ನವದೆಹಲಿ:ಭೀಮಾ ಕೋರೆಗಾಂವ್ ಹಿಂಸಾಚಾರ ಪ್ರಕರಣ ಸಂಬಂಧ ಬಂಧಿತರಾಗಿರುವ 5 ಮಂದಿ ನಕ್ಸಲ್ ಪರ ಸಹಾನುಭೂತಿ ಹೊಂದಿದ್ದ ಬಲಪಂಥೀಯ ಕಾರ್ಯಕರ್ತರ ಬಂಧನದ ವಿಚಾರದಲ್ಲಿ ಮಧ್ಯಪ್ರವೇಶಿಸಲು ಸುಪ್ರೀಂಕೋರ್ಟ್ ಶುಕ್ರವಾರ ನಿರಾಕರಿಸಿ, ಗೃಹ ಬಂಧನದ ಅವಧಿಯನ್ನು 4 ವಾರಗಳ ಕಾಲ ವಿಸ್ತರಿಸಿ 2:1ರ ಬಹುಮತದ ತೀರ್ಪನ್ನು ನೀಡಿದೆ.
ಅಲ್ಲದೇ ಐವರ ಬಂಧನದ ಬಗ್ಗೆ ತನಿಖೆಗಾಗಿ ಎಸ್ ಐಟಿ ರಚಿಸಬೇಕೆಂಬ ಮನವಿಯನ್ನೂ ಸುಪ್ರೀಂಪೀಠ ವಜಾಗೊಳಿಸಿದ್ದು, ಶೀಘ್ರ ಬಿಡುಗಡೆ ಕೋರಿ ಸಲ್ಲಿಸಿದ್ದ ಅರ್ಜಿಯನ್ನೂ ತಿರಸ್ಕರಿಸಿದೆ.
ಇದು ಭಿನ್ನಾಭಿಪ್ರಾಯ ಹೊಂದಿದ ಐವರು ಬಲಪಂಥೀಯ ಕಾರ್ಯಕರ್ತರು ಬಂಧನದ ಪ್ರಶ್ನೆಯಲ್ಲ, ಆದರೆ ಮೇಲ್ನೋಟಕ್ಕೆ ಪುರಾವೆಗಳ ಪ್ರಕಾರ ನಿಷೇಧಿತ ಸಿಪಿಐ(ಮಾವೋವಾದಿ) ಸಂಘಟನೆ ಜೊತೆ ಸಂಬಂಧ ಹೊಂದಿರುವುದು ತೋರಿಸುತ್ತದೆ ಎಂದು ಸಿಜೆಐ ದೀಪಕ್ ಮಿಶ್ರಾ ಮತ್ತು ಜಸ್ಟೀಸ್ ಎಎಂ ಖಾನ್ವಿಲ್ಕಾರ್ ತೀರ್ಪಿನಲ್ಲಿ ಹೇಳಿದರು.
ಆಗಸ್ಟ್ 28ರಂದು ಐವರು ಸಾಮಾಜಿಕ ಹಕ್ಕುಗಳ ಹೋರಾಟಗಾರರನ್ನು ನಿಷೇಧಿತ ಮಾವೋ ಸಂಘಟನೆ ಜೊತೆ ಸಂಪರ್ಕ ಹೊಂದಿರುವ ಆರೋಪದ ಮೇಲೆ ಬಂಧಿಸಿ ಎಫ್ ಐಆರ್ ದಾಖಲಿಸಲಾಗಿತ್ತು.
ಸಾಮಾಜಿಕ ಕಾರ್ಯಕರ್ತರಾದ ವರವರರಾವ್, ಅರುಣ್ ಫೆರ್ರಾರಿಯಾ, ವೆರ್ನೊನ್ ಗೊನ್ಸಾಲ್ವಿಸ್, ಸುಧಾ ಭಾರದ್ವಾಜ್, ಗೌತಮ್ ನವ್ಲಾಖ್ ಸೇರಿ ಐವರನ್ನ ಮಹಾರಾಷ್ಟ್ರ ಪೊಲೀಸರು ಬಂಧಿಸಿದ್ದರು. ಮಹಾರಾಷ್ಟ್ರ ಪೊಲೀಸರ ಕ್ರಮಕ್ಕೆ ತೀವ್ರ ಆಕ್ಷೇಪ ವ್ಯಕ್ತಪಡಿಸಿದ್ದ ಸುಪ್ರೀಂಕೋರ್ಟ್ 5 ಜನರನ್ನು ಗೃಹ ಬಂಧನಕ್ಕೆ ಒಳಪಡಿಸುವಂತೆ ಸೂಚಿಸಿತ್ತು.