Advertisement

ಸಹಕಾರಿ ಸಂಘ ರೈತರ ಆಶಾಕಿರಣ: ಚವ್ಹಾಣ

04:19 PM Jan 13, 2020 | Naveen |

ಬೀದರ: ಸಹಕಾರ ಕ್ಷೇತ್ರ ಸಮಾಜಕ್ಕೆ ಸೇವೆ ಸಲ್ಲಿಸಬೇಕು ಎಂದು ಅಭಿಲಾಷೆ ಇರುವವರಿಗೆ ಅತ್ಯುತ್ತಮ ಅವಕಾಶವುಳ್ಳ ಕ್ಷೇತ್ರ. ಜನರಿಗೆ ಆರ್ಥಿಕ ಪ್ರಗತಿ ಜತೆಗೆ ಸಾಮಾಜಿಕ ಪ್ರಗತಿ ಸಾಧಿಸಲು ನೆರವಾಗುವ ಸಹಕಾರಿ ಸಂಘಗಳು ಗ್ರಾಮೀಣ ರೈತರ ಆಶಾಕಿರಣಗಳಾಗಿವೆ ಎಂದು ಸಹಕಾರ ಇಲಾಖೆ ವಿಭಾಗೀಯ ಜಂಟಿ ನಿಬಂಧಕ ಗೋಪಾಲ ಚವ್ಹಾಣ ಹೇಳಿದರು.

Advertisement

ನಗರದ ಸಹಾರ್ದ ತರಬೇತಿ ಸಂಸ್ಥೆಯಲ್ಲಿ ಡಿಸಿಸಿ ಬ್ಯಾಂಕ್‌ ಸ್ವ ಸಹಾಯ ಗುಂಪಿನ ಮೇಲ್ವಿಚಾರಕರಿಗಾಗಿ ನಡೆಯುತ್ತಿರುವ ತರಬೇತಿ ಕಾರ್ಯಕ್ರಮ ಉದ್ಘಾಟಿಸಿ ಅವರು ಮಾತನಾಡಿದರು. ಡಿಸಿಸಿ ಬ್ಯಾಂಕ್‌ಗಳು ಮತ್ತು ಸಂಘಗಳು ಜವಾಬ್ದಾರಿ ಯುತವಾಗಿ ಕಾರ್ಯನಿರ್ವಹಿಸಿದಾಗ ಜನರಿಗೆ ಉತ್ತಮ ಆರ್ಥಿಕ ಸೇವೆ ಸಿಗಲು ಸಾಧ್ಯವಿದೆ. ಸ್ವ ಸಹಾಯ ಗುಂಪುಗಳ ಮೂಲಕ ಬಡವರಿಗೆ ಶೂನ್ಯ
ಬಡ್ಡಿ ದರದಲ್ಲಿ ಸಾಲ ನೀಡುವ ಕಾಯಕ ಯೋಜನೆ ಮೂಲಕ ಸಹಕಾರ ಇಲಾಖೆ ಆರ್ಥಿಕ ನೆರವು ನೀಡುತ್ತಿದೆ. ಸ್ವ ಸಹಾ ಗುಂಪುಗಳು ಇದರ ಪ್ರಯೋಜನ
ಪಡೆಯಬೇಕು ಎಂದು ಹೇಳಿದರು.

ಪಟ್ಟಣ ಪ್ರದೇಶದ ಸಣ್ಣ ವ್ಯಾಪಾರಗಳಿಗೆ ತ್ವರಿತವಾಗಿ ಕಿರು ಸಾಲಗಳನ್ನು ಬಡವರ ಬಂಧು ಯೋಜನೆ ಮೂಲಕ ನೀಡುತ್ತಿದ್ದು, ಸಹಕಾರಿ ಬ್ಯಾಂಕ್‌ಗಳ ಮೂಲಕ ಇದನ್ನು ವಿತರಿಸಲಾಗುತ್ತಿದೆ. ಇಂದಿನ ವಾತಾವರಣದಲ್ಲಿ ಬ್ಯಾಂಕ್‌ಗಳು ಯಶಸ್ವಿಯಾಗಬೇಕಾದರೆ ಸಿಬ್ಬಂದಿಯಲ್ಲಿ ಶಿಸ್ತು ಮತ್ತು ಕಾರ್ಯ ತತ್ವರತೆ ಇರಬೇಕು. ನೂತನ ವ್ಯಾವಹಾರಿಕ ನಿರ್ವಹಣೆ ಸೂತ್ರಗಳು ಮತ್ತು ಕಂಪ್ಯೂಟರ ಆಧಾರಿತ ತಂತ್ರಜ್ಞಾನ ಕಲಿಯುವುದು ಆವಶ್ಯಕವಾಗಿದೆ. ಈ ನಿಟ್ಟಿನಲ್ಲಿ ಬೀದರನ ಪಿಕೆಪಿಎಸ್‌ ಗಳನ್ನು ಕಂಪ್ಯೂಟರೀಕೃತಗೊಳಿಸಲಾಗುತ್ತಿದೆ ಎಂದು ಹೇಳಿದರು.

ಬೆಂಗಳೂರು ಉಪ ವಿಭಾಗದ ಜಂಟಿ ನಿಬಂಧಕ ಲೋಕೇಶ ಮಾತನಾಡಿ, ಸ್ವ ಸಹಾಯ ಗುಂಪುಗಳು ಹಣಕಾಸಿನ ವ್ಯವಹಾರ ಮಾತ್ರವಲ್ಲದೆ ಜನಸೇವೆಗಾಗಿಯೂ ಅನುಕೂಲವಾಗಿವೆ. ಸಾಲ ತಗೊಂಡವರು ಆಸ್ತಿ ಮಾರಿ ಸಾಲ ತೀರಿಸಬಾರದು. ಸಾಲದ ದುಡ್ಡು ದುಡಿಸಿ ಸಾಲ ತೀರಿಸುವಂತಾಗಬೇಕು ಎಂದು ಹೇಳಿದರು.

ಅಧ್ಯಕ್ಷತೆ ವಹಿಸಿದ್ದ ಡಿಸಿಸಿ ಬ್ಯಾಂಕ್‌ ಪ್ರಧಾನ ವ್ಯವಸ್ಥಾಪಕ ವಿಠ್ಠಲ ರೆಡ್ಡಿ ಮಾತನಾಡಿ, ಸ್ವ ಸಹಾಯ ಸಂಘಗಳು ವ್ಯವಹಾರ ಅಭಿವೃದ್ಧಿ ಮೂಲಕ ಸ್ವಾವಲಂಬಿಗಳಾಗಬೇಕು. ಊರಿನ ಅಭಿವೃದ್ಧಿಗೆ ಕೊಡುಗೆ ನೀಡಬೇಕು. ಈ ನಿಟ್ಟಿನಲ್ಲಿ ಪ್ರತಿಯೊಬ್ಬ ಮೇಲ್ವಿಚಾರಕರು ದೂರದೃಷ್ಠಿ ಯೋಜನೆ, ಪ್ರಾಮಾಣಿಕ ದುಡಿಮೆಯಿಂದ ಸ್ವ ಸಹಾಯ ಗುಂಪಿನ ಸದಸ್ಯರಿಗೆ ಅರಿವು ಮೂಡಿಸಬೇಕು ಎಂದು ಹೇಳಿದರು.

Advertisement

ಪ್ರಧಾನ ವ್ಯವಸ್ಥಾಪಕ ಅನಿಲ ಪಾಟೀಲ ಮಾತನಾಡಿ, ಜಿಲ್ಲೆಯಲ್ಲಿ 27,600 ಸ್ವ ಸಹಾಯ ಗುಂಪುಗಳಿವೆ. 12,726 ಗುಂಪುಗಳನ್ನು ನಬಾರ್ಡ್‌ನ ಈ- ಶಕ್ತಿ ಯೋಜನೆಯಡಿ ನೋಂದಾಯಿಸಲಾಗಿದೆ. ಇದರಿಂದ ಒಬ್ಬರೇ ಸದಸ್ಯರು ಎರಡು ಗುಂಪುಗಳಲ್ಲಿ ಸದಸ್ಯರಾಗುವುದನ್ನು ತಡೆಯಬಹುದಾಗಿದೆ. ಬ್ಯಾಂಕ್‌ ಗಳಿಗೆ ಸಾಲ ನೀಡಲು ಅನುಕೂಲವಾಗುತ್ತದೆ ಎಂದು ಹೇಳಿದರು.

ಬ್ಯಾಂಕ್‌ ಪ್ರಧಾನ ವ್ಯವಸ್ಥಾಪಕ ಚನ್ನಬಸಯ್ಯ ಸ್ವಾಮಿ ಮಾತನಾಡಿದರು. ಸಹಾರ್ದ ಸಂಸ್ಥೆ ನಿರ್ದೇಶಕ ಸುಬ್ರಹ್ಮಣ್ಯ ಪ್ರಭು ಪ್ರಾಸ್ತಾವಿಕವಾಗಿ ಮಾತನಾಡಿದರು.

Advertisement

Udayavani is now on Telegram. Click here to join our channel and stay updated with the latest news.

Next