ಬೀದರ: ರಾಜ್ಯದ ಮೈತ್ರಿ ಸರ್ಕಾರ ಬಹುಮತ ಸಾಬೀತು ಪಡಿಸುವಲ್ಲಿ ವಿಫಲಗೊಂಡ ಹಿನ್ನೆಲೆಯಲ್ಲಿ ಸರ್ಕಾರದಲ್ಲಿ ಕಾರ್ಯ ನಿರ್ವಹಿಸಿದ ಗಡಿ ಜಿಲ್ಲೆಯ ಮೂವರು ಸಚಿವರು ಈಗ ಮಾಜಿ ಸಚಿವರಾಗಿದ್ದಾರೆ.
ರಾಜ್ಯದಲ್ಲಿ ಮೈತ್ರಿ ಸರ್ಕಾರ ಅಧಿಕಾರಕ್ಕೆ ಬಂದ ನಂತರ ಬೀದರ್ ಜಿಲ್ಲೆಗೆ ಪ್ರಾಮುಖ್ಯತೆ ನೀಡಿ ಜಿಲ್ಲೆಯ ಮೂವರು ಶಾಸಕರಿಗೆ ಸಚಿವರಾಗುವ ಅವಕಾಶ ಕಲ್ಪಿಸಲಾಗಿತ್ತು. ಹುಮನಾಬಾದ ಕ್ಷೇತ್ರದ ಶಾಸಕ ರಾಜಶೇಖರ ಪಾಟೀಲ, ಗಣಿ ಮತ್ತು ಭೂ ವಿಜ್ಞಾನ ಸಚಿವರಾಗಿ, ಬೀದರ ದಕ್ಷಿಣ ಕ್ಷೇತ್ರದ ಶಾಸಕ ಬಂಡೆಪ್ಪ ಖಾಶೆಂಪೂರ್ ಸಹಕಾರ ಸಚಿವರಾಗಿ ಹಾಗೂ ಬೀದರ ಶಾಸಕ ರಹೀಮ್ ಖಾನ್ ಕ್ರೀಡಾ ಸಚಿವರಾಗಿ ಮೈತ್ರಿ ಸರ್ಕಾರದಲ್ಲಿ ಕಾರ್ಯ ನಿರ್ವಹಿಸಿದರು. ಅಲ್ಲದೆ, ಬಸವಕಲ್ಯಾಣ ಶಾಸಕ ಬಿ.ನಾರಾಯಣರಾವ್ ಅವರಿಗೆ ಅರಣ್ಯ ನಿಗಮ ಮಂಡಳಿ ಅಧ್ಯಕ್ಷರಾಗಿ ಹಾಗೂ ಭಾಲ್ಕಿ ಶಾಸಕ ಈಶ್ವರ ಖಂಡ್ರೆ ಅವರನ್ನು ರಾಜ್ಯ ಕಾಂಗ್ರೆಸ್ ಪಕ್ಷದ ಕಾರ್ಯಾಧ್ಯಕ್ಷರನ್ನಾಗಿ ಆಯ್ಕೆ ಮಾಡಲಾಗಿತ್ತು. ಜಿಲ್ಲೆಯ ಔರಾದನ ಬಿಜೆಪಿ ಶಾಸಕ ಪ್ರಭು ಚವ್ಹಾಣ ಹೊರತ್ತು ಪಡಿಸಿದರೆ ಜಿಲ್ಲೆಯ ಐದು ಶಾಸಕರು ಉನ್ನತ ಹುದ್ದೆಗಳನ್ನು ಪಡೆದುಕೊಂಡಿದ್ದು, ಇದೇ ಮೊದಲು.
2018ರಲ್ಲಿ ರಾಜಕೀಯ ಮುಖಂಡರಿಗೆ ವಿವಿಧ ಉನ್ನತ ಸ್ಥಾನಗಳು ಸಿಕ್ಕಿರುವ ಹಿನ್ನೆಲೆಯಲ್ಲಿ ಬೀದರ ಜಿಲ್ಲೆಯ ಚಿತ್ರಣ ಬದಲಾಗಲಿದೆ ಎಂದು ಜಿಲ್ಲೆಯ ಜನರು ಬಹು ನೀರಿಕ್ಷೆ ಇರಿಸಿಕೊಂಡಿದ್ದರು. ಆದರೆ, ರಾಜಕೀಯ ಕಿತ್ತಾಟದಲ್ಲಿ ಅಭಿವೃದ್ಧಿ ಮರಿಚಿಕೆಯಾಗಿದ್ದು, ನಿರೀಕ್ಷಿತ ಪ್ರಮಾಣದಲ್ಲಿ ಗಡಿ ಜಿಲ್ಲೆಗೆ ಯೋಜನೆಗಳನ್ನು ತರುವಲ್ಲಿ ಇಲ್ಲಿನ ಮುಖಂಡರು ವಿಫಲರಾದರು.
ಜಿಲ್ಲೆಯಲ್ಲಿ ಮೂರು ಜನ ಸಚಿವರು ಅಧಿಕಾರದಲ್ಲಿದ್ದರೂ ಕೂಡ ಅನುಭವ ಮಂಟಪಕ್ಕೆ ಸರ್ಕಾರದಿಂದ ಅನುದಾನ ತರುವಲ್ಲಿ ಹಿನ್ನಡೆಯಾಗಿದೆ. ಸಿದ್ದರಾಮಯ್ಯ ಸರ್ಕಾರ ಅವಧಿ ಹಾಗೂ ಕುಮಾರಸ್ವಾಮಿ ಅಧಿಕಾರ ಅವಧಿಯಲ್ಲಿ ಜಿಲ್ಲೆಯ ಜನಪ್ರತಿನಿಧಿಗಳು ಅನೇಕ ಬಾರಿ ಸರ್ಕಾರದ ಗಮನ ಸೆಳೆದರೂ ಕೂಡ ಸರ್ಕಾರ ಅನುದಾನ ಬಿಡುಗಡೆ ಮಾಡದಿರುವ ಕುರಿತು ಜಿಲ್ಲೆಯ ಜನರಲ್ಲಿ ಆಕ್ರೋಷವಿದೆ. ಬಹು ವರ್ಷಗಳಿಂದ ಸಾಲದ ಸುಳಿಯಲ್ಲಿ ನರಳುತ್ತಿರುವ ಬೀದರ ಸಹಕಾರ ಸಕ್ಕರೆ ಕಾರ್ಖಾನೆಗೆ ಕಳೆದ ವರ್ಷ ಕಾರ್ಖಾನೆ ಆರಂಭಕ್ಕೆ 20 ಕೋಟಿ ಅನುದಾನ ಬಿಡುಗಡೆ ಮಾಡಿದ್ದು ಬಿಟ್ಟರೆ, ಕಾರ್ಖಾನೆ ಪುನಶ್ಚೇತನಗೊಳಿಸಲು ಸರ್ಕಾರ ಮುಂದಾಗಿಲ್ಲ. ಅನುದಾನ ತರಲು ಯಾವ ಜನಪ್ರತಿನಿಧಿಗಳೂ ಮುಂದಾಗಿಲ್ಲ ಎಂದು ರೈತರು ಆರೋಪಿಸುತ್ತಿದ್ದಾರೆ.
ಪದೆ ಪದೆ ಬರಕ್ಕೆ ಒಳಗಾಗುತ್ತಿರುವ ಜಿಲ್ಲೆಗೆ ಕುಮಾರಸ್ವಾಮಿ ಅವರು ಗ್ರಾಮ ವಾಸ್ತವ್ಯಕ್ಕೆ ಭೇಟಿ ನೀಡಿದ ಸಂದರ್ಭದಲ್ಲಿ ನೀರಾವರಿ ಪ್ರದೇಶಗಳಿಗೆ 800 ಕೋಟಿ ಅನುದಾನ ನೀಡುವ ಭರವಸೆ ನೀಡಿದರು. ಅಲ್ಲದೆ, ಈ ಹಿಂದಿನ ಬಜೆಟ್‌ನಲ್ಲಿ ನೀರಾವರಿ ಯೋಜನೆಗೆ ಸರ್ಕಾರ ಘೋಷಣೆ ಮಾಡಿದ ಯೋಜನೆಗಳಿಗೆ ಅನುದಾನ ಬಿಡುಗಡೆಗೊಂಡಿಲ್ಲ ಎಂಬುದು ತಿಳಿದು ಬಂದಿದ್ದು, ಮೈತ್ರಿ ಸರ್ಕಾರದ ಯೋಜನೆಗಳನ್ನು ಮುಂದಿನ ದಿನಗಳಲ್ಲಿ ಹೊಸ ಸರ್ಕಾರ ಅನುಷ್ಠಾನ ಮಾಡುತ್ತಾ ಎಂಬುದನ್ನು ಜಿಲ್ಲೆಯ ಜನರು ಕಾದುನೋಡಬೇಕಾಗಿದೆ.
ಅಧಿಕಾರ ಮರೀಚಿಕೆ: ಮೈತ್ರಿ ಸರ್ಕಾರದಲ್ಲಿ ಲಭಿಸಿದ ರಾಜಕೀಯ ಸ್ಥಾನಮಾನಗಳು ಮುಂದಿನ ಅಧಿಕಾರಕ್ಕೆ ಬರಲಿರುವ ಹೊಸ ಸರ್ಕಾರದಲ್ಲಿ ಲಭಿಸುವುದು ಕಷ್ಟ. ಕಾರಣ ಜಿಲ್ಲೆಯ ಮೀಸಲು ಕ್ಷೇತ್ರ ಔರಾದನಿಂದ ಬಿಜೆಪಿ ಶಾಸಕರಿದ್ದು, ಜಿಲ್ಲೆಗೆ ಸಚಿವ ಸ್ಥಾನ ಸಿಗುವುದು ಅನುಮಾನ. ಮತ್ತೆ ಹೊರಗಿನ ಸಚಿವರೆ ಬೀದರ್ ಜಿಲ್ಲೆ ಆಳುವ ಸಾಧ್ಯತೆ ಇದೆ ಎಂದು ರಾಜಕೀಯ ಮುಖಂಡರು ಮಾತನಾಡಿಕೊಳ್ಳುತ್ತಿದ್ದಾರೆ.