Advertisement

ಭೀಮ್‌ಸೇನ್‌ ಜೋಶಿ ಸ್ಮೃತಿ ಸಂಗೀತ ಸಮಾರೋಪ ಪ್ರಶಸಿ ಪ್ರಧಾನ

10:19 AM Apr 03, 2022 | Team Udayavani |

ಮುಂಬಯಿ: ನಗರದ ಪ್ರತಿಷ್ಠಿತ ಸಾಮಾಜಿಕ ಸಂಸ್ಥೆಗಳಲ್ಲೊಂದಾದ ಜಿಎಸ್‌ಬಿ ಸಭಾ ಮುಲುಂಡ್‌ ಹಾಗೂ ಮುಂಬಯಿ ಫೋರಂ ಆಫ್‌ ಆರ್ಟಿಸ್ಟ್‌ ವತಿಯಿಂದ ಭಾರತೀಯ ಸಂಗೀತಲೋಕದ ದಿಗ್ಗಜ ಭಾರತ ರತ್ನ ಪಂಡಿತ್‌ ಭೀಮ್‌ಸೇನ್‌ ಜೋಶಿ ಸ್ಮೃತಿ ಸಂಗೀತ ಸಮಾರೋಪ ಸಮಾರಂಭವು ಇತ್ತೀಚಿಗೆ ಮುಲುಂಡ್‌ ಪಶ್ಚಿಮದ ಜೆಎನ್‌ ರೋಡ್‌ನ‌ ಮಹಾರಾಷ್ಟ್ರ ಸೇವಾ ಸಂಘದ ಸಭಾಗೃಹದಲ್ಲಿ ಸಂಗೀತ ಲೋಕದ ದಿಗ್ಗಜರ ಸಮಾಗಮದೊಂದಿಗೆ ಜರಗಿತು.

Advertisement

ಸಮಾರಂಭದಲ್ಲಿ ಖ್ಯಾತ ಹಾರ್ಮೋನಿಯಂ ವಾದಕ ಪಂಡಿತ್‌ ಸುಧೀರ್‌ ನಾಯಕ್‌ ಮತ್ತು ಖ್ಯಾತ ತಬಲಾ ವಾದಕ ಪಂಡಿತ್‌ ಭರತ್‌ ಕಾಮತ್‌ ಅವರಿಗೆ ಶಾಲು ಹೊದೆಸಿ, ಫಲಪುಷ್ಪ, ಸ್ಮರಣಿಕೆ, ಸಮ್ಮಾನಪತ್ರದೊಂದಿಗೆ 2022ನೇ ಸಾಲಿನ ಪ್ರತಿಷ್ಠಿತ ಪಂಡಿತ್‌ ಭೀಮಸೇನ್‌ ಜೋಶಿ ಸ್ಮತಿ ಸಂಗೀತ ಸಮಾರೋಪ ಪ್ರಶಸ್ತಿಯನ್ನು ಗಣ್ಯರು ಪ್ರದಾನ ಮಾಡಿ ಶುಭ ಹಾರೈಸಿದರು.

ಇದೇ ಸಂದರ್ಭದಲ್ಲಿ ಸುಧೀರ್‌ ನಾಯಕ್‌ ಅವರು ಹಾರ್ಮೋನಿಯಂ ಹಾಗೂ ಭರತ್‌ ಕಾಮತ್‌ ಅವರು ತಬಲಾ ವಾದನದ ಮೂಲಕ ಭಾರತರತ್ನ ಪಂಡಿತ್‌ ಭೀಮ್‌ಸೇನ್‌ ಜೋಶಿ ಅವರ ಅತ್ಯಂತ ಜನಪ್ರೀಯ ಭಕ್ತಿಗೀತೆಗಳನ್ನು ಪ್ರಸ್ತುತಪಡಿಸಿ ನೂರಾರು ಸಂಗೀತ ಪ್ರೇಮಿಗಳಿಗೆ ಸಂಗೀತದ ರಸದೌತಣ ನೀಡಿದರು.

ಮುಖ್ಯ ಗಾಯಕರಾಗಿ ಆಗಮಿಸಿದ ಖ್ಯಾತ ಗಾಯಕ ರಾಮ ದೇಶಪಾಂಡೆ ಅವರು ಮಾತನಾಡಿ, ಮುಖ್ಯ ಕಲಾವಿದರೊಂದಿಗೆ ಸಹ ಕಲಾವಿದರನ್ನು ಗೌರವಿಸಿರುವುದನ್ನು ಕಂಡು ಸಂತೋಷವಾಗಿದೆ. ಕಾಶ್ಮೀರದಿಂದ ಕನ್ಯಾ ಕುಮಾರಿವರೆಗಿನ ಭಾರತದಲ್ಲಿ ತಾನ್‌ಸೇನರ ಬಳಿಕ ಸಂಗೀತ ಕ್ಷೇತ್ರದಲ್ಲಿ ತನ್ನದೇ ಆದ ವಿಶಿಷ್ಟ ಸ್ಥಾನ ಪಡೆದ ಸಂಗೀತಗಾರರು ಅಂದರೆ ನಮ್ಮ ಪಂಡಿತ್‌ ಭೀಮ್‌ಸೇನ್‌ ಜೋಶಿಯವರು. ಅವರ ಜನ್ಮಶತಮಾನೋತ್ಸವ ವರ್ಷದಲ್ಲಿ ಇಲ್ಲಿ ನೂರಾರು ಸಂಗೀತ ರಸಿಕರ ಮಧ್ಯೆ ಗಾಯನವನ್ನು ಪ್ರಸ್ತುತಪಡಿಸುವುದು ನನ್ನ ಪರಮ ಭಾಗ್ಯ ಎಂದು ತಿಳಿಸಿ, ಸಂಗೀತದ ವಿವಿಧ ರಾಗಗಳನ್ನು ಹಾಡಿ, ಪಂಡಿತ್‌ ಭೀಮ್‌ ಸೇನ್‌ ಜೋಶಿ ಅವರ ಅನೇಕ ಜನಪ್ರಿಯ ಭಕ್ತಿ ಗೀತೆ, ಅಭಂಗಗಳನ್ನು ಪ್ರಸ್ತುತಪಡಿಸಿದರು. ಪಂಡಿತ್‌ ರಾಮ ದೇಶಪಾಂಡೆ ಅವರ ಸಂಗೀತ ಕಾರ್ಯಕ್ರಮದಲ್ಲಿ ಅರ್ಚನಾ ದೇಶ್‌ ಪಾಂಡೆ, ಗಂಧಾರ ದೇಶಪಾಂಡೆ, ಶ್ರೀನಿವಾಸ ಶೆಣೈ, ಅರವಿಂದ್‌ ಶೆಣೈ ಸಹಕರಿಸಿದರು.

ಇದೇ ಸಂದರ್ಭದಲ್ಲಿ ಗಾಯಕ ಪಂಡಿತ್‌ ರಾಮ ದೇಶಪಾಂಡೆ, ಸಹ ಕಲಾವಿದರಾದ ಪಖ್ವಾಜ್‌ ವಾದಕ ಮಹಾದೇವ ಪವಾರ್‌, ಮಂಜಿರಾ ವಾದಕ ರವೀಂದ್ರ ಶೆಣೈ ಹಾಗೂ ಖ್ಯಾತ ಕಾರ್ಯಕ್ರಮ ನಿರೂಪಕ ಸುಧೀರ್‌ ಗಾಡ್ಗಿಲ್‌ ಅವರನ್ನು ಶಾಲು ಹೊದೆಸಿ, ಫಲಪುಷ್ಪ, ಸ್ಮರಣಿಕೆಯನ್ನಿತ್ತು ಗೌರವಿಸಿದರು.

Advertisement

ಕಾರ್ಯಕ್ರಮವನ್ನು ನಿರೂಪಕ ಹಾಗೂ ಪಂಡಿತ್‌ ಭೀಮ್‌ಸೇನ್‌ ಜೋಶಿ ಅವರ ನಿಕಟವರ್ತಿ ಸುಧೀರ್‌ ಗಾಡ್ಗಿಳ್‌ ನಿರೂಪಿಸಿ, ಗಣ್ಯರನ್ನು ಪರಿಚಯಿಸಿ, ಪಂಡಿತ್‌ ಭೀಮ್‌ ಸೇನ್‌ ಜೋಶಿ ಅವರ ಸಾಧನೆಗಳನ್ನು ವಿವರಿಸಿದರು. ಮುಖ್ಯ ಅತಿಥಿ ಕಾರ್ಯಕಾರಿ ಅಭಿಯಂತ ಗಣೇಶ್‌ ಕೆ. ಹೆಗ್ಡೆ, ಗೌರವ ಅತಿಥಿ ಜಿಎಸ್‌ಬಿ ಟೆಂಪಲ್‌ ಟ್ರಸ್ಟ್‌ ಮುಂಬಯಿ ಅಧ್ಯಕ್ಷ ಪ್ರವೀಣ್‌ ಕಾನವಿಂದೆ, ಮಹಾರಾಷ್ಟ್ರ ಸೇವಾ ಸಂಘದ ಕಾರ್ಯದರ್ಶಿ ರಮೇಶ್‌ ಭರ್ವೆ, ಜಿಎಸ್‌ಬಿ ಸಭಾ ಮುಲುಂಡ್‌ ಅಧ್ಯಕ್ಷ ಬಿ. ಎಸ್‌. ಬಾಳಿಗಾ ಅವರು ಪಂಡಿತ್‌ ಭೀಮ್‌ಸೇನ್‌ ಜೋಶಿ ಅವರ ಭಾವಚಿತ್ರಕ್ಕೆ ಪುಷ್ಪವೃಷ್ಠಿಗೈದು ಜ್ಯೋತಿ ಬೆಳಗಿಸಿ ಕಾರ್ಯಕ್ರಮವನ್ನು ಉದ್ಘಾಟಿಸಿದರು.

ಹಿರಿಯ ಸಂಗೀತ ಕಲಾವಿದರಾದ ಪಂಡಿತ್‌ ಸಂಚಾರ ಗುಲ್ವಾಡಿ, ಪಂಡಿತ್‌ ಶಶಿಕಾಂತ ಮುಳೆ, ಪಂಡಿತ್‌ ವಿವೇಕ್‌ ಜೋಶಿ, ವ್ಯವಸ್ಥಾಪಕ ಮಂಡಳಿಯ ಬಿ. ಎಸ್‌. ಬಾಳಿಗಾ, ಅಜಯ್‌ ಭಂಡಾರ್ಕರ್‌, ಗಣೇಶ್‌ ರಾವ್‌, ಸಚ್ಚಿದಾನಂದ ಪಡಿಯಾರ, ಕಾವೇರಿ ಕಿಣಿ, ರವೀಂದ್ರ ಪೈ. ಯೋಗೀಶ ಶೆಣೈ, ರಾಮನಾಥ್‌ ಶಾನಭಾಗ್‌, ಪೂಜಾ ಪೈ, ರಾಧಿಕಾ ಕಾಮತ್‌, ನಂದಿನಿ ಶೆಣೈ, ಗಣೇಶ್‌ ಪೈ, ಸುಧೀರ್‌ ನಾಯಕ್‌, ಯು. ಪದ್ಮನಾಭ ಪೈ, ವಿಶ್ವನಾಥ ಭಟ್‌ ಮೊದಲಾದವರು ಉಪಸ್ಥಿತರಿದ್ದರು. ನೇರಪ್ರಸಾರದ ಮೂಲಕ ಕಾರ್ಯಕ್ರಮ ವನ್ನು ಅಪಾರ ಸಂಖ್ಯೆಯಲ್ಲಿ ಸಂಗೀತಾಭಿಮಾನಿ ಗಳು ವೀಕ್ಷಿಸಿದರು.

ಚಿತ್ರ-ವರದಿ : ಗುರುರಾಜ ಪೋತನೀಸ್‌

 

ನನ್ನ ಸಂಗೀತ ಕ್ಷೇತ್ರದ ಸಾಧನೆಗಾಗಿ ಈಗಾಗಲೇ ಅನೇಕ ಮಾನ-ಸಮ್ಮಾನಗಳು ಲಭಿಸಿವೆ. ಆದರೆ ನನ್ನ ಸಂಗೀತ ಕ್ಷೇತ್ರದ ಗುರು, ಮಾರ್ಗದರ್ಶಕ ಪಂಡಿತ್‌ ಭೀಮ್‌ಸೇನ್‌ ಜೋಶಿ ಅವರ ಹೆಸರಿನ ಪ್ರಶಸ್ತಿ ಅವರ ಜನ್ಮಶತಮಾನೋತ್ಸವ ವರ್ಷದಲ್ಲಿ ದೊರೆತ್ತಿದ್ದು ತುಂಬಾ ಸಂತೋಷ ತಂದಿದೆ. ಈ ಪ್ರಶಸ್ತಿಯನ್ನು ನೀಡಿ ಗೌರವಿಸಿದ ಜಿಎಸ್‌ಬಿ ಸಭಾ ಮುಲುಂಡ್‌ ಹಾಗೂ ಮುಂಬಯಿ ಫೋರಂ ಆಫ್‌ ಆರ್ಟಿಸ್ಟ್‌ ಸಂಸ್ಥೆಗೆ ಚಿರಋಣಿಯಾಗಿದ್ದೇನೆ.

-ಪಂಡಿತ್‌ ಭರತ್‌ ಕಾಮತ್‌, ಪ್ರಶಸ್ತಿ ಪುರಸ್ಕೃತರು

 

ಸಂಗೀತ ಕ್ಷೇತ್ರದ ನನ್ನ ಆರಾಧ್ಯ ದೇವರಾದ ಪಂಡಿತ್‌ ಭೀಮ್‌ಸೇನ್‌ ಜೋಶಿ ಅವರೊಂದಿಗೆ 13 ವರ್ಷಗಳ ಕಾಲ ತಬಲಾ ವಾದನ ಮಾಡಿದ ಸಾರ್ಥಕತೆ ನನ್ನದಾಗಿದೆ. ಜಿಎಸ್‌ಬಿ ಸಭಾ ಮುಲುಂಡ್‌ ಹಾಗೂ ಮುಂಬಯಿ ಫೋರಂ ಆಫ್‌ ಆರ್ಟಿಸ್ಟ್‌ ವತಿಯಿಂದ ನೀಡಲಾದ ನನ್ನ ಗುರುವಿನ ಹೆಸರಿನ ಪ್ರತಿಷ್ಠಿತ ಪ್ರಶಸ್ತಿಯನ್ನು ಸಂಗೀತಲೋಕದ ದಿಗ್ಗಜರ ಉಪಸ್ಥಿತಿಯಲ್ಲಿ ಸ್ವೀಕರಿಸುವ ಭಾಗ್ಯ ನನ್ನದಾಗಿದೆ. ಸಂಗೀತ ಕ್ಷೇತ್ರದ ಹೆಚ್ಚಿನ ಸಾಧನೆಗೆ ಸಂಗೀತ ಪ್ರೇಮಿಗಳ ಶುಭಾಶೀರ್ವಾದ ಸದಾಯಿರಲಿ.

ಪಂಡಿತ್‌ ಸುಧೀರ್‌ ನಾಯಕ್‌, ಪ್ರಶಸ್ತಿ ಪುರಸ್ಕೃತರು

 

Advertisement

Udayavani is now on Telegram. Click here to join our channel and stay updated with the latest news.

Next