ಅವು ವನವಾಸದ ದಿನಗಳು. ಪಾಂಡವರು ಕಾಮ್ಯಕವನದಿಂದ ಫಲವತ್ತಾದ, ಮುನಿಗಳು ವಾಸಿಸುತ್ತಿದ್ದ ದ್ವೆ„ತವನಕ್ಕೆ ಹೋದರು. ಅಲ್ಲಿ ಒಂದು ಯುಧಿಷ್ಠಿರ, ದ್ರೌಪದಿ ಮತ್ತು ಭೀಮ ಮಾತನಾಡುತ್ತ ಕುಳಿತಿದ್ದಾಗ ದ್ರೌಪದಿಯು ಯುಧಿಷ್ಠಿರನಿಗೆ, “ರಾಜಾಧಿರಾಜನಾಗಿ ಬಂಗಾರದ ಪಾತ್ರೆಯಲ್ಲಿ ಊಟ ಮಾಡಿ ದಿವ್ಯ ಉಡುಪನ್ನು ಧರಿಸಿ ನೂರಾರು ಜನರಿಗೆ ಆಶ್ರಯದಾತರಾಗಿದ್ದ ನೀನು ಮತ್ತು ನಿನ್ನ ತಮ್ಮಂದಿರು ಈಗ ಸಿಕ್ಕಿದುದನ್ನು ತಿಂದು ನಾರು ಬಟ್ಟೆ ಉಡುತ್ತೀರಿ. ಇದನ್ನು ನೋಡಿ ನಾನು ಹೇಗೆ ಸಮಾಧಾನದಿಂದ ಇರಲಿ? ನಿನ್ನ ತಮ್ಮಂದಿರು ಕಷ್ಟ ಅನುಭವಿಸುವುದನ್ನು ಕಂಡೂ ನಿನಗೆ ದುರ್ಯೋಧನನ ಮೇಲೆ ಕೋಪ ಬರುವುದಿಲ್ಲವೆ? ನನ್ನ ಪಾಡನ್ನು ನೋಡಿಯೂ ನೀನು ಸಮಾಧಾನದಿಂದ ಇರಬಲ್ಲೆಯ? ನೀನು ಕ್ಷತ್ರಿಯ. ನಿನಗೆ ಕೋಪವೇ ಬರುವುದಿಲ್ಲವೆ? ಮನುಷ್ಯನು ಅತಿ ಮೃದುವಾಗಿಯೂ ಇರಬಾರದು, ಅತಿ ಕಠಿಣವಾಗಿಯೂ ಇರಬಾರದು. ಎಲ್ಲ ಅಪರಾಧಗಳನ್ನೂ ಕ್ಷಮಿಸುವುದರಿಂದ ಕಷ್ಟ ಕಟ್ಟಿಟ್ಟದ್ದು’ ಎಂದಳು.
ಯುಧಿಷ್ಠಿರನು “ದ್ರೌಪದಿ, ಕೋಪವೇ ಎಲ್ಲ ಅನರ್ಥಗಳಿಗೆ ಕಾರಣ. ಕೋಪ ಬಂದವನು ಯಾವ ಹೇಯ ಕೃತ್ಯವನ್ನಾದರೂ ಮಾಡಿಬಿಡುತ್ತಾನೆ. ಕೋಪವಿದ್ದ ಕಡೆ ವಿವೇಚನೆ ಇರುವುದಿಲ್ಲ. ಕೋಪದಿಂದ ಜಗಳ, ಜಗಳದಿಂದ ಹಿಂಸೆ, ಹಿಂಸೆಯಿಂದ ಪ್ರತಿಹಿಂಸೆ. ಕೋಪವನ್ನು ಗೆದ್ದವನೇ ಶ್ರೇಷ್ಠ. ಆದ್ದರಿಂದ ನಾನು ಅಹಿಂಸೆ ಮತ್ತು ಕ್ಷಮೆಗಳನ್ನು ಆಚರಿಸುತ್ತೇನೆ’ ಎಂದ.
ದ್ರೌಪದಿಯು “ಮಹಾರಾಜ, ಧರ್ಮ. ಅಹಿಂಸೆ, ಕ್ಷಮೆ ಇವುಗಳಿಂದ ಸಂಪತ್ತು ಬರುವುದಿಲ್ಲ. ಧರ್ಮವನ್ನು ರಕ್ಷಿಸಿದವರನ್ನು ಧರ್ಮವು ರಕ್ಷಿಸುತ್ತದೆ ಎಂದು ಕೇಳಿದ್ದೇನೆ. ಅದು ನಿಜವಾದರೆ ನೀನೂ ನಿನ್ನ ತಮ್ಮಂದಿರೂ ಈ ಸ್ಥಿತಿಯಲ್ಲಿ ಏಕೆ ಇದ್ದೀರಿ? ನೀವು ಸದಾ ಧರ್ಮಮಾರ್ಗದಲ್ಲೇ ನಡೆದವರು. ದುರ್ಯೋಧನನ ಸಂಪತ್ತನ್ನು ನೋಡಿದರೆ ದೇವರನ್ನು ನಿಂದಿಸಬೇಕೆನಿಸುತ್ತದೆ ಎಂದಳು.
ಯುಧಿಷ್ಠಿರನು, “ದ್ರೌಪದಿ, ನಾನು ಧರ್ಮದಂತೆ ನಡೆಯುವುದರಿಂದ ಲಾಭ ಬರುತ್ತದೆ ಎಂದಲ್ಲ. ಧರ್ಮವು ಹಾಲು ಕೊಡುವುದೆಂದು ಸಾಕುವ ಹಸುವಲ್ಲ, ಫಲವಿಲ್ಲ ಎಂದು ಧರ್ಮವನ್ನು ಆಕ್ಷೇಪಿಸಬಾರದು. ನಾನು ಈಶ್ವರನನ್ನು ನಿಂದಿಸುತ್ತಿಲ್ಲ, ಧರ್ಮವನ್ನು ಆಕ್ಷೇಪಿಸುತ್ತಿಲ್ಲ. ಆದರೆ ನಾವು ಕೈಕಟ್ಟಿ ಕುಳಿತರೆ ಧರ್ಮವು ಫಲ ಕೊಡಲಾರದು. ನಾವು ಕಾರ್ಯದಲ್ಲಿ ತೊಡಗಬೇಕು’ ಎಂದನು.
ಭೀಮಸೇನನು, “ಅಣ್ಣಾ, ದುರ್ಯೋಧನನು ನಮ್ಮ ರಾಜ್ಯವನ್ನು ಧರ್ಮದಿಂದ ಪಡೆದುಕೊಂಡನೇ? ಅಂದೇ ಕೌರವರನ್ನು ಕೊಲ್ಲಬೇಕಾಗಿತ್ತು. ನಿನ್ನ ಮಾತನ್ನು ಕೇಳಿ ಅವರನ್ನು ಬಿಟ್ಟು ತಪ್ಪು ಮಾಡಿದೆ. ಧರ್ಮ ಧರ್ಮ ಎಂದು ನೀನು ಸುಮ್ಮನೆ ಕಷ್ಟಪಡುತ್ತೀಯೆ. ಧರ್ಮದ ಆಚರಣೆಗೆ ಅರ್ಥ ಬೇಕಲ್ಲವೆ? ಎಲ್ಲ ಸಂಪತ್ತನ್ನೂ ಕಳೆದುಕೊಂಡು ಹೇಗೆ ಧರ್ಮವನ್ನು ಆಚರಿಸುತ್ತೇಯೆ? ಕೌರವರ ಮೇಲೆ ದಂಡೆತ್ತಿ ಹೋಗೋಣ. ನನ್ನ ಗದೆ ಇದೆ, ಆರ್ಜುನನ ಗಾಂಡೀವವಿದೆ, ಕೃಷ್ಣ ನಮ್ಮ ಸಹಾಯಕ್ಕಿದ್ದಾನೆ’ ಎಂದ.
ಯುಧಿಷ್ಠಿರನು, “ಭೀಮ ನಿನಗೆ ಕೋಪ ಬರುವುದು ನ್ಯಾಯವೇ. ಆದರೆ ನಾವು ಒಪ್ಪಿಕೊಂಡ ಷರತ್ತನ್ನು ನಾವೇ ಮುರಿಯುವುದೇ? ಒಳ್ಳೆಯ ಕಾಲ ಬರುತ್ತದೆ, ಕಾಯಬೇಕು’ ಎಂದ. ಭೀಮನು, “ಅಣ್ಣಾ, ಹದಿಮೂರು ವರ್ಷ ಮುಗಿಯುವವರೆಗೆ ಕಾದರೆ ಮುಪ್ಪು ಬರುತ್ತದೆ ಅಷ್ಟೆ. ಕಾಡಿನಲ್ಲಿ ಹನ್ನೆರಡು ವರ್ಷಗಳನ್ನು ಕಳೆದ ಮೇಲೆ ನಾವು ಯಾರಿಗೂ ಗೊತ್ತಾಗದಂತೆ ಒಂದು ವರ್ಷವನ್ನು ಕಳೆಯುವುದು ಎಂದರೆ ಬೆಂಕಿಯನ್ನು ಬಚ್ಚಿಡುವ ಹಾಗೆ. ಅರ್ಜುನ, ನಕುಲ, ಸಹದೇವ ಇವರೆಲ್ಲ ಯಾರಿಗೂ ಗುರುತು ಸಿಕ್ಕದಂತೆ ಇರುವುದು ಸಾಧ್ಯವೆ? ಪ್ರಸಿದ್ಧಳಾದ ದ್ರೌಪದಿ ಅಜ್ಞಾತಳಾಗಿರುವುದು ಸಾಧ್ಯವೇ? ನಾವು ಗೆದ್ದ ಹಲವು ರಾಜರು ಈಗ ದುರ್ಯೋಧನನ ಪಕ್ಷದಲ್ಲಿದ್ದಾರೆ. ಅವರೂ, ದುರ್ಯೋಧನನೂ ನಮ್ಮನ್ನು ಹುಡುಕಲು ಗೂಢಚಾರರನ್ನು ಕಳುಹಿಸುತ್ತಾರೆ. ನಾವು ತಪ್ಪಿಸಿಕೊಳ್ಳವುದು ಸಾಧ್ಯವೆ? ಇದನ್ನು ಬಿಟ್ಟು ಶತ್ರುಗಳ ಮೇಲೆ ಯುದ್ಧ ಮಾಡುವ ಮನಸ್ಸು ಮಾಡು, ಎಂದ.
ಯುಧಿಷ್ಠರನು, “ಭೀಮ, ನೀನು ಹೇಳುವುದು ನಿಜ. ಆದರೆ ಬರಿಯ ಸಾಹಸದಿಂದ ಫಲವಿಲ್ಲ. ಧರ್ಮದಿಂದ ನಡೆದುಕೊಳ್ಳುವುದೂ ಅಗತ್ಯ. ನಮ್ಮ ಶತ್ರುಗಳ ಬಲವನ್ನೂ ಮರೆಯಬೇಡ. ಭೀಷ್ಮರು, ದ್ರೋಣರು, ಕರ್ಣ, ಅಶ್ವತ್ಥಾಮ ಎಲ್ಲರೂ ಇರುವುದು ಕೌರವರ ಪಾಳಯದಲ್ಲಿಯೇ. ಹಾಗಾಗಿ ದುರ್ಯೋಧನನ್ನು ಸೋಲಿಸುವುದೂ ಸುಲಭದ ಮಾತಲ್ಲ’ ಎಂದರು.
– ಪ್ರೊ. ಎಲ್. ಎಸ್. ಶೇಷಗಿರಿ ರಾವ್ ಅವರ (“ಕಿರಿಯರ ಮಹಾಭಾರತ’ ಪುಸ್ತಕದಿಂದ ಆಯ್ದ ಭಾಗ)