Advertisement

ಸರ್ಕಾರಿ ಗೌರವಗಳೊಂದಿಗೆ ಅಂತ್ಯಕ್ರಿಯೆ

10:51 AM Jul 12, 2019 | Naveen |

ಬೀಳಗಿ: ಜಮ್ಮು-ಕಾಶ್ಮೀರದ ಶ್ರೀನಗರದಲ್ಲಿ ಹೃದಯಾಘಾತದಿಂದ ಮಂಗಳವಾರ (ಜು. 9) ನಿಧನರಾದ ಸಿಆರ್‌ಪಿಎಫ್‌ನಲ್ಲಿ ಎಸ್‌ಐ ಆಗಿ ಸೇವೆ ಸಲ್ಲಿಸುತ್ತಿದ್ದ ಸುನಗ ತಾಂಡಾ ಯೋಧ ಭೀಮಸಿಂಗ್‌ ಸಿದ್ದಪ್ಪ ರಾಠೊಡ (53) ಅಂತ್ಯಕ್ರಿಯೆ ಸರ್ಕಾರಿ ಗೌರವಗಳೊಂದಿಗೆ ಸುನಗ ತಾಂಡಾ ಪ್ರಾಥಮಿಕ ಶಾಲೆಯ ಹತ್ತಿರ ಗುರುವಾರ ಜರುಗಿತು.

Advertisement

ಜಮ್ಮು ಕಾಶ್ಮೀರದಿಂದ ಪುಣೆ ಮಾರ್ಗವಾಗಿ ಯೋಧನ ಪಾರ್ಥಿವ ಶರೀರ ಗುರುವಾರ ಸ್ವ-ಗ್ರಾಮಕ್ಕೆ ಆಗಮಿಸಿತು. ಬೀಳಗಿ ಕ್ರಾಸ್‌ ಕನಕ ವೃತ್ತಕ್ಕೆ ಆಗಮಿಸಿದ ಯೋಧನ ಪಾರ್ಥಿವ ಶರೀರವನ್ನು ತಹಶೀಲ್ದಾರ್‌ ಉದಯ ಕುಂಬಾರ ಹೂಗುಚ್ಚ ಸಮರ್ಪಿಸಿ ಸರಕಾರಿ ಗೌರವದೊಂದಿಗೆ ಬರಮಾಡಿಕೊಂಡರು. ನಂತರ ಸುನಗ ಕ್ರಾಸ್‌ ಬಳಿ ಜಿಲ್ಲಾಧಿಕಾರಿ ರಾಮಚಂದ್ರ ಆರ್‌, ಎಸ್ಪಿ ಲೋಕೇಶ ಜೆ. ಯೋಧನ ಪಾರ್ಥಿವ ಶರೀರಕ್ಕೆ ಅಂತಿಮ ನಮನ ಸಲ್ಲಿಸಿದರು. ಸಹಸ್ರಾರು ಜನರ ದೇಶಭಕ್ತಿ ಘೋಷಣೆಯೊಂದಿಗೆ ಸುನಗಕ್ರಾಸ್‌ನಿಂದ ಸುನಗ ತಾಂಡಾವರೆಗೆ ಯೋಧನ ಪಾರ್ಥಿವ ಶರೀರದ ಮೆರವಣಿಗೆ ನಡೆಯಿತು. ಮೆರವಣಿಗೆಯುದ್ದಕ್ಕೂ ಜನರು ಯೋಧನಿಗೆ ಅಂತಿಮ ನಮನ ಸಲ್ಲಿಸಿದರು.

ಮುಗಿಲು ಮುಟ್ಟಿದ ಆಕ್ರಂದನ: ಮೃತ ಯೋಧ ಭೀಮಸಿಂಗ್‌ ತಂದೆ-ತಾಯಿ, ಪತ್ನಿ. ಮಕ್ಕಳು ಸೇರಿದಂತೆ ಕುಟುಂಬದ ಸದಸ್ಯರು ಹಾಗೂ ಬಂಧು-ಮಿತ್ರರ ಆಕ್ರಂದನ ಮುಗಿಲುಮುಟ್ಟಿತ್ತು.

ಯೋಧ ಭೀಮಸಿಂಗ್‌ ಸಿಆರ್‌ಪಿಎಫ್‌ನಲ್ಲಿ ಕಳೆದ 28 ವರ್ಷಗಳಿಂದ ಸೇವೆಯಲ್ಲಿದ್ದರು. ಕಳೆದ ಆರು ತಿಂಗಳ ಹಿಂದೆ ಎಸ್‌ಐ ಆಗಿ ಬಡ್ತಿ ಹೊಂದಿದ್ದರು. ಮೃತ ಯೋಧರು ತಂದೆ-ತಾಯಿ, ಪತ್ನಿ, ಮೂವರು ಪುತ್ರರು ಸೇರಿದಂತೆ ಅಪಾರ ಬಂಧು-ಬಳಗ ಅಗಲಿದ್ದಾರೆ.

ಅಂತಿಮ ನಮನ: ಮೋಡ ಕವಿದ ವಾತಾವರಣ, ತುಂತುರ ಮಳೆಯ ಹನಿಯ ಸಿಂಚನ, ನೂರಾರು ಜನರ ಆಶ್ರುತರ್ಪಣದ ನಡುವೆ ಯೋಧನ ಅಂತ್ಯಕ್ರಿಯೆ ವಿಧಿ-ವಿಧಾನಗಳು ಜರುಗಿದವು. ಅಂತ್ಯಕ್ರಿಯೆ ವೇಳೆ ಭೀಮಸಿಂಗ್‌ ಅಮರ್‌ ರಹೇ, ಬೋಲೋ ಭಾರತ ಮಾತಾಕೀ ಜೈ, ವಂದೇ ಮಾತರಂ ದೇಶಭಕ್ತಿಯ ಘೋಷಣೆ ಮುಗಿಲು ಮುಟ್ಟಿತ್ತು. ಜಿಲ್ಲಾ ಸಶಸ್ತ್ರ ಮೀಸಲು ಪೊಲೀಸ್‌ ಪಡೆಯಿಂದ ಮೂರು ಸುತ್ತು ಗಾಳಿಯಲ್ಲಿ ಗುಂಡು ಹಾರಿಸುವ ಮೂಲಕ ಯೋಧನಿಗೆ ಅಂತಿಮ ಗೌರವ ಸಲ್ಲಿಸಲಾಯಿತು.

Advertisement

ಗಣ್ಯರ ದಂಡು: ತಹಶೀಲ್ದಾರ್‌ ಉದಯ ಕುಂಬಾರ, ಜಿಪಂ ಅಧ್ಯಕ್ಷೆ ಬಾಯಕ್ಕ ಮೇಟಿ, ಜಿಪಂ ಸದಸ್ಯ ಹೂವಪ್ಪ ರಾಠೊಡ, ಕಸ್ತೂರಿ ಲಿಂಗಣ್ಣವರ್‌, ಸಿಪಿಐ ರವೀಂದ್ರ ಡಿ.ಬಿ., ಪಿಎಸ್‌ಐ ಶಿವಕುಮಾರ ಲೋಹಾರ, ಕ್ಷೇತ್ರ ಶಿಕ್ಷಣಾಧಿಕಾರಿ ಹನುಮಂತಗೌಡ ಮಿರ್ಜಿ ಸೇರಿದಂತೆ ಅನೇಕ ಗಣ್ಯರು ಯೋಧನ ಅಂತ್ಯಕ್ರಿಯೆಯಲ್ಲಿ ಭಾಗಿಯಾಗಿದ್ದರು.

Advertisement

Udayavani is now on Telegram. Click here to join our channel and stay updated with the latest news.

Next