Advertisement

ಜ. 15ರೊಳಗೆ ತನಿಖಾ ವರದಿ ನೀಡಿ

06:53 PM Dec 23, 2019 | Naveen |

ಬೀದರ: ವಿವಿಧ ವಸತಿ ಯೋಜನೆಗಳಡಿ ಮನೆಗಳನ್ನು ನಿರ್ಮಿಸುವಲ್ಲಿ ನಡೆದಿದೆ ಎನ್ನಲಾದ ಅವ್ಯವಹಾರದ ಕುರಿತು ತನಿಖೆ ನಡೆಸಿ ಜ. 15ರೊಳಗೆ ವರದಿ ನೀಡಬೇಕು ಎಂದು ವಸತಿ ಖಾತೆ ಸಚಿವ ವಿ. ಸೋಮಣ್ಣ ಅವರು ಜಿಪಂ ಸಿಇಒ ಗ್ಯಾನೇಂದ್ರಕುಮಾರ ಗಂಗ್ವಾರ್‌ ಅವರಿಗೆ ಸೂಚನೆ ನೀಡಿದರು.

Advertisement

ನಗರದ ಜಿಲ್ಲಾಧಿಕಾರಿ ಕಚೇರಿಯಲ್ಲಿ ರವಿವಾರ ನಡೆದ ವಸತಿ ಮತ್ತು ತೋಟಗಾರಿಕೆ ಇಲಾಖೆ ಅಧಿಕಾರಿಗಳ ಸಭೆಯಲ್ಲಿ ಜಿಲ್ಲಾ ಉಸ್ತುವಾರಿ ಸಚಿವ ಪ್ರಭು ಚವ್ಹಾಣ ಅವರು ಮನೆಗಳ ನಿರ್ಮಾಣದಲ್ಲಿ ಅವ್ಯವಹಾರ ನಡೆದಿರುವ ಬಗ್ಗೆ ಗಮನ ಸೆಳೆದರು. ಔರಾದ ಸೇರಿದಂತೆ ಇಡೀ ಜಿಲ್ಲೆಯಲ್ಲಿ ಕಳಪೆ ಕಾಮಗಾರಿ ನಡೆಸಲಾಗಿದೆ. ಅವ್ಯವಹಾರವೂ ಆಗಿದೆ. ಹೀಗಾಗಿ ಮನೆಗಳ ನಿರ್ಮಾಣದ ಕುರಿತು ಸಂಪೂರ್ಣ ತನಿಖೆಯಾಗಬೇಕು ಎಂದು ಒತ್ತಾಯಿಸಿದರು.

ಇದಕ್ಕೆ ಸ್ಪಂದಿಸಿದ ಸಚಿವ ಸೋಮಣ್ಣ 2013ರಿಂದ ಈವರೆಗೆ ಸರ್ಕಾರದ ವಿವಿಧ ಯೋಜನೆಗಳಾದ ಡಾ| ಬಿ.ಆರ್‌. ಅಂಬೇಡ್ಕರ್‌ ಗ್ರಾಮೀಣ, ಬಸವ ವಸತಿ, ದೇವರಾಜ ಅರಸು ಹಾಗೂ ಪ್ರಧಾನಮಂತ್ರಿ ಆವಾಸ್‌ ವಸತಿ ಯೋಜನೆಗಳಡಿ ನಿರ್ಮಿಸಿರುವ ಮನೆಗಳ ಕುರಿತು ತನಿಖೆ ನಡೆಸಿ ವರದಿ ನೀಡಬೇಕು ಎಂದು ಸೂಚಿಸಿದರು.

ಬಳಿಕ ಜಿಲ್ಲೆಗೆ ವಸತಿ ಇಲಾಖೆ ವ್ಯವಸ್ಥಾಪಕ ನಿರ್ದೇಶಕರ ನೇತೃತ್ವದ ಅಧಿಕಾರಿಗಳ ತಂಡವನ್ನು 10 ದಿನಗಳಿಗಾಗಿ ಬೀದರಗೆ ಕಳುಹಿಸಿ ಮೂರನೇ ಹಂತದ ತನಿಖೆ ನಡೆಸುವೆ. ಒಂದು ವೇಳೆ ಅಧಿಕಾರಿಗಳು ನೀಡಿರುವ ವರದಿ ತಪ್ಪಾಗಿದ್ದರೆ ಅಧಿಕಾರಿಗಳ ವಿರುದ್ಧ ಮುಲಾಜಿಲ್ಲದೆ ಕ್ರಮ ಕೈಗೊಳ್ಳಲಾಗುವುದು. ಮನೆ ನಿರ್ಮಾಣ,
ಹಂಚಿಕೆಯಲ್ಲಿ ಎಷ್ಟೇ ದೊಡ್ಡ ಪ್ರಭಾವಿಗಳಿದ್ದರೂ ಅವರ ವಿರುದ್ಧ ಕ್ರಮ ತೆಗೆದುಕೊಳ್ಳುವೆ ಎಂದು ಹೇಳಿದರು.

ಅರ್ಹ ಬಡವರಿಗೆ ಮನೆಗಳ ಹಂಚಿಕೆ ಆಗಬೇಕು. ಆದರೆ, ಪ್ರತಿ ಬಾರಿ ಒಬ್ಬನೇ ಫಲಾನುಭವಿಗೆ ವಿವಿಧ ಯೋಜನೆಗಳಡಿ ಮನೆ ನೀಡುವ ಮೂಲಕ ಅಧಿಕಾರಿಗಳು ತಪ್ಪು ಎಸಗುತ್ತಿದ್ದಾರೆ. ಈ ವಿಷಯದಲ್ಲಿ ಪಾರದರ್ಶಕತೆ ಕಾಯ್ದುಕೊಂಡು ವಂಚನೆಗೆ ಅವಕಾಶ ನೀಡದಂತೆ ಕೆಲ ಮಾಡಿ. ವಸತಿ ಯೋಜನೆಗಳಲ್ಲಿನ ಅವ್ಯವಹಾರ ತಡೆಗೆ ನೋಡಲ್‌ ಅಧಿಕಾರಿಗಳನ್ನು ನೇಮಿಸಲಾಗಿದೆ.

Advertisement

ಕೆಎಎಸ್‌ ಶ್ರೇಣಿ ಅಧಿಕಾರಿಗಳನ್ನು ಜಿಲ್ಲೆಗೆ ಕಳುಹಿಸಿ ಮೂರನೇ ಹಂತದ ತನಿಖೆ ನಡೆಸಲಾಗುವುದು ಎಂದು ಸಚಿವರು ಹೇಳಿದರು. ಭಾಲ್ಕಿಯಲ್ಲಿ ಉಳ್ಳವರಿಗೆ ಮನೆ ನೀಡುವ ಮೂಲಕ ಅರ್ಹರಿಗೆ ಅನ್ಯಾಯ ಮಾಡಲಾಗಿದೆ ಎಂದು ಸಂಸದ ಭಗವಂತ ಖೂಬಾ ಸಚಿವರ ಗಮನ ಸೆಳೆದರು. ಇದಕ್ಕೆ ಸ್ಪಂದಿಸಿದ ಸಚಿವ ವಿ. ಸೋಮಣ್ಣ, ಭಾಲ್ಕಿ ತಾಲೂಕಿನಲ್ಲಿ ಗ್ರಾಮವಾರು, ಕುಟುಂಬವಾರು ಹಾಗೂ ಯೋಜನಾವಾರು ತನಿಖೆ ನಡೆಸಿ, ಫಲಾನುಭವಿಗಳ ಪಟ್ಟಿ ನೀಡುವಂತೆ ಸಿಇಒ ಅವರಿಗೆ ಸೂಚಿಸಿದರಲ್ಲದೇ ಒಂದು ವೇಳೆ ತಪ್ಪೇ ಆಗಿದ್ದಲ್ಲಿ ಭಾಲ್ಕಿಗೆ 1 ರೂ. ಸಹ ಬಿಡುಗಡೆ ಮಾಡಬೇಡಿ ಎಂದು ನಿರ್ದೇಶನ ನೀಡಿದರು.

ಶಾಸಕ ರಹೀಮ್‌ಖಾನ್‌, ಜಿಪಂ ಸಿಇಒ ಗ್ಯಾನೇಂದ್ರಕುಮಾರ ಗಂಗವಾರ್‌, ಅಪರ ಜಿಲ್ಲಾಧಿಕಾರಿ ರುದ್ರೇಶ ಗಾಳಿ ಸೇರಿದಂತೆ ಅಧಿಕಾರಿಗಳು ಸಭೆಯಲ್ಲಿ ಭಾಗವಹಿಸಿದ್ದರು.

Advertisement

Udayavani is now on Telegram. Click here to join our channel and stay updated with the latest news.

Next