ಬೀದರ: ಪರಿಸರ ಸಂರಕ್ಷಣೆ ನಮ್ಮೆಲ್ಲರ ಆದ್ಯ ಕರ್ತವ್ಯವಾಗಿದೆ. ಪ್ರತಿಯೊಬ್ಬರು ಗಿಡ, ಮರಗಳು ಬೆಳೆಸಲು ಪ್ರತಿಜ್ಞೆ ಮಾಡಬೇಕು ಎಂದು ಕನ್ನಡ ಸಾಹಿತ್ಯ ಪರಿಷತ್ತ ಬೀದರ ತಾಲೂಕು ಅಧ್ಯಕ್ಷ ಎಂ.ಎಸ್ ಮನೋಹರ ಹೇಳಿದರು.
ನಗರದ ಶಿವಾಲಯ ಸಭಾಂಗಣದಲ್ಲಿ ಜನಪ್ರಿಯ ಟ್ರಸ್ ಏರ್ಪಡಿಸಿದ್ದ ವಿಶ್ವ ಪರಿಸರ ದಿನಾಚಣೆ ನಿಮಿತ್ತ ಪರಿಸರ ಪ್ರಜ್ಞೆ ಮತ್ತು ಸಾಹಿತ್ಯ ಸಾಂಸ್ಕೃತಿಕ ಚಿಂತನ ಕಾರ್ಯಕ್ರಮ ಉದ್ಘಾಟಿಸಿ ಅವರು ಮಾತನಾಡಿದರು.
ಗಿಡ-ಮರಗಳಿಲ್ಲದೆ ಭೂತಾಯಿ ಬಂಜರಾಗುತ್ತಿರುವುದು ಖೇದಕರವಾಗಿದೆ. ಒಂದು ವೇಳೆ ಪರಿಸ್ಥಿತಿ ಹೀಗೇಯೆ ಮುಂದುವರಿದರೆ ಬರುವ ದಿನಮಾನಗಳಲ್ಲಿ ಮಾನವನ ಬದುಕು ದುಸ್ತರವಾಗುವುದರಲ್ಲಿ ಯಾವುದೇ ಸಂದೇಹವಿಲ್ಲ. ಪರಿಸರ ಹಾಗೂ ಮಾನವನ ಮಧ್ಯೆ ನಿಕಟ ಸಂಬಂಧವಿದೆ. ಮರವಿದ್ದರೆ ಮಳೆ, ಮಳೆಯಿದ್ದರೆ ರೈತ, ರೈತನಿದ್ದರೆ ಮಾತ್ರ ಮಾನವನ ಜೀವನ. ಇಲ್ಲವಾದರೆ ಮನುಕುಲಕ್ಕೆ ಉಳಿಗಾಲವಿಲ್ಲ. ಮುಂದಿನ ಮಕ್ಕಳ ಭವಿಷ್ಯಕ್ಕಾದರು ಪ್ರತಿಯೊಬ್ಬರು ಒಂದು ಗಿಡ ಬೆಳೆಸುವ ಸಂಕಲ್ಪ ಮಾಡಬೇಕು ಎಂದು ಹೇಳಿದರು.
ಪರಿಸರ ಸಂರಕ್ಷಣೆ ಬರಿ ವೇದಿಕೆ ಮೇಲೆ ಭಾಷಣಕ್ಕೆ ಸೀಮಿತವಾಗದೆ. ಈ ನಿಟ್ಟಿನಲ್ಲಿ ಪ್ರತಿಯೊಬ್ಬರೂ ಕಾಳಜಿ ವಹಿಸಬೇಕು. ಮನೆಗೊಂದು ಸಸಿ ನೆಡುವ ಮೂಲಕ ಮನೆ ಅಂಗಳದ ಪರಿಸರ ಉತ್ತಮವಾಗಿರುವಂತೆ ನೋಡಿಕೊಳ್ಳಬೇಕು. ಒಂದು ಮರ ಕಡಿದರೆ ಹತ್ತು ಮರ ನೆಡುವ ಮೂಲಕ ನಾವು ನಮ್ಮ ಪರಿಸರ ಉಳಿಸಬೇಕಾಗಿದೆ. ಅದರಲ್ಲೂ ವಿಶೇಷವಾಗಿ ಯುವ ಜನತೆ ಜಾಗೃತರಾಗಿ ಪರಿಸರ ಸಂರಕ್ಷಣೆಯತ್ತ ಹೆಜ್ಜೆಯಿಡಬೇಕು. ಪರಿಸರ ಕುರಿತು ವಿಶೇಷವಾದ ಮಕ್ಕಳ ಶಿಬಿರಗಳನ್ನು ಹಮ್ಮಿಕೊಳ್ಳುವ ಮೂಲಕ ಚಿಣ್ಣರಲ್ಲಿಯೂ ಜಾಗೃತಿ ಮೂಡಿಸುವ ಕಾರ್ಯ ಶಿಕ್ಷಕರು ಮಾಡಬೇಕು ಎಂದು ಹೇಳಿದರು. ಸಾಹಿತಿ ಆತ್ಮಾನಂದ ಬಂಬುಳಗಿ ಮಾತನಾಡಿ, ಸಾಹಿತ್ಯ ಸಂಸ್ಕೃತಿಕ ಚಿಂತನೆ ಜತೆಗೆ ಸಮಾಜಪರವಾದ ಕಾಳಜಿ ಹೊಂದಿರುವ ಜನಪ್ರಿಯ ಟ್ರಸ್ಟ್ ನಿಜಕ್ಕೂ ಇಂತಹ ಕಾರ್ಯಕ್ರಮ ಹಮ್ಮಿಕೊಂಡು ಜನಜಾಗೃತಿ ಮೂಡಿಸುತ್ತಿರುವುದು ಹೆಮ್ಮೆಯ ಸಂಗತಿಯಾಗಿದೆ. ಸಮಾಜದ ಪ್ರತಿಯೊಬ್ಬ ಪ್ರಜೆಗೂ ಪರಿಸರ ಸೇರಿದಂತೆ ಸಾಹಿತ್ಯ ಸಾಂಸ್ಕೃತಿಕ, ಕಾರ್ಯಚಟುವಟಿಕೆಳಗತ್ತ ಗಮನಹರಿಸುವುದು ಅತ್ಯಗತ್ಯವಾಗಿದೆ ಎಂದು ಹೇಳಿದರು.ಕರ್ನಾಟಕ ಬಾಲವಿಕಾಸ ಅಕಾಡೆಮಿ ಜಿಲ್ಲಾ ಸದಸ್ಯ ಶಾಮರಾವ ನೆಲವಾಡೆ, ಜನಪ್ರಿಯ ಟ್ರಸ್ಟ್‌ನ ಅಧ್ಯಕ್ಷ ನಾಗಶೆಟ್ಟಿ ಪಾಟೀಲ ಗಾದಗಿ ಮಾತನಾಡಿದರು. ವೀರೇಶ ಪಾಟೀಲ, ಸುರೇಶ ಕುಲಕರ್ಣಿ, ನಾಗೇಶ ಪಾಂಚಾಳ ಇದ್ದರು.