ಭಟ್ಕಳ: ವಿಧಾನ ಪರಿಷತ್ ಅಭ್ಯರ್ಥಿ ಭೀಮಣ್ಣ ನಾಯ್ಕ ಅವರಿಗೆ ಎಲ್ಲಾ ಅರ್ಹತೆಯಿದ್ದು ಜಿಲ್ಲೆಯ ಜನತೆ ಅವರನ್ನು ಈ ಬಾರಿ ವಿಧಾನ ಪರಿಷತ್ತಿಗೆ ಆರಿಸಿ ಕಳುಹಿಸುತ್ತಾರೆನ್ನುವ ಎಲ್ಲಾ ಭರವಸೆ ಇದೆ ಎಂದು ಮಾಜಿ ಶಾಸಕ ಹಾಗೂ ಕಾಂಗ್ರೆಸ್ ಪ್ರಮುಖ ಮಧು ಬಂಗಾರಪ್ಪ ಹೇಳಿದರು.
ಬ್ಲಾಕ್ ಕಾಂಗ್ರೆಸ್ ಕಚೇರಿಯಲ್ಲಿ ಕಾಂಗ್ರೆಸ್ ಕಾರ್ಯಕರ್ತರು, ಪಂಚಾಯತ್ ಸದಸ್ಯರನ್ನುದ್ದೇಶಿಸಿ ಮಾತನಾಡಿ, ಗ್ರಾಮ ಪಂಚಾಯತ್‌ಗಳಿಗೆ ಆಯ್ಕೆಯಾಗುವಾಗ ಯಾವುದೇ ಪಕ್ಷದ ಚಿಹ್ನೆ ಇರುವುದಿಲ್ಲ, ಇಲ್ಲಿಯ ತನಕ ಭೇಟಿಯಾದ ಎಲ್ಲಾ ಸದಸ್ಯರು ಕೂಡಾ ಸರಕಾರದ ಕುರಿತು ಅಸಮಾಧಾನ ಹೊಂದಿದ್ದಾರೆ. ಕಳೆದ ನಾಲ್ಕು ವರ್ಷದಿಂದ ಗ್ರಾಮ ಪಂಚಾಯತಕ್ಕೆ ಒಂದೂ ಮನೆ ಮಂಜೂರಿಯಾಗಿಲ್ಲ, ಈ ಹಿಂದೆ ಕಾಂಗ್ರೆಸ್ ಸರಕಾರ ಇದ್ದಾಗ ಮಂಜೂರಿಯಾದ ಮನೆಗಳನ್ನು ಕೂಡಾ ಪೂರ್ಣಗೊಳಿಸಲು ಹಣ ಬಿಡುಗಡೆ ಮಾಡಿಲ್ಲ ಎಂದರು ಅಸಮಾಧಾನ ವ್ಯಕ್ತಪಡಿಸುತ್ತಿದ್ದಾರೆ. ಕಳೆದ70 ವರ್ಷಗಳಲ್ಲಿ ದೇಶವನ್ನು ಸದೃಢವಾಗಿ ಕಟ್ಟಲು ಕಾಂಗ್ರೆಸ್ ಪಕ್ಷ ಶ್ರಮಿಸಿದ್ದರೆ, ಬಿ.ಜೆ.ಪಿ. (ಬಿಸಿನೆಸ್ ಜನತಾ ಪಾರ್ಟಿ) ಎಲ್ಲವನ್ನು ಖಾಸಗೀಕರಣ ಮಾಡಿ ಮಾರಾಟ ಮಾಡಲು ಹೊರಟಿದೆ. ರೈತರ ಮಸೂದೆಯನ್ನು ತಂದು ಹಲವಾರು ರೈತರ ಸಾವಿಗೆ ಕಾರಣರಾದ ಮೋದಿ ನಂತರ ರೈತರ ಕ್ಷಮೆ ಕೇಳುತ್ತಾರೆ, ರೈತರ ಸಾವಿಗೆ ಹೊಣೆ ಯಾರು ಎಂದು ಅವರು ಪ್ರಶ್ನಿಸಿದರು.
ಭೀಮಣ್ಣ ನಾಯ್ಕ ಅವರಿಗೆ ಪ್ರಥಮ ಪ್ರಾಶಸ್ತ್ಯ ದ ಮತವನ್ನು ನೀಡಿ ಗೆಲ್ಲಿಸುವಂತೆ ಕೋರಿದ ಅವರು ವಿಧನ ಪರಿಷತ್‌ಗೆ ಆಯ್ಕೆಯಾದ ನಂತರ ತಮ್ಮ ಸಮಸ್ಯೆಗಳಿಗೆ ಸ್ಪಂಧಿಸುವುದಲ್ಲದೇ ಜಿಲ್ಲೆಯಲ್ಲಿನ ಜನತೆಯ ಪರವಾಗಿ ಧ್ವನಿಯಾಗಲಿದ್ದಾರೆ ಎಂದೂ ಮಧು ಬಂಗಾರಪ್ಪ ಭರವಸೆ ನೀಡಿದರು.
ಹಾನಗಲ್‌ನ ಚುನಾವಣೆಯ ಗೆಲುವು ಕಾಂಗ್ರೆಸ್ ಪಕ್ಷದ ೨೦೨೩ರ ಸಾರ್ವತ್ರಿಕ ಚುನಾವಣೆಯ ದಿಕ್ಸೂಚಿಯಾಗಿದ್ದು ಜನರು ಬಿ.ಜೆ.ಪಿ. ಆಡಳಿತದಿಂದ ಬೇಸತ್ತಿದ್ದಾರೆ ಎಂದರು. ದೇಶವನ್ನು ಕಾಂಗ್ರೆಸ್ ಪಕ್ಷ ಮಾತ್ರ ಮುನ್ನಡೆಸ ಬಲ್ಲದು ಎನ್ನುವುದು ಮತದಾರರಿಗೆ ಅರಿವಾಗಿದ್ದು ಬದಲಾವಣೆ ತರಲಿದ್ದಾರೆ ಎಂದೂ ಹೇಳಿದರು.
ಈ ಸಂದರ್ಭದಲ್ಲಿ ಮಾಜಿ ಶಾಸಕ ಮಂಕಾಳ ಎಸ್. ವೈದ್ಯ, ಜಿಲ್ಲಾ ಪಂಚಾಯತ್ ಮಾಜಿ ಅಧ್ಯಕ್ಷೆ ಜಯಶ್ರೀ ಮೊಗೇರ, ಮಾಜಿ ಸದಸ್ಯೆ ಸಿಂಧು ಭಾಸ್ಕರ ನಾಯ್ಕ, ಮಹಿಳಾ ಕಾಂಗ್ರೆಸ್ ಅಧ್ಯಕ್ಷೆ ನಯನಾ ನಾಯ್ಕ, ಹಿರಿಯ ಮುಖಂಡ ಸೋಮಯ್ಯ ಗೊಂಡ ಸೇರಿದಂತೆ ಪ್ರಮುಖರು ಉಪಸ್ಥಿತರಿದ್ದರು. ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಸಂತೋಷ ನಾಯ್ಕ ಅವರು ಸ್ವಾಗತಿಸಿ ಪ್ರಾಸ್ತಾವಿಕವಾಗಿ ಮಾತನಾಡಿದರು.