಾಗಿಸಿಕೊಂಡು ರಾಷ್ಟ್ರಾದ್ಯಂತ ಹೆಸರು ಮಾಡಿದ, ಅಂತಾರಾಷ್ಟ್ರೀಯ ಮಟ್ಟದಲ್ಲೂ ತಮ್ಮ ಕೀರ್ತಿಪತಾಕೆಯನ್ನು ಹಬ್ಬಿಸಿದ, “ಭಾರತರತ್ನ’ ಪ್ರಶಸ್ತಿಗೆ ನ್ಯಾಯವಾಗಿಯೇ ಪಾತ್ರರಾಗಿರುವ, ಲಕ್ಷಾಂತರ ಸಂಗೀತಾಭಿಮಾನಿಗಳ ಆರಾಧ್ಯ ದೈವವೆನಿಸಿರುವ ಕಿರಾನಾ ಘರಾನಾ ಶೈಲಿಯೊಂದಿಗೆ ಇತರ ಹಲವು ಘರಾನಾ ಶೈಲಿಗಳ ಉತ್ತಮಾಂಶಗಳನ್ನು ಮೇಳೈಸಿಕೊಂಡ ಮೇರು ಗಾಯಕ ಪಂಡಿತ್‌ ಭೀಮಸೇನ ಜೋಶಿಯವರ ನಡೆ-ನುಡಿ-ಚಿತ್ರಗಳನ್ನು ಸ್ವಾರಸ್ಯಕರ ಹಾಗೂ ಕುತೂಹಲಕರ ಪ್ರಸಂಗ/ದೃಷ್ಟಾಂತಗಳೊಂದಿಗೆ ಸಾದರಪಡಿಸುವ ಕೆಲಸ, ದ ವಾಯ್ಸ ಆಫ್ ದ ಪೀಪಲ್‌ ಎಂಬ ಸಾರ್ಥಕ ಶೀರ್ಷಿಕೆಯನ್ನು ಹೊಂದಿರುವ ಈ ನೆನಪಿನ ಸಂಪುಟದಲ್ಲಿ ಆಗಿದೆ.

Advertisement

ಕಿಶೋರಾವಸ್ಥೆಯಲ್ಲೆ ಕಿರಾನಾ ಘರಾನಾದ ಉಸ್ತಾದ್‌ ಅಬ್ದುಲ್‌ ಕರೀಂಖಾನರ ಗಾಯನದ ಧ್ವನಿತಟ್ಟೆಗಳನ್ನು ಆಲಿಸುವ ಮೂಲಕ ಸಂಗೀತದ ಹುಚ್ಚನ್ನು ಹತ್ತಿಸಿಕೊಂಡ ಭೀಮಸೇನ ಜೋಶಿ ಅವರು ಮನೆಬಿಟ್ಟು ಗಾಯನದ ಮೂಲಕ ರೈಲ್ವೆಯಾನದ ದುಡ್ಡು ಹೊಂದಿಸಿಕೊಂಡು ಉತ್ತರಭಾರತಕ್ಕೆ ತೆರಳಿ ಗ್ವಾಲಿಯರ್‌, ಇಂದೋರ್‌, ಆಗ್ರಾ, ಕೋಲ್ಕತಾ, ಜಾಲಂಧರ್‌ ಮುಂತಾದ ಹಿಂದೂಸ್ಥಾನಿ ಸಂಗೀತದ ಕೇಂದ್ರ ಸ್ಥಳಗಳಿಗೆ ಪ್ರಯಾಣಿಸಿ ಸಂಗೀತ ಗುರುವಿನ ಶೋಧ ನಡೆಸಿದ ಕುತೂಹಲಕಾರಿ ಪ್ರಸಂಗದಿಂದ ಈ “ಭೀಮಸೇನ ಗಾಥೆ’ಯನ್ನು ಲೇಖಕರು ಆರಂಭಿಸಿದ್ದಾರೆ. ನಿನ್ನ ಗುರು ನಿನ್ನ ಊರಾದ ಗದಗಿನಲ್ಲೇ ಇದ್ದಾರೆ ಎಂಬ ಅಮೂಲ್ಯ ಸಲಹೆ ಜಾಲಂಧರ್‌ನಲ್ಲಿ ಲಭಿಸಿದ್ದರಿಂದ ಗದಗಿಗೆ ಬಂದು ಸವಾಯಿ ಗಂಧರ್ವರೆಂದೇ ಖ್ಯಾತರಾದ ಅಬ್ದುಲ್‌ ಕರೀಂಖಾನರ ನೇರ ಶಿಷ್ಯರಾದ ಪಂಡಿತ್‌ ರಾಮಭಾವೂ ಕುಂದಗೋಳಕರರ ಶಿಷ್ಯರಾದದ್ದು ಈಗ ಇತಿಹಾಸ.

ಇಲ್ಲಿ ಪಂಡಿತ್‌ ಜೋಷಿಯವರ ವ್ಯಕ್ತಿತ್ವವನ್ನು ಅನಾವರಣ ಮಾಡಿದವರಲ್ಲಿ ಅವರ ತಂದೆ, ತಮ್ಮ , ಮಕ್ಕಳು ಮುಂತಾಗಿ ಅವರ ಹತ್ತಿರದ-ದೂರದ ಬಂಧುಬಳಗದವರಿದ್ದಾರೆ; ಅವರ ಶಿಷ್ಯಂದಿರು, ಪ್ರಶಿಷ್ಯಂ ದಿರಿದ್ದಾರೆ; ವಿವಿಧ ಘರಾನಾಗಳ ಪ್ರಖ್ಯಾತ ಗಾಯಕರು, ತಬ್ಲಾ-ಹಾರ್ಮೋನಿಯಂ ವಾದಕರಿದ್ದಾರೆ; ಅವರ ಗಾಯನ ಕಛೇರಿಗಳನ್ನು ಏರ್ಪಡಿಸುತ್ತ ಬಂದಿರುವ, ಇಂದೂ ಅವರ ಶಿಷ್ಯರ ಮೂಲಕ ಅಂಥ ಕಛೇರಿಗಳನ್ನು ಸಂಘಟಿಸುತ್ತಿರುವ ರಾಜ್ಯದ/ರಾಷ್ಟ್ರದ ಒಳಗಿನ ಹಾಗೂ ಹೊರಗಿನ ಸಂಗೀತಾಭಿಮಾನಿಗಳಿದ್ದಾರೆ. ಇವರೆಲ್ಲರ ಕಣ್ಣಲ್ಲಿ ಭೀಮಸೇನ ಜೋಶಿ ಹೇಗೆ “ಸರಳ, ಆದರೆ ಘನವಂತಿಕೆಯ’ ಸಂಗೀತ ತಪಸ್ವಿಯಾಗಿ ಕಾಣಿಸಿದರೆನ್ನುವುದನ್ನು ಸ್ವತಃ ಸಂಗೀತ ವಿದ್ವಾಂಸರಾದ, ಅವರ ಪ್ರಶಿಷ್ಯರಾದ ಡಾ| ನಾಗರಾಜ ರಾವ್‌ ಹವಾಲ್ದಾರ್‌ ಅಚ್ಚುಕಟ್ಟಾಗಿ ಸ್ವಾರಸ್ಯಕರ ಕಥನ/ಪ್ರಸಂಗಗಳ/ಸ್ಮತಿಚಿತ್ರ-ಚಿತ್ರಣಗಳ ಮೂಲಕ ಈ ಸಂಪುಟದಲ್ಲಿ ಸಾದರಪಡಿಸಿದ್ದಾರೆ. ಸಂಗೀತಕ್ಕೆ ಸಂಬಂಧಿಸಿದ ವಿಶಿಷ್ಟ ಪಾರಿಭಾಷಿಕ ಪದಗಳ ಹಾಗೂ ಕನ್ನಡ ನಾಡು-ನುಡಿ-ಸಂಸ್ಕೃತಿಗೆ ಸಂಬಂಧಿಸಿದ ಪದಬಳಕೆ ಕುರಿತ ವಿವರಗಳನ್ನು ಅಲ್ಲಲ್ಲಿ ಟಿಪ್ಪಣಿ ರೂಪದಲ್ಲಿ ನೀಡಿದ್ದು, ಇದರಿಂದ ಕನ್ನಡೇತರ ಸಂಗೀತಪ್ರೇಮಿಗಳ ಓದಿಗೆ ಅನುಕೂಲವೇ ಆಗಲಿದೆ. ಪಂಡಿತರಿಗೂ ಪಾಮರರಿಗೂ ಸಲ್ಲುವವರಾಗಿ, ಜನಸಾಮಾನ್ಯರ ಹಾಗೂ ಸಮಕಾಲೀನ ಸಂಗೀತ ಸಾಧಕರ ಜೊತೆ ಅವರು ಹೇಗೆ ನಡೆದುಕೊಂಡರೆಂಬುದನ್ನು ಈ ಸಂಪುಟದ ಪುಟಪುಟವೂ ಅನನ್ಯ ರೀತಿಯಲ್ಲಿ ತೋರಿಸಿಕೊಟ್ಟಿದೆ. ಪಂ. ಜೋಶಿಯವರಿಗೆ ಸಂಬಂಧಿಸಿದ ಅತ್ಯಪೂರ್ವ ಛಾಯಾಚಿತ್ರಗಳು ಸಂಪುಟದ ಸೌಂದರ್ಯ ಹಾಗೂ ಘನತೆಯನ್ನು ಹೆಚ್ಚಿಸಿವೆ.

ಭಾರತರತ್ನ ಪಂ. ಭೀಮಸೇನ್‌ ಜೋಶಿ
(ದ ವಾಯ್ಸ ಆಫ್ ದ ಪೀಪಲ್‌)
ಲೇ.: ಡಾ| ನಾಗರಾಜ ರಾವ್‌ ಹವಾಲ್ದಾರ್‌
ಪ್ರ.: ಸುನಾದ ಆರ್ಟ್‌ ಫೌಂಡೇಶನ್‌, 140, ಸುಕೃತ್‌ ನಿವಾಸ್‌, 5ನೆಯ ಮೈನ್‌, ಐಟಿಐ ಲೇಔಟ್‌, ವಿದ್ಯಾಪೀಠ, ಬನಶಂಕರಿ 3ನೆಯ ಘಟ್ಟ , ಬೆಂಗಳೂರು-560085
ಮೊದಲ ಮುದ್ರಣ: 2018, ಬೆಲೆ: ರೂ. 750

ಜಕಾ

Advertisement
Advertisement

Udayavani is now on Telegram. Click here to join our channel and stay updated with the latest news.

Next