ಬೀದರ: ಸರ್ಕಾರಿ ಕಚೇರಿಗಳು ಮತ್ತು ಶಾಲಾ ಕಾಲೇಜುಗಳ ಆವರಣದಲ್ಲಿ ತಂಬಾಕು ಉತ್ಪನ್ನಗಳ ಬಳಕೆ ಮತ್ತು ಧೂಮಪಾನ ನಿಯಂತ್ರಣಕ್ಕೆ ಕಟ್ಟುನಿಟ್ಟಿನ ಕ್ರಮ ಕೈಗೊಳ್ಳಬೇಕು ಎಂದು ಜಿಲ್ಲಾ ಧಿಕಾರಿ ಡಾ|ಎಚ್.ಆರ್.ಮಹಾದೇವ ಅವರು ಜಿಲ್ಲಾ ತಂಬಾಕು ನಿಯಂತ್ರಣ ಕೋಶದ ಅಧಿಕಾರಿಗಳಿಗೆ ನಿರ್ದೇಶನ ನೀಡಿದರು.
ನಗರದ ಜಿಲ್ಲಾಧಿಕಾರಿಗಳ ಕಚೇರಿ ಸಭಾಂಗಣದಲ್ಲಿ ನಡೆದ ಜಿಲ್ಲಾ ತಂಬಾಕು ನಿಯಂತ್ರಣ ಕೋಶದ ಜಿಲ್ಲಾ ಮಟ್ಟದ ಇಲಾಖೆಗಳ ಸಮನ್ವಯ ಸಮಿತಿ ಸಭೆಯ ಅಧ್ಯಕ್ಷತೆ ವಹಿಸಿ ಮಾತನಾಡಿದ ಅವರು, ಎಲ್ಲಾ ಶಾಲಾ-ಕಾಲೇಜುಗಳನ್ನು ತಂಬಾಕು ಮುಕ್ತ ಪ್ರದೇಶಗಳೆಂದು ಘೋಷಿಸಿ, ಶಿಕ್ಷಣ ಸಂಸ್ಥೆಗಳಲ್ಲಿ ಬೆಳಗ್ಗೆಯ ಪ್ರಾರ್ಥನೆಯ ವೇಳೆ ತಂಬಾಕು ಉತ್ಪನ್ನಗಳ ದುಷ್ಪರಿಣಾಮ ಕುರಿತು ಜಾಗೃತಿ ಮೂಡಿಸಬೇಕು. ಅಲ್ಲದೇ ದುಶ್ಚಟಗಳಿಂದ ಆರೋಗ್ಯದ ಮೇಲಾಗುವ ಪರಿಣಾಮಗಳ ಬಗ್ಗೆ ಮಕ್ಕಳಲ್ಲಿ ತಿಳಿವಳಿಕೆ ಮೂಡಿಸಬೇಕು ಎಂದು ಸಾರ್ವಜನಿಕ ಶಿಕ್ಷಣ ಇಲಾಖೆಯ ಅಧಿಕಾರಿಗಳಿಗೆ ಸೂಚಿಸಿದರು.
ಜಿಲ್ಲೆಯಲ್ಲಿ ತಂಬಾಕು ನಿಯಂತ್ರಣ ಕಾರ್ಯಕ್ರಮಕ್ಕೆ ಸಂಬಂಧಿಸಿದಂತೆ ಹೆಚ್ಚು ಪ್ರಚಾರ ನೀಡಿ ಜನರಲ್ಲಿ ಜಾಗೃತಿ ಮೂಡಿಸಲು ಕ್ರಮ ವಹಿಸಬೇಕೆಂದು ವಾರ್ತಾಧಿಕಾರಿಗಳಿಗೆ ನಿರ್ದೇಶನ ನೀಡಿದರು. ಜಿಲ್ಲಾಡಳಿತದಡಿ ಬರುವ ಸ್ಥಳೀಯ ಸಂಸ್ಥೆಗಳು ಮತ್ತು ಇಲಾಖೆಗಳಿಂದ ಕೊಡಲಾಗುವ ಪರವಾನಗಿ ಮತ್ತು ನೋಂದಣಿಗಳಲ್ಲಿ ಕೋಟಾ³ ಕಾಯ್ದೆ 2003ರ ಅಂಶಗಳನ್ನು ಸೇರಿಸಲು ಸುತ್ತೋಲೆ ಹೊರಡಿಸಲಾಗಿದೆ. ಇದರ ಪಾಲನೆಯಾಗಬೇಕು ಎಂದು ಅಧಿ ಕಾರಿಗಳಿಗೆ ತಿಳಿಸಿದರು.
ಜಿಲ್ಲಾ ತಂಬಾಕು ನಿಯಂತ್ರಣ ಕೋಶದ ಶಂಭು ಕಡ್ಲಿಕೊಪ್ಪ ಮಾತನಾಡಿ, ಕೇಂದ್ರ ಸರ್ಕಾರವು ಸಾರ್ವಜನಿಕರ ಆರೋಗ್ಯದ ಹಿತದೃಷ್ಟಿಯಿಂದ ಈ-ಸಿಗರೇಟು ಉತ್ಪಾದನೆ, ಆಮದು, ರಫ್ತು, ಸಾಗಾಟ, ಮಾರಾಟ, ಸರಬರಾಜು, ಸಂಗ್ರಹ ಮತ್ತು ಜಾಹೀರಾತು ನಿಷೇದ ಕಾಯ್ದೆಯನ್ನು 2019ರ ಸೆಪ್ಟೆಂಬರ್‌ನಿಂದ ಜಾರಿಗೆ ತಂದಿದೆ. ಇದರನ್ವಯ ಈ-ಸಿಗರೇಟ್ ಮಾರಾಟ ಮಾಡಿದಲ್ಲಿ 1 ವರ್ಷದ ವರೆಗೆ ಜೈಲು ಶಿಕ್ಷೆ ಅಥವಾ 1ಲಕ್ಷ ರೂಪಾಯಿ ವರೆಗೆ ದಂಡವನ್ನು ಅಥವಾ ಈ ಎರಡನ್ನು ವಿಧಿಸುವ ಅವಕಾಶ ಇರುತ್ತದೆ ಎಂದು ಹೇಳಿದರು.
ಈ ಕಾಯ್ದೆಯನ್ನು ಎರಡನೇ ಬಾರಿ ಉಲ್ಲಂಘಿಸಿದ್ಲಲಿ 3 ವರ್ಷದ ವರೆಗೆ ಜೈಲು ಶಿಕ್ಷೆ ಮತ್ತು 5 ಲಕ್ಷ ರೂ.ಗಳ ವರೆಗೆ ದಂಡ ವಿಧಿಸಲು ಅವಕಾಶವಿದೆ. ಮತ್ತು ಕಾಯ್ದೆಯ ಸೆಕ್ಷನ್ 5ರ ಅನುಸಾರ ಈ-ಸಿಗರೇಟುಗಳ ಸಂಗ್ರಹ ಮಾಡಿದ ವ್ಯಕ್ತಿಗೆ 6 ತಿಂಗಳ ವರೆಗೆ ಜೈಲು ಶಿಕ್ಷೆ ಅಥವಾ 50 ಸಾವಿರ ರೂ. ಗಳ ವರೆಗೆ ಧಂಡವನ್ನು ಅಥವಾ ಈ ಎರಡನ್ನು ವಿಧಿಸುವ ಅವಕಾಶ ಇರುತ್ತದೆ ಎಂದು ಸಭೆಗೆ ವಿವರಿಸಿದರು.
ಪೌರಾಡಳಿತ ನಿರ್ದೇಶನಾಲಯದ ರಾಜ್ಯ ನಿರ್ದೇಶಕರು ಇತ್ತೀಚೆಗೆ ನಗರ ಸ್ಥಳೀಯ ಸಂಸ್ಥೆಗಳ ವ್ಯಾಪ್ತಿಯ ಎಲ್ಲ ಸಾರ್ವಜನಿಕ ಸ್ಥಳಗಳನ್ನು ಧೂಮಪಾನ ಮುಕ್ತ ಪ್ರದೇಶವೆಂದು ಘೋಷಿಸುವಂತೆ ಸುತ್ತೋಲೆ ಹೊರಡಿಸಿದ್ದಾರೆ. ಅಬಕಾರಿ ಆಯುಕ್ತರು ರಾಜ್ಯದಾದ್ಯಂತ ಮದ್ಯ ಮಾರಾಟ ಸ್ಥಳಗಳನ್ನು ಧೂಮಪಾನ ಮುಕ್ತ ಮಾಡುವ ಸುತ್ತೋಲೆ ಹೊರಡಿಸಿದ್ದಾರೆ. ಇವುಗಳ ಪಾಲನೆಯಾಗಬೇಕು ಎಂದು ಕೋರಿದರು.
ಸಭೆಯಲ್ಲಿ ಡಿಎಚ್‌ಒ ಡಾ|ವಿ.ಜಿ. ರೆಡ್ಡಿ, ಕೋಶದ ಕಾರ್ಯಕ್ರಮ ಅಧಿಕಾರಿ ಡಾ| ಎಲ್. ಕೃಷ್ಣಾ ರೆಡ್ಡಿ, ಆಹಾರ ಅಧಿಕಾರಿ ಸಂತೋಷ ಕಾಳೆ, ತಾಲೂಕು ಆರೋಗ್ಯ ಅಧಿ ಕಾರಿಗಳಾದ ಡಾ| ಶರಣಯ್ಯ ಸ್ವಾಮಿ, ಶರಣಪ್ಪ ಮುಡಬಿ, ಶಿಕ್ಷಣ ಇಲಾಖೆಯ ಉಪ ನಿರ್ದೇಶಕ ಎಚ್.ಸಿ. ಚಂದ್ರಶೇಖರ್, ಅಬಕಾರಿ ಇಲಾಖೆ ಹಾಗೂ ವಿವಿಧ ಇಲಾಖೆಗಳ ಅಧಿಕಾರಿಗಳು ಇದ್ದರು.