Advertisement

ಗರ್ಭಿಣಿಯರಿಗೆ ಭೀಮ ವಾಹಿನಿ ಉಚಿತ ಆಟೋ ಸೇವೆ

07:06 AM Jan 25, 2019 | |

ಕಲಬುರಗಿ: ಹಲೋ… ‘ಭೀಮ ವಾಹಿನಿ’ ಆಟೋದವರಾ? ಮತ್ತೂಂದೆಡೆ ಹೌದು ಎನ್ನುವ ಉತ್ತರ. ಕರೆ ಮಾಡಿದವರಿಂದ ನಮ್ಮ ಮನೆಯಲ್ಲಿ ಗರ್ಭಿಣಿಗೆ ಹೆರಿಗೆ ನೋವು ಕಾಣಿಸಿಕೊಂಡಿದೆ. ಇಂತಹ ವಿಳಾಸಕ್ಕೆ ಬರುತ್ತೀರಾ? ಎನ್ನುವ ಮನವಿಗೆ 10 ಇಲ್ಲವೇ 15 ನಿಮಿಷದಲ್ಲಿ ಬರುವೆ ಎಂದು ಹೇಳಿದ ತಕ್ಷಣ ಆಟೋ ಚಾಲಕನೊಬ್ಬ ತಕ್ಷಣವೇ ಹಾಜರಾಗುವ ಸಾಮಾಜಿಕ ಕಾರ್ಯ ಮಹಾನಗರದಲ್ಲಿ ಸದ್ದಿಲ್ಲದೇ ನಡೆಯುತ್ತಿದೆ.

Advertisement

ಗರ್ಭಿಣಿಗೆ ಹೆರಿಗೆ ನೋವು ಕಾಣಿಸಿಕೊಂಡಾಗ ತಕ್ಷಣವೇ ಆಸ್ಪತ್ರೆಗೆ ಸಾಗಿಸದಿದ್ದರೆ ಜೀವಕ್ಕೆ ಅಪಾಯ ಎದುರಾಗುವ ಸಾಧ್ಯತೆ ಮನಗಂಡು ಇಲ್ಲೊಬ್ಬ ಆಟೋ ಚಾಲಕ ನಾಲ್ಕು ಆಟೋಗಳನ್ನು ಉಚಿತವಾಗಿ ನೀಡುವ ಮುಖಾಂತರ ತೆರೆಮರೆಯಲ್ಲಿ ಸಾಮಾಜಿಕ ಸೇವೆ ಕೈಗೊಳ್ಳುತ್ತಿದ್ದಾರೆ.

108 ಅಂಬ್ಯುಲೆನ್ಸ್‌ ವಾಹನಗಳು ಸಕಾಲಕ್ಕೆ ಸಿಗದೇ ತಮ್ಮ ಸಹೋದರಿ ಪ್ರಾಣಾಪಾಯದಿಂದ ಪಾರಾಗಿದ್ದನ್ನು ಅನುಭವದಿಂದ ಕಂಡುಕೊಂಡ ಆಟೋ ಚಾಲಕ, ತನ್ನ ಸಹೋದರಿ ಅನುಭವಿಸಿದ ಹೆರಿಗೆ ನೋವು-ಕಷ್ಟ ಮತ್ತೂಬ್ಬ ಸಹೋದಯರಿಗೆ ಬರಬಾರದೆಂದು ನಿಶ್ಚಯಿಸಿ ಕಳೆದ ಐದು ವರ್ಷಗಳಿಂದ ಹಗಲಿರಳು ಹೆರಿಗೆ ನೋವು ಕಾಣಿಸಿಕೊಂಡ ಮಹಿಳೆಯರಿಗೆ ತುರ್ತಾಗಿ ಆಸ್ಪತ್ರೆಗೆ ಸೇರಿಸುವಲ್ಲಿ ಮಲ್ಲಿಕಾರ್ಜುನ ಎಚ್. ಶೆಟ್ಟಿ ಎನ್ನುವ ಆಟೋ ಚಾಲಕ ಮಹೋನ್ನತ ಕಾರ್ಯದಲ್ಲಿ ತೊಡಗಿಸಿಕೊಂಡಿದ್ದಾರೆ.

ನಗರದ ಶೇಖರೋಜಾದ ಅಂಬೇಡ್ಕರ್‌ ಆಶ್ರಯ ಕಾಲೋನಿಯ ಮಲ್ಲಿಕಾರ್ಜುನ ತಮ್ಮ ನಾಲ್ಕು ಆಟೋಗಳ ಮೇಲೆ ‘ಭೀಮ ವಾಹಿನಿ’ ತುರ್ತು ಹೆರಿಗೆ ಉಚಿತ ಸೇವೆ ಎಂದು ಬರೆಯಿಸಿ ಅದರಲ್ಲಿ ತಮ್ಮ ಮೊಬೈಲ್‌ ನಂಬರ್‌ (8618822825)ನ್ನು ನಮೂದಿಸಿದ್ದಾರೆ. ದಿನದ 24 ಗಂಟೆಯೂ ಯಾವುದೇ ಸಮಯದಲ್ಲಿ ಹೆರಿಗೆ ನೋವು ಎದುರಾಗಿರುವ ಕುರಿತು ಕರೆ ಮಾಡಿದರೆ ತಕ್ಷಣವೇ ಆಟೋ ಅವರ ಮನೆ ಎದುರು ಬಂದು ನಿಲ್ಲುತ್ತದೆ. ನಂತರ ಅವರು ಹೇಳುವ ಆಸ್ಪತ್ರೆಗೆ ಉಚಿತವಾಗಿ ಕರೆದುಕೊಂಡು ಹೋಗಲಾಗುತ್ತದೆ.

ಇಲ್ಲಿಯವರೆಗೆ 150ರಿಂದ 180 ಹೆರಿಗೆ ನೋವು ಕಾಣಿಸಿಕೊಂಡ ಗರ್ಭಿಣಿಯರಿಗೆ ಸಕಾಲಕ್ಕೆ ಆಸ್ಪತ್ರೆಗೆ ಸಾಗಿಸಲಾಗಿದೆ. ರಾತ್ರಿ ಸಮಯದಲ್ಲೇ ಹೆಚ್ಚಿನ ಕರೆಗಳು ಬರುತ್ತಿರುತ್ತವೆ. ಮಹಾನಗರವಲ್ಲದೇ ಸುತ್ತಮುತ್ತಲಿನ 10ರಿಂದ 15 ಕೀಮೀ ದೂರದವರೆಗೂ ಹೋಗಿ ಹೆರಿಗೆ ಎದುರಾದ ಗರ್ಭಿಣಿಯನ್ನು ಕರೆದುಕೊಂಡು ಬಂದು ಆಸ್ಪತ್ರೆಗೆ ಸೇರ್ಪಡೆ ಮಾಡುತ್ತಿದ್ದು, ಹೆಚ್ಚಿನ ಸಂಖ್ಯೆಯಲ್ಲಿ ಸರ್ಕಾರಿ ಆಸ್ಪತ್ರೆಗೆ ಸೇರ್ಪಡೆಯಾಗುವ ಬಡವರ ಕರೆಗಳೇ ತಮಗೆ ಬರುತ್ತಿರುತ್ತವೆ ಎನ್ನುತ್ತಾರೆ ಆಟೋ ಚಾಲಕ ಮಲ್ಲಿಕಾರ್ಜುನ.

Advertisement

ಒಂದೇ ಸಮಯದಲ್ಲಿ ಮತ್ತೂಬ್ಬರು ಕರೆ ಮಾಡಿದರೆ ಮತ್ತೂಂದು ಆಟೋ ಕಳಿಸಬೇಕೆಂಬ ನಿಟ್ಟಿನಲ್ಲಿ ಮಗದೊಂದು ಆಟೋ ಖರೀದಿ ಮಾಡಲಾಗಿದೆ. ಹಾಗೆ ಈಗ ನಾಲ್ಕು ಆಟೋಗಳಾಗಿವೆ. ನಾಲ್ಕು ಆಟೋಗಳನ್ನು ಹೆರಿಗೆ ನೋವು ಕಾಣಿಸಿಕೊಂಡ ಮಹಿಳೆಗೆ ಆಸ್ಪತ್ರೆಗೆ ಉಚಿತವಾಗಿ, ತುರ್ತಾಗಿ ಸಾಗಿಸುವ ಕಾರ್ಯಕ್ಕೆ ಬಳಸಲಾಗುತ್ತಿದೆ. ಮೂರು ಆಟೋಗಳಿಗೆ ಚಾಲಕರನ್ನಿಟ್ಟು ದಿನಾಲು ಬಾಡಿಗೆಗೆ ಓಡಿಸಲಾಗುತ್ತಿದೆ. ಹೆರಿಗೆ ನೋವು ಕಾಣಿಸಿಕೊಂಡ ಮಹಿಳೆ ಕಡೆಯಿಂದ ಮೊಬೈಲ್‌ ಕರೆ ಬಂದರೆ ತಕ್ಷಣ ಆ ಪ್ರದೇಶದ ಸಮೀಪ ಇರುವ ಆಟೋ ಚಾಲಕರಿಗೆ ಕರೆ ಮಾಡಲಾಗುತ್ತದೆ.

ಒಂದು ವೇಳೆ ಆಟೋದಲ್ಲಿ ಪ್ರಯಾಣಿಕರನ್ನು ತೆಗೆದುಕೊಂಡು ಹೋಗುತ್ತಿದ್ದರೂ ಅವರನ್ನು ಒಂದು ಸ್ಥಳದಲ್ಲಿ ಬಿಟ್ಟು ತಕ್ಷಣ ಹೋಗುತ್ತಾರೆ. ಇನ್ನು ಶಹಾಬಾದ-ವಾಡಿ ಪಟ್ಟಣದ ಕೆಲವರು ಹೆರಿಗೆ ನೋವು ಕಾಣಿಸಿಕೊಂಡ ಮಹಿಳೆಯನ್ನು ರೈಲಿನಲ್ಲಿ ಕರೆದುಕೊಂಡು ಬರಲಾಗುತ್ತಿದೆ.

ರೈಲ್ವೆ ನಿಲ್ದಾಣಕ್ಕೆ ಆಟೋ ತರುತ್ತೀರಾ? ಎಂದು ಕರೆ ಮಾಡುತ್ತಿರುತ್ತಾರೆ. ಇದಕ್ಕೂ ಸೈ ಎಂದು ರೈಲು ಬರುವ ಮುಂಚೆಯೇ ನಿಲ್ದಾಣದಲ್ಲಿದ್ದು, ತುರ್ತಾಗಿ ಆಸ್ಪತ್ರೆಗೆ ಸೇರಿಸುವ ಕಾರ್ಯವನ್ನು ಚಾಲಕ ಮಲ್ಲಿಕಾರ್ಜುನ ನಿರ್ವಹಿಸುತ್ತಿದ್ದಾರೆ. ಒಟ್ಟಾರೆ ಮಲ್ಲಿಕಾರ್ಜುನ ಶೆಟ್ಟಿ ಅವರ ಸಾಮಾಜಿಕ ಸೇವೆ ಕಂಡು ಕೆಲವರು ತಮ್ಮ ಕಾರ್ಯಕ್ರಮಗಳಿಗೆ ತೆರಳಲು ಕರೆ ಮಾಡಿ 10 ಇಲ್ಲವೇ 20 ರೂ. ಹೆಚ್ಚಿಗೆ ನೀಡಿ ಪ್ರೋತ್ಸಾಹಿಸುತ್ತಿದ್ದಾರೆ.

ಹೆರಿಗೆ ನೋವು ಕಾಣಿಸಿಕೊಂಡ ಸಂದರ್ಭದಲ್ಲಿ ತನ್ನ ಸಹೋದರಿಗೆ ಆದ ಕಷ್ಟ ಮತ್ತೂಬ್ಬ ಸಹೋದರಿ ಅನುಭವಿಸಬಾರದು ಎನ್ನುವ ಹಿನ್ನೆಲೆಯಲ್ಲಿ ಭೀಮ ವಾಹಿನಿ ನಾಲ್ಕು ಆಟೋಗಳನ್ನು ತುರ್ತು ಹೆರಿಗೆ, ಉಚಿತ ಸಾರ್ವಜನಿಕ ಸೇವೆಗೆಂದು ಮೀಸಲಿಡಲಾಗಿದೆ. ಎಷ್ಟು ಗರ್ಭಿಣಿಯರನ್ನು ಹೆರಿಗೆಂದು ಆಸ್ಪತ್ರೆಗೆ ಬಿಟ್ಟು ಬರಲಾಗಿದೆ ಎನ್ನುವ ಲೆಕ್ಕ ಇಟ್ಟಿಲ್ಲ. ಆದರೂ 150ರಿಂದ 180 ಆಗಿರಬಹುದೆಂದು ಅಂದಾಜಿಸಬಹುದಾಗಿದೆ. ಈ ಕಾರ್ಯ ಮನಸ್ಸಿಗೆ ತೃಪ್ತಿ ತರುತ್ತಿದೆ.
· ಮಲ್ಲಿಕಾರ್ಜುನ ಎಚ್. ಶೆಟ್ಟಿ , ಆಟೋ ಚಾಲಕ

Advertisement

Udayavani is now on Telegram. Click here to join our channel and stay updated with the latest news.

Next