ಬೀದರ: ಅದ್ಭುತ ಪ್ರತಿಭೆಗೆ ಇನ್ನೊಂದು ಹೆಸರೇ ವಿಶೇಷ ಚೇತನರು ಎಂದು ಕಿತ್ತೂರು ರಾಣಿ ಚನ್ನಮ್ಮ ಮಹಿಳಾ ಮಂಡಳದ ಅಧ್ಯಕ್ಷೆ ಗುರಮ್ಮ ಸಿದ್ದಾರೆಡ್ಡಿ ಹೇಳಿದರು.
ನಗರದ ಕಿತ್ತೂರು ರಾಣಿ ಚನ್ನಮ್ಮ ಸಾಂತ್ವನ ಕೇಂದ್ರದಲ್ಲಿ ಮಂಗಳವಾರ ನಡೆದ ವಿಶ್ವ ವಿಕಲಚೇತನ ದಿನಾಚರಣೆ ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿ ಮಾತನಾಡಿದ ಅವರು, ಅಂಗವೈಕಲ್ಯವೆಂಬುದು ಶಾಪವಲ್ಲ, ಅದು ನಮ್ಮ ಬದುಕಿಗೆ ಒಂದು ಸವಾಲಿನ ಘಟ್ಟ. ಅವರನ್ನು ಗೌರವದಿಂದ ಕಾಣುವುದು ಮನುಷ್ಯನ ಧರ್ಮ. ಅವರನ್ನು ಸಮಾಜದ ಮುಖ್ಯ ವಾಹಿನಿಗೆ ತರುವುದು ಎಲ್ಲ ಸಂಘ, ಸಂಸ್ಥೆಗಳ ಜವಾಬ್ದಾರಿಯಾಗಿದೆ ಎಂದರು.
ವಿದ್ಯಾವತಿ ಹಿರೇಮಠ ಅವರು ನಮ್ಮ ನೆಲದಲ್ಲಿ ಹುಟ್ಟಿ, ತಾವು ವಿಶೇಷ ಚೇತನರಾಗಿದ್ದರೂ ಅಂತಾರಾಷ್ಟ್ರೀಯ ಓಲಂಪಿಕ್ ಕ್ರೀಡೆಯಲ್ಲಿ ಸಾಧನೆ ಮಾಡಿರುವುದು ಅಭಿಮಾನದ ಸಂಗತಿ. ಇಂಥ ಪ್ರತಿಭೆಗಳಿಗೆ ಎಲ್ಲ ಸಮಾಜಗಳು ಗುರುತಿಸಿ ಪ್ರೋತ್ಸಾಹಿಸುವ ಕಾರ್ಯ ಮಾಡಬೇಕು ಎಂದರು.
ರಾಜ್ಯ ಉತ್ತಮ ಶಿಕ್ಷಕ ಪ್ರಶಸ್ತಿ ಪುರಸ್ಕೃತೆ ಸುನೀತಾ ದಾಡಗೆ ಮಾತನಾಡಿ, ಭಗವಂತನು ಮನುಷ್ಯನನ್ನು ಸಮಾನವಾಗಿ ಕಾಣುತ್ತಾನೆ ಎಂಬುದಕ್ಕೆ ಎಲ್ಲ ವಿಶೇಷಚೇತನ ವ್ಯಕ್ತಿಗಳೇ ಸಾಕ್ಷಿ. ಅವರಲ್ಲಿ ಅಂಗವೈಕಲ್ಯದ ಸಮಸ್ಯೆ ಇದ್ದರೂ ಸಾಮಾನ್ಯ ಮನುಷ್ಯನಿಗಿರುವ ಪ್ರತಿಭೆಗಿಂತ ದುಪ್ಪಟ್ಟು ಇರುತ್ತದೆ. ವಿಶೇಷ ಪ್ರತಿಭೆಗಳಿಗೆ ಸಮಾಜ ಮುಕ್ತ ಅವಕಾಶ ಕಲ್ಪಿಸಬೇಕು. ಅವರನ್ನು ಪ್ರೋತ್ಸಾಹಿಸುವುದರ ಜೊತೆಗೆ ಗೌರವಿಸಿದಲ್ಲಿ ಇನ್ನಷ್ಟು ಸ್ಫೂರ್ತಿ ಹಾಗೂ ಹುಮ್ಮಸ್ಸು ಅವರಲ್ಲಿ ಕಾಣಲು ಸಾಧ್ಯ ಎಂದು ತಿಳಿಸಿದರು.
ಅಂತಾರಾಷ್ಟ್ರೀಯ ಕ್ರೀಡಾಪಟು ವಿದ್ಯಾವತಿ ಹಿರೇಮಠ ಸನ್ಮಾನ ಸ್ವೀಕರಿಸಿ ಮಾತನಾಡಿ, ಪ್ರತಿಭೆಗಳಿಗೆ ಮಾರ್ಗದರ್ಶನ ಹಾಗೂ ಪ್ರೋತ್ಸಾಹ ಜರೂರಿಯಾಗಿದೆ. ಅದಕ್ಕೆ ಯಾವುದೇ ಅಂಗವೈಕಲ್ಯ ಅಥವಾ ವಯಸ್ಸು ಅಡ್ಡಿಯಾಗುವುದಿಲ್ಲ. ತಾನು ವಿಶ್ವ ಮಟ್ಟದಲ್ಲಿ ಗುರುತಿಸಿಕೊಳ್ಳಲು ರಾಜಸ್ಥಾನದ ದೇವೇಂದ್ರ ಝಜಾರಿಯಾ ಅವರ ಪ್ರೇರಣೆಯೇ ಕಾರಣ. ಕ್ರೀಡಾಪಟು ಎನಿಸದೆ ಸಾಹಿತಿಯಾಗಿ ನಿಲ್ಲಬೇಕೆಂಬ ಸದಾಶಯದಿಂದ 23 ಕೃತಿಗಳು ಹಾಗೂ 13 ಸ್ವರಚಿತ ಕವನ ಸಂಕಲನಗಳನ್ನು ಹೊರ ತರುವ ಕಾರ್ಯ ನನ್ನಿಂದಾಯಿತು ಎಂದರು.
ಸುನಿತಾ ಸಂದೀಪ ಹಾಗೂ ಶಾಹಜಾ ಬೇಗಂ ಅವರನ್ನು ಇದೇ ವೇಳೆ ಸನ್ಮಾನಿಸಲಾಯಿತು. ಗೀತಾ ಶ್ರೀಹರಿ ಸ್ವಾಗತಿಸಿದರು. ರಾಜಕುಮಾರಿ ವಂದಿಸಿದರು. ಮಂಡಳದ ಸಿಬ್ಬಂದಿ ಮತ್ತು ವಿಶೇಷಚೇತನ ಮಹಿಳೆಯರು ಪಾಲ್ಗೊಂಡಿದ್ದರು.