Advertisement

ಬಲ ಭೀಮಕ್ಕ : ಕೂಲಿ ಮಾಡಿದ ಕೈಗಳಲ್ಲೀಗ ಗನ್ನು

11:45 AM Nov 14, 2019 | mahesh |

ಹಂಚಿನ ಮೇಲ್ಛಾವಣಿಯ ಪುಟ್ಟ ಮನೆಯಲ್ಲಿ ಬಡತನವೇ ತುಂಬಿದ್ದರೂ ಕನಸುಗಳಿಗೆ ಅಲ್ಲಿ ಬರವಿರಲಿಲ್ಲ. ತಂದೆ-ತಾಯಿ ಕೂಲಿ ಕಾರ್ಮಿಕರು. ಹೆತ್ತವರ ಕಷ್ಟಕ್ಕೆ ನೆರವಾಗಲು ಮನೆ ಮಗಳೂ ಕೂಲಿಗೆ ಹೋಗತೊಡಗಿದಳು. ಜೊತೆಜೊತೆಗೆ ವಿದ್ಯಾಭ್ಯಾಸವೂ ಸಾಗಿತ್ತು. ಚೆನ್ನಾಗಿ ಓದಿ, ನೌಕರಿ ಹಿಡಿದು ಹೆತ್ತವರ ಕಷ್ಟವನ್ನು ದೂರ ಮಾಡಬೇಕೆಂದು ಆಸೆಪಟ್ಟವಳಿಗೆ ದೇಶಸೇವೆಯ ಕನಸೂ ಇತ್ತು. ಕಠಿಣ ಪರಿಶ್ರಮದಿಂದ ಅಂದುಕೊಂಡಿದ್ದನ್ನು ಸಾಧಿಸಿದವಳ ಸಾಹಸಗಾಥೆ ಇದು.

Advertisement

19 ವರ್ಷದ ಭೀಮಕ್ಕ ಚೌವ್ಹಾಣ, ಭಾರತೀಯ ಸೇನೆಯಲ್ಲಿ ಪ್ರಪ್ರಥಮವಾಗಿ ಮಹಿಳಾ ಸೇನೆ ಯೋಜನೆ ಅಡಿ ರೂಪಗೊಂಡ 100 “ವುಮೆನ್‌ ಮಿಲಿಟರಿ ಪೊಲೀಸ್‌’ಗೆ ಆಯ್ಕೆಯಾದ ದಿಟ್ಟೆ. ಕರ್ನಾಟಕದಿಂದ ಆಯ್ಕೆಯಾದ 8 ಯುವತಿಯರಲ್ಲಿ ಈಕೆಯೂ ಒಬ್ಬಳು. ಮಂಗಳೂರು ವಲಯದ 11 ಜಿಲ್ಲೆಗಳ ಪೈಕಿ ಆಯ್ಕೆಯಾದ ಏಕೈಕ ಯುವತಿ ಎಂಬ ಕೀರ್ತಿ ಭೀಮಕ್ಕಳದ್ದು.

ಬ್ರಿಟಿಷರ ವಿರುದ್ಧ ರಣಕಹಳೆ ಊದಿದ್ದ ಚೆನ್ನಮ್ಮಳ ಕಿತ್ತೂರಿನಿಂದ 7 ಕಿ.ಮೀ. ಹಾಗೂ ಧಾರವಾಡದಿಂದ 30 ಕಿ.ಮೀ. ದೂರದಲ್ಲಿ ಇರುವ ಮದಿಕೊಪ್ಪ ಎಂಬ ಪುಟ್ಟ ಗ್ರಾಮದ ಮಹದೇವಪ್ಪ ಹಾಗೂ ನೀಲಮ್ಮ ದಂಪತಿಯ ಹಿರಿಯ ಪುತ್ರಿ ಈ ಭೀಮಕ್ಕ. ತಮ್ಮಂದಿರಾದ ಸುಭಾಷ 10ನೇ ಹಾಗೂ ವಿಠuಲ 7ನೇ ಕ್ಲಾಸ್‌ ಓದುತ್ತಿದ್ದಾರೆ. ಪುಟ್ಟ ಮನೆಯಲ್ಲಿ ಕಷ್ಟದಲ್ಲಿಯೂ ಚೊಕ್ಕ ಜೀವನ ನಡೆಸುತ್ತಾ ಕೂಲಿ-ನಾಲಿ ಮಾಡಿ ಮಕ್ಕಳನ್ನು ಸಲುಹಿಸುತ್ತಿದ್ದಾರೆ ಹೆತ್ತವರು. ತಂದೆ-ತಾಯಿ ಸಂಕಷ್ಟಗಳಿಗೆ ಜೊತೆಯಾಗಿ ಕುಡಗೋಲು ಹಿಡಿದು ಕೂಲಿ ಕೆಲಸ ಮಾಡಿದ್ದ ಭೀಮಕ್ಕ, ಆ ಬಳಿಕ ವಿಧ್ಯಾಭ್ಯಾಸಕ್ಕಾಗಿ ಪೆನ್ನು ಹಿಡಿದರೂ ರಜೆ ದಿನಗಳಲ್ಲಿ ಕೂಲಿ ಮಾಡುವುದು ತಪ್ಪಲಿಲ್ಲ.

ಗನ್ನು ಹಿಡಿಯಲು ಸಜ್ಜು
ಈ ಮಧ್ಯೆ ದೇಶ ಸೇವೆಯ ಕನಸು ಅವಳನ್ನು ಎನ್‌ಸಿಸಿ ಘಟಕ ಸೇರುವಂತೆ ಮಾಡಿತ್ತು. ಪಿಯುಸಿಯಲ್ಲಿ ಒಳ್ಳೆಯ ಅಂಕದ ಜೊತೆ ಎನ್‌ಸಿಸಿಯಲ್ಲಿ ಬಿ ಪ್ರಮಾಣ ಪಡೆದಿರುವ ಭೀಮಕ್ಕ ಸದ್ಯ ಬಿ.ಕಾಂ. ಓದುತ್ತಿದ್ದಾಳೆ. ಕೆಸಿಡಿಯ ಎನ್‌ಸಿಸಿ ಘಟಕಯಲ್ಲಿ ಸಿ ಪ್ರಮಾಣ ಪತ್ರ ಪಡೆಯುವ ಹಂತದಲ್ಲಿದ್ದಾಳೆ. ಈ ವೇಳೆ, ಸೇನೆಯ 100 ಹುದ್ದೆಗಳನ್ನು ಭರ್ತಿ ಮಾಡುವ ವಿಷಯ ತಿಳಿಯಿತು. ತಕ್ಷಣವೇ, ಹೆತ್ತವರ ಒಪ್ಪಿಗೆ ಪಡೆದು, ಸೇನಾ ಭರ್ತಿ ರ್ಯಾಲಿಯಲ್ಲಿ ಪಾಲ್ಗೊಂಡರು. ಆಯ್ಕೆಯೂ ಆದಳು.

ಭೀಮಕ್ಕಳ ಈ ಸಾಧನೆಗೆ ಕೆಸಿಡಿ ಕಾಲೇಜು, ಮದಿಕೊಪ್ಪ ಗ್ರಾಮಸ್ಥರಷ್ಟೇ ಅಲ್ಲ, ಇಡೀ ರಾಜ್ಯವೇ ಹೆಮ್ಮೆಪಡುತ್ತಿದೆ.


Advertisement

ಭೀಮಕ್ಕಳ ತಂದೆ ಮಹದೇವಪ್ಪ ಅವರು ಪಂಡರಾಪುರಕ್ಕೆ ಪಾದಯಾತ್ರೆ ಹೋಗಿದ್ದು, ನ.10ರಂದು ವಾಪಸಾಗಿದ್ದಾರೆ. ಈ ಪಾದಯಾತ್ರೆಯ ಸಮಯದಲ್ಲೇ ಮಗಳು ಸೇನೆಗೆ ಆಯ್ಕೆ ಆಗಿದ್ದು, ಅವರ ಸಂತಸವನ್ನು ಇಮ್ಮಡಿಗೊಳಿಸಿದೆ. ಮಗಳ ಆಸೆ, ಕನಸುಗಳಿಗೆ ನಾವೆಂದೂ ಅಡ್ಡಿಪಡಿಸಿಲ್ಲ. ಸೇನೆಗೆ ಸೇರಲು ಅರ್ಜಿ ಹಾಕಲು ಅನುಮತಿ ಕೇಳಿದಾಗ ಭಗವಂತನ ಮೇಲೆ ಭಾರ ಹಾಕಿ ಒಪ್ಪಿಕೊಂಡಿದ್ದೆ. ಈಗ ಅವಳಿಚ್ಛೆಯಂತೆ ಸೇನೆಯಲ್ಲಿ ದುಡಿಯುವ ಅವಕಾಶ ಸಿಕ್ಕಿದೆ. ದೇವರ ಮೇಲೆ ಭಾರ ಹಾಕಿ ಸೇನೆಗೆ ಕಳುಹಿಸುವುದಾಗಿ ಹೇಳುತ್ತಾರೆ ತಂದೆ ಮಹದೇವಪ್ಪ. ಹೆಣ್ಣು ಮಕ್ಕಳನ್ನು ಕೆಲಸಕ್ಕೆ ಕಳುಹಿಸಲು ಹಿಂದೇಟು ಹಾಕುವ ಪೋಷಕರ ಮಧ್ಯೆ ಮಗಳನ್ನು ದೇಶದ ಗಡಿ ಕಾಯುವ ಸೇನೆಗೆ ಕಳುಹಿಸಲು ಮುಂದಾಗಿರುವ ಈ ಕುಟುಂಬಕ್ಕೊಂದು ಸಲಾಂ.

ಹೆತ್ತವರು ಎಂದಿಗೂ ನನ್ನ ಇಷ್ಟಕ್ಕೆ ಅಡ್ಡಿಪಡಿಸಲಿಲ್ಲ. ಇದು ಅವರ ಪ್ರೋತ್ಸಾಹದ ಫಲ. ನಾನು ದಿನನಿತ್ಯ ರೂಢಿಸಿಕೊಂಡ ಓಟ, ವ್ಯಾಯಾಮ ಹಾಗೂ ಹೆತ್ತವರ ಜೊತೆ ಮಾಡಿದ ಕಷ್ಟದ ಕೆಲಸಗಳೇ ನನ್ನನ್ನು ಗಟ್ಟಿಗೊಳಿಸಿದ್ದು, ಈ ಗಟ್ಟಿತನವೇ ಸೇನೆ ಸೇರುವ ಕನಸನ್ನು ನನಸು ಮಾಡಿದೆ.
-ಭೀಮಕ್ಕ ಚೌವ್ಹಾಣ

ಶಶಿಧರ್‌ ಬುದ್ನಿ

Advertisement

Udayavani is now on Telegram. Click here to join our channel and stay updated with the latest news.

Next