ಬೀದರ: ನಗರದ ಹೊರವಲಯದ ಕರ್ನಾಟಕ ಪಶು ವೈದ್ಯಕೀಯ ಮತ್ತು ವಿಜ್ಞಾನಗಳ ವಿಶ್ವವಿದ್ಯಾಲಯಕ್ಕೆ ಮಂಗಳವಾರ ಪಶು ಸಂಗೋಪನಾ ಮತ್ತು ಜಿಲ್ಲಾ ಉಸ್ತುವಾರಿ ಸಚಿವ ಪ್ರಭು ಚವ್ಹಾಣ ದಿಢೀರ್ ಭೇಟಿ ನೀಡಿದರು. ವಿವಿ ಪರಿಸರದಲ್ಲಿ ಅವ್ಯವಸ್ಥೆ, ಸಿಬ್ಬಂದಿಗಳ ಕಾರ್ಯವೈಖರಿ ಬಗ್ಗೆ ಅಸಮಾಧಾನ ವ್ಯಕ್ತಪಡಿಸಿದರು.
ವಿವಿ ಆವರಣದ ಹಲವಾರು ಕಡೆಗಳಲ್ಲಿ ಸಂಚರಿಸಿದ ಸಚಿವರು, ಆಯಾ ಕಡೆಗಳಲ್ಲಿ ವಿಪರೀತ ಬೆಳೆದು ನಿಂತಿದ್ದ ಕಸದ ಗಿಡಗಳನ್ನು ಕಂಡು ಗರಂ ಆದರು. ತಾವು ನಿಯಮಿತವಾಗಿ ಎಲ್ಲ ಕಡೆ ಭೇಟಿ ನೀಡಿದರೆ ವಿವಿಯ ಆವರಣ ಹೀಗಿರುವುದಿಲ್ಲ. ವಿವಿನಲ್ಲಿ ಅಧಿಕಾರಿಗಳು ಮತ್ತು ಸಿಬ್ಬಂದಿ ಮೇಲೆ ತಮ್ಮ ಹಿಡಿತ ಇಲ್ಲ ಎಂಬುದು ಈ ಮೂಲಕ ತಿಳಿಯುತ್ತದೆ ಎಂದು ಸಚಿವರು ಕುಲಪತಿಯವರ ಕಾರ್ಯವೈಖರಿ ಬಗ್ಗೆ ಕಿಡಿ ಕಾರಿದರು.
ದೂರು ಪೆಟ್ಟಿಗೆ ಇಡಲು ನಿರ್ಣಯ: ಬೀದರನಲ್ಲಿ ರಾಜ್ಯದ ಏಕೈಕ ವಿಶ್ವವಿದ್ಯಾಲಯ ಇರುವುದು ನಮ್ಮ ಪುಣ್ಯ. ಇಲ್ಲಿ ಎಲ್ಲ ಕಾರ್ಯವು ಪಾರದರ್ಶಕವಾಗಿ ನಡೆಯಬೇಕು. ಇದರಿಂದ ಜಿಲ್ಲೆಯ ಜನತೆಗೆ ಒಳ್ಳೆಯದಾಗಬೇಕಿದೆ. ಆದರೆ, ವಿವಿಯ ಬಗ್ಗೆ ಸಾಕಷ್ಟು ದೂರುಗಳು ಕೇಳಿ ಬರುತ್ತಿವೆ. ಇಲ್ಲಿನ ದೇವಣಿ ತಳಿ ಬಗ್ಗೆ ದೂರುಗಳು ಬಂದಿವೆ. ಸಿಬ್ಬಂದಿ ನೇಮಕಾತಿ ಸರಿಯಾಗಿ ನಡೆದಿಲ್ಲ ಎನ್ನುವ ದೂರುಗಳಿವೆ. ಹೀಗಾಗಿ ವಿವಿಯ ಆವರಣದಲ್ಲಿ ದೂರು ಪೆಟ್ಟಿಗೆ ಇಡಲಾಗುವುದು. ಏನೇ ದೂರು ಬಂದರೂ ಅದನ್ನು ತಾವೇ ಖುದ್ದು ಪರಿಶೀಲಿಸಬೇಕು ಎಂದು ಕುಲಪತಿಯವರಿಗೆ ಸೂಚಿಸಿದರು.
ಈ ವೇಳೆ ಸಚಿವರು ಕುಲಪತಿಗಳು, ರಿಜಿಸ್ಟ್ರಾರ್ ಕಾರ್ಯಾಲಯದ ಹಾಜರಾತಿ ಪರಿಶೀಲಿಸಿದರು. ಬಯೋಮೆಟ್ರಿಕ್ ಹಾಜರಾತಿ ಯಾಕಿಲ್ಲ ಎಂದು ಕೇಳಿದರು. ಆಯಾ ಸಿಬ್ಬಂದಿಯನ್ನು ಮಾತನಾಡಿಸಿ ಅವರ ಕಾರ್ಯವೈಖರಿ ಬಗ್ಗೆ ಮಾಹಿತಿ ಪಡೆದರು. ವಿವಿಗೆ ಸಂಬಂಧಿ ಸಿದಂತೆ ಬಂದಿರುವ ಆರ್‌ಟಿಐ ಅರ್ಜಿಗಳನ್ನು ಪರಿಶೀಲಿಸಿದ ಸಚಿವರು, ಈ ರೀತಿ ದೂರುಗಳು ಬಹಳ ಬರುತ್ತಿವೆ. ಈ ಬಗ್ಗೆ ಗಮನ ಹರಿಸಬೇಕು ಎಂದು ತಿಳಿಸಿದರು.
ಔಷಧ ಪರಿಶೀಲನೆ: ಪಶು ವೈದ್ಯಕೀಯ ಚಿಕಿತ್ಸಾ ಸಂಕೀರ್ಣಕ್ಕೆ ತೆರಳಿದ ಸಚಿವರು, ಅಲ್ಲಿ ಪಶುಗಳಿಗೆ ನೀಡುತ್ತಿದ್ದ ಚಿಕಿತ್ಸೆಯನ್ನು ವೀಕ್ಷಿಸಿದರು. ಪಶುಗಳಿಗೆ ನೀಡುವ ಔಷಧಗಳನ್ನು ಪರಿಶೀಲಿಸಿದರು. ಗ್ರೂಪ್ ಡಿ ನೌಕರರ ವೇತನ ಇದುವರೆಗೆ ಆಗಿರುವುದಿಲ್ಲ ಎಂದು ಅಲ್ಲಿನ ಸಿಬ್ಬಂದಿಯೊಬ್ಬರು ಸಚಿವರ ಗಮನಕ್ಕೆ ತಂದರು. ಈ ವೇಳೆ ಜಿಪಂ ಸದಸ್ಯ ಮಾರುತಿ ಚವ್ಹಾಣ, ಸಚಿವರ ವಿಶೇಷ ಕರ್ತವ್ಯಾಧಿಕಾರಿ ಶಿವಕುಮಾರ ಕಟ್ಟೆ, ವಿವಿಯ ರಿಜಿಸ್ಟ್ರಾರ್ ಕೆ.ಸಿ.ವೀರಣ್ಣ ಹಾಗೂ ಇತರರು ಇದ್ದರು.