Advertisement

ರೈತರಿಗೆ ಕೃಷಿ ಪತ್ತಿನ ಸಂಘ ಜೀವಾಳ

10:15 AM Jul 07, 2019 | Naveen |

ಬೀದರ: ಸಹಕಾರಿ ವ್ಯವಸ್ಥೆಯಲ್ಲಿ ಜನರಿಗೆ ಅತಿ ಸುಲಭವಾಗಿ ಕೈಗೆಟಕುವ ದರದಲ್ಲಿ ಸಾಲ ಸೌಲಭ್ಯ ಸಿಗುತ್ತಿದ್ದು, ಗ್ರಾಮೀಣ ಜನರಿಗೆ ಅದರಲ್ಲೂ ಕೃಷಿಕರಿಗೆ ಅತ್ಯಂತ ಅನುಕೂಲಕರವಾಗಿದೆ ಎಂದು ಡಿಸಿಸಿ ಬ್ಯಾಂಕಿನ ನಿರ್ದೇಶಕ ಅಬ್ದುಲ ಸಲೀಮ ಹೇಳಿದರು.

Advertisement

ನಗರದಲ್ಲಿ ವಿವಿಧ ಜಿಲ್ಲೆಗಳ ಪ್ರಾಥಮಿಕ ಕೃಷಿ ಪತ್ತಿನ ಸಹಕಾರ ಸಂಘಗಳ ಅಧ್ಯಕ್ಷರಿಗಾಗಿ ಏರ್ಪಡಿಸಿದ್ದ ಉತ್ತಮ ಆಡಳಿತ ನಿರ್ವಹಣೆ ಕುರಿತ ತರಬೇತಿ ಕಾರ್ಯಗಾರ ಉದ್ಘಾಟಿಸಿ ಅವರು ಮಾತನಾಡಿದರು.

ರೈತರಿಗೆ ಹಣಕಾಸಿನ ಸೌಲಭ್ಯ ನೀಡುವ ಸಹಕಾರಿ ವ್ಯವಸ್ಥೆಗೆ ಪ್ರಾಥಮಿಕ ಕೃಷಿ ಪತ್ತಿನ ಸಹಕಾರ ಸಂಘಗಳೇ ಜೀವಾಳವಾಗಿವೆ. ಸುದೃಢವಾದ ಸಂಘಗಳು ಕೇವಲ ತನ್ನ ಸದಸ್ಯರಿಗೆ ಮಾತ್ರವಲ್ಲ ಊರಿಗೆ, ಸಮಾಜಕ್ಕೆ ಮತ್ತು ದೇಶಕ್ಕೂ ಆಸ್ತಿಗಳಾಗಿವೆ. ತನ್ನ ಹಣಕಾಸಿನ ವ್ಯವಹಾರಗಳನ್ನು ಚೆನ್ನಾಗಿ ನಿರ್ವಹಿಸುವುದರಿಂದ ಗ್ರಾಮದ ಜನರಿಗೆ ಲಾಭಾಂಶ ಹಂಚಿಕೆಯಾಗಿ ಸಂಪನ್ಮೂಲಗಳ ಸದಬಳಕೆಯಾಗುತ್ತದೆ. ಬೀದರ ಜಿಲ್ಲೆಯಲ್ಲಿರುವ 3 ಲಕ್ಷ ರೈತ ಕುಟುಂಬಗಳಲ್ಲಿ 2.60 ಲಕ್ಷ ಕುಟುಂಬಗಳನ್ನು ಸಹಕಾರಿ ಸಂಘಗಳ ಸದಸ್ಯರನ್ನಾಗಿ ಮಾಡಿಕೊಳ್ಳಲಾಗಿದೆ. ಜಿಲ್ಲೆಯ ಶೇ.70 ಕೃಷಿ ಸಾಲವನ್ನು ಡಿಸಿಸಿ ಬ್ಯಾಂಕ್‌ ನೀಡುತ್ತಿದ್ದು, ಇದು ರಾಜ್ಯದಲ್ಲೇ ಅತಿ ಹೆಚ್ಚು ಕೃಷಿ ಸಾಲದ ಪಾಲುಗಾರಿಕೆ ಹೊಂದಿರುವ ಸಹಕಾರಿ ಬ್ಯಾಂಕಾಗಿ ರಾಜ್ಯದಲ್ಲೇ ಮೊದಲ ಸ್ಧಾನದಲ್ಲಿದೆ. ಮಧ್ಯಮಾವಧಿ ಕೃಷಿ ಸಾಲದಲ್ಲೂ 136 ಕೋಟಿ ವಿತರಿಸಲಾಗಿದೆ ಎಂದು ವಿವರಿಸಿದರು.

ಬೀದರನ ಶೇ.70 ಪಿಕೆಪಿಎಸ್‌ಗಳು ಲಾಭದಲ್ಲಿದ್ದು, ಅತ್ಯುತ್ತಮ ಸಾಧನೆಯ ದಾಖಲೆ ಹೊಂದಿವೆ. ಸಾಲದ ವಸೂಲಾತಿ ಮತ್ತು ವ್ಯವಹಾರ ಅಭಿವೃದ್ಧಿ ಮೂಲಕ ಲಾಭದತ್ತ ಸಾಗಲು ಸಹಕಾರಿ ಸಂಘಗಳ ಆಡಳಿತ ಮಂಡಳಿ ಸದಸ್ಯರಿಗೆ ತರಬೇತಿಗಳು ಅವಶ್ಯಕ. ಆಡಳಿತದಲ್ಲಿ ಪಾರದರ್ಶಕತೆ ತರುವ ಸಲುವಾಗಿ ಪ್ರಾಥಮಿಕ ಕೃಷಿ ಪತ್ತಿನ ಸಹಕಾರಿ ಸಂಘಗಳಲ್ಲಿ ಗಣಕಯಂತ್ರಗಳನ್ನು ಅಳವಡಿಸಲಾಗಿದೆ. ಪ್ರತಿಯೊಂದು ಪ್ರಾಥಮಿಕ ಕೃಷಿ ಪತ್ತಿನ ಸಹಕಾರಿ ಸಂಘಗಳನ್ನು ಆಧುನಿಕ ಬ್ಯಾಂಕಿಂಗ್‌ ವ್ಯವಸ್ಧೆಗೆ ಅನುಗುಣವಾಗಿ ಸನ್ನದುಗೊಳಿಸಿದರೆ ಕೇವಲ ಕೃಷಿ ಕ್ಷೇತ್ರವನ್ನಲ್ಲದೇ ಇತರ ವ್ಯಾಪಾರಾಭಿವೃದ್ಧಿ ಚಟುವಟಿಕೆಗಳನ್ನು ಕೈಗೊಳ್ಳುವತ್ತ ಸಂಘಗಳು ಗಮನ ಹರಿಸಲು ಸಾಧ್ಯವಾಗುತ್ತದೆ ಎಂದರು.

ಅಧ್ಯಕ್ಷತೆ ವಹಿಸಿದ್ದ ಕಲಬುರಗಿ ವಿಭಾಗದ ಜಂಟಿ ನಿಬಂಧಕ ಐ.ಎಸ್‌. ಗಿರಡ್ಡಿ ಮಾತನಾಡಿ, ಸಹಕಾರಿ ಸಂಘಗಳು ವ್ಯವಹಾರ ಅಭಿವೃದ್ಧಿ ಮೂಲಕ ಸ್ವಾವಲಂಬಿಗಳಾಗಬೇಕು. ಊರಿನ ಅಭಿವೃದ್ಧಿಗೆ ಕೊಡುಗೆ ನೀಡಬೇಕು. ಈ ನಿಟ್ಟಿನಲ್ಲಿ ಪ್ರತಿಯೊಂದು ಸಂಸ್ಥೆಯ ಅಧ್ಯಕ್ಷರು ದೂರದೃಷ್ಟಿಯಿಂದ ಕೆಲಸ ನಿರ್ವಹಿಸಿದರೆ ಆ ಗ್ರಾಮದ ಚಿತ್ರಣ ಬದಲಾಗುತ್ತದೆ ಎಂದು ವಿವರಿಸಿದರು.

Advertisement

ಜಿಲ್ಲಾ ಸಹಕಾರ ಕೇಂದ್ರ ಬ್ಯಾಂಕ್‌ನ ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿ ಮಹಾಜನ ಮಲ್ಲಿಕಾರ್ಜುನ, ಪ್ರಧಾನ ವ್ಯವಸ್ಥಾಪಕ ವಿಠಲ ರೆಡ್ಡಿ, ನರಸಾರೆಡ್ಡಿ, ಸಹಾಯಕ ನಿಬಂಧಕರು ಎ.ಎಸ್‌. ನಿಂಬಾಳ, ಸಹಾರ್ದ ನಿರ್ದೇಶಕ ಸುಬ್ರಮಣ್ಯ ಪ್ರಭು, ಎಸ್‌.ಜಿ. ಪಾಟೀಲ, ನಾಗಶೆಟ್ಟಿ, ತನ್ವೀರ ಇತರರು ಇದ್ದರು.

Advertisement

Udayavani is now on Telegram. Click here to join our channel and stay updated with the latest news.

Next